ADVERTISEMENT

ಸ್ತ್ರೀ ಎಂದರೆ ಅಷ್ಟೇ ಸಾಕೇ?

ಅನುದಿನವೂ ಮಹಿಳಾದಿನ

ಸಂದೀಪ ನಾಯಕ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ಮಹಿಳಾ ಸಮಾನತೆ, ಸ್ತ್ರೀವಾದ ಎಂಬಿತ್ಯಾದಿಯಾಗಿ ಯಾರೇ ಭಾಷಣ ಮಾಡಿದರೂ ನಮ್ಮ ಹೆಣ್ಣುಮಕ್ಕಳು ತಮ್ಮ ಎಂದಿನ ತಮಗೇ ವಿಶೇಷವಾದ, ಜನ್ಮ ದತ್ತವಾದ  ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ. ಅದರಲ್ಲಿ ಅವರದೇ ಆದ ಅನನ್ಯ ಛಾಪು ಇರುತ್ತದೆ. ಕುಟುಂಬವನ್ನು ನೋಡಿಕೊಳ್ಳುವ ಅದನ್ನು ಪೊರೆಯುವ ಗುಣವೂ ಅದಕ್ಕಿರುತ್ತದೆ. ಸಂತೆಗೆ ಹೋಗಲಿ, ಸೀರೆಯನ್ನೇ ಕೊಂಡುಕೊಳ್ಳಲು ಹೋಗಲಿ, ಕಿರಾಣಿ ಅಂಗಡಿಗೇ ಹೋಗಲಿ ಹೆಣ್ಣುಮಕ್ಕಳೆಲ್ಲ ಒಳ್ಳೆಯದಾದ, ಕಡಿಮೆ ಬೆಲೆಗೇ ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಬರದಿದ್ದರೆ ಕೇಳಿ.

ಅದಕ್ಕೆ ಅವರ ತಾಳ್ಮೆಯಿಂದ ಕೂಡಿದ ಚೌಕಾಶಿ, ಮಾತುಗಾರಿಕೆ ಅಲ್ಲಿ ನೆರವಾಗುತ್ತದೆ. ಅಂಗಡಿಯ ಮಾಲೀಕ ಸುಸ್ತಾಗಿ ಅವರು ಕೇಳಿದ ಬೆಲೆಗೆ ಕೊಡುವವರೆಗೂ ಅವರು ಚೌಕಾಶಿ ಮಾಡದೇ ಬಿಡುವುದಿಲ್ಲ. ಅದು ಅವರಿಗೇ ವಿಶೇಷವಾದದ್ದು. ಆ ಕಲೆ ಅವರ ವ್ಯಕ್ತಿತ್ವದ ಹೆಗ್ಗುರುತು ಕೂಡ. ಅಪಾರವಾದ ಅವರ ಈ ತಾಳ್ಮೆಯ ಗುಣದಿಂದಾಗಿಯೇ ಒಂದಷ್ಟು ಕಾಸು ಸಂಸಾರಕ್ಕೆ ಉಳಿಯುತ್ತದೆ. ಅದಕ್ಕೆ ತೆರಬೇಕಾದ ಕಾಲದ ಬೆಲೆ ಮಾತ್ರ ಹೆಚ್ಚಿನದು ಎನ್ನುವುದನ್ನು ಬಿಟ್ಟರೆ ಅದರಿಂದ ಯಾರಿಗೂ ನಷ್ಟವಿಲ್ಲ. ಇದರಲ್ಲಿ ಅವರ ಹಣದ ನಿರ್ವಹಣೆಯ ಗುಣ ಕೆಲಸ ಸುಪ್ತವಾಗಿಯೇ ಕೆಲಸ ಮಾಡುತ್ತಿರುತ್ತದೆ. 

