ADVERTISEMENT

ಫೇಸ್‌ಬುಕ್‌ ಕನ್ನಡಕದಲ್ಲಿ ಲೋಕದ ನೋಟ

ಕ್ಷಮಾ ವಿ.ಭಾನುಪ್ರಕಾಶ್
Published 14 ಸೆಪ್ಟೆಂಬರ್ 2021, 19:30 IST
Last Updated 14 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈಗಂತೂ ಕನ್ನಡಕಗಳು ಕೇವಲ ಅವಶ್ಯಕತೆಯಾಗಿ ಉಳಿದುಕೊಳ್ಳದೇ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಾಗಿ ಬದಲಾಗಿವೆ. ತಂಪುಕನ್ನಡಕಗಳ ಬಗೆಬಗೆಯ ವಿನ್ಯಾಸಗಳಿಗೆ ಮಾರುಹೋಗದವರೇ ಇಲ್ಲವೇನೋ! ಹಲವು ಸಿನೆಮಾಗಳಲ್ಲಿ ತಂಪುಕನ್ನಡಕಗಳೇ ಒಂದೊಂದು ಪಾತ್ರವಾಗಿ, ಕ್ಯಾಮೆರಾ ಕೈಚಳಕದ ಪ್ರತಿಬಿಂಬವಾಗಿ ಕೂಡ ಬಳಕೆಯಾಗಿರುವುದು ನಾವು ಗಮನಿಸಿರುತ್ತೇವೆ. ತಂಪುಕನ್ನಡಕದ ಅನ್ವರ್ಥನಾಮವೇನೋ ಎಂಬಂತೆ ಛೋಟೂಗಳ ಬಾಯಲ್ಲೂ ನಲಿಡಾಡುವ ರೇಬ್ಯಾನ್‌ ಕಂಪನಿ ಮತ್ತು ಸೋಶಿಯಲ್‌ ಮೀಡಿಯಾ ಜಗತ್ತಿನ ದಿಗ್ಗಜ ಫೇಸ್‌ಬುಕ್‌ ಒಟ್ಟಿಗೇ ಸೇರಿ ಹೊಸ ಸಾಧ್ಯತೆಯೊಂದನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಅದೇ ಫೇಸ್‌ಬುಕ್‌ ಕನ್ನಡಕಗಳು. ಇದಕ್ಕೆ ಈ ಸಂಸ್ಥೆಗಳು ಇಟ್ಟಿರುವ ಹೆಸರು – ‘ರೇಬ್ಯಾನ್‌ ಸ್ಟೋರಿಸ್‌’. ನಿಮ್ಮ ಬದುಕಿನ ಕಥೆಗಳ ತುಣುಕುಗಳನ್ನು ಜಗತ್ತಿನ ಜೊತೆ ಹಂಚಿಕೊಳ್ಳಲು ಮತ್ತೊಂದು ರಹದಾರಿ ಇದು.

ಹಾಗೆಂದು, ಸ್ಮಾರ್ಟ್‌ ಕನ್ನಡಕಗಳು ಮಾರುಕಟ್ಟೆಗೆ ಬರುತ್ತಿರೋದು ಇದೇ ಮೊದಲೇನಲ್ಲ. ಸಾಫ್ಟವೇರ್‌ ಜಗತ್ತಿನ ಮತ್ತೊಂದು ದಿಗ್ಗಜ ಸಂಸ್ಥೆ ಗೂಗಲ್‌, 2013ರಲ್ಲೇ ಇಂತಹ ಅನ್ವೇಷಣೆಗೆ ಖ್ಯಾತಿ ಪಡೆದು ಗೂಗಲ್‌ ಗ್ಲಾಸಸ್‌ ಬಿಡುಗಡೆ ಮಾಡಿತ್ತು. ಸ್ನಾಪ್‌ಚಾಟ್‌ನ ಎ.ಆರ್‌. ಕನ್ನಡಕಗಳು ಈಗಾಗಲೇ ಬಳಕೆಯಲ್ಲಿವೆ. ಹಾಗಾದರೆ ಫೇಸ್‌ಬುಕ್‌ ಕನ್ನಡಕಗಳಲ್ಲೇನು ಹೊಸತು ಎಂದಿರಾ? ಫೇಸ್‌ಬುಕ್‌ ಆಗ್ಮೆಂಟೆಡ್‌ ರಿಯಾಲಿಟಿಗೆ ಕೈಹಾಕದೇ ನಮ್ಮ ಸುತ್ತಲಿನ ನಿಜದ ಜಗತ್ತಿನ ಸುಂದರ ಕ್ಷಣಗಳನ್ನು, ತಾಣಗಳನ್ನು ನಮ್ಮ ಕಣ್ಣು ಸೆರೆಹಿಡಿದಂತೆಯೇ ಕನ್ನಡಕವೂ ಸೆರೆಹಿಡಿವಂತೆ ಮಾಡಿದೆ. ಹೌದು, ಫೇಸ್‌ಬುಕ್‌ ಕನ್ನಡಕ ಅಥವಾ ರೇಬ್ಯಾನ್‌ ಸ್ಟೋರೀಸ್‌ ಮಾಡುವ ಕೆಲಸ ಯಾವುದು ಅನ್ನುವುದಕ್ಕಿಂತಾ ಮಾಡದ ಕೆಲಸ ಯಾವುದು ಅಂತ ಹುಡುಕಬೇಕಾದ ಪರಿಸ್ಥಿತಿ. ಅಷ್ಟು ಸಮರ್ಥವಾಗಿ ಹೊಸ ನೋಟ, ವಿಶಿಷ್ಟ ಅನುಭವ ಕೊಡಮಾಡುವ ಬದ್ಧತೆ ಈ ಸ್ಮಾರ್ಟ್‌ ಸಾಧನಕ್ಕಿದೆ ಎನ್ನುತ್ತವೆ, ಪಾಲುದಾರಿಕಾ ಸಂಸ್ಥೆಗಳು.

