ನಿಮ್ಮಲ್ಲಿ ಇದಕ್ಕಾಗಿ ಯಾರು ಸಿದ್ಧರಿದ್ದೀರಿ?
ಮುಂಜಾನೆಯ ಪ್ರಶಾಂತ ವಾತಾವರಣ. ಸಬರಮತಿ ಆಶ್ರಮದಲ್ಲಿ ಆಗಷ್ಟೇ ಪ್ರಾರ್ಥನೆ ಮುಗಿದಿತ್ತು. ನಾಲ್ಕೈದು ದಿನಗಳಿಂದ ಚರ್ಚೆಯಾಗುತ್ತಿದ್ದ ಆ ಸಂಗತಿ ಬಗೆಗೆ ಬಾಪೂಜಿ ನಿರ್ಧಾರಕ್ಕೆ ಬಂದಿದ್ದರು.
ಅಂದಿನ ಕೆಲವು ಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದ ಅವರ ಎದುರಿಗೆ ಕುಳಿತಿದ್ದ ಗುಂಪಿಗೆ ಈ ಪ್ರಶ್ನೆ ಎಸೆದಿದ್ದರು. ಅಲ್ಲಿ ಐವತ್ತು–ಅರವತ್ತು ಜನ ಇದ್ದಿರಬಹುದು. ಮಹಿಳೆಯರ ಸಂಖ್ಯೆ ಹೆಚ್ಚಿರಲಿಲ್ಲ. ಆದರೆ ಈ ಪ್ರಶ್ನೆಗೆ ಸ್ತ್ರೀಯರೇ ಉತ್ತರ ಹೇಳಬೇಕಿತ್ತು. ನಿಶ್ಶಬ್ದವಾಗಿದ್ದ ಗುಂಪಿನಿಂದ ಇಬ್ಬರು ಹೆಣ್ಣುಮಕ್ಕಳು ಎದ್ದು ನಿಂತರು.
ಒಬ್ಬಾಕೆ ಕಮಲಾದೇವಿ ಚಟ್ಟೋಪಾಧ್ಯಾಯ; ಕನ್ನಡತಿ. ಸ್ವಾತಂತ್ರ್ಯ ಚಳವಳಿಯಲ್ಲಿ ಅಪರೂಪವಾಗಿದ್ದ ಮಹಿಳೆಯರಲ್ಲಿ ಇವರೂ ಒಬ್ಬರು. ಆ ವೇಳೆಗಾಗಲೇ ಸಾರ್ವಜನಿಕ ಬದುಕಿನಲ್ಲಿ ಹೆಜ್ಜೆಗುರುತು ಮೂಡಿಸಿದ್ದ ಕಮಲಾದೇವಿ ಮೂಕಿ ಚಿತ್ರಗಳಲ್ಲೂ ಅಭಿನಯಿಸಿದ್ದರು. ಕನ್ನಡದ ಪ್ರಹಸನ ಪಿತಾಮಹಾ ಟಿ. ಪಿ. ಕೈಲಾಸಂ ನೇತೃತ್ವದಲ್ಲಿ ತಯಾರಾಗಿದ್ದ ‘ಮೃಚ್ಛಕಟಿಕ’ ಮೂಕಿ ಚಿತ್ರದಲ್ಲಿ ಕಮಲಾದೇವಿಯದು ಪ್ರಮುಖ ಪಾತ್ರ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿಯನ್ನಷ್ಟೆ ಅಲ್ಲದೆ, ಮಹಾತ್ಮಾ ಗಾಂಧಿ ಅವರಿಂದ ಆಕರ್ಷಿತರಾಗಿ ಭಾರತದ ಬಿಡುಗಡೆಯ ಹೋರಾಟದಲ್ಲೂ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಬಾಪೂಜಿ ಹಾದಿಯಲ್ಲಿ ನಡೆಯುತ್ತಿದ್ದ ಕಮಲಾದೇವಿ ಅವರಿಗೆ ಜೈಲುವಾಸದ ಅನುಭವವೂ ಆಗಿತ್ತು.
ಬಾಪೂಜಿ ಪ್ರಶ್ನೆಗೆ ಉತ್ತರವಾಗಿ ಎದ್ದು ನಿಂತು ಸಮ್ಮತಿ ಸೂಚಿಸಿದರು ಕಮಲಾದೇವಿ.