ಸೀರೆಯನ್ನೊ, ಇನ್ನೇನನ್ನೋ ಕೊಳ್ಳುವಾಗ ಅವರು ತಲಸ್ಪರ್ಶಿಯಾದ ಪರಿಶೀಲನೆ ಮಾಡಿಯೇ ಕೊಳ್ಳುತ್ತಾರೆ. ಸೀರೆಯ ಒಡಲು, ಬಾರ್ಡರು, ಬಣ್ಣ ಎಲ್ಲವೂ  ತಮಗೆ ಇಷ್ಟವಾಗುವವರೆಗೂ ಬಿಡುವುದಿಲ್ಲ. ಅವರು ಅದಕ್ಕಾಗಿ ಅಂಗಡಿಯಿಂದ ಅಂಗಡಿಗೆ ಸುತ್ತಾಟ ಅಗಾಧ ತಾಳ್ಮೆಯನ್ನು ಬೇಡುವಂಥದ್ದು. ಅವರ ಆಯ್ಕೆಯಲ್ಲಿನ ಪರದಾಟ, ಸುತ್ತಾಟ ಇವೆಲ್ಲ ಈಗಾಗಲೇ ಹಲವಾರು ಜೋಕುಗಳಿಗೆ, ಹಾಸ್ಯಪ್ರಸಂಗಗಳಿಗೆ ವಸ್ತುವಾಗಿವೆ. ಆದರೆ, ಅವರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ತಮಗೆ ಬೇಕಾದ ಆಯ್ಕೆಯನ್ನು ಮಾಡೇ ತೀರುತ್ತಾರೆ. ಅದು ಹೆಣ್ಣುಮಕ್ಕಳನ್ನು ಆ ವ್ಯಕ್ತಿತ್ವದೊಂದಿಗೆ ಬೇರೆ ಮಾಡಲಾಗದಷ್ಟು ಹೆಣೆದುಕೊಂಡಿದೆ.

ಇದನ್ನು ನಮ್ಮ ಸ್ತ್ರೀವಾದಿ ಚಿಂತಕರು (ಅಂದರೆ ಗಂಡಸರಲ್ಲ!) ಹೆಚ್ಚು ಅಧ್ಯಯನಕ್ಕೆ ಒಳಪಡಿಸಿದಂತಿಲ್ಲ. ಯಾವುದಾದರೂ ವಿಷಯದಲ್ಲಿ ಸರಿಯಾದ ತೀರ್ಮಾನವನ್ನು ಸರಿಯಾದ ಹೊತ್ತಿನಲ್ಲಿ ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗೇ ಇರುವುದು. ಗಂಡಸರು ಹೊಯ್ದಾಟದಲ್ಲಿದ್ದರೆ, ಒಂದು ಖಚಿತ ತೀರ್ಮಾನ ಅವರಿಂದಲೇ ಹೊಮ್ಮಿರುತ್ತದೆ.

ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡುವಾಗಲೂ ಈ ಎಚ್ಚರ, ತಾಳ್ಮೆಯನ್ನು ಅವರು ವಹಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಅವರಿಗೆ ಬೇಕಾದ ವಸ್ತು (ಗಂಡು ಎಂಬುದು ವಸ್ತು ಆಗುವುದು ಮದುವೆಯಾದ ಮೇಲೆ; ಗಂಡನಾಗಿ!) ಸಿಗುವ ವರೆಗೂ ಅವರು ಬಿಡರು. ಅದರಲ್ಲೀ ಅವರ ಚಿನ್ನದ ಆಭರಣಗಳ ಆಯ್ಕೆ ಇನ್ನೂ ಹೆಚ್ಚು ನಿಖರವಾಗಿರುತ್ತದೆ.

