ADVERTISEMENT

ಹೀಗೊಂದು ಪ್ರೇಮ್ ಕಹಾನಿ

ಸಾವಿತ್ರಿ ಸಿರ್ಸಿ
Published 20 ಡಿಸೆಂಬರ್ 2013, 9:37 IST
Last Updated 20 ಡಿಸೆಂಬರ್ 2013, 9:37 IST

ಇದು ಹೀಗೇ ಒಂದು ಪ್ರೇಮಕಥೆ, ಮೊಬೈಲ್ ಎಸ್.ಎಂ.ಎಸ್, ಇಲ್ಲದ  ಕಾಲದಲ್ಲಿ ನಡೆದದ್ದು. ಹುಡುಗಿ ಸುರಸುಂದರಿಯಲ್ಲದಿದ್ದರೂ, ಲಕ್ಷಣವಂತೆ. ಮಧ್ಯಮ ವರ್ಗದ ಕುಟುಂಬದವಳು. ಮನೆಯಲ್ಲಿ ಮದುವೆಯ ಪ್ರಯತ್ನಗಳು ನಡೆಯುತ್ತಿದ್ದವು. ನಾನಾ ಕಾರಣಗಳಿಂದ ಬಂದ ಸಂಬಂಧಗಳು ತಪ್ಪಿ ಹೋಗುತ್ತಿದ್ದವು. ಬಂದ ವರಗಳ ಮುಂದೆ ಅಲಂಕರಿಸಿಕೊಂಡು ಕುಳಿತು ಹುಡುಗಿಗೂ ರೋಸಿಹೋಗಿತ್ತು. ಒಂದು ರೀತಿಯ ಕೀಳರಿಮೆ ಕಾಡತೊಡಗಿತ್ತು. ವಿಧಿಯಿಲ್ಲ, ಸಂಪ್ರದಾಯ ಪಾಲಿಸಲೇ ಬೇಕಾಗಿತ್ತು. ಇಲ್ಲದಿದ್ದರೆ ಮನೆಯವರಿಗೆ ಬೇಸರ.

ಈ ನಡುವೆ ಹುಡುಗಿಗೆ ಒಂದು ಕೆಲಸ ಸಿಕ್ಕಿತು. ಸದ್ಯ, ಬಿಡುಗಡೆಯ ಭಾವ, ದಿನಪೂರ್ತಿ ಮನೆಯಲ್ಲೇ ಇರುವಂತಿಲ್ಲ. ಎರಡು ಮೂರು ತಿಂಗಳು ಸುಖದಿಂದ ಕಳೆದವು. ಹುಡುಗಿಗೆ ತಿಳಿಯದಂತೆ ಒಬ್ಬ ಹುಡುಗ ಇವಳನ್ನು, ಇವಳ ಚಲನ ವಲನಗಳನ್ನು ಗಮನಿಸುತ್ತಿದ್ದ. ಒಂದು ದಿನ ಬೆಳಿಗ್ಗೆ ಹುಡುಗಿ ಬಸ್ಸಿನಿಂದಿಳಿದು ಕೆಲಸದ ಸ್ಥಳಕ್ಕೆ ಹೋಗುತ್ತಿರುವಾಗ, ‘ಎಕ್ಸ್ ಕ್ಯೂಸ್ ಮಿ’ ಎಂಬ ದನಿ ಕೇಳಿ ಹುಡುಗಿ ನಿಂತಳು, ನೋಡಲು ತಕ್ಕಮಟ್ಟಿಗಿದ್ದ ಹುಡುಗ. ಇವಳ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ ‘ನೀನು ನನ್ನ ಬಾಳ ಸಂಗಾತಿಯಾಗುವೆಯಾ?’

ಹುಡುಗಿ ಒಂದು ಕ್ಷಣ ಅಪ್ರತಿಭಳಾದಳು. ನಂತರ ಕೇಳಿದಳು, ‘ನೀವು ಯಾರೋ ನನಗೆ ತಿಳಿದಿಲ್ಲ ಹೇಗೆ ಒಪ್ಪಿಗೆ ನೀಡಲಿ?’ ಅವನು ತನ್ನ ಪರಿಚಯ ಮಾಡಿಕೊಂಡ, ಇವಳು ತನ್ನ ಪರಿಚಯ ಮಾಡಿಕೊಂಡಳು.

ಮಾರನೆ ದಿನ ಸಂಜೆ ಕೆಲಸ ಮುಗಿಸಿ ಹೊರಡುವಾಗ ಹುಡುಗ ಶಿಸ್ತಾಗಿ ಸಿಂಗರಿಸಿಕೊಂಡು ಬಂದು ನಿಂತಿದ್ದ. ‘ಕಾಫೀ ಕುಡಿಯೋಣವೇ?’ ಎಂದ. ಇಬ್ಬರೂ ಕಾಫೀ ಕುಡಿಯುತ್ತ ತಮ್ಮ ವಿಚಾರ ವಿನಿಮಯ ಮಾಡಿಕೊಂಡರು. ಮತ್ತೆಲ್ಲಿ ಭೇಟಿಯಾಗುವುದೆಂದು ಮಾತಾಡಿಕೊಳ್ಳಲೇ ಇಲ್ಲ. ನಂತರ ಒಂದು ಮದುವೆಗೆ ಹೋದಾಗ ರಸ್ತೆಯಲ್ಲಿ ಅವನನ್ನು ಕಂಡಳು. ಬರಿದೇ ನಕ್ಕ, ಒಂದು ಕ್ಷಣ ನಿಂತ. ಹುಡುಗಿ ನಿಲ್ಲಲಿಲ್ಲ.

ನಂತರ ಹುಡುಗಿಗೆ ಬೇರೊಂದು ಕೆಲಸ ಸಿಕ್ಕು ಕಡಲತೀರದ ಊರಿಗೆ ಹೊರಟುಬಿಟ್ಟಳು. ಆಗಾಗ ಅವನ ನೆನಪಾದರೂ, ಅವನ ಮುಖವೇ ಮಸಕು, ಮಸಕಾಗಿ ಮರೆಯಾಗತೊಡಗಿತು.

ಒಮ್ಮೆ ಅವಳ ಸಹೋದ್ಯೋಗಿ ಹೇಳಿದರು, ‘ನೀವು ರಜೆಗೆ ಊರಿಗೆ ಹೋಗಿದ್ದಾಗ ನಿಮ್ಮನ್ನು ಕೇಳಿಕೊಂಡು ಯಾರೋ ಒಬ್ಬ ಗಂಡಸರು ಬಂದಿದ್ದರು. ನಿಮ್ಮ ಕ್ಲಾಸ್‌ಮೇಟ್ ಅಂತೆ, ಹೆಸರು ಮರೆತುಹೋಯಿತು’ ಯಾರಿರಬಹುದು ಎಂದು ಅವಳು ಯೋಚಿಸಲೂ ಇಲ್ಲ.
ಒಂದೆರಡು ತಿಂಗಳ ನಂತರ ಹುಡುಗಿ ರಜೆಗೆಂದು ಊರಿಗೆ ಹೊರಟಿದ್ದಳು. ಬೀಳ್ಕೊಡಲು ಅವಳ ಗೆಳತಿ ಬಸ್ ನಿಲ್ದಾಣಕ್ಕೆ ಬಂದಿದ್ದಳು.

ಗೆಳತಿಯೆಂದಳು ‘ನೋಡು ಯಾರೋ ಕೂಲಿಂಗ್ ಗ್ಲಾಸ್ ಹಾಕಿರುವ ಒಬ್ಬ ವ್ಯಕ್ತಿ ನಮ್ಮನ್ನೇ ನೋಡುತ್ತಿದ್ದಾನೆ’ ಹುಡುಗಿ ಅಂದಳು, ‘ನೋಡಲಿ ಬಿಡು ನಮಗೇನು ತೊಂದರೆ?’ ಬಸ್ಸು ಬಂದಿತು, ಗೆಳತಿ ಹೊರಟು ಹೋದಳು. ಇವಳು ಕಿಟಕಿಯ ಬಳಿ ಬಂದು ಕುಳಿತಳು.

ಆ ಕೂಲಿಂಗ್ ಗ್ಲಾಸ್ ಹಾಕಿದ್ದ ವ್ಯಕ್ತಿ ಬಂದು ಕರೆದ, ನೋಡಿದರೆ ಅದೇ ಮಾಜಿ ಹುಡುಗ, ಪುನಃ ತನ್ನನ್ನು ಪರಿಚಯಿಸಿಕೊಂಡು, ‘ನೀವು ಇಳಿದು ಬಿಡಿ, ಇಬ್ಬರೂ ರಾತ್ರಿ ಬಸ್ಸಿಗೆ ಹೋಗೋಣ’ ಎಂದ. ಹುಡುಗಿ ಏನೂ ಉತ್ತರಿಸದೆ ಕಿಟಕಿಯ ಗಾಜು ಮುಚ್ಚಿದಳು. ಬಸ್ಸು ಹೊರಟಿತು.

ಮುಂದೆಂದೂ ಅವರ ಭೇಟಿಯಾಗಲೇ ಇಲ್ಲ. ಅವರಿಬ್ಬರ ನಡುವೆ ಪರಸ್ಪರ ಪ್ರೀತಿಯೋ, ಆಕರ್ಷಣೆಯೋ, ತಮ್ಮ ಭಾವನೆಗಳನ್ನು ಅವರು ಹಂಚಿಕೊಳ್ಳಲೇ ಇಲ್ಲ. ಹೀಗೊಂದು ಪ್ರೇಮ ಪ್ರಕರಣ ಸುಖಾಂತವೂ ಆಗದೆ ದುರಂತವೂ ಆಗದೆ ಮುಕ್ತಾಯವಾಯಿತು.
ಸದಿಯೊ ಪುರಾನಿ, ಐಸಿ ಎಕ್ ಕಹಾನಿ
ರಹಗಯಿ, ರಹಗಯಿ, ಅನ್ ಕಹೀ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.