ಕೆಂಪಮ್ಮ ತುಂಬಾ ಒಳ್ಳೆಯವಳು. ನನ್ನ ಅವಳ ಒಡನಾಟ ಸುಮಾರು ಎಂಟು ವರ್ಷದ್ದು. ನಾವು ಮೊದಲು ಬಾಡಿಗೆ ಮನೆಯಲ್ಲಿ ಇದ್ದಾಗ ನಮ್ಮ ಮನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತಿದ್ದಳು. ನನ್ನನ್ನು ‘ಅಕ್ಕೋರೆ’ಎಂದೇ ಕರೆಯುತ್ತಿದ್ದಳು. ನಾವು ಸ್ವಂತ ಮನೆ ಕಟ್ಟಿಕೊಂಡು ದೂರದ ಬಡಾವಣೆಗೆ ಬಂದ ಮೇಲೂ ಆಗಾಗ ಬಂದು ಹೋಗುತ್ತಿದ್ದಳು.
ಇತ್ತೀಚೆಗೆ ನಮ್ಮ ಮನೆಗೆ ಬಂದಾಗ ಏಕೋ ಅವಳ ಮುಖದ ಮೇಲಿನ ನಗು ಮಾಯವಾಗಿ ಚಿಂತೆಯ ಗೆರೆಗಳು ಕಾಣಿಸಿದವು. ದಿನೇ ದಿನೇ ಇಳಿದುಹೋಗುತ್ತಿದ್ದ ಕೆಂಪಮ್ಮನನ್ನು ನೋಡಿ ಸುಮ್ಮನಿರಲಾಗಲಿಲ್ಲ. ಅಂದು ಬಂದ ಅವಳಿಗೆ ಚಹ ಕೊಟ್ಟು ‘ಯಾಕೆ ಕೆಂಪಿ ಮಂಕಾಗಿದ್ದಿಯ’ ಎಂದೆ. ಏನ್ಮಾಡೋದು ಅಕ್ಕೋರೆ ‘ಒಂದು ಕಡೆ ಕುಡಿದು ಬಂದು ಹೊಡೆಯೋ ಗಂಡನ ಕಾಟ, ಇದು ಸಾಲದು ಅಂತ ಮಗಳು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ತನ್ನ ಗಂಡನ ಜೊತೆ ಜಗಳ ಮಾಡಿಕೊಂಡು ಬಂದು ಕೂತಿದ್ದಾಳೆ. ನಾನೂ ಎಷ್ಟು ದಿನ ಅಂತ ದುಡಿಲಿ?’ ಎಂದು ಹೇಳಿ ಅಳುತ್ತ ತನ್ನ ಮನಸ್ಸಿನಲ್ಲಿದುದನ್ನು ತೋಡಿಕೊಂಡಳು. ಕೆಂಪಿಯ ಬಗ್ಗೆ ಮರುಕ ಮೂಡಿತು. ನನಗೆ ತಿಳಿದಷ್ಟು ಸಮಾಧಾನ ಮಾಡಿದೆ.
ಅಂದು ನಮ್ಮ ಮನೆ ಕೆಲಸದವಳು ಬಂದಿದ್ದಿಲ್ಲ. ಕೆಂಪಮ್ಮಗೆ ಫೋನ್ ಮಾಡಿ ಇವತ್ತೊಂದು ದಿನ ಬಂದು ಮನೆ ಕೆಲಸ ಮಾಡಿ ಕೊಡು. ನಾನು ತಿಂಗಳ ದಿನಸಿ ತರಲು ಮಾರ್ಕೆಟ್‍ಗೆ ಹೋಗಬೇಕಿದೆ ಎಂದೆ. ‘ಆಯ್ತು ಅಕ್ಕೋರೆ’ ಎಂದಳು. ಅಂದು ಕೆಲಸಕ್ಕೆ ಬಂದ ಕೆಂಪಿ ಬಟ್ಟೆ ಒಗೆದು, ಪಾತ್ರೆ ತೊಳೆದು, ಮನೆ ಒರೆಸಿ ಚಹ ಕುಡಿದು ಒಂದೂ ಮಾತಾಡದೇ ಹೋರಟು ಹೋದಳು. ನಾನೂ ಮಾರ್ಕೆಟ್‌ಗೆ ಹೋಗಲು ರೆಡಿಯಾದೆ. ಬೆಳಿಗ್ಗೆ ನಮ್ಮ ಯಜಮಾನ್ರು ದಿನಸಿ ತರಲೆಂದು ಟೀಪಾಯ್ ಮೇಲೆ ಐದು ಸಾವಿರ ರೂಪಾಯಿ ಇಟ್ಟು ಹೋಗಿದ್ದರು. ಅದನ್ನು ತೆಗೆದುಕೊಳ್ಳಲೆಂದು ಹೋದೆ. ಅಲ್ಲಿ ಹಣ ನಾಪತ್ತೆ!. ನನಗೆ ಕೆಂಪಿಯ ಮೇಲೆ ಅನುಮಾನ ಬಂತು. ಕೂಡಲೇ ಫೋನ್ ಮಾಡಿದೆ. ಫೋನ್ ಎತ್ತಲೇ ಇಲ್ಲ. ಈಗಿನ ಕಾಲದಲ್ಲಿ ಯಾರನ್ನೂ ನಂಬುವ ಹಾಗೇ ಇಲ್ಲ ಎಂದುಕೊಳ್ಳುತ್ತ ಮನದಲ್ಲೇ ಕೆಂಪಿಗೆ ಹಿಡಿ ಶಾಪ ಹಾಕಿದೆ. ತಿಂಗಳಾದರೂ ಕೆಂಪಿ ಮನೆ ಕಡೆ ಬರಲೇ ಇಲ್ಲ.