ಹೊಸ ವಿನ್ಯಾಸ, ಅದಕ್ಕೆ ಬೇಕಾದ ಚಿನ್ನದ ಪ್ರಮಾಣ ಇವೆಲ್ಲವೂ ಅವರ ತುದಿನಾಲಿಗೆಯ ಮೇಲೆ, ಮೆದುಳಿನಲ್ಲಿ ಅಚ್ಚಾಗಿರುತ್ತದೆ. ಅದರ ಬಾಳಿಕೆ, ಮುಂದೆ ಕೆಲಕಾಲದ ಮೇಲೆ ಅದನ್ನು ಮುರಿಸಿದರೆ ಸಿಗುವ ಅದಕ್ಕೆ ಸಿಗುವ ಬೆಲೆ ಇವೆಲ್ಲವೂ ಗಂಡಸರಿಗೆ ಎಂದಿಗೂ ಗೊತ್ತಾಗುವುದಿಲ್ಲ. ಚಿನ್ನ ಕೊಳ್ಳಬೇಕಾದರೆ ಚೀಟಿಯಲ್ಲಿ ಎಷ್ಟು ಹಣ ತೊಡಗಿಸಬೇಕು, ಕಂತಾಗಿದ್ದರೆ ಎಷ್ಟು ಕಟ್ಟಬೇಕು ಎಂಬುದನ್ನು ಮನೆಯ ಬಜೆಟ್‌ ಅನುಸರಿಸಿ ನೀಲನಕ್ಷೆಯೊಂದನ್ನು ತಯಾರಾಗಿಟ್ಟುಕೊಂಡಿರುತ್ತಾರೆ.
 

ಇದು ಟೀವಿ, ಫ್ರಿಜ್ಜು, ಗ್ಯಾಸ್ ಸ್ಟೋವ್, ಪಾತ್ರೆ ಪಗಡೆ ಮುಂತಾದ ಮನೆ ಬಳಕೆಯ ವಸ್ತುಗಳನ್ನು ಕೊಳ್ಳುವುದಕ್ಕೂ ಅನ್ವಯಿಸುತ್ತದೆ. ಅದರಲ್ಲಿ ಅವರು ಯಾಮಾರುವುದು ಸಾಧ್ಯವೇ ಇಲ್ಲ. ಇದರ ಹೊರತಾಗಿ ಸಣ್ಣದು ಎನ್ನಿಸುವ ವ್ಯವಹಾರಗಳಲ್ಲೂ ಅವರಿಗಿರುವ ಕೌಶಲ ಬೇರೆಯವರಿಂದ ಹೇಳಿ ಕೇಳಿ, ವಿಶ್ವವಿದ್ಯಾಲಯಗಳಲ್ಲಿ ಕಲಿತು ಬರುವಂಥದ್ದಲ್ಲ.

ಅದು ಪರಂಪರೆಯಿಂದ ಬಂದದ್ದು.  ಹಣವನ್ನು ಸರಿಯಾದ ಜಾಗದಲ್ಲಿ, ಸಮಯದಲ್ಲಿ ಹೂಡಿಕೆ ಮಾಡುವ, ಬಳಸುವ ಕಲೆ ಅವರಿಗಷ್ಟೇ ಸೀಮಿತವಾದದ್ದು. ಅದಕ್ಕೆ ಯಾವ ಅನುಭವಿ ಹೂಡಿಕೆದಾರನ ನೆರವು ಬೇಕಿಲ್ಲ.

ಪಕ್ಕದ ಮನೆಯ ಹುಡುಗನಿಗೆ ಯಾವ ಕಂಪನಿಯಲ್ಲಿ ಸೀಟು ಸಿಕ್ಕಿತು, ಮೊನ್ನೆ ಕೆಲಸ ಸಿಕ್ಕ ಹುಡುಗನಿಗೆ ಸಂಬಳ ಎಷ್ಟು, ಯಾವ ಹುಡುಗಿಗೆ ಯಾವ ಹುಡುಗನೊಂದಿಗೆ ನಿಶ್ಚಿತಾರ್ಥ ಆಯಿತು, ಯಾರು ಸೈಟು, ಮನೆ ಕೊಂಡರು, ಯಾರು ಯಾರನ್ನು ನಡು ನೀರಲ್ಲಿ ಕೈಬಿಟ್ಟರು ಎಂಬಿತ್ಯಾದಿ ಸುದ್ದಿಗಳು ಸಿಗುವುದು ಅವರಿಗೇ. ಅವರಿಗೆ ತಮ್ಮ ಸುತ್ತಲಿನ ಪರಿಸರದ ಬಗ್ಗೆ ಇರುವ ಕುತೂಹಲ, ಮನುಷ್ಯ ಸಮಾಜದ ಬಗ್ಗೆ ಇರುವ ಆಸಕ್ತಿ ಇದರಿಂದ ವ್ಯಕ್ತವಾಗುತ್ತದೆ. ಜೊತೆಗೆ ಅವರಿಗೆ ಇಂಥ ಅನೇಕ ವಿಷಯಗಳಲ್ಲಿ ಅಧಿಕೃತವಾದ ಎಲ್ಲರೂ ನೆಚ್ಚಬಹುದಾದ ಮಾಹಿತಿ ಸಂಗ್ರಹವೂ ಅವರಲ್ಲಿ ಉಂಟು. ಒಂದು ರೀತಿಯಲ್ಲಿ ಅಧಿಕೃತ ಮಾಹಿತಿ ಸಂಗ್ರಹದಾರರು ಅವರು.