ಈ ಫೇಸ್‌ಬುಕ್‌ ಕನ್ನಡಕದ ಮೂಲಕ ನೀವು ನೋಡುತ್ತಿರುವ ಸಾಗರದ ತಂಪಾದ ತೀರದ ದೃಶ್ಯವನ್ನು ಹಾಗೇ ಕ್ಲಿಕ್ಕಿಸಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡಲೇ ಹಂಚಿಕೊಳ್ಳಬಹುದು. ಕಾರು ಚಾಲಿಸುತ್ತಾ ನಿಮ್ಮ ಮುಂದಿರುವ ಸರ್ಪದಂತಹ ಕವಲುದಾರಿಗಳ ಕಣ್ಮನ ಸೆಳೆಯುವ ಚಿತ್ರಣವನ್ನು ನಿಮ್ಮ ಫೋನಿಗಾಗಿ ತಡಕಾಡದೇ ನಿಮ್ಮ ಈ ಚತುರ ಕನ್ನಡಕದ ಮೂಲಕ ಜಗತ್ತಿಗೆ ಹಂಚಿಕೊಳ್ಳಬಹುದು. ಎರಡೂ ಕಣ್ಣುಗಳ ಬಳಿ 5 ಮೆಗಾಪಿಕ್ಸೆಲ್‌ಗಳ ಎರಡು ಕ್ಯಾಮೆರಾಗಳಿದ್ದು ಚೆಂದದ ಚಿತ್ರಕ್ಕೆ ಸಾಕ್ಷ್ಯ ಒದಗಿಸುತ್ತವೆ. ಕೇವಲ ಫೋಟೊ ಕ್ಲಿಕ್ಕಿಸುವುದು ಮಾತ್ರವಲ್ಲ, ಈ ಕನ್ನಡಕದಲ್ಲಿ ಅಡಗಿರುವ ಉತ್ಕೃಷ್ಟ ಸ್ಪೀಕರ್‌ಗಳ ಮೂಲಕ ನಿಮ್ಮಿಷ್ಟದ ಹಾಡು ಕೇಳುತ್ತಾ, ಪಾಡ್‌ಕಾಸ್ಟ್‌ಗಳಿಗೆ ಕಿವಿಯಾಗುತ್ತಾ ಸಾಗಬಹುದು. ನಿಮ್ಮ ಕಣ್ಣಷ್ಟೇ ಅಲ್ಲದೇ ನಿಮ್ಮ ಕಿವಿಗೂ ಮುದ ನೀಡಬಲ್ಲುದು ಈ ರೇಬ್ಯಾನ್‌ ಸ್ಟೋರೀಸ್‌. ಜೊತೆಗೆ ನೀವು ಕರೆಗಳನ್ನೂ ಸ್ವೀಕರಿಸಬಹುದು ಈ ಸ್ಮಾರ್ಟ್‌ ಸಾಧನದ ಮೂಲಕ. ಕನ್ನಡಕದ ಒಂದು ಬದಿಗಿರುವ ಪುಟ್ಟ ಗುಂಡಿ ಒತ್ತಿದರೆ ಸಾಕು, ಕರೆಯನ್ನು ಮಾಡಬಹುದು, ಕರೆಯನ್ನು ಸ್ವೀಕರಿಸಬಹುದು, ವಾಲ್ಯೂಮ್‌ ಹೆಚ್ಚು ಕಡಿಮೆ ಮಾಡಬಹುದು.

