ADVERTISEMENT

ಶಾಪಿಂಗ್ ಟಿಪ್ಸ್

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST
ಶಾಪಿಂಗ್ ಟಿಪ್ಸ್
ಶಾಪಿಂಗ್ ಟಿಪ್ಸ್   

ಸಂಧ್ಯಾ ಉದ್ಯೋಗಸ್ಥೆ. ಭಾನುವಾರ ಬಂದರೆ ಸಾಕು ಎಷ್ಟೇ ಕೆಲಸವಿರಲಿ, ಯಾವುದೇ ತರಹದ ಒತ್ತಡ ಇರಲಿ, ಅದರ ನಡುವೆಯೇ ಶಾಪಿಂಗ್ ಎಂದರೆ ರೆಡಿ.

ಯಾವುದಾದರೊಂದು ಮಾಲ್‌ಗೋ ಅಥವಾ ಸೂಪರ್ ಬಜಾರ್‌ಗೋ ಹೋಗಿ ಅವಶ್ಯಕ ಸಾಮಾನುಗಳನ್ನು, ನಿತ್ಯೋಪಯೋಗಿ ವಸ್ತುಗಳನ್ನು ತಂದಾಗಲೇ ಆಕೆಯ ಮನಸ್ಸಿಗೆ ನೆಮ್ಮದಿ. `ಕೆಲವೊಮ್ಮೆ ಯಾವುದೂ ಅವಶ್ಯಕ ಅಲ್ಲದಿದ್ದರೂ ಆತ್ಮೀಯರ ಜೊತೆಗೆ ಆಗಾಗ ಶಾಪಿಂಗ್ ಹೋಗುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ' ಎನ್ನುತ್ತಾಳೆ ಸಂಧ್ಯಾ.

ಶಾಪಿಂಗ್ ಪ್ರತಿ ಮಹಿಳೆಗೂ ಮುದ ನೀಡುವಂಥ ಸಂಗತಿ. ಸುಮ್ಮನೆ ಹೋಗಿ ಒಂದು ಸಣ್ಣ ಹೇರ್ ಪಿನ್ ಕೊಂಡು ತಂದರೂ ಖುಷಿ ಆಗುತ್ತದೆ. ಕೆಲಸದ ಜಂಜಾಟ, ಅನಾರೋಗ್ಯ, ಕೌಟುಂಬಿಕ ಕಲಹ, ಆರ್ಥಿಕ ಮುಗ್ಗಟ್ಟು ಇತ್ಯಾದಿಗಳ ನಡುವೆ ಮನಸ್ಸು ಬೇಸರಗೊಂಡಾಗ, ಆಲಸ್ಯ ಆವರಿಸಿದಾಗ ಶಾಪಿಂಗ್ ಮಾಡಿದರೆ ಮನಸ್ಸಿಗೆ ಉಲ್ಲಾಸ ಎನಿಸುತ್ತದೆ.  

ಮಹಿಳೆಗೆ ದುಃಖ, ಖಿನ್ನತೆ, ಆತಂಕಗಳಿದ್ದಾಗ ಆಕೆಯ ಮನಸ್ಸನ್ನು ವಿಷಯಾಂತರ ಗೊಳಿಸಬೇಕು. ಇದಕ್ಕೆ ಉತ್ತಮ ದಾರಿ ಶಾಪಿಂಗ್.  ಪ್ರಿಯರಾದವರ ಜತೆ ಶಾಪಿಂಗ್ ಮಾಡಿದರೆ ಒತ್ತಡದಿಂದ ಕೊಂಚ ದೂರಾಗ­ಬಹುದು. ಅದು ಚಿಕ್ಕಪುಟ್ಟ ಖರೀದಿಯೇ ಇರಬಹುದು ಅಥವಾ ವಿಂಡೊ ಶಾಪಿಂಗ್ ಆಗಿರಬಹುದು.

ಮನಸ್ಸು ಮಾಡಿದರೆ ಕೆಲಸದ ಒತ್ತಡಗಳ ನಡುವೆಯೂ ಸಮಯ ಮಾಡಿಕೊಂಡು ಬಜೆಟ್‌ಗೆ ತಕ್ಕಂತೆ ಅಗತ್ಯ ವಸ್ತುಗಳ ಖರೀದಿ ಮಾಡಬಹುದು.

ಶಾಪಿಂಗ್ ಮಾಡುವಾಗ ಕೆಳಗಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಸೂಕ್ತ.
-ಸಾಮಾನುಗಳ ಖರೀದಿಗೆ ಹೊರಡುವ ಮುನ್ನ ಅಗತ್ಯ ವಸ್ತುಗಳ ಪಟ್ಟಿ ತಯಾರಿಸಿಕೊಳ್ಳಿ.

-ಬೆಳಿಗ್ಗೆ ಸಮಯದಲ್ಲೇ ಶಾಪಿಂಗ್ ಮಾಡಿದರೆ ಒಳ್ಳೆಯದು. ಹೆಚ್ಚು ಗಲಾಟೆ ಇರುವುದಿಲ್ಲ. ಸಾಮಾನುಗಳನ್ನು ಸರಿಯಾಗಿ ಪರಿಶೀಲಿಸಿ ಕೊಳ್ಳ­ಬಹುದು. ಅಲ್ಲದೆ ನಿಮ್ಮ ವಾಹನವನ್ನು ಅನುಕೂಲ­ಕರವಾದ ಸ್ಥಳದಲ್ಲಿ ಪಾರ್ಕ್ ಮಾಡಬಹುದು.

