ADVERTISEMENT

ಮೂಗಿನ ಆರೋಗ್ಯ ರಕ್ಷಣೆಗೆ ಜಲನೇತಿ ಹಾಗೂ ಸೂತ್ರನೇತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 18:30 IST
Last Updated 11 ಫೆಬ್ರುವರಿ 2011, 18:30 IST

ಕ್ರಿಯೆಗಳು ಎಂದರೆ ಶುದ್ಧೀಕರಣ ಮಾಡುವುದು ಯಾ ನಿರ್ಮಲಗೊಳಿಸುವುದು. ಸ್ನಾನ ಮಾಡುವುದು, ಹಲ್ಲುಜ್ಜುವುದು, ಮುಖ ತೊಳೆಯುವುದು ಇತ್ಯಾದಿಗಳೆಲ್ಲಾ ದೇಹದ ಶುದ್ಧೀಕರಣ ಕ್ರಿಯೆಗಳಾಗಿವೆ.  ಆದರೆ ಯೋಗದ ಕ್ರಿಯೆಗಳೆಲ್ಲಾ ದೇಹದ ಒಳಗಿನ ಅಂಗಾಂಗಗಳನ್ನು ಶುಚಿಗೊಳಿಸುವುದು. ಯೋಗದೊಂದಿಗೆ ಕ್ರಿಯೆಗಳನ್ನು ಮಾಡುವುದರಿಂದ ಶರೀರದ ವಿವಿಧ ಭಾಗಗಳು, ಪಂಚಕೋಶಗಳೂ ಶುದ್ಧೀಕರಣಗೊಳ್ಳುತ್ತವೆ, ಹಾಗೂ ಪಂಚಪ್ರಾಣಗಳು ಹತೋಟಿಗೆ ಬರುತ್ತವೆ. ದೇಹ ಮತ್ತು ಮನಸ್ಸು ನಿರ್ಮಲವಾಗಿ ಏಕಾಗ್ರತೆಗೆ ಸಹಕಾರಿಯಾಗುತ್ತದೆ.

ಅಂಗಗಳ ಶುದ್ಧೀಕರಣಕ್ಕೆ ಆರು ಪ್ರಧಾನ ಕ್ರಿಯೆಗಳಿವೆ. (ಷಟ್ ಕ್ರಿಯೆಗಳು ಎಂದು ಹೆಸರು).
ಕಪಾಲಭಾತಿ - (ಶ್ವಾಸ ಮಾರ್ಗ)
ತ್ರಾಟಕ- (ಕಣ್ಣುಗಳಿಗೆ)
ನೇತಿ - (ಮೂಗಿನಿಂದ ಗಂಟಲಿನತನಕ)
ಧೌತಿ- (ಜಠರ ಅನ್ನನಾಳ)
ನೌಳಿ- (ಹೊಟ್ಟೆಯ ಸ್ನಾಯುಗಳಿಗೆ)
ಬಸ್ತಿ- (ಮಲ ಶೋಧನ ಕ್ರಿಯೆ)

ನೇತಿಯಲ್ಲಿ ಹಲವು ವಿಧಾನಗಳಿವೆ. ಅವುಗಳು ಜಲನೇತಿ, ಸೂತ್ರನೇತಿ, ದುಗ್ಧ ನೇತಿ, ಮಧುನೇತಿ ಮತ್ತು ಘೃತನೇತಿ.

ಜಲನೇತಿ: ನೇತಿ ಪಾತ್ರೆಗೆ ಉಗುರು ಬಿಸಿನೀರು ಮತ್ತು ಚಿಟಿಕೆ ಉಪ್ಪು ಹಾಕಬೇಕು. ಶರೀರವನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ತಲೆಯನ್ನು ಸ್ವಲ್ಪ ಓರೆಮಾಡಿ ಬಲ ಮೂಗಿನಿಂದ ನೇತಿ ಪಾತ್ರೆಯ ಮೂಲಕ ನೀರನ್ನು ಹಾಕಿ ಎಡ ಮೂಗಿನ ಮುಖಾಂತರ ಈ ನೀರನ್ನು ಹೊರ ತರಬೇಕು. ಈ ಸಂದರ್ಭದಲ್ಲಿ ಉಸಿರಾಟವನ್ನು ಬಾಯಿಯಲ್ಲಿ ನಡೆಸಬೇಕು. ಜಲನೇತಿ ಮಾಡುವಾಗ ಗಮನವೆಲ್ಲಾ ಉಸಿರಾಟದಲ್ಲಿರಬೇಕು. ಹಾಗೆಯೇ ಮೂಗಿನ ಎಡ ಬದಿಯಲ್ಲಿಯೂ ಅಭ್ಯಾಸ ಮಾಡಬೇಕು. ಜಲನೇತಿಯನ್ನು ಸಾಮಾನ್ಯವಾಗಿ ಕನಿಷ್ಠ ವಾರಕ್ಕೆ 3 ಯಾ 4 ಬಾರಿ ಮಾಡ ಬಹುದು. ಇದನ್ನು ಅಭ್ಯಾಸ ಮಾಡುವುದರಿಂದ ಮೂಗಿನ ಅಲರ್ಜಿ, ಸಯಿನಸೈಟಿಸ್, ಸಾಮಾನ್ಯವಾದ ನೆಗಡಿ ಮತ್ತು ಮೂಗಿನ ತೊಂದರೆಗಳನ್ನು ಸುಲಭವಾಗಿ ಸರಿಪಡಿಸಬಹುದಾಗಿದೆ. 