ADVERTISEMENT

ನಿಮ್ಮ ಬಾಯಿಂದ ದೂರವಿರುವ ಕನ್ನಡಕವು ವೈರ್‌ಲೆಸ್‌ ಬ್ಲೂಟೂಥ್‌ ಇಯರ್‌ಬಡ್ಸ್‌ನಂತೆ ಕಾರ್ಯನಿರ್ವಹಿಸುತ್ತದೆ; ಡಿಎಸ್‌ಪಿ ತಂತ್ರಜ್ಞಾನ ಅಥವಾ ಡಿಜಿಟಲ್‌ ಸಿಗ್ನಲ್‌ ಪ್ರೊಸೆಸಿಂಗ್‌ ಬಳಸಿ ಉತ್ತಮವಾಗಿ ನಿಮ್ಮ ಧ್ವನಿಯನ್ನು ಇತ್ತಲಿಂದತ್ತ ಅಡೆತಡೆಯಿಲ್ಲದೇ ಹರಿಸುತ್ತವೆ. ಸುಧಾರಿತ ತಂತ್ರಜ್ಞಾನದ ಸಹಾಯದಿಂದ ನಿಮ್ಮ ಸುತ್ತಲಿನ ಗೌಜುಗದ್ದಲ ಕೇಳದಂತೆ ನಾಯ್ಸ್‌ ಕ್ಯಾನ್ಸೆಲ್ಲೇಶನ್‌ ಕೂಡ ಸಾಧ್ಯವಿದೆ. ಇಷ್ಟೆಲ್ಲಾ ಮಾಡಲು ಸಾಧ್ಯವಿರುವ ಈ ಸ್ಮಾರ್ಟ್‌ ಕನ್ನಡಕ ನೋಡಲು ಬೋರಿಂಗ್‌ ಖಂಡಿತ ಇಲ್ಲ. ಇಷ್ಟೆಲ್ಲಾ ಅಳವಡಿಕೆಗಳನ್ನು ಹೊಂದಿರುವ ಇವು ಬರೋಬ್ಬರಿ 20 ವಿನ್ಯಾಸಗಳಲ್ಲಿ 5 ಬಣ್ಣಗಳಲ್ಲಿ ಸಿಗುತ್ತವಂತೆ. ಈ ಕನ್ನಡಕಗಳು ನೀವು ಹೇಳಿದ ಮಾತನ್ನು ಕೇಳೋಕೆ ಒಬ್ಬ ಸಹಾಯಕ/ಕಿ ಬೇಕಲ್ಲ! ಅದಕ್ಕೆಂದೇ ಫೇಸ್‌ಬುಕ್‌ ಸಂಸ್ಥೆ ಹೊಸ ಅಸಿಸ್ಟೆಂಟನ್ನು ತಯಾರು ಮಾಡಿದ್ದು, ‘ಹೇ ಫೇಸ್‌ಬುಕ್‌, ಒಂದು ವಿಡಿಯೊ ಮಾಡು’ ಎಂದರೆ ಸಾಕು, ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತದೆ.

ಇದನ್ನು ಬಳಸುವುದು ಬಹಳ ಸುಲಭ. ಫೇಸ್‌ಬುಕ್‌ ವ್ಯೂ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಈ ಕನ್ನಡಕವು ನಿಮ್ಮ ಕೈಯಳತೆಗೆ ಸಿಕ್ಕಂತೇ. ನೀವು ನಿಮ್ಮೆದುರಿಗೆ ಇರುವವರಿಗೆ ತಿಳಿಯದಂತೆ ಅವರ ಚಿತ್ರ ಕ್ಲಿಕ್ಕಿಸಬಾರದಲ್ಲ, ಹಾಗಾಗಿ, ನಿಮ್ಮ ಕನ್ನಡಕದ ಕ್ಯಾಮೆರಾ ಆನ್‌ ಆದ ತಕ್ಷಣ ಎರಡೂ ಬದಿಯಲ್ಲಿ ಪುಟಾಣಿ ಎಲ್‌ಇಡಿ ಬಲ್ಬ್‌ ಹೊತ್ತಿಕೊಂಡು ಜಗತ್ತಿಗೇ ನಿಮ್ಮ ಕ್ಯಾಮೆರಾ ಆನ್‌ ಆದ ಬಗ್ಗೆ ಸಾರುತ್ತದೆ. ಹೀಗಾಗಿ ಮತ್ತೊಬ್ಬರ ಖಾಸಗಿತನಕ್ಕೆ ನಿಮ್ಮಿಂದ ತೊಂದರೆಯಾಗದು. ಹಾಗೇ ಈ ಚತುರ ಸಾಧನದ ಮೂಲಕ ನಿಮ್ಮ ಮಾಹಿತಿಯೂ ಸೋರಿಕೆಯಾಗದಂತೆ ತಡೆಯಲು ಕ್ರಮಕೈಗೊಂಡಾಗಿದೆ ಎನ್ನುತ್ತವೆ ರೇಬ್ಯಾನ್‌-ಫೇಸ್‌ಬುಕ್‌ ಸಂಸ್ಥೆಗಳು. ಭಾರತದಲ್ಲಿ ಇನ್ನೂ ಲಭ್ಯವಿಲ್ಲದಿದ್ದರೂ 20ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಲಭ್ಯ. ಅಲ್ಲಿರುವ ನಿಮ್ಮ ಗೆಳೆಯರಿಗೆ ಕರೆ ಮಾಡಿ ಒಂದು ಚತುರ ಕನ್ನಡಕ ಆರ್ಡರ್‌ ಮಾಡುವ ಬಗ್ಗೆ ಯೋಚಿಸಬಹುದೇನೋ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.