ADVERTISEMENT

HC: ಅನಂತಸ್ವಾಮಿ ಧಾಟಿ ನಾಡಗೀತೆಯೇ ಅಂತಿಮ; ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 15:49 IST
Last Updated 24 ಏಪ್ರಿಲ್ 2024, 15:49 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

‘ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ಅದರ ಪೂ‌ರ್ಣಪಾಠ ಬಳಸಬೇಕು ಹಾಗೂ ಆಲಾಪವಿಲ್ಲದೇ, ಪುನರಾವರ್ತನೆ ಇಲ್ಲದೆ 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರೈಸಿ ಕಾಯ್ದಿರಿಸಿದ್ದ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.

'ಕರ್ನಾಟಕ ಶಿಕ್ಷಣ ಕಾಯ್ದೆ–1983ರ ಕಲಂ 3ರ ಪ್ರಕಾರ ಎಲ್ಲಾ ಶಾಲೆಗಳಲ್ಲಿ ಅಂದರೆ; ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡಬೇಕು’ ಎಂಬ ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.

ADVERTISEMENT

‘ಇಂತಹ ಆದೇಶ ಹೊರಡಿಸಲು ಸರ್ಕಾರಕ್ಕೆ ಯಾವುದೇ ಶಾಸನ ರೂಪಿಸುವ ಅವಶ್ಯಕತೆ ಇಲ್ಲ. ಸರ್ಕಾರಕ್ಕೆ ತನ್ನದೇ ಕಾರ್ಯಪಾಲನಾ ಆದೇಶ ಹೊರಡಿಸುವ ನಿಹಿತ ಅಧಿಕಾರವಿದೆ. ರಾಷ್ಟ್ರಗೀತೆಯನ್ನು ಹೀಗೆಯೇ ಇಂತಿಷ್ಟೇ ಅವಧಿಯಲ್ಲಿ ಹಾಗೂ ಇಂತಹುದೇ ಧಾಟಿಯಲ್ಲಿ ಹಾಡಬೇಕು ಎಂಬಂತಹ ನಿಯಮಾವಳಿಗಳು ನಾಡಗೀತೆಯ ವಿಷಯದಲ್ಲೂ ಅನ್ವಯವಾಗುತ್ತವೆ’ ಎಂದು ನ್ಯಾಯಪೀಠ ಹೇಳಿದೆ.

‘ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವುದರಿಂದ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ. ಸರ್ಕಾರದ ಆದೇಶ ಪ್ರಶ್ನಿಸುವ ಯಾವುದೇ ಅಧಿಕಾರವನ್ನು ಅರ್ಜಿದಾರರು ಹೊಂದಿಲ್ಲ. ಅವರೇನೂ ಸರ್ಕಾರಿ ನೌಕರರಲ್ಲ ಅಥವಾ ಅವರ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದಾಗಲೀ ಇಲ್ಲ. ಹೀಗಾಗಿ, ಅವರ ಮೂಲಭೂತ ಹಕ್ಕು ಉಲ್ಲಂಘನೆ ಆಗಿದೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ನಿಮ್ಮ ಯಾವ ಹಕ್ಕುಗಳೂ ಉಲ್ಲಂಘನೆಯಾಗಿಲ್ಲ ಎಂಬುದನ್ನು ನೆನಪಿಡಿ. ಹೀಗಾಗಿ, ನಿಮ್ಮ ಅರ್ಜಿ ವಜಾ ಮಾಡಲಾಗುತ್ತಿದೆ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

‘ಇಂತಹದೇ ಧಾಟಿಯಲ್ಲಿ ನಾಡಗೀತೆ ಹಾಡಬೇಕೆಂದು ಸರ್ಕಾರ ಸುಖಾಸುಮ್ಮನೆ ಆದೇಶ ಹೊರಡಿಸಿಲ್ಲ. ನಾಡಗೀತೆ ವಿಚಾರವಾಗಿ ಹಲವು ನಿಯೋಗಗಳೊಂದಿಗೆ ಚರ್ಚಿಸಿದೆ. ಧಾಟಿಯನ್ನು ಅಂತಿಮಗೊಳಿಸಲು ತಜ್ಞರ ಸಮಿತಿ ರಚನೆ ಮಾಡಿತ್ತು. ಆ ಸಮಿತಿ ನೀಡಿದ ವರದಿ ಆಧರಿಸಿ ಮೈಸೂರು ಅನಂತ ಸ್ವಾಮಿ ಅವರ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ’ ಎಂದು ಹೇಳಿದೆ.