ಅದಕ್ಕೆ ಅವರದೇ ಆದ ಸರಿ ತಪ್ಪಿನ ಲೋಕದೃಷ್ಟಿಯೊಂದು ಇದೆ. ಅದನ್ನು ಸಂಬಂಧಿಸಿದವರಿಗೆ ಹೇಳದೆಯೂ ತಮ್ಮದೇ ಆದ ಒಂದು ನ್ಯಾಯ ತೀರ್ಮಾನಕ್ಕೆ ಬರಬಲ್ಲರು. ಮನೆಯಲ್ಲಿ ಗಂಡನನ್ನು ಕೆಲವು ಪ್ರಸಂಗಗಳಲ್ಲಿ ತಮ್ಮ ನಿಲುವೇ ಸರಿ ಎಂದು ಒಪ್ಪಿಸಬಲ್ಲರು. ಗಂಡನೊ ಹೌದು ಹೌದು ಎನ್ನುತ್ತ ಅದು ತಪ್ಪು ಎಂಬುದು ಗೊತ್ತಿದ್ದೂ ಸುಮ್ಮನಿರುತ್ತಾನೆ. ಈ ಒಪ್ಪಿಸುವ ಕಲೆ ಯಾವತ್ತಿಗೂ ಗಂಡಸರಿಗೆ ಬರಲು ಸಾಧ್ಯವಿಲ್ಲ. ಸಂಗತಿಯೊಂದರ ಮಾಹಿತಿ ಅದನ್ನು ವ್ಯಾವಹಾರಿಕವಾಗಿ ವಿಶ್ಲೇಷಣೆ ಮಾಡುವ ಕೌಶಲಕ್ಕೆ ಅವರಿಗೆ ಸಾಟಿ.

ಕೆಲಸ, ದುಡಿತ ಎಂದು ಹೊರಗೇ ಇರುವ ಗಂಡಸರು ಮನೆಯ ಕೆಲ ವ್ಯವಹಾರಗಳಲ್ಲಿ ತಲೆ ಹಾಕುವುದಿಲ್ಲ. ಹಾಗಾಗಿ ಮನೆಯನ್ನು ನಡೆಸಿಕೊಂಡು ಹೋಗುವ ಪರಮಾಧಿಕಾರ ಹೆಂಗಸರದೇ ಆಗಿರುತ್ತದೆ. ಮತ್ತು ಅದು ಸುರಕ್ಷಿತವೂ ಹೌದು. ಅವರೂ ಮನೆಯತ್ತ ಗಮನ ಹರಿಸದಿದ್ದರೆ ಎಲ್ಲವೂ ಅಸ್ತವ್ಯಸ್ತಗೊಳ್ಳುವ, ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಅವರು ಎಲ್ಲದಕ್ಕೆ ತಲೆ ಕೊಡವುದು ಮೊದಲಿನಿಂದಲೂ ಅನಿವಾರ್ಯ. ಇಂತಹ ಜವಾಬ್ದಾರಿ ನಿರ್ವಹಣೆ ಮಾತ್ರವಲ್ಲ ಕೊಟ್ಟ ಅನೇಕ ಕೆಲಸದಲ್ಲಿ ಅವರ ಕ್ಷಮತೆ, ಅದರಲ್ಲಿ ತೊಡಗಿಸಿಕೊಳ್ಳುವಿಕೆ ಅಗಾಧ. ಇದು ಗಂಡ ಹೆಂಡತಿ ಇಬ್ಬರೂ ದುಡಿಯುವ ಮನೆಗಳಲ್ಲೂ ನಿಜ; ಅಲ್ಲಿ ಅದು ಕೊಂಚ ಹೆಚ್ಚೇ ಎನ್ನಿಸುವಷ್ಟು ಸತ್ಯವಾಗಿರುತ್ತದೆ.

