ADVERTISEMENT

ಬದುಕು ತಿರುವುಗಳ ತೇರು

ಎಸ್.ವಿಜಯ ಗುರುರಾಜ
Published 1 ಏಪ್ರಿಲ್ 2016, 19:35 IST
Last Updated 1 ಏಪ್ರಿಲ್ 2016, 19:35 IST
ಬದುಕು ತಿರುವುಗಳ ತೇರು
ಬದುಕು ತಿರುವುಗಳ ತೇರು   

39ನೇ ವಯಸ್ಸಿನಲ್ಲಿ  ಮಕ್ಕಳನ್ನು ನೋಡಿಕೊಳ್ಳುತ್ತಲೆ ಟೀಚರ್ ಟ್ರೈನಿಂಗ್ ಮಾಡಿಕೊಂಡಾಗ ಮಕ್ಕಳ ಶಾಲೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದರೆ ಮಕ್ಕಳೊಡನೆ ಚೆನ್ನಾಗಿ ಮಾತನಾಡಲು ಸಾಕಷ್ಟು ಇಂಗ್ಲಿಷ್ ಬರಬೇಕಲ್ಲವೆ ಅದಕ್ಕಾಗಿ ಕೆಲಸದ ವಿಷಯ ಪಕ್ಕಕ್ಕಿಟ್ಟು ಇಂಗ್ಲಿಷ್ ಕಲಿಕೆಯ ಶಾಲೆಗೆ ಸೇರಿ ಆರು ತಿಂಗಳಿಗೆಲ್ಲ ಸಿದ್ಧಳಾದೆ. ನಾನೇ ಯಾಕೆ ಸ್ವತಃ  ಪ್ರಿ ನರ್ಸರಿ ಸ್ಕೂಲ್ ಮಾಡಬಾರದು ಎನ್ನಿಸಿ ನಮ್ಮ ಮನೆಯ  ಕೆಳ ಭಾಗದಲ್ಲೇ  ಸುರಭಿ ಪ್ಲೇ ಹೋಮ್  ಎಂಬ  ಪ್ರಿ ಪ್ರೈಮರಿ ಶಾಲೆಯನ್ನು ಪ್ರಾರಂಭ ಮಾಡಿದೆ. ಒಬ್ಬ ಟೀಚರ್ ಮತ್ತು ಆಯಾಳನ್ನು ನೇಮಿಸಿಕೊಂಡೆ. ವರ್ಷವಾಗುವುದರಲ್ಲಿ  30 ಮಕ್ಕಳಿದ್ದು ಮುಂದೆ  ಶಾಲೆ ಯಶಸ್ವಿಯಾಗಿ ನಡೆದು ಹೆಸರು ಮಾಡಿತು.

ಅಷ್ಟೇ ಅಲ್ಲದೆ ಸಂಜೆ 4 ರಿಂದ ಮಹಿಳೆಯರಿಗಾಗಿ ಟೈಲರಿಂಗ್, ಮಕ್ಕಳಿಗಾಗಿ ಡ್ರಾಯಿಂಗ್ ಕ್ಲಾಸ್ ,ಹೆಣ್ಣು ಮಕ್ಕಳಿಗೆ ಆರ್ಟ್ ಕ್ಲಾಸ್ ಅಲ್ಲದೆ ಹೈ ಸ್ಕೂಲ್ ಮಕ್ಕಳಿಗೆ ಟ್ಯೂಶನ್ ಕ್ಲಾಸ್‌ ಹೀಗೆ 8 ಗಂಟೆಯ ವರೆಗೂ ಬಿಡುವಿಲ್ಲದಂತೆ ವಿವಿಧ ರೀತಿಯ ಕ್ಲಾಸ್‌ಗಳು ನಡೆಯುತ್ತಿದ್ದವು. ಈ ಎಲ್ಲ  ಯಶಸ್ಸಿನ ಹಿಂದೆ ನನ್ನವರ ಸಂಪೂರ್ಣ ಸಹಾಯ ಹಸ್ತವಿತ್ತು. ಹೀಗೆಯೆ 12 ವರ್ಷಗಳ ಕಾಲ ಶಾಲೆ ಸಮರ್ಪಕವಾಗಿ ನಡೆಯಿತು. ಅಷ್ಟರಲ್ಲೇ ಬೆಳೆದು ನಿಂತಿದ್ದ ನಮ್ಮ ಎರಡು ಹೆಣ್ಣು ಮಕ್ಕಳಿಗೂ ಮದುವೆ ಮಾಡಿ ಮುಗಿಸಿದೆವು.

