ADVERTISEMENT

ಟ್ವಿಟರ್‌: ವಿನಯ್‌ ಪ್ರಕಾಶ್‌ ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿ

ಪಿಟಿಐ
Published 11 ಜುಲೈ 2021, 6:30 IST
Last Updated 11 ಜುಲೈ 2021, 6:30 IST
.
.   

ನವದೆಹಲಿ: ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ವಿನಯ್ ಪ್ರಕಾಶ್‌ ಅವರನ್ನು ನೇಮಿಸಿರುವುದಾಗಿ ಟ್ವಿಟರ್‌ ಭಾನುವಾರ ತಿಳಿಸಿದೆ.

ಭಾರತದ ಹೊಸ ಐಟಿ ನಿಯಮಗಳ ಪಾಲನೆ ವಿಷಯದಲ್ಲಿ ಕೇಂದ್ರ ಸರ್ಕಾರದ ಕಂಗೆಣ್ಣಿಗೆ ಗುರಿಯಾಗಿದ್ದ ಟ್ವಿಟರ್‌ ಇದೀಗ ಸ್ಥಾನಿಕ ಕುಂದುಕೊರತೆ ಅಧಿಕಾರಿ ನೇಮಕ ಮಾಡಿದೆ.

‘ವಿನಯ್ ಪ್ರಕಾಶ್ ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿ (ಆರ್‌ಜಿಒ). ಅವರನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಇಮೇಲ್ ಐಡಿ ಬಳಸಿ ಬಳಕೆದಾರರು ಸಂಪರ್ಕಿಸಬಹುದು’ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ADVERTISEMENT

ಟ್ವಟರ್‌ ಕಚೇರಿಯನ್ನು4ನೇ ಮಹಡಿ, ದಿ ಎಸ್ಟೇಟ್‌, 121 ಡಿಕೆನ್ಸನ್‌ ರಸ್ತೆ, ಬೆಂಗಳೂರು 560042 ಈ ವಿಳಾಸದಲ್ಲಿ ಸಂಪರ್ಕಿಸಬಹುದು ಎಂದು ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಇದೇ ವೇಳೆ ಕಂಪನಿಯು 2021ರ ಮೇ 26ರಿಂದ ಜೂನ್‌ 25ರವರೆಗಿನ ಕಾನೂನು ಪಾಲನಾ ವರದಿಯನ್ನೂ ಪ್ರಕಟಿಸಿದೆ. ಮೇ 26ರಂದು ಜಾರಿಗೆ ಬಂದಿರುವ ಐಟಿ ನಿಯಮಗಳ ಪ್ರಕಾರ ಕಾನೂನು ಪಾಲನಾ ವರದಿ ಪ್ರಕಟಿಸುವುದು ಪ್ರಮುಖಾಂಶವಾಗಿದೆ.

ಟ್ವಿಟರ್ ಈ ಹಿಂದೆ ಧರ್ಮೇಂದ್ರ ಚತುರ್ ಅವರನ್ನು ಭಾರತಕ್ಕೆ ಮಧ್ಯಂತರ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿ ನೇಮಿಸಿತ್ತು. ಆದರೆ, ಕಳೆದ ತಿಂಗಳು ಅವರು ಈ ಸ್ಥಾನದಿಂದ ಕೆಳಗಿಳಿದಿದ್ದರು.

ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದ ಹೊಸ ನಿಯಮಗಳ ಬಗ್ಗೆ ಟ್ವಿಟರ್ ಭಾರತ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು ಪದೇ ಪದೇ ಸೂಚನೆ ನೀಡಿದ ಬಳಿಕವೂ, ನಿಯಮ ಪಾಲನೆಗೆ ಟ್ವಿಟರ್‌ ಅಸಡ್ಡೆ ತೊರಿತ್ತು. ಇದು ಕೇಂದ್ರ ಸರ್ಕಾರ ಮತ್ತು ಟ್ವಟರ್‌ ನಡುವೆ ಜಟಾಪಟಿಗೂ ಕಾರಣವಾಗಿತ್ತು.

ಭಾರತದಲ್ಲಿ ಅಂದಾಜು 1.75 ಕೋಟಿ ಬಳಕೆದಾರರನ್ನು ಟ್ವಟಿರ್‌ ಹೊಂದಿದೆ. 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಹೊಸ ಐಟಿ ನಿಯಮದ ಪ್ರಕಾರ ಕಡ್ಡಾಯವಾಗಿ ಮುಖ್ಯ ಕಾನೂನು ಪಾಲನಾ ಅಧಿಕಾರಿ, ನೋಡಲ್‌ ಅಧಿಕಾರಿ ಮತ್ತು ಸ್ಥಾನಿಕ ಕುಂದುಕೊರತೆ ಅಧಿಕಾರಿಗಳನ್ನು ನೇಮಿಸಬೇಕು. ಈ ಮೂವರೂ ಭಾರತದ ನಿವಾಸಿಗಳಾಗಿರಬೇಕು.

ಭಾರತದ ನಿವಾಸಿಯೊಬ್ಬರನ್ನು ಮಧ್ಯಂತರ ಮುಖ್ಯ ಕಾನೂನು ಪಾಲನಾ ಅಧಿಕಾರಿಯಾಗಿ ನೇಮಿಸಲಾಗಿದ್ದು, ಎಂಟು ವಾರಗಳಲ್ಲಿ ಕಾಯಂ ನೇಮಕಾತಿಗೆ ಮಾಡಲಾಗುವುದು ಎಂದು ಇತ್ತೀಚೆಗೆ ಟ್ವಟಿರ್‌ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು. ಇದೇ ವೇಳೆ ಜುಲೈ 11ರೊಳಗೆ ಭಾರತಕ್ಕೆ ಸ್ಥಾನಿಕ ಕುಂದು ಕೊರತೆ ಅಧಿಕಾರಿ ನೇಮಿಸುವುದಾಗಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.