ADVERTISEMENT

ಕವಿಗಳ ಕಣ್ಣಿನಲ್ಲಿ ಹೆಣ್ಣು

ಭೂಮಿಕ ಲಲಿತಪ‍್ರಬಂಧ 2019 ಸಮಾಧಾನಕರ ಪ್ರಬಂಧ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 19:30 IST
Last Updated 1 ಫೆಬ್ರುವರಿ 2019, 19:30 IST
ಚಿತ್ರ: ಶ್ರೀಕಂಠ ಮೂರ್ತಿ ಎಂ.ಎಸ್‌
ಚಿತ್ರ: ಶ್ರೀಕಂಠ ಮೂರ್ತಿ ಎಂ.ಎಸ್‌   

ಪ್ರತಿ ದಿನಾ ಅರ್ಧಗಂಟೆಯಾದರೂ ಹಳೆಗನ್ನಡ ಕಾವ್ಯಗಳನ್ನು ಓದಬೇಕೆಂಬ ನಿಯಮವನ್ನು ನನಗೆ ನಾನೇ ವಿಧಿಸಿಕೊಂಡಿದ್ದೆ. ಆದರೆ ನಿಯಮಗಳಿರುವುದೇ ಮುರಿಯಲು ಎಂಬಂತೆ ಆಗುವುದು ವಿಪರ್ಯಾಸವೇ ಸರಿ. ಅದರಲ್ಲೂ ಬೇರೆ ಯಾವ ಕಾರಣದಿಂದಲೂ ಅಲ್ಲ ಕಾವ್ಯದಿಂದಲೇ ಕಾವ್ಯವಾಚನಕ್ಕೆ ಅಡ್ಡಿ ಬರುವುದೆಂದರೇನು? ಮೊನ್ನೆ ಲಕ್ಷ್ಮೀಶನ ಜೈಮಿನಿ ಭಾರತ ಓದುತ್ತಿದ್ದಾಗ ಹೀಗೆ ಆಯಿತು. ಹೂವಾಡಗಿತ್ತಿ ಹೆಣ್ಣು ನಸುನಗೆಯಲ್ಲಿ ಅರೆಬಿರಿದ ಮಲ್ಲಿಗೆಯನ್ನು, ಹೊಳೆವ ಹಲ್ಲಿನಲ್ಲಿ ಮಲ್ಲೆಯನ್ನು, ಮುಖದಲ್ಲಿ ತಾವರೆಯನ್ನು, ನಳಿತೋಳುಗಳಲ್ಲಿ ಶಿರೀಷ ಪುಷ್ಪದ ಮಾಲೆಯನ್ನು, ನಾಸಿಕದಲ್ಲಿ ಸಂಪಿಗೆಯನ್ನು, ಎಸಳುಗಣ್ಣಿನಲ್ಲಿ ಉತ್ಪಲವನ್ನು, ಉಗುರುಗಳಲ್ಲಿ ಕೇದಿಗೆಯನ್ನು ತಾನೇ ಇಟ್ಟುಕೊಂಡು ಉಳಿದ ಹೂಗಳನ್ನು ಮಾರಾಟ ಮಾಡುತ್ತಿದ್ದಳಂತೆ. ಸುಂದರವಾದ ಈ ಪದ್ಯ ಓದಿದಾಗ ಹಣ್ಣು ಹಣ್ಣಾದ (ಅರವತ್ತರ ಮುದುಕಿ) ನಾನೇ ಪರವಶಳಾದೆ.

