ಬಂಗಾರದ ಆಭರಣಗಳಿಲ್ಲದೇ ಮದುವೆಯೇ ಇಲ್ಲ ಎಂಬ ಕಾಲವೊಂದಿತ್ತು. ಈಗ ಹಾಗಲ್ಲ. ಫ್ಯಾಷನ್ ಬದಲಾಗುತ್ತಿದ್ದು, ಮದುವೆಯಂಥ ಸಮಾರಂಭದಲ್ಲಿ ‘ರಿಚ್ ಲುಕ್‘ನಲ್ಲಿ ಕಾಣಿಸಿಕೊಳ್ಳಲು ಬಂಗಾರದ ಆಭರಣಗಳೇ ಆಗಬೇಕೆಂದೇನಿಲ್ಲ.
ದೊಡ್ಡ ದೊಡ್ಡ ಸೆಲೆಬ್ರಿಟಿ ಮದುವೆಗಳಲ್ಲಿ ರಾರಾಜಿಸುತ್ತಿದ್ದ ಬಂಗಾರೇತರ ಆಭರಣಗಳು ಈಗ ಮಧ್ಯಮವರ್ಗದ ಮದುವೆಗಳಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಎಲಿಗೆಂಟ್ ಎನಿಸುವ ಈ ಆಭರಣಗಳನ್ನು ದಿರಿಸಿಗೆ ತಕ್ಕ ಹಾಗೆ ತೊಟ್ಟರೆ ಅದರ ಮೆರುಗು ಇನ್ನಷ್ಟು ಹೆಚ್ಚುತ್ತದೆ. ಶ್ರೀಮಂತರ ಮದುವೆಗಳಲ್ಲಿ ದುಬಾರಿ ಆಗಿದ್ದ ಈ ಬಂಗಾರೇತರ ಆಭರಣಗಳು ಇಮಿಟೇಷನ್ ಜ್ಯುವೆಲರಿಯಾಗಿಯೂ ಲಭ್ಯವಾಗಿರುವುದರಿಂದ ಟ್ರೆಂಡಿ ಎನಿಸಿವೆ.
ಚಿನ್ನವೆಲ್ಲ ಬ್ಯಾಂಕ್‌ನಲ್ಲಿದೆ. ಹತ್ತಿರದ ಸಂಬಂಧಿಕರ ಮದುವೆಗೆ ಏನನ್ನು ತೊಡಲಿ ಎಂಬ ಆಲೋಚನೆಯಿದ್ದರೆ ಚಿಂತೆ ಮಾಡದೇ ದಿರಿಸಿಗೆ ಸೂಕ್ತವೆನಿಸುವ ಬಂಗಾರೇತರ ಆಭರಣಗಳನ್ನು ಖರೀದಿಸಿ.
ಗಾಢ ಹಸಿರುಬಣ್ಣದ ಕಲ್ಲುಗಳಿರುವ ಈ ಆಭರಣವು ಬಂಗಾರ ಬಣ್ಣದ ಅಥವಾ ಬೆಳ್ಳಿ ಬಣ್ಣದ ಕುಂದನ್ ಸೀರೆಗಳಿಗೆ ಚೆನ್ನಾಗಿ ಒಪ್ಪುತ್ತದೆ. ಸರ, ಬಳೆ ಹಾಗೂ ಕಿವಿಯೋಲೆಗಳು ಎಮರಾಲ್ಡ್‌ನಲ್ಲಿದ್ದರೆ ಇನ್ನಷ್ಟು ಮೆರುಗು ಬರುತ್ತದೆ. ಇತ್ತೀಚೆಗೆ ನೀತಾ ಅಂಬಾನಿ, ರಾಧಿಕಾ ಮರ್ಚೆಂಟ್, ಕಿಯಾರಾ ಅಡ್ವಾಣಿ ಇಂಥ ಎಮರಾಲ್ಡ್ ಆಭರಣ ತೊಟ್ಟು ಸಂಭ್ರಮಿಸಿದ್ದರು. ಈಗೀಗ ಇಮಿಟೇಷನ್ ಜ್ಯುವೆಲರಿಗಳಲ್ಲಿಯೂ ಎಮರಾಲ್ಡ್ ಹರಳಿರುವ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ.
ಲೇಯರಿಂಗ್ ಜ್ಯುವೆಲರಿ ಮದುಮಗಳ ಆಭರಣವಾಗಿಯೂ ಪ್ರಸಿದ್ಧಿ ಪಡೆದಿದೆ. ಹಲವು ನೆಕ್ಲೇಸ್‌ಗಳ ಗುಚ್ಛವಾಗಿದ್ದು, ಅದಕ್ಕೆ ತಕ್ಕುದಾದ ಬಳೆ ಹಾಗೂ ಕಿವಿಯೋಲೆಗಳು ಇದ್ದರೆ ಅಂದವಾಗಿ ಕಾಣುತ್ತದೆ. ಹಲವು ಬಗೆಯ ರತ್ನಗಳನ್ನು ಸೇರಿಸಿ, ಕುಶಲತೆಯಿಂದ ಮಾಡಲಾಗಿದ್ದು, ವೈಭವೋಪೇತವಾಗಿ ಕಾಣುತ್ತದೆ. ಸೀರೆಗಿಂತ ಲೆಹೆಂಗಾಗಳಿಗೆ ಇದು ಹೆಚ್ಚು ಒಪ್ಪುತ್ತದೆ.
ಆಧುನಿಕ ಚೋಕರ್‌ಗಳು ಸಾಂಪ್ರದಾಯಿಕ ಲುಕು ನೀಡುವಲ್ಲಿ ಹಿಂದೆ ಬಿದ್ದಿಲ್ಲ. ದೊಡ್ಡ ಗಾತ್ರದ ಅಗಲವಾಗಿರುವ ಚೋಕರ್ ಸೆಟ್ ಒಂದಿದ್ದರೆ ಸಾಕು ಬೇರೆ ಆಭರಣವೇ ಬೇಡ. ವಿವಿಧ ಹರಳಿನ ಚೋಕರ್ ಸೆಟ್‌ಗಳು ಪ್ರಸ್ತುತವೆನಿಸಿವೆ. ಅದರಲ್ಲಿ ಕೇವಲ ಮುತ್ತಿನ ಮಣಿ ಇರುವ ಚೋಕರ್ ಸೆಟ್‌ಗಳು ಹೆಚ್ಚು ಚಾಲ್ತಿಗೆ ಬಂದಿವೆ.
ಬಹುವರ್ಣದ ಹರಳುಗಳಿರುವ ಆಭರಣಗಳನ್ನು ನೆಚ್ಚಿಕೊಳ್ಳದವರಿಲ್ಲ. ಬಹುವರ್ಣದ ಚೋಕರ್‌ಗಳು, ದೊಡ್ಡ ದೊಡ್ಡ ಹಾರಗಳು, ಬಳೆಗಳು, ದೊಡ್ಡ ಗಾತ್ರದ ಉಂಗುರಗಳು ಎಲ್ಲ ಸಮಾರಂಭಗಳಿಗೂ ಅಂದವಾಗಿ ಒಪ್ಪುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.