ಅರ್ಜಿಯಲ್ಲಿ ಏನಿತ್ತು?: ‘ಜಯ ಭಾರತ ಜನನಿಯ ತನುಜಾತೆ, ನಾಡಗೀತೆಯನ್ನು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು‘ ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್‌ 25ರಂದು ಹೊರಡಿಸಿದ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದರು. 

‘ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಗಾಯಕ ಮತ್ತು ಸಂಗೀತ ಸಂಯೋಜಕ ಸಿ.ಅಶ್ವತ್ಥ್‌ ಅವರು ನಾಡಗೀತೆಯ ಎಲ್ಲಾ ಚರಣಗಳಿಗೆ ರಾಗ ಸಂಯೋಜಿಸಿದ್ದಾರೆ. ಹಾಗಾಗಿ, ಸರ್ಕಾರದ ಆದೇಶ ರದ್ದುಪಡಿಸಬೇಕು ಮತ್ತು ಸಿ.ಅಶ್ವತ್ಥ್‌ ಅವರ ರಾಗ ಸಂಯೋಜಿಸಿದ ಧಾಟಿಯಲ್ಲೇ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಪ್ರಶಂಸೆ: ‘ಕಿಕ್ಕೇರಿ ಕೃಷ್ಣಮೂರ್ತಿ ಅವರು ಉತ್ತಮ ಗಾಯಕ. ಯಾವುದೇ ದುರ್ಭಾವನೆಯಿಂದ ಅವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ. ವಿಚಾರಣೆ ವೇಳೆ ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ, ಮೃತ್ಯುಂಜಯ ದೊಡ್ದವಾಡ, ಕವಿ ಬಿ.ಆರ್‌.ಲಕ್ಷ್ಮಣ್‌ ರಾವ್‌, ವೈ.ಕೆ.ಮುದ್ದಕೃಷ್ಣ ಅವರು ನ್ಯಾಯಾಲಯಕ್ಕೆ ಹಾಜರಾಗಿ, ತಮ್ಮ ಮೂಲ್ಯವಾದ ಮಾಹಿತಿ ಹಾಗೂ ಸಲಹೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಅವರ ಕಾರ್ಯ ಪ್ರಶಂಸೆಗೆ ಅರ್ಹವಾಗಿದೆ’ ಎಂದು ನ್ಯಾಯಮೂತಿಗಳು ಹೇಳಿದರು.

ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ಮಧ್ಯಂತರ ಅರ್ಜಿದಾರ ಮೃತ್ಯುಂಜಯ ದೊಡ್ಡವಾಡ ಪರ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ಹಾಗು ವಕಾಲತ್ತು ವಹಿಸಿದ್ದ ಎಚ್‌.ಸುನಿಲ್‌ ಕುಮಾರ್ ವಾದ ಮಂಡಿಸಿದ್ದರು.

ಸ್ವಾಗತಾರ್ಹ: ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್ (ಎಎಜಿ) ಎಸ್.ಎ.ಅಹಮದ್‌ ನ್ಯಾಯಪೀಠ ನೀಡಿರುವ ತೀರ್ಪನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ನಾಡು, ನುಡಿ, ನೆಲ, ಜಲಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಾವು ಅನುಸರಿಸಬೇಕಾದ ಶಿಸ್ತು ಮತ್ತು ಅನುಶಾಸನಕ್ಕೆ ಹೈಕೋರ್ಟ್‌ ಈ ತೀರ್ಪಿನ ಮೂಲಕ ಮತ್ತೊಮ್ಮೆ ಸ್ವೀಕೃತ ಮುದ್ರೆ ಒತ್ತಿದೆ’ ಎಂದು ಹೇಳಿದ್ದಾರೆ.