ಗಾಳಿಸುದ್ದಿ ಹರಿದಾಡುವುದು, ಚಾಡಿ ಮಾತುಗಳು ಹೆಚ್ಚಾಗಿ ಒಂದು ಬಾಯಿಯಿಂದ ಇನ್ನೊಂದು ಕಿವಿಗೆ ದಾಟುವುದೂ ಅವರಲ್ಲೇ. ಯಾವ ಬಕರಾ ತನ್ನ ಆದೇಶವನ್ನು ಸರಿಯಾಗಿ ಪಾಲಿಸಿ ಕೆಲಸ ಮಾಡಿಕೊಡಬಲ್ಲ, ಯಾರು ತನ್ನ ಮೊಬೈಲಿಗೆ ತಕ್ಷಣಕ್ಕೆ ಕರೆನ್ಸಿ ಹಾಕಿಸಬಲ್ಲರು, ಯಾರು ಆಟೋದಲ್ಲಿ ಮನೆಯವರೆಗೆ ಡ್ರಾಪ್ ಕೊಟ್ಟು ತಾನೇ ಹಣ ನೀಡಬಲ್ಲರು ಎಂಬುದರ ನಿಖರ, ಪ್ರಖರ ಗ್ರಹಿಕೆ ಅವರಿಗೇ ಇರುತ್ತದೆ. ಬಹುಶಃ ಅದರಲ್ಲಿ ಅವರು ಎಂದಿಗೂ ತಪ್ಪುವುದಿಲ್ಲ. ಯಾರಿಂದ ಏನು, ಯಾವ ಕೆಲಸಗಳು ಆಗುತ್ತವೆ ಎಂಬ ಮಾನವ ಸಂಪನ್ಮೂಲ ಕೌಶಲ ಕೂಡ ಅವರಲ್ಲುಂಟು. ಒತ್ತಡವನ್ನು ತಾಳಿಕೊಳ್ಳುವ, ಸಂದರ್ಭಗಳನ್ನು ಸಮಾಧಾನಕರ ರೀತಿಯಲ್ಲಿ ನಿಭಾಯಿಸುವ ಅವರ ಗುಣ ಎಷ್ಟು ದೊಡ್ಡದು ಎನ್ನುವುದು ಯವಾಗಲೂ ಸಿಡಿಸಿಡಿ ಎನ್ನುವ ಗಂಡಸರನ್ನು ನೋಡಿದರೆ ಗೊತ್ತಾಗಬಹುದು.

ವ್ಯವಹಾರಿಕ ಜಗತ್ತಿನಲ್ಲಿ ಯಾರದೇ ವ್ಯಕ್ತಿತ್ವನ್ನು ಸರಿಯಾದ ರೀತಿಯಲ್ಲಿ ಗ್ರಹಿಸುವ ಮತ್ತು ವ್ಯವಹಾರಿಕವಾದ ಗುಣ ಮಹಿಳೆಯರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ತನ್ನನ್ನು, ತನ್ನ ಕುಟುಂಬವನ್ನು ರಕ್ಷಿಸುವ ತಾಯ್ತನದ ಗುಣ, ಸ್ವತಃ ತನ್ನನ್ನು ರಕ್ಷಿಸಿಕೊಳ್ಳುವ ಮನುಷ್ಯ ಸಹಜ ಸ್ವಭಾವ ಇದರ ಹಿಂದೆ ಇರುವುದು ಸಾಧ್ಯ. ಆಸ್ಪತ್ರೆಯಲ್ಲಿರುವ ರೋಗಿ ಬೇಗ ಚೇತರಿಸಿಕೊಳ್ಳಲಿ ಎಂಬ ಕಾರಣಕ್ಕಾಗಿಯೇ ಅಲ್ಲಿ ನರ್ಸುಗಳನ್ನು ದಾದಿಯರನ್ನು ಸೇವೆಗೆಂದು ನೇಮಿಸಿಕೊಳ್ಳುವುದು. ಇಂಥ ಹೆಣ್ಣುಮಕ್ಕಳ ತಾಯ್ತನದ, ಸಹನೆಯ, ಪೊರೆಯುವ ಗುಣದಿಂದಲೇ ಮನುಷ್ಯ ಜಗತ್ತು ಈವರೆಗೂ ನಡೆದುಕೊಂಡು ಬಂದಿದೆ. ಆ ಕಾರಣಕ್ಕಾಗಿಯೇ ಜಿ.ಎಸ್‌. ಶಿವರುದ್ರಪ್ಪ ಅವರು ತಮ್ಮ ಕವನವೊಂದರಲ್ಲಿ ಕೇಳಿದಂತೆ ‘ಸ್ತ್ರೀ ಎಂದರೆ ಅಷ್ಟೇ ಸಾಕೆ?’ ಎಂದು ನಾವೂ ಕೇಳಬೇಕಾಗುತ್ತದೆ.