ಹೆಣ್ಣಿನ ಸೌಂದರ್ಯವನ್ನು ಇಷ್ಟು ಸುಂದರ ಪದಗಳ ಜೋಡಣೆಯಿಂದ ವರ್ಣಿಸಿದ ಲಕ್ಷ್ಮೀಶನ ಕಾವ್ಯಕ್ಕೆ ಬೆರಗಾದೆ. ಸುಗ್ರಾಸ ಭೋಜನವನ್ನು ಉಂಡಮೇಲೆ ಕೆಲಕಾಲವಾದರೂ ಇನ್ನೇನು ತಿನ್ನಲು ಮನಸೊಪ್ಪದ ಹಾಗೆ ಇಂಥ ಪದ್ಯಗಳನ್ನು ಓದಿದಾಗ ಆದಿನದ ಓದನ್ನು ಅಲ್ಲಿಗೇ ನಿಲ್ಲಿಸಿ ಕಾವ್ಯದ ಲಹರಿಯಲ್ಲಿ ಓಲಾಡುವುದು ನನ್ನ ಜಾಯಮಾನ. ಕಾವ್ಯದಲ್ಲಿ ನವರಸಗಳು ಇರಲೇಬೇಕೆಂಬ ಹಿಂದಿನ ಕವಿಗಳ ಪ್ರಯತ್ನ ಮೆಚ್ಚತಕ್ಕದ್ದೇ. ಶ್ರಿಂಗಾರಕ್ಕೆ ಹೆಣ್ಣೇ ಸುಲಭ ಲಭ್ಯ. ಸಂಸ್ಕ್ರುತದ ಬಾಣ ನನಗೆ ಗೊತ್ತಿಲ್ಲದಿದ್ದರೂ ಬನ್ನಂಜೆಯವರ ಕನ್ನಡದ ಬಾಣ ಪರಿಚಿತನೇ. ಬಾಣನೇನೋ ಶೃಂಗಾರರಸವೇ ಪ್ರಧಾನವಾಗಿ ತೆಗೆದುಕೊಂಡು ಹೆಣ್ಣನ್ನು ಹೊಗಳಿ ಬರೆದರೆ ಭಕ್ತಿರಸ ಪ್ರಧಾನವಾಗಿ ಕಾವ್ಯ ರಚಿಸಿದ ಹರಿಹರ, ರಾಘವಾಂಕ, ಕುಮಾವ್ಯಾಸ, ಲಕ್ಷ್ಮೀಶರೂ ಎಷ್ಟೊಂದು ಬಗೆಯಲ್ಲಿ ಹೆಣ್ಣನ್ನು ವರ್ಣಿಸಿದ್ದಾರೋ ಎನಿಸುತ್ತದೆ. ಮುಡಿಯಿಂದ ಅಡಿವರೆಗೆ ಗುಣಾರ್ಣವ ಎಂದು ಬಿರುದುಕೊಟ್ಟು ಅರ್ಜುನನನ್ನು ಹೊಗಳಿದಷ್ಟು ಸುಭದ್ರೆಯನ್ನಾಗಲಿ ದ್ರೌಪದಿಯನ್ನಾಗಲಿ ವರ್ಣಿಸಿಲ್ಲ ಎಂದು ನನ್ನ ಅನಿಸಿಕೆ. ಇನ್ನು ಹೆಣ್ಣಿನ ಅಂಗಾಂಗಗಳನ್ನು ಹೂಗಳಿಗೆ ಹೋಲಿಸುವುದು ಸಾಕಾಗದೆ ಪಶು, ಪಕ್ಷಿ, ಪ್ರಾಣಿ, ಕೀಟಗಳಿಗೆ ಸಮೀಕರಿಸಿ ಬರೆದಿದ್ದಾರೆ. ಹಾವಿನಂತಹ ಜಡೆ, ಮೀನಿನಂತಹ ಕಣ್ಣುಗಳು, ದುಂಬಿಗಳಂತಹ ಮುಂಗುರುಳು, ಸಿಂಹಕಟಿ, ಆನೆಸೊಂಡಿಲನ್ನು ಹೋಲುವ ತೊಡೆಗಳು, ಚಕ್ರವಾಕದ ಇಲ್ಲ ಪಾರಿವಾಳದ ಜೋಡಿಯಂತಹ ಪಯೋಧರಗಳು, ಸ್ವರವೋ ಕೋಗಿಲೆ ಉಲಿ, ಮಾತು ಗಿಳಿಯ ಪಲುಕು, ನಡಿಗೆಗೆ ಹಂಸ, ಗಜಗಳನ್ನು ಪ್ರಯೋಗಿಸಿದ್ದಾರೆ. ಕುಣಿಯುವುದು ಗಂಡು ನವಿಲೇ ಆದರೂ ಕವಿಗಳಿಗೆ ನಾಟ್ಯ ಆಡುವುದು ಮಯೂರಿಯೇ. ಶಂಖದಂತಹ ಕೊರಳು ಹವಳದ ತುಟಿ ಸಾಮಾನ್ಯ ಎಲ್ಲಾ ಕವಿಗಳು ಬಳಸಿದ್ದರೂ ಪ್ರುಷ್ಠಕ್ಕೆ ಆಮೆಯ ಹೋಲಿಕೆ ಕೊಟ್ಟಿರುವುದು ಪುರಾಣ ಕಾಲದಲ್ಲಿ ಬಿಟ್ಟರೆ ಆಮೇಲಿನ ಕವಿಗಳಿಗೆ ಇಷ್ಟ ಆದಹಾಗೆ ಇಲ್ಲ. ಶ್ರೀಮತಿ ಎಂ.ಕೆ. ಇಂದಿರಾ ಅವರ ಕೂಚುಭಟ್ಟನ ಹುಚ್ಚುಬಿಡಿಸಲು ಕಾವ್ಯದಲ್ಲಿ ವರ್ಣಿಸಿದ ತರಕಾರಿ ಹಣ್ಣುಗಳನ್ನು ಬಳಸಿ ಹೆಣ್ಣಿನ ರಚನೆ ಮಾಡಿದ ಹಾಗೆಯೇ ಜೀವ ಜಂತುಗಳನ್ನು ಬಳಸಿಕೊಂಡಿದ್ದರೆ ಹೇಗೆ ಇದ್ದೀತು ಎಂಬ ಕಲ್ಪನೆ ನನಗೆ ಅಗಾಗ ಬರುತ್ತದೆ.