ನಂತರ ನಮ್ಮವರಿಗೂ ನಿವೃತ್ತಿ ಆಯಿತು. ನನ್ನ ಆರೋಗ್ಯದ ನಿಮಿತ್ತ ಶಾಲೆಯನ್ನು ಮುಕ್ತಾಯ ಮಾಡಬೇಕಾಯಿತು. ಸುಮ್ಮನೆ ಮನೆಯಲ್ಲಿ ಕೂಡುವ ಜಾಯಮಾನ ವಲ್ಲದ್ದರಿಂದ ಮೊದಲಿನಿಂದಲೂ ಪುಸ್ತಕ ಓದುವ ಒಡನಾಟದಿಂದ  ಮನದಲ್ಲೇ ನಾನೂ ಬರೆಯಬೇಕು ಎಂಬ ಹಂಬಲಕ್ಕೆ ಈ ಬಿಡುವು ಚಾಲನೆ ಕೊಟ್ಟಿತು. ನನ್ನ ನಲವತ್ತು ವರ್ಷಗಳ ಎಡಬಿಡದ ಸಂಗಾತಿಗಳಾಗಿದ್ದ ‘ಪ್ರಜಾವಾಣಿ’, ‘ಸುಧಾ‘, ಮುಂತಾದ ಪತ್ರಿಕೆಗಳಿಗೆ ಅಡುಗೆ ರೆಸಿಪಿ, ಲೇಖನ, ಕಥೆ, ಹಾಸ್ಯ, ಕವನ, ಮೊದಲಾದವುಗಳನ್ನು ಬರೆಯುತ್ತಿದ್ದುದ್ದೇ ಅಲ್ಲದೆ ಈಗ ಒಂದು ಕಥಾಸಂಕಲನ ಮತ್ತು ಒಂದು ಅಡುಗೆಯ ಪುಸ್ತಕ ಅಚ್ಚಾಗಿ ಬಿಡುಗಡೆಗೊಂಡಿವೆ.

ಮಹಿಳಾ ಸಂಘ ಸೇರಿ ಅಲ್ಲಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ನಾಟಕ, ಹಾಡು, ಚರ್ಚಾಸ್ಪರ್ಧೆ ಹೀಗೆ ಎಲ್ಲದರಲ್ಲೂ ಭಾಗವಹಿಸಿ ಬಹುಮಾನ ಗಳಿಸುತ್ತಿರುವುದು ಇಂದಿಗೂ ಆತ್ಮದ ಸಂತೋಷಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಬದುಕು ನಿಂತ ನೀರಾಗಬಾರದು. ನಿಂತ ನೀರು ಕೊಳಕಾಗುತ್ತದೆ. ಬದುಕೆಂಬುದು ತಿರುವುಗಳ ಸಂತೆಯಂತೆ. ತಿರುವುಗಳನ್ನೆಲ್ಲಾ  ಸವಾಲಿನಂತೆ  ಸ್ವೀಕರಿಸುತ್ತಾ ಸಾಗುತ್ತಾ, ಯಶಸ್ಸಿನ ತೇರೆಳೆಯುತ್ತಾ ಸಾಗುವುದೇ ನಮ್ಮ ಗುರಿಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.