ಬೆಂಗಳೂರಿನ ‘ಏಮ್‌ ಹೈ’ ಸಂಸ್ಥೆಯು ತನ್ನ ದಿನದರ್ಶಿಕೆಯಲ್ಲಿ ಮಹಿಳಾ ಲೋಕದ ಸತ್ಯಗಳನ್ನು ಅನಾವರಣ ಮಾಡಿದೆ. ಸಮಾಜದಲ್ಲಿರುವ ಪೂರ್ವ ಪ್ರತಿಷ್ಠಾಪಿತ ಅಭಿಪ್ರಾಯಗಳನ್ನು ಸಮರ್ಥನೆಗಳೊಂದಿಗೆ ಅಲ್ಲಗಳೆಯುತ್ತಲೇ ಹೆಣ್ಣುಮಕ್ಕಳನ್ನು ಅಭಿನಂದಿಸುವ ಕೆಲಸವದು. ಪ್ರತಿದಿನವೂ ಮಹಿಳೆಯರನ್ನು ಗೌರವಿಸುವ ದಿನವಾಗಲಿ. ಅನುದಿನವೂ ಮಹಿಳಾ ದಿನವಾಗಲಿ ಎನ್ನುವುದೂ ಅವರ ಆಶಯ.

ಮನೆ, ಮಾರು ಗೆಲ್ಲುವವರು...

ADVERTISEMENT

ಸಾಧಕಿಯರಿಗೇನು, ಮನೆಯೇ ಮಠವೇ... ಸಾಧನೆಯೊಂದೇ ಪರಮೋದ್ದೇಶ. ಎಲ್ಲವನ್ನೂ ನಿರ್ಲಕ್ಷಿಸಿ ತಮ್ಮ ಸಾಧನೆಯತ್ತಲೇ ಗಮನ ಕೇಂದ್ರೀಕರಿಸುವುದರಿಂದ ಒಂಟಿಯಾಗಿಯೇ ಉಳಿದಿರುತ್ತಾರೆ ಎನ್ನುವ ಕುಹಕವಿದೆ.

ವೃತ್ತಿಪರರಾಗಿರುವ ಮಹಿಳೆಯರ ಬಗ್ಗೆಯೂ ಇದೇ ಆರೋಪ. ಆದರೆ 2012ರ ನ್ಯೂಯಾರ್ಕ್ ಟೈಮ್ಸ್‌ ವರದಿ ಪ್ರಕಾರ  ‘ಫಾರ್ಚೂನ್‌’ ನಿಯತಕಾಲಿಕ ಪಟ್ಟಿ ಮಾಡಿರುವ 500  ಪ್ರಭಾವಿ ಸಿಇಒ ಪಟ್ಟಿಯಲ್ಲಿ ಗುರುತಿಸಿ­ಕೊಂಡಿರುವ 28 ಮಹಿಳೆಯರ ಪೈಕಿ 26 ಮಹಿಳೆಯರು ಮದುವೆ­ಯಾದವರು. 18 ಮಂದಿ ತಾಯ್ತನದ ಸುಖವನ್ನು ಅನುಭವಿಸುತ್ತ ಸಂಸಾರ ನಿಭಾಯಿಸುತ್ತಿದ್ದಾರೆ. ಮನೆಗೆದ್ದು ಮಾರು ಗೆಲ್ಲುವಲ್ಲಿ ಮಹಿಳೆಯರು ಹಿಂದುಳಿಯುವುದಿಲ್ಲ.