ಕಮಲಾದೇವಿ ಅವರೊಂದಿಗೆ ಎದ್ದು ನಿಂತು ಸಕಾರಾತ್ಮಕವಾಗಿ ಸ್ಪಂದಿಸಿದ ಇನ್ನೊಬ್ಬ ಮಹಿಳೆ ಸರೋಜಿನಿ ನಾಯ್ಡು. ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ಅವರು ಮಹಾತ್ಮರ ಕರೆಗೆ ಓಗೊಟ್ಟಿದ್ದರು. ರಾಷ್ಟ್ರೀಯ ಚಳವಳಿಯ ಭಾಗವಾಗಿದ್ದರು. ಆಕೆ ಉಜ್ವಲ ಭಾಷಣಕಾರ್ತಿ.
ಸ್ವಾತಂತ್ರ್ಯ ಆಂದೋಲನದ ಸಾರ್ವಜನಿಕ ಸಮಾರಂಭಗಳಲ್ಲಿ ಸರೋಜಿನಿ ನಾಯ್ಡು ಅವರ ಭಾಷಣ ಹೆಚ್ಚಿನ ಆಕರ್ಷಣೆಯನ್ನು ಪಡೆದಿತ್ತು. ಸಾಹಿತ್ಯಕ್ಷೇತ್ರದಲ್ಲಿ ಹೆಸರು ಮಾಡಿ ಭಾರತದ ಕೋಗಿಲೆ ಎನ್ನಿಸಿಕೊಂಡಿದ್ದರು ಸರೋಜಿನಿ ನಾಯ್ಡು.
ಸರೋಜಿನಿ ಅವರ ಸಹೋದರನನ್ನು ಕಮಲಾದೇವಿ ಲಗ್ನವಾಗಿದ್ದರು. ಇಬ್ಬರೂ ಚೆಂದದ ಹೆಣ್ಣುಮಕ್ಕಳು. ಇವರಿಬ್ಬರೂ ಬಾಪೂಜಿ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು. ಕಮಲಾದೇವಿ–ಸರೋಜಿನಿ ಅವರು ಖಾದಿಪ್ರಪಂಚದಲ್ಲಿ ರೂಪದರ್ಶಿಗಳಾಗಲು ಒಪ್ಪಿಕೊಂಡಿದ್ದರು.
ಭಾರತವನ್ನು ಬಿಳಿಯರಿಂದ ಬಿಡಿಸಿಕೊಳ್ಳಲು ಬಾಪೂಜಿ ಅಪರೂಪದ ಆಯುಧಗಳನ್ನು ಬಳಸತೊಡಗಿದ್ದರು. ಅಹಿಂಸೆ, ಸತ್ಯಾಗ್ರಹ, ಖಾದಿ, ಅಸಹಕಾರ ಅವುಗಳಲ್ಲಿ ಕೆಲವು. ಎಲ್ಲವನ್ನು ಸಮಯಕ್ಕೆ ಅನುಗುಣವಾಗಿ ಬಳಸಿಕೊಳ್ಳುವ ಮೂಲಕ ಆಂದೋಲನವನ್ನು ದೇಶದ ತುಂಬೆಲ್ಲ ಹರಡುತ್ತಿದ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಗಪುರ ಸಮ್ಮೇಳನದಲ್ಲಿ (1920) ‘ಖಾದಿ’ಯನ್ನು ‘ರಾಷ್ಟ್ರೀಯ ಅರಿವೆ’ ಎಂದು ಗಾಂಧೀಜಿ ಘೋಷಿಸಿದರು. ಇದು ಮುಂದೆ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಸಂಕೇತವೂ ಆಯಿತು.
ಹತ್ತೊಂಬತ್ತನೆಯ ಶತಮಾನದಲ್ಲಿ ಘಟಿಸಿದ ಕೈಗಾರಿಕಾ ಕ್ರಾಂತಿಯಿಂದ ಎಲ್ಲರೂ ಯಂತ್ರಗಳಿಗೆ ಮೊರೆ ಹೋಗುವ ಪರಿಸ್ಥಿತಿ ಎದುರಾಯಿತು. ಮ್ಯಾಂಚೆಷ್ಟರ್ ಗಿರಣಿಗಳು ಹಗಲು ರಾತ್ರಿ ಬಟ್ಟೆ ತಯಾರಿಸಲು ಶುರು ಮಾಡಿದವು. ಭಾರತದಲ್ಲಿ ಬೇಸಾಯದ ನಂತರ ಪ್ರಮುಖ ಕಸುಬಾಗಿದ್ದ ನೇಯ್ಗೆಗೆ ಇದು ಬಲವಾದ ಪೆಟ್ಟು ನೀಡುವ ಪರಿಸ್ಥಿತಿ ಕಂಡು ಬಂದಿತು.