ನಿಂಬೆಯಂತಹ ಅಥವಾ ಹಾಲಿನ ಕೆನೆಯಂತಹ ಮೈಬಣ್ಣ, ಕಪ್ಪು ದ್ರಾಕ್ಷಿ ಅಥವಾ ನೇರಳೆಯಂತಹ ಕಣ್ಣುಗಳು, ಸೇಬಿನ ಕೆನ್ನೆ, ದಾಳಿಂಬೆ ಬೀಜದಂತಹ ಹಲ್ಲುಗಳು ಈ ರಸಾಯನದಲ್ಲಿ ತುಟಿಗೆ ತೊಂಡೆಹಣ್ಣಿನ ಹೋಲಿಕೆ ಅಷ್ಟು ಹೊಂದಿಕೆ ಆಗಲಾರದು ಎಂದು ನನ್ನ ಅನಿಸಿಕೆ. ಇನ್ನು ಬಾಳೆದಿಂಡಿನಂತಹ ತೋಳುಗಳು ಭಾರತೀಯ ಕವಿಗಳ ಕಲ್ಪನೆಯಾದರೆ ಬೆಂಡೆಕಾಯಿ ಬೆರಳುಗಳು ವಿದೇಶಿ ಕವಿಗಳ ಕಲ್ಪನೆ. ಕಮಲದ ದೇಟನ್ನು ಬೆರಳಿಗೆ ಹೋಲಿಸಿದರೆ ಹಸ್ತಕ್ಕೆ ಚಿಗುರೆಲೆಯನ್ನು ಸಮೀಕರಿಸಿದ್ದಾರೆ. ಬರೀ ಹೂ, ಹಣ್ಣು, ತರಕಾರಿ, ಪಶು, ಪ್ರಾಣಿಗಳಲ್ಲದೆ ಪ್ರಕ್ರತಿಯ ಭಾಗಗಳಾದ ಜಲಪಾತವನ್ನು ಬೆನ್ನ ಮೇಲಿಂದ ಇಳಿದ ಕೂದಲಿಗೆ, ಬೆಟ್ಟ ಗುಡ್ಡ ಕಣಿವೆ ಪ್ರದೇಶಗಳನ್ನು ಸ್ತ್ರೀಯ ವಕ್ಷೋಜಗಳಿಗೂ, ನಾಭಿಯನ್ನು ಸರೋವರದ ಆಳ ಸುಳಿಗೂ, ತ್ರಿವಳಿಯನ್ನು ತೆರೆಗಳಿಗೂ ಬಾಸೆಯನ್ನು ಮನ್ಮಥನೇರುವ ಮೆಟ್ಟಿಲೆಂದೂ ಬರೆದು ಕೊಂಡಾದಿದ್ದಾರೆ. ಹುಬ್ಬುಗಳಲ್ಲಿ ಕಾಮನಬಿಲ್ಲನ್ನು ನಗೆಯಲ್ಲಿ ಬೆಳದಿಂಗಳನ್ನೂ ಕಣ್ಣಿನಲ್ಲಿ ನಕ್ಷತ್ರಗಳನ್ನೂ ನೋಟದಲ್ಲಿ ಮಿಂಚನ್ನೂ ಮುಖದಲ್ಲಿ ಚಂದ್ರನನ್ನು ಕಂಡ ಕವಿಗಳೆಷ್ಟೋ ಮಂದಿ. ಆಯುಧಗಳಿಲ್ಲವೇ ಎಂದರೆ ಅದೂ ಇದೆ. ಬಿಲ್ಲಿನಂತಹ ಹುಬ್ಬು ಬಾಣದಂತಹ ಕಣ್ಣೋಟ ಸಾಕಲ್ಲವೇ? ಚರಾಚರ ವಸ್ತುಗಳಲ್ಲಿ ಹೆಣ್ಣನ್ನು ಕಂಡ ಕವಿಗಳಿಗೆ ಹೆಣ್ಣಿನ ವಿವಿಧ ಭಾವಾವೇಶ ತಿಳಿಯುವುದಿಲ್ಲವೆ? ನಗೆಯಲ್ಲಿ ಹಾಲು ಚೆಲ್ಲಿದ ಹುಣ್ಣಿಮೆ, ಕಂಡರೆ ಕೋಪಕ್ಕೆ ಸಿಡಿಯುವ ಜ್ವಾಲಾಮುಖಿ ಕಂಡಿದ್ದಾರೆ. ಸ್ನೇಹ ತಂಪೆರೆವ ತಂಗಾಳಿಯಾದರೆ, ದ್ವೇಷ ವಿಶ ಆಗಿದೆ. ಹೆಣ್ಣಿನ ಸಹನೆ, ಕ್ಷಮೆಗೆ ಭೂದೇವಿಯೇ ಉದಾಹರಣೆ. ಕಣ್ಣೀರಿನ ಪ್ರವಾಹಕ್ಕೆ ಕೊಚ್ಚಿಹೋಗದವರಿಲ್ಲ ಎಂದುಬಿಟ್ಟಿದ್ದಾರೆ. ಹೆಣ್ಣನ್ನು ಬಣ್ಣಿಸಲು ಮಾತ್ರ ಬಳಸಿಲ್ಲ ನಮ್ಮ ಕವಿಪುಂಗದವರು ಕೆಲವು ಬಣ್ಣನೆಗಳಿಗೆ ಹೆಣ್ಣೇ ಸೂಕ್ತ ಎನಿಸಿದೆ ಅವರಿಗೆ. ಮಮತೆಯ ಉದಾಹರಣೆಗೆ ತಾಯಿಯನ್ನು ಬಿಟ್ಟರೆ ಇನ್ಯಾವ ವಸ್ತು ಸೂಕ್ತ ಹೇಳಿ. ಮ್ರುದು ಮನಸ್ಸಿನ ಗಂಡಸಿಗೆ ಹೆಂಗರುಳು ಇದ್ದರೆ ಹಠ ಮಾಡುವ ಯಾರಾದರೂ ಸರಿ ಕೊನೆಗೆ ಮಗುವಾದರೂ ಅದು ಚಂಡಿ ಅವತಾರವೇ. ಸಧ್ಯ ಅತಿ ನಿದ್ರೆಗೆ ಹೊಟ್ಟೆಬಾಕತನಕ್ಕೆ ಕುಂಭಕರ್ನ, ಬಕಾಸುರರನ್ನು ಹೆಸರಿಸಿ ಹೆಣ್ಣನ್ನು ಅಷ್ಟರ ಮಟ್ಟಿಗೆ ಬಚಾವ್ ಮಾಡಿದ್ದಾರೆ ಎಂದುಕೊಂಡರೆ ಅದು ತಪ್ಪು ಕಲ್ಪನೆಯೇ ಸರಿ. ಏಕೆಂದರೆ ಮುಂದಿನ ಪ್ರಶಸ್ತಿ ಬುದ್ಧಿಶಕ್ತಿಗೆ. ಇಲ್ಲಂತೂ ಸ್ತ್ರೀಬುದ್ಧಿ ಪ್ರಳಯಾಂತಕ ಎಂದೇ ಷರಾ ಬರೆದುಬಿಟ್ಟಿದ್ದಾರೆ. ಗಂಡು ಕೆಟ್ಟು ಕೆರ ಹಿಡಿಯಲು ಮುಖ್ಯವಾದ ಮೂರು ಕಾರಣಗಳನ್ನು ಹೇಳಿಕೊಂಡು ಅದರಲ್ಲಿ ಹೆಣ್ಣಿಗೇ ಪ್ರಥಮ ಸ್ಥಾನ ಕೊಟ್ಟು, ಹೊನ್ನು, ಮಣ್ಣಿಗೆ ಆಮೇಲಿನ ಸ್ಥಾನ ದಯಪಾಲಿಸಿದ್ದಾರೆ. ಸೀತೆಗೆ ಬಂಗಾರದ ಜಿಂಕೆ ಆಸೆ ಆಗದಿದ್ದರೆ ರಾಮಾಯಣವೇ ಇಲ್ಲವಂತೆ. ದ್ರೌಪದಿ ನಗದಿದ್ದರೆ ಮಹಾಭಾರತವೇ ನಡೆಯುತ್ತಿರಲಿಲ್ಲವಂತೆ. ಆದರೆ ಇತಿಹಾಸದಲ್ಲಿ ಅದೆಷ್ಟು ಹೆಣ್ಣುಮಕ್ಕಳು ಎಷ್ಟೊಂದು ಯುದ್ಧ ತಪ್ಪಿಸಿದ್ದಾರೋ? ದಂಡೆತ್ತಿ ಬಂದ ಬಲಾಡ್ಯ ರಾಜರಿಗೆ ತಮ್ಮ ಹೆಣ್ಣುಮಕ್ಕಳನ್ನು ಕೊಟ್ಟು ಮದುವೆ ಮಾಡಿಸಿ ತಮ್ಮ ರಾಜ್ಯ ಭದ್ರ ಮಾಡಿಕೊಂಡ ಅರಸರು ಬೇಕಾದಷ್ಟು. ತಿಳಿಯದ ಭಾಷೆ, ಅರಿಯದ ಪ್ರದೇಶ, ಅಪರಿಚಿತನಾಗೇ ಉಳಿಯುವ ಪತಿ, ಸೆರೆಮನೆಯಂತಹ ಅಂತಃಪುರಗಳಲ್ಲಿ ಹೆಸರೇ ಇಲ್ಲದೆ ಅಳಿದುಹೋದ ಹೆಣ್ಣುಜೀವಗಳ ಅರಿವು ಕವಿಗಳಿಗಿತ್ತೋ ಇಲ್ಲವೋ ನಾ ಕಾಣೆ. ಹಿಂದಿನ ಕಾಲದ ಕವಿಗಳು ಕಣ್ಣಿಗೆ ಚಂದಕಂಡ ವಸ್ತುಗಳಲ್ಲಿ ಹೆಣ್ಣನ್ನು ಕಂಡು ತಮ್ಮ ತಮ್ಮ ಕಾವ್ಯದಲ್ಲಿ ಅದನ್ನೆಲ್ಲಾ ಅಳವಡಿಸಿಕೊಂಡು ಆ ಮೂಲಕ ಕಾವ್ಯದಲ್ಲಿ ರಸಧಾರೆ ಹರಿಸಿದ್ದಾರೆ.

ADVERTISEMENT

ಈಚೀಚೆ ಕವಿಗಳಿಗೆ ಹೆಣ್ಣನ್ನು ಹೊಗಳಲು ವಸ್ತುಗಳು ಕಾಣುತ್ತಿಲ್ಲವೇನೋ ಎನಿಸಿದೆ. ಆದರೆ ಲೆಕ್ಕವಿಲ್ಲದಷ್ಟು ನಗೆಹನಿಗಳು ಹೆಣ್ಣನ್ನು ಹೀಗಳೆಯಲೇ ಸ್ರುಷ್ಠಿಯಾಗಿದೆ ಎಂಬ ನಂಬಿಕೆ ನನ್ನದು. ಹೆಣ್ಣು ಗಂಡನ ಮೇಲೆ ದಬ್ಬಾಳಿಕೆ ಮಾಡುವ ನಗೆಹನಿಗಳನ್ನು ಬರೆದು ಮುಸುಕಿನಲ್ಲಿ ಗುದ್ದು ಕೊಡುತ್ತಿದ್ದಾರೆ ಎಂಬ ಸಂಶಯ ನನಗಿದೆ.

ಆಗಿನ ಕವಿಗಳು ತಮ್ಮ ಕವಿತೆಯಲ್ಲಿ ಹೆಣ್ಣಿನ ಸೌಂದರ್ಯವನ್ನು ಹೊಗಳಿ ಹಾಡಿದ್ದಾರೆ. ಈಗಿನ ಕವಿಗಳು ತಮ್ಮ ಕವಿತೆಗಳಲ್ಲಿ ಮುಖ್ಯವಾಗಿ ಹನಿಗವನಗಳಲ್ಲಿ ಹೊನ್ನಶೂಲದಿಂದ ತಿವಿಯುತ್ತಿದ್ದಾರೆ ಎನ್ನುವ ಗುಮಾನಿ ನನಗಿದೆ. ಆದರೆ ಹೆಣ್ಣುಗಳಾದ ನಾವು ಶೂಲವಾದರೇನು ಹೊನ್ನಿನದಲ್ಲವೇ ಎಂದು ಸುಮ್ಮನಾಗಿಬಿಟ್ಟಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.