ಅಂಕಿ, ಸಂಖ್ಯೆಗಳಿಂದ ದೂರ..
ಭಾರತದ ಬೃಹತ್‌ ಬ್ಯಾಂಕ್‌ಗಳ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ. ಅಸಲು, ಬಡ್ಡಿಗಳ ಬಾಯ್ಲೆಕ್ಕದಲ್ಲಿ ಯಾವತ್ತಿಗೂ ಮಹಿಳೆಯರು ಮುಂದು. ಮನೆ ನಿಭಾಯಿಸುವಾಗ ಪೈಸೆ-–ಪೈಸೆಗೂ ಲೆಕ್ಕಾಚಾರವಿಟ್ಟು, ಸಾಸಿವೆ ಡಬ್ಬಕ್ಕೂ ಒಂದು ಪಾಲಿಡುವ ವ್ಯವಹಾರ ಚಾತುರ್ಯಕ್ಕೆ ಮಹಿಳೆಯೇ ಸಾಟಿ. ಅಂಕಿಗಳ ಮಾತು ಬಂದಾಗ ಶಕುಂತಲಾ ದೇವಿ ಎಂಬ ಚಮತ್ಕಾರವನ್ನು ಮರೆಯುವುದೆಂತು?

ಗುಟ್ಟು ಕಾಪಾಡಲಾರರು..

ವಾಸ್ತವವಾಗಿ ಜಗತ್ತಿನ ಅತಿ ಮಹತ್ವದ ರಹಸ್ಯಗಳನ್ನು ಕಾಪಿಡುವಲ್ಲಿ  ಪುರುಷರೇ ಸೋತಿದ್ದಾರೆ. ಹಲವಾರು ರಹಸ್ಯಗಳು ಹೊರ ಬಂದಿರುವುದು ಗಂಡಸರಿಂದಲೇ ಎಂಬುದು ಗಮನಾರ್ಹ. ಕಡೆಗಣಿಸಬಹುದಾದ ಕ್ಷುಲ್ಲಕ ವಿಚಾರಗಳನ್ನು ಬಿಟ್ಟುಕೊಡುವಷ್ಟು ಮಾತ್ರ ಚಾಣಾಕ್ಷಮತಿ ಹೆಣ್ಣು. ಇಷ್ಟಕ್ಕೂ ಮಹಿಳೆಯ ಮನಸು ಅರಿತವರುಂಟೆ?

ತಾಸುಗಟ್ಟಲೇ ಅಲಂಕಾರ...
ಮಾಕ್ಸ್‌ ಆಂಡ್‌ ಸ್ಪೆನ್ಸರ್‌ ಸಮೀಕ್ಷೆಯ ಪ್ರಕಾರ, ಮಹಿಳೆಯರು ಅಲಂಕಾರಕ್ಕೆ ಸರಾಸರಿ 27 ನಿಮಿಷ ತೆಗೆದುಕೊಳ್ಳುತ್ತಾರೆ. ಪುರುಷರು ಶೇವಿಂಗ್‌ ಸಂದರ್ಭದಲ್ಲಿಯೇ ಅಲಂಕಾರದ ಅರ್ಧ ಭಾಗ ಮುಗಿಸಿರುತ್ತಾರೆ. ಶೇವಿಂಗ್‌ಗೆ ಕನಿಷ್ಠ 25 ನಿಮಿಷ ಬೇಕಲ್ಲವೇ..?