ರಾಷ್ಟ್ರಗೀತೆಯನ್ನು ಹಾಡಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ ಎಂಬುದೇನೋ ಸರಿ. ಆದರೆ, ಅದಕ್ಕೆ ಅಗೌರವ ತೋರುವಂತಿಲ್ಲ ಎಂಬುದನ್ನು ಯಾರೂ ಮರೆಯಬಾರದು. ಅಂತೆಯೇ ನಾಡಗೀತೆ ವಿಷಯದಲ್ಲೂ ಇದು ಅನ್ವಯವಾಗುತ್ತದೆ.
ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌

ಕಾವ್ಯ ಭಗವಂತನಿಗೆ ಹತ್ತಿರವಾದದು

ತೀರ್ಪು ಪ್ರಕಟಿಸುವ ಮುನ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರು, ‘ಕಾವ್ಯ ಪ್ರಕಾರ ಭಗವಂತನಿಗೆ ತುಂಬಾ ಹತ್ತಿರವಾದದು. ಹಾಗಾಗಿಯೇ, ವೇದ, ಉಪನಿಷತ್ತು, ಕುರಾನ್‌, ಬೈಬಲ್‌, ಯಹೂದಿಗಳ ಧಾರ್ಮಿಕ ಗ್ರಂಥ ತೋರಾಗಳೆಲ್ಲವೂ ಕಾವ್ಯ ರೂಪದಲ್ಲಿವೆ. ನಮ್ಮ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್‌ ಅವರ ಸಂಗೀತ ಆಸಕ್ತಿ ಮತ್ತು ಕೊಡುಗೆಯೂ ಇಂತಹ ಗಳಿಗೆಯಲ್ಲಿ ಸ್ಮರಣಾರ್ಹ’ ಎಂದರು.

‘ರಾಷ್ಟ್ರಕವಿ ಕುವೆಂಪು ಅಂದರೆ ಕನ್ನಡದ ಕಂಪು ಹಾಗೂ ಮಹೋನ್ನತ ವ್ಯಕ್ತಿ. ಅವರು ನಾಡಗೀತೆಯನ್ನು 1931ರಲ್ಲೇ ರಚಿಸಿದ್ದರು. ಅದನ್ನು 1993ರಲ್ಲಿ ರಾಜ್ಯ ಸರ್ಕಾರ ಅಂಗೀಕರಿಸಿದೆ. ಈ ನಾಡಗೀತೆ ಅವರ ಇನ್ನಿತರೆ ಕೃತಿಗಳಂತೆಯೇ ಅಮೂಲ್ಯವಾದುದು. ನಾನು ಮೈಸೂರು ಅನಂತ ಸ್ವಾಮಿ ಮತ್ತು ಸಿ.ಅಶ್ವತ್ಥ್‌ ಅವರ ರಾಗಸಂಯೋಜನೆಯಲ್ಲಿ ನಾಡಗಿತೆಯನ್ನು ಕೇಳಿದ್ದೇನೆ. ಎರಡೂ ರಾಗಗಳು ಅದ್ಭುತವಾಗಿವೆ. ಒಂದು ವೇಳೆ ಧಾಟಿಯ ಜಿಜ್ಞಾಸೆಯಲ್ಲಿ ಯಾವ ರೀತಿ ಹಾಡಬೇಕೆಂದು ಅನಂತಸ್ವಾಮಿ ಮತ್ತು ಸಿ.ಅಶ್ವತ್ಥ್‌ ಅವರನ್ನು ತಕ್ಕಡಿಯಲ್ಲಿ ಇಟ್ಟು ತೂಗಿದರೆ ಕಾಟಾ ಯಾರ ಕಡೆ ವಾಲಬೇಕು ಎಂಬುದು ಗೊತ್ತಾಗದೆ ಮುರಿದು ಬೀಳುತ್ತದೆ! ಆದ್ದರಿಂದ ಇಂತಹ ವಿಷಯಗಳಲ್ಲಿ ಇಬ್ಬರೂ ಮಹನೀಯ ಸಂಗೀತಗಾರರು’ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.