ಗಮನಿಸಿ, ಜಲನೇತಿಯನ್ನು ಯಾರೂ ತಮ್ಮಷ್ಟಕ್ಕೆ ಅಭ್ಯಾಸ ಮಾಡಬಾರದು. ಮೂಗಿನೊಳಕ್ಕೆ ನೀರು ಹೋಗಿ ಹೆಚ್ಚು ಕಡಿಮೆ ಆಗಿ ತೊಂದರೆ ಆದೀತು.  ಆದುದರಿಂದ ಇವನ್ನೆಲ್ಲಾ ಯೋಗ್ಯ ಗುರುಗಳ ಮುಖೇನ ಕಲಿಯಬೇಕು.

ಸೂತ್ರನೇತಿ: ಸ್ವಚ್ಛವಾದ ನೂಲನ್ನು ಅಥವಾ ಸಪೂರವಾದ ರಬ್ಬರ್ ನಳಿಕೆಯನ್ನು ಒಂದು ಮೂಗಿನ ಹೊಳ್ಳೆಯ ಮೂಲಕ ತುರುಕಿಸಿ ಬಾಯಿಗೆ ಬರುವಂತೆ ಮಾಡಿ, ಮೂಗಿನ ಮಾರ್ಗ, ಗಂಟಲು ಪ್ರದೇಶವನ್ನು ಸ್ವಚ್ಛಗೊಳಿಸಬೇಕು.  ಹಾಗೆಯೇ ಇನ್ನೊಂದು ಬದಿಯಲ್ಲಿ ಅಭ್ಯಾಸ ಮಾಡಬೇಕು.  ಈ ಸೂತ್ರನೇತಿ ಕ್ರಿಯೆಯನ್ನು ನಿಧಾನವಾಗಿ, ಬಹಳ ಜಾಗರೂಕತೆಯಿಂದ ಗುರುಮುಖೇನ ಕಲಿತು ಅಭ್ಯಾಸ ಮಾಡಬೇಕು.

ಪ್ರಾರಂಭದಲ್ಲಿ ರಬ್ಬರ್ ನಳಿಕೆಯನ್ನು ಮೂಗಿನೊಳಕ್ಕೆ ತೂರಿಸುವಾಗ ಸ್ವಲ್ಪ ನೋವು ಬರುತ್ತದೆ, ಸ್ವಲ್ಪ ಧೈರ್ಯ ತೆಗೆದುಕೊಂಡು ನಿಧಾನವಾಗಿ ರಬ್ಬರ್ ನಳಿಕೆಯನ್ನು ಮೂಗಿನೊಳ ಭಾಗಕ್ಕೆ ತೂರಿಸಬೇಕು. ಕೈಯ ತೋರು ಬೆರಳು ಮತ್ತು ಹೆಬ್ಬೆರಳಿನ ಸಹಾಯದಿಂದ ಆ ರಬ್ಬರ್ ನಳಿಕೆಯನ್ನು ಗಂಟಲಿನಿಂದ ಬಾಯಿಯ ಮೂಲಕ ಹೊರತೆಗೆ ಯಬೇಕು. ಈ ಲೇಖನದಲ್ಲಿ ತಿಳಿಸಿದ ಈ ಯೋಗ ಕ್ರಿಯೆಗಳು ಕೇವಲ ಮಾಹಿತಿಗೆ ಮತ್ತು ಅರಿವನ್ನು ಮೂಡಿಸಲು ಮಾತ್ರ.  ಈ ನೇತಿ ಕ್ರಿಯೆಗಳನ್ನು ಸಮರ್ಪಕವಾಗಿ ವಾರಕ್ಕೆ 3 ಯಾ 4 ಬಾರಿ ಅಭ್ಯಾಸ ಮಾಡುವುದರಿಂದ ಮೂಗಿಗೆ ಸಂಬಂಧಪಟ್ಟಂತಹ ದೋಷಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಲೇಖಕರ ದೂರವಾಣಿ: 9448394987
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.