ಒತ್ತಡ ನಿರ್ವಹಣೆ ಸಾಧ್ಯವಿಲ್ಲ...
ಮಹಿಳೆಯರಲ್ಲಿ ಸ್ರವಿಸುವ ಈಸ್ಟ್ರೋಜನ್‌ ಎಂಬ ಹಾರ್ಮೋನ್‌ನ ಕೃತಕ ಉತ್ಪಾದನೆಗಾಗಿ ಇಡೀ ಜಗತ್ತು ಪ್ರಯತ್ನಿಸುತ್ತಿದೆ. ಮನೆ, ಕೆಲಸ, ಮಕ್ಕಳು ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಒತ್ತಡವನ್ನೂ ಸೈರಿಸುವ ಬಲ ನೀಡುತ್ತದೆ ಈಸ್ಟ್ರೋಜನ್‌. ಪುರುಷರ ಒತ್ತಡ ನಿರ್ವಹಣೆಗೆ, ಒತ್ತಡ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆಯಾಗುವಂತೆ ಈಸ್ಟ್ರೋಜನ್‌ನ ಪರ್ಯಾಯಕ್ಕಾಗಿ ಸಾಕಷ್ಟು ಸಂಶೋಧನೆಗಳು ನಡೆದಿವೆ.

ಸಮಸ್ಯೆ ಕ್ಲಿಷ್ಟಗೊಳಿಸುತ್ತಾರೆ

ಹ್ಯಾಮಿಲ್ಟನ್‌ನ ಮ್ಯಾಕ್‌ಮಾಸ್ಟರ್‌ ವಿವಿಯು ಕಾರ್ಪೋರೇಟ್‌ ನಿರ್ದೇಶಕರಿಗಾಗಿ ಏರ್ಪಡಿಸಿದ್ದ ‘ಕಾಂಪ್ಲೆಕ್ಸ್‌ ಮಾರಲ್‌ ರೀಸನಿಂಗ್‌’ ಕೌಶಲದ ಪರೀಕ್ಷೆಯಲ್ಲಿ  ಹೆಚ್ಚು ನಾಜೂಕಾಗಿ ಹಾಗೂ ಪರಿಣಾಮಕಾರಿಯಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಕೌಶಲವನ್ನು ಮಹಿಳೆಯರೇ ಪ್ರಸ್ತುತ ಪಡಿಸಿದ್ದಾರೆ. ಈ ಅಧ್ಯಯನವಷ್ಟೇ ಅಲ್ಲ, ಸಾಮಾಜಿಕವಾಗಿಯೂ ಯಾವುದೇ ಕ್ಲಿಷ್ಟಕರ ಸಂದರ್ಭವಿರಲಿ, ನಿಮ್ಮ ಸಮೀಪದ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಧಾರ ಕೈಗೊಳ್ಳುವುದು ಪುರುಷನಿಂದ ಸಾಧ್ಯವೇ? ಜೀವನವನ್ನು ಸರಳಗೊಳಿಸುವುದು ಮಹಿಳೆಯೇ.

ಟ್ರಾಫಿಕ್‌ನಲ್ಲಿ ನುಗ್ಗುತ್ತಾರೆ...

ಇದನ್ನಂತೂ ಎಲ್ಲರೂ ಅಹುದಹುದು ಎಂಬಂತೆ ಒಪ್ಪಿಕೊಳ್ಳುತ್ತಾರೆ,. ಆದರೆ ಯಾವುದೇ ಸಂದರ್ಭದಲ್ಲಿಯೂ ಹಿಗ್ಗಾಮುಗ್ಗಾ ನುಗ್ಗುವ ಚಾಲಕರಲ್ಲಿ ಆಟೋ ಚಾಲಕರು, ಹದಿಹರೆಯದ ಹುಡುಗರು ಹಾಗೂ ಟ್ಯಾಕ್ಸಿ ಚಾಲಕರ ಸಂಖ್ಯೆಯೇ ಹೆಚ್ಚು. ತಲುಪುವ ಧಾವಂತ ಮಹಿಳೆಯರಲ್ಲಿದ್ದರೂ ನುಗ್ಗುವ ಮನಃಸ್ಥಿತಿ ಅವರದಲ್ಲ. ಇದಕ್ಕೆ ಸಾಕಷ್ಟು ಅಂಕಿ ಅಂಶಗಳ ಸಮರ್ಥನೆಯೂ ಇದೆ.

(ಚಿತ್ರಗಳು: ಈಶ್ವರ ಬಡಿಗೇರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.