ಸುಮಾರು ಐದು ತಿಂಗಳ ನಂತರ ಕೆಂಪಿ ಮನೆಗೆ ಬಂದಳು. ಬಾ ಒಳಗೆ ಎಂದು ಕರೆದೆ. ಒಳಗೆ ಬಂದವಳೇ ನನ್ನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ‘ನನ್ನನ್ನು ಕ್ಷಮಿಸಿ ಬಿಡಿ ಅಕ್ಕೋರೆ’ ಎಂದು ಕಣ್ಣೀರಿಟ್ಟಳು. ಯಾಕೋ ಮನಸ್ಸಿಗೆ ಬೇಜಾರಾಯ್ತು. ‘ಏನಾಯ್ತೆ ಕೆಂಪಿ’ ಎಂದೆ. ಸೆರಗಿನ ಗಂಟನ್ನು ಬಿಚ್ಚಿ ಅದರಲ್ಲಿದ್ದ ಐದು ಸಾವಿರ ರೂಪಾಯಿ ತೆಗೆದು ನನ್ನ ಕೈಲಿಡುತ್ತ ಮತ್ತೇ ಜೋರಾಗಿ ಅಳತೊಡಗಿದಳು. ಏನಿದೆಲ್ಲ? ಅಂದೆ. ‘ಅವತ್ತು ನಿಮ್ಮ ಮನೆಗೆ ಬಂದ ಹಿಂದಿನ ದಿನವೇ ನನ್ನ ಗಂಡನಿಗೆ ಆಕ್ಸಿಡೆಂಟ್ ಆಗಿ ತಲೆಗೆ ಬಲವಾದ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿಸಿದ್ದೆ. ಕಾಲಿನ ಮೂಳೆ ಮುರಿದಿದೆ. ತಲೆಗೂ ಬಲವಾದ ಪೆಟ್ಟು ಬಿದ್ದಿದೆ. ಬ್ಯಾಂಡೇಜ್ ಹಾಕಬೇಕು. ಸುಮಾರು ಐದಾರು ಸಾವಿರವಾದರೂ ಬೇಕು ಅಂದರು. ನಾಳೆ ತಂದುಕೊಡ್ತಿನಿ ಎಂದು ಹೇಳಿದ್ದೆ. ಅವತ್ತು ನಿಮ್ಮ ಮನೆಗೆ ಬಂದಾಗ ನಿಮ್ಮನ್ನೇ ಹಣ ಕೇಳಬೇಕೆಂದು ಅಂದುಕೊಂಡೆ. ಕೆಲಸ ಮುಗಿಸಿ ಕೇಳಬೇಕೆಂದುಕೊಂಡಾಗ ನೀವು ಯಾರದೋ ಜೊತೆ ಫೋನ್‍ನಲ್ಲಿ ಮಾತಾಡ್ತಾ ಇದ್ರಿ. ನನಗೋ ಬೇಗ ದುಡ್ಡು ಬೇಕಾಗಿತ್ತು. ಗಂಡನ ಪ್ರಾಣ ಉಳಿಸಿಕೊಳ್ಳೋದು ಮುಖ್ಯವಾಗಿತ್ತು. ಅದಕ್ಕೆ ಟೀಪಾಯ್ ಮೇಲಿದ್ದ ದುಡ್ಡು ಕಣ್ಣಿಗೆ ಬಿದ್ದಿದ್ದೇ ತಡ ನಿಮಗೇ ಹೇಳದೇ ಹಾಗೇ ತೆಗೆದುಕೊಂಡು ಹೋದೆ. ಸರಿಯಾದ ಸಮಯಕ್ಕೆ ದುಡ್ಡು ಸಿಕ್ಕಿದ್ದರಿಂದ ನನ್ನ ಗಂಡ ಬದುಕಿದ ಅಕ್ಕೋರೆ. ಎಲ್ಲ ನಿಮ್ಮ ಪುಣ್ಯ’ ಅಂದಳು.
‘ಜಾಸ್ತಿ ದುಡ್ಡು ಸಿಗುತ್ತೆ ಅಂತ ಈಗ ಗಾರೆ ಕೆಲಸಕ್ಕೆ ಹೋಗ್ತಾ ಇದ್ದಿನಿ. ಕೈಯಲ್ಲಿ ನಾಕು ಕಾಸು ಬಂತು. ಅದಕ್ಕೆ ನಿಮ್ಮ ದುಡ್ಡು ಕೊಟ್ಟು ಹೋಗೋಣಾಂತ ಬಂದೆ’ ಅಂದಳು. ಅವಳ ಪ್ರಾಣಿಕತೆಗೆ ತಲೆಬಾಗಿದೆ. ಅವಳು ಕೊಟ್ಟ ಐದು ಸಾವಿರ ರೂಪಾಯಿಯನ್ನು ಅವಳ ಕೈಗೆ ಕೊಟ್ಟೆ. ನೀನೇ ಇಟ್ಟುಕೋ ಕಷ್ಟದಲ್ಲಿದ್ದೀಯಾ ಎಂದರೂ ನನ್ನ ಕೈಯಲ್ಲಿ ಹಣ ಇಟ್ಟು ಹೋದ ಅವಳನ್ನು ನೋಡಿ ನನ್ನ ಕಣ್ಣುಗಳು ಹನಿಗೂಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.