ತಮ್ಮ ಸರಕುಗಳನ್ನು ಮಾರಲು ಬಂದು ಇಲ್ಲಿಯ ದೌರ್ಬಲ್ಯವನ್ನೇ ಉಪಯೋಗಿಸಿಕೊಂಡು ಆಡಳಿತದ ಚುಕ್ಕಾಣಿಯನ್ನೇ ಹಿಡಿದಿದ್ದ ಬ್ರಿಟಿಷರು ಭಾರತೀಯರು ಸ್ವಾವಲಂಬನೆಯಿಂದ ಬದುಕುತ್ತಿದ್ದ ಮಾರ್ಗಕ್ಕೆ ಕತ್ತರಿ ಹಾಕಲು ಆರಂಭಿಸಿದರು. ಇದರ ಪರಿಣಾಮ ನಮ್ಮ ಕಸಬುಗಳು ಅವಸಾನದತ್ತ ಸಾಗುತ್ತಿದ್ದವು. ಇದನ್ನೆಲ್ಲ ಕಂಡ ಗಾಂಧೀಜಿ ‘ಸ್ವದೇಶಿ’ ಆಂದೋಲನವನ್ನು ಜನತೆಯ ಮುಂದಿಟ್ಟರು.
ಈ ನೆಲದಲ್ಲಿ ಸಿದ್ಧಗೊಂಡ ಪದಾರ್ಥಗಳನ್ನೇ ಉಪಯೋಗಿಸಲು ಕರೆ ಕೊಟ್ಟರು. ಇದು ದೇಶವನ್ನೆಲ್ಲಾ ವ್ಯಾಪಿಸಿತು. ವಿದೇಶಿವಸ್ತುಗಳಿಗೆ ಬೆಂಕಿ ಹಚ್ಚಲೂ ಭಾರತೀಯರು ಹಿಂಜರಿಯಲಿಲ್ಲ.
ಸ್ವಾಭಿಮಾನದ ಸಂಕೇತವಾಗಿ ಹೊರಹೊಮ್ಮಿದ ‘ಖಾದಿ’ಯು ಬಿಳಿಯರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಸೆಣೆಸಲು ಭಾರತೀಯರನ್ನು ಒಟ್ಟುಗೂಡಿಸುವ ಸಾಧನವಾಯಿತು.
ಬ್ರಿಟನ್ ತನ್ನ ದೇಶದಲ್ಲಿ ತಯಾರಿಸಿದ ಮಾಲುಗಳಿಗೆ ಭಾರತದ ಮಾರುಕಟ್ಟೆಯನ್ನು ಯಥೇಚ್ಛವಾಗಿ ಉಪಯೋಗಿಸಿಕೊಳ್ಳಲು ವ್ಯವಸ್ಥಿತ ಯೋಜನೆಗೆ ‘ಖಾದಿ’ ಅಡ್ಡ ಬಂತು. ಇದಕ್ಕೆ ಪ್ರತಿಯಾಗಿ ಯಂತ್ರದಿಂದ ಸಿದ್ಧಗೊಂಡ ವಸ್ತುಗಳನ್ನು ಜನರಿಗೆ ಮಾರಾಟ ಮಾಡಲು ವೈವಿಧ್ಯ ಜಾಹೀರಾತು ನೀಡಲು ಅನೇಕ ಕಂಪೆನಿಗಳು ಶುರುವಿಟ್ಟವು. ರೂಪದರ್ಶಿಗಳನ್ನು ಬಳಸತೊಡಗಿದವು.
ಕೈಯಿಂದ ನೇಯ್ದ ಖಾದಿಯನ್ನು ಜನರತ್ತ ಕೊಂಡೊಯ್ಯಲು ಬಾಪು ಅದನ್ನು ‘ಸ್ವಾತಂತ್ರ್ಯದ ಅರಿವೆ’ ಎಂದು ಕರೆದರು. ಭಾರತದ ಹಳ್ಳಿಗಳಲ್ಲಿ ತಯಾರಾಗುವ ‘ಖಾದಿ’ ಉಪಯೋಗಗಳನ್ನು ಜನರಿಗೆ ತಲುಪಿಸಲು ಖಾದಿ ಯೋಜನೆಯನ್ನು ರೂಪಿಸದ ಅವರು ತಾವೇ ನೂಲು ತೆಗೆಯುವುದನ್ನು ನಿರಂತರವಾಗಿ ಮಾಡತೊಡಗಿದರು. ಅವರ ಅನುಯಾಯಿಗಳೆಲ್ಲ ಚರಕ ಹಿಡಿದು ನೂಲು ತೆಗೆಯಲಾರಂಭಿಸಿದರು.