-ಶಾಪಿಂಗ್‌ಗೆ ಸಂಬಂಧಪಟ್ಟ ಎಲ್ಲ ಕೂಪನ್/ ಕಾರ್ಡ್‌ಗಳನ್ನು ಜೋಪಾನವಾಗಿ ಪರ್ಸ್‌ನಲ್ಲಿ ಇಟ್ಟು­ಕೊಳ್ಳಿ. ಖರೀದಿಸುವಾಗ ನಿಮಗೆ ಇವು ಸುಲಭವಾಗಿ ಕೈಗೆಟುಕುವಂತೆ ಇಟ್ಟುಕೊಂಡು ಪ್ರಾರಂಭಿಸಿ.

-ದುಬಾರಿ ವಸ್ತುಗಳ ಖರೀದಿಗೆ ಮುನ್ನ ಮನೆಯ­ವರೊಂದಿಗೆ ಚರ್ಚಿಸಿ, ಅಂಥ ವಸ್ತುಗಳ ಬಗ್ಗೆ ಮಾಹಿತಿ ಇರುವವರೊಂದಿಗೆ ಹೋಗಿ. ವಸ್ತುಗಳ ಗುಣಮಟ್ಟ, ಬಾಳಿಕೆ ಬಗ್ಗೆ ಚರ್ಚಿಸಿ. ರಿಯಾಯಿತಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ.  ವಾರಂಟಿ ಕಾರ್ಡ್, ಬಿಲ್‌ಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ.

-ನಿಮ್ಮ ಬಜೆಟ್‌ಗೆ ತಕ್ಕಂತೆ ಶಾಪಿಂಗ್ ಮಾಡಿ. ಬೇರೆಯವರ ಒತ್ತಾಯಕ್ಕೆ ಮಣಿದು ಅಥವಾ ಮುಜುಗರದ ಮನೋಭಾವದಿಂದ ಖರೀದಿ ಮಾಡಬೇಡಿ. ಅನಗತ್ಯವಾದ, ಹೆಚ್ಚು ಉಪಯೋಗಕ್ಕೆ ಬಾರದ ವಸ್ತುಗಳ ಖರೀದಿ ಬೇಡ. ಎಲ್ಲ ರಸೀದಿಗಳನ್ನೂ ಸರಿಯಾಗಿ ಪರ್ಸ್‌ನಲ್ಲಿ ಇಟ್ಟುಕೊಳ್ಳಿ.

-ಕೊನೆಗೆ ಅಲ್ಲಿನ ಕಸ್ಟಮರ್ ಕೇರ್‌ನ ಸದುಪಯೋಗ ಪಡೆದುಕೊಳ್ಳಿ. ನಿಮಗೆ ಯಾವುದಾದರೂ ಮಾಹಿತಿ ಬೇಕಿದ್ದರೆ ಅಲ್ಲಿ ವಿಚಾರಿಸಿದರೆ ಶಾಪಿಂಗ್‌ಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆಯೂ ಮಾಹಿತಿ ಪಡೆಯಬಹುದು. ನೀವು ಒಂದೇ ಮಾಲ್‌ಗೆ ಆಗಾಗ್ಗೆ ಹೋಗುತ್ತಿದ್ದರೆ ರಿಯಾಯಿತಿ ಕಾರ್ಡ್ ಪಡೆಯಿರಿ.

-ಯಾವುದೇ ಒಳ್ಳೆಯ ವಸ್ತು, ಚಿನ್ನಾಭರಣ, ಉಡುಪು ಕಂಡೊಡನೆ ಹಣದ ಪರಿವೆಯೇ ಇಲ್ಲದೆ ಖರೀದಿಸಬಾರದು. ಈ ರೀತಿ ವಿವೇಚನೆ ಇಲ್ಲದೆ ಖರೀದಿಸುವುದರಿಂದ ಆರ್ಥಿಕವಾಗಿ ತೊಂದರೆ ಎದುರಾಗುತ್ತದೆ. ಈ ಕುರಿತು ಎಚ್ಚರಿಕೆ ಇರಲಿ.

-ಆಗಾಗ ವಿಂಡೊ ಶಾಪಿಂಗ್ ಮಾಡಿ. ಇದರಿಂದ ನೀವೇನೂ ಖರೀದಿಸದಿದ್ದರೂ ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಶಾಪಿಂಗ್‌ನಿಂದ ಮಹಿಳೆಯರ ವ್ಯಕ್ತಿತ್ವ ಹಾಗೂ ಅಭಿರುಚಿ ತಿಳಿಯುತ್ತದೆ. ಹಾಗೆಂದು ದಿನನಿತ್ಯದ ಚಟುವಟಿಕೆಗಳಿಗೆ ಧಕ್ಕೆ ಬರುವಷ್ಟು ಖಿನ್ನರಾಗಿದ್ದಾಗ, ತೀವ್ರ ಸಿಟ್ಟುಗೊಂಡಾಗ, ಬೇಸರದಲ್ಲಿದ್ದಾಗ ಶಾಪಿಂಗ್ ಮಾಡಬಾರದು. ಯಾಕೆಂದರೆ ಅಂಥ ಸಮಯದಲ್ಲಿ ಖರೀದಿಯ ವಿಷಯದಲ್ಲಿ ನಿಮ್ಮ ಆಯ್ಕೆ, ಅಭಿಪ್ರಾಯ­ಗಳು ತಪ್ಪಾಗಬಹುದು. l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.