ADVERTISEMENT

ಸೌಖ್ಯ ಮುದ್ರೆ

ಅನಾರೋಗ್ಯಕ್ಕೆ ಬೀಗ ಮುದ್ರೆ! ಭಾಗ 4

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ಶಂಖ ಮುದ್ರೆ

ಎಡಗೈಯ ಹೆಬ್ಬೆರಳನ್ನು ಬಲಗೈಯಲ್ಲಿ ಇಟ್ಟು ಬಲಗೈಯ ಬೆರಳುಗಳನ್ನು ಹೆಬ್ಬೆರಳಿನ ಮೇಲೆ ಮಡಚಿ ಇಡಬೇಕು. ಮುಷ್ಠಿ ಬಿಗಿದು ಎಡಗೈಯ ತೋರು ಬೆರಳಿನ ತುದಿಗೆ ಬಲಗೈಯ ಹೆಬ್ಬೆರಳಿನ ತುದಿಯನ್ನು ತಾಗಿಸಿ ಇಡಬೇಕು. ಎಡಗೈನ ಉಳಿದ ಬೆರಳುಗಳನ್ನು ಬಲಗೈನ  ಹಿಂಭಾಗದಲ್ಲಿ ತಾಗಿಸಿ ಇಡಬೇಕು.

ಪ್ರಯೋಜನ
ಶಂಖದ ಆಕೃತಿಯ ಈ ಮುದ್ರೆಯನ್ನು ಮಾಡುವುದರಿಂದ ಪಿಟ್ಯುಟರಿ ಗ್ರಂಥಿಗಳ ಕಾರ್ಯ ಸುಗಮವಾಗುತ್ತದೆ. ಪಚನ ಕ್ರಿಯೆ ಸುಧಾರಿಸುತ್ತದೆ. ಅಲ್ಲದೆ ಹಸಿವು ಚೆನ್ನಾಗಿ ಆಗುತ್ತದೆ. ಮೂತ್ರ ಪಿಂಡಗಳ ಕಾರ್ಯ ಸಮರ್ಥವಾಗಿ ನಡೆಯುತ್ತದೆ. ಸಂಗೀತಗಾರರು ಈ ಮುದ್ರೆ ಮಾಡುವುದರಿಂದ ಗಂಟಲು ಸ್ವಚ್ಛವಾಗಿ ಸ್ವರ ಇಂಪಾಗುತ್ತದೆ, ಸುಸ್ವರವಾಗುತ್ತದೆ. ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಶಂಖ ಮುದ್ರೆಯಿಂದ ಉತ್ತಮ ಫಲ ದೊರೆಯುತ್ತದೆ. ಗಂಟಲು, ಸ್ವರ ಸಂಬಂಧಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಾಣಲು ಈ ಮುದ್ರೆ ಬಲು ಸಹಕಾರಿ.  ಇದನ್ನು 20- 30 ನಿಮಿಷಗಳವರೆಗೆ ಮಾಡಬೇಕಾಗುತ್ತದೆ.

ಸುರಭಿ ಮುದ್ರೆ

ಎರಡೂ ಕೈಗಳನ್ನು ಜೋಡಿಸಿ ನಮಸ್ತೆ ಮಾಡುವಂತೆ ಸೇರಿಸಬೇಕು. ನಂತರ ಹೆಬ್ಬೆರಳನ್ನು ದೂರ ಇಡಬೇಕು. ಅನಂತರ ಪರಸ್ಪರ ವಿರುದ್ಧ ಕೈಗಳ ತೋರು ಬೆರಳು, ಮಧ್ಯದ ಬೆರಳಿನ ತುದಿಯನ್ನು ಸ್ಪರ್ಶಿಸಬೇಕು. ಕಿರುಬೆರಳು ಮತ್ತು ಉಂಗುರ ಬೆರಳುಗಳ ತುದಿಯನ್ನು ತಾಗಿಸಬೇಕು.  ಹೆಬ್ಬೆರಳುಗಳು ಒಂದಕ್ಕೊಂದು ತಾಗಿರಬಾರದು. ಈ ಮುದ್ರೆ ದನದ ಕೆಚ್ಚಲಿನಂತೆ ಕಾಣುವುದರಿಂದ ಇದಕ್ಕೆ ಸುರಭಿ ಮುದ್ರೆ ಎಂದು ಕರೆಯಲಾಗುತ್ತದೆ.

ಪ್ರಯೋಜನ
ಸುರಭಿ ಮುದ್ರೆಯ ಪರಿಣಾಮ ಅದ್ಭುತ. ಶರೀರದ ಮೂರು ವಿಕಾರಗಳಾದ ವಾತ, ಪಿತ್ತ, ಕಫಗಳನ್ನು ನಿಯಂತ್ರಿಸುತ್ತದೆ. ಅಸಿಡಿಟಿ ದೂರವಾಗಿ ದೇಹದ ಜಡತೆಯನ್ನು ಶಮನಗೊಳಿಸುತ್ತದೆ. ಸುರಭಿ ಮುದ್ರೆಯನ್ನು 10 ನಿಮಿಷ ಮಾಡಿದರೂ ಉತ್ತಮ ಫಲಿತಾಂಶ ದೊರೆಯುತ್ತದೆ. ಹೆಬ್ಬೆರಳನ್ನು ಬಿಟ್ಟು ಉಳಿದ ಬೆರಳುಗಳ ಸಂಯೋಜನೆಯಿಂದಾಗಿ ನಾಲ್ಕು ತತ್ವಗಳು ಸೇರಿಕೊಂಡು ದೇಹದಲ್ಲಿ ಅದ್ಭುತ ಪರಿಣಾಮಗಳು ಉಂಟಾಗುತ್ತವೆ. ಮೂರ್ನಾಲ್ಕು ಮುದ್ರೆಗಳನ್ನು ಮಾಡಿದ ಫಲ ದೊರೆಯುತ್ತದೆ. ಹಾಗಾಗಿ ಇದೊಂದು ಅತಿ ಮುಖ್ಯವಾದ ಮುದ್ರೆ.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.