‘ಬೇಸಿಗೆಯಲ್ಲಿ ತಂಪಾಗಿ, ಚಳಿಗಾಲದಲ್ಲಿ ಬೆಚ್ಚಗೆ’ ಇರುವ ಖಾದಿಯಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳನ್ನು ಪ್ರಚಾರ ಮಾಡಲಾಯಿತು. ಇದರಿಂದ ದೇಶಕ್ಕೆ ಆಗುವ ಲಾಭಗಳನ್ನೂ ವಿವರಿಸಲಾಯಿತು. ಖಾದಿ ಬಟ್ಟೆಯ ಪ್ರತಿ ತುಂಡು ಮನುಷ್ಯರ ಪರಿಶ್ರಮದಿಂದ ತಯಾರಾಗುವುದನ್ನು ಜನಕ್ಕೆ ಮನದಟ್ಟು ಮಾಡಿಕೊಡಲು ಕಾರ್ಯಕ್ರಮಗಳು ಸಿದ್ಧವಾದವು. ಕಾರ್ಯಕರ್ತರನ್ನು ಖಾದಿ ಪ್ರಚಾರಕ್ಕೆ ಬಳಸುವ ತೀರ್ಮಾನಕ್ಕೆ ಬಂದಿದ್ದರು.
ಅನಕ್ಷರರಿಗೂ ಸುಲಭವಾಗಿ ಅರ್ಥವಾಗುವಂತಹ ಚಿತ್ರಗಳನ್ನು ಪ್ರಕಟಿಸಿ ಹಂಚಲು ನಿರ್ಧಾರವಾದಾಗ ರೂಪದರ್ಶಿಗಳಾಗಲು ಮುಕ್ತ ಆಹ್ವಾನವನ್ನಿತ್ತರು ಬಾಪು. ಆಗ ಮುಂದೆ ಬಂದ ಸರೋಜಿನಿನಾಯ್ಡು ಹಾಗೂ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಚಿತ್ರಗಳನ್ನು ಖಾದಿ ನೂಲಿನೊಂದಿಗೆ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು.
ಅದನ್ನೇ ಆಧರಿಸಿ ಚರಿತ್ರಕಾರರು ಅದರ ಚಿತ್ರ ಪ್ರತಿಕೃತಿಗಳನ್ನು ಬಣ್ಣಗಳಿಂದ ಸಿದ್ಧ ಮಾಡಿದರು. ಇದನ್ನೇ ಬ್ಲಾಕ್ ಮಾಡಿಸಿ ಮುದ್ರಿಸಲಾಯಿತು. ಸ್ವದೇಶಿ ಅಂಗಡಿಗಳಲ್ಲಿ ಅವು ದೊರೆಯಲು ವ್ಯವಸ್ಥೆ ಮಾಡಲಾಯಿತು. ಸ್ವಾತಂತ್ರ್ಯ ಸಂಬಂಧಿ ಸಮಾರಂಭಗಳ್ಲೂ ಈ ಕಾರ್ಡ್‌ಗಳನ್ನು ವಿತರಿಸುವ ವ್ಯವಸ್ಥೆಯಾಯಿತು.
ಹೀಗೆ ಸಾರ್ವಜನಿಕ ಬದುಕಿನಲ್ಲಿ ಜನಪ್ರಿಯರೆನ್ನಿಸಿಕೊಂಡ ಇಬ್ಬರು ಮಹಿಳೆಯರ ಖಾದಿ ಪ್ರಚಾರದ ಕಾರ್ಡ್‌ಗಳು ದೇಶದ ಮೂಲೆ ಮೂಲೆ ತಲುಪಿದವು. ಮೊದಲಿಗೆ ಹಿಂದಿ–ಆಂಗ್ಲ ಭಾಷೆಯಲ್ಲಿ ಅಡಿಟಿಪ್ಪಣಿಗಳೊಂದಿಗೆ ಅಚ್ಚಾದ ಕಾರ್ಡ್ಗಳು ಸ್ಥಳೀಯ ಭಾಷೆಗಳಲ್ಲೂ ಕಾಣಿಸಿಕೊಂಡವು. ಇದನ್ನೇ ಅಂಚೆಚೀಟಿ ಹಚ್ಚಿ ಪೋಸ್ಟ್ ಕಾರ್ಡ್‌ನಂತೆ ಉಪಯೋಗಿಸುವ ಪದ್ಧತಿ ರೂಢಿಗೆ ಬಂತು. ಆದರೆ ಬ್ರಿಟಿಷ್ ಪ್ರಭುತ್ವದ ಅಧೀನದಲ್ಲಿದ್ದ ಅಂಚೆವ್ಯವಸ್ಥೆ ಇದಕ್ಕೆ ನಿಷೇಧ ಹೇರಿತು.
ಆದರೂ ಇಂತಹ ಕಾರ್ಡ್‌ಗಳ ಜನಪ್ರಿಯತೆಗೆ ತಡೆ ಹಾಕಲಾಗಲಿಲ್ಲ. ಹಲವರ ಶ್ರಮದಿಂದ ಸಿದ್ಧಗೊಳ್ಳುವ ಹತ್ತಿ ಬಟ್ಟೆ ಖಾದಿ ಭಾರತೀಯ ಭೌಗೋಳಿಕ ಸನ್ನಿವೇಶಕ್ಕೂ ಹೊಂದಿಕೆಯಾಗುವ ವಸ್ತ್ರವೆಂದೂ ಸಾಬೀತಾಯಿತು. ದೇಶದುದ್ದಕ್ಕೆ ಖಾದಿ ಬಟ್ಟೆಯ ಮಳಿಗೆಗಳು ತೆರೆಯಲ್ಪಟ್ಟವು. ಸ್ವಾತಂತ್ರ್ಯ ಚಳವಳಿಯ ಒಡನಾಟ ಇಟ್ಟುಕೊಂಡವರು ಖಾದಿ ಧರಿಸುವುದು ಸಾಮಾನ್ಯ ಸಂಗತಿ ಎನ್ನಿಸಿಕೊಂಡಿತು.
ಸ್ವಾತಂತ್ರ್ಯ ಹೋರಾಟದಲ್ಲಿ ಮುನ್ನೆಲೆಗೆ ಬಂದ ಭಾರತೀಯರ ಅರಿವೆ ಖಾದಿ ಬಹುಸಂಖ್ಯಾತ ಮಧ್ಯಮವರ್ಗದವರ ಮನಗೆದ್ದಿತು. ಪ್ರತಿ ಒಗೆತದಿಂದಲೂ ಮೃದುವಾಗುತ್ತ ಹೋಗುವ ಖಾದಿ ಅರಿವೆ ಅನೇಕರಿಗೆ ಉದ್ಯೋಗ ನೀಡುವ ಉದ್ಯಮಕ್ಕೆ ನಾಂದಿ ಹಾಡಿತು. ಸಣ್ಣ ಹಿಡುವಳಿ ಹೊಂದಿರುವ ಹತ್ತಿ ಬೆಳೆಗಾರರಿಂದ ಹಿಡಿದು ಮನೆ ಮಂದಿಗೆಲ್ಲಾ ಕಸುಬುಕೊಟ್ಟು ಕಾಸು ಬರುವಂತೆ ಮಾಡುವ ಖಾದಿ ಅನೇಕ ಸವಾಲುಗಳನ್ನು ಎದುರಿಸಿಯೂ ಜನಮಾನಸದಲ್ಲಿ ಉಳಿದಿದೆ.
ಸ್ವಾವಲಂಬನೆ ಹಾಗೂ ಗಾಂಧಿ ಪ್ರಣೇತ ಮೌಲ್ಯಗಳನ್ನು ಪ್ರತಿಪಾದಿಸುವ ‘ಖಾದಿ’ ಬಟ್ಟೆಗೆ ಸ್ವಾತಂತ್ರ್ಯಾನಂತರವೂ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.
ಸ್ವಾತಂತ್ರ್ಯದ ಸಂದೇಶವನ್ನು ತನ್ನಲ್ಲಿಕೊಂಡ ಖಾದಿ ಈ ನೆಲದ ವಿಶಿಷ್ಟ ವಸ್ತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.