ADVERTISEMENT

ಅಲ್ಪಾವಧಿ ಕೃಷಿ ತಂದ ಅಧಿಕ ಲಾಭ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 19:30 IST
Last Updated 23 ಜನವರಿ 2017, 19:30 IST
ಅಲ್ಪಾವಧಿ ಕೃಷಿ ತಂದ ಅಧಿಕ ಲಾಭ
ಅಲ್ಪಾವಧಿ ಕೃಷಿ ತಂದ ಅಧಿಕ ಲಾಭ   

ಹರೀಶ್. ಬಿ ಎಸ್.

‘ಕೃಷಿಯೆಂದರೆ ಲಾಭ...’ ಹೀಗೆ ಹೇಳುವವರನ್ನು ಎಲ್ಲಿಯಾದರೂ ಕೇಳಿದ್ದೀರಾ? ಆದರೆ ಹೀಗೆ ಹೇಳುತ್ತಾರೆ ಮೈಸೂರಿನ ಪುಟ್ಟೇಗೌಡನಹುಂಡಿಯ ರಾಜಬುದ್ಧಿ.

ಹೆಸರಲ್ಲೇ ‘ಬುದ್ಧಿ’ ಇಟ್ಟುಕೊಂಡಿರುವ ರಾಜಬುದ್ಧಿಯವರು ಕೃಷಿಯಲ್ಲೂ ಅದ್ಭುತ ಬುದ್ಧಿಶಕ್ತಿ ಹೊಂದಿದ್ದಾರೆ. ‘ಕೃಷಿಯಲ್ಲಿ ಯಶ ಹೊಂದಲು ತುಂಬಾ ಓದಬೇಕು ಎಂದೇನೂ ಇಲ್ಲ. ವಿದ್ಯೆಯೊಂದೇ ಬುದ್ಧಿಯಲ್ಲ’ ಎನ್ನುವ ಇವರು ಓದಿದ್ದು ಕೇವಲ ಏಳನೇ ತರಗತಿ. ಆದರೆ ತೋಟಗಾರಿಕೆ ಬೆಳೆ ಬೆಳೆಯುವಲ್ಲಿ ಇವರಿಗೆ ಇವರೇ ಸಾಟಿ!

ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ರಾಜಬುದ್ಧಿ ಅವರದ್ದು ಎತ್ತಿದ ಕೈ. ಹಾಗೆಂದ ಮಾತ್ರಕ್ಕೆ ವಿಜ್ಞಾನಿಗಳು/ವಿಸ್ತರಣಾ ಕಾರ್ಯಕರ್ತರು ಹೇಳಿದ ತಂತ್ರಜ್ಞಾನಗಳನ್ನು ಯಥಾವತ್ತಾಗಿ ಅಳವಡಿಸುವುದಿಲ್ಲ. ಸ್ವಲ್ಪ ಜಾಗದಲ್ಲಿ ಮೊದಲು ಪ್ರಯೋಗಿಸಿ ಅದರ ಆಗು-ಹೋಗುಗಳನ್ನು ಕಂಡುಕೊಂಡು ಅವಶ್ಯವಿದ್ದರೆ ತಂತ್ರಜ್ಞಾನಕ್ಕೆ ಸೂಕ್ತ ಮಾರ್ಪಾಡು ಮಾಡಿ ತಮ್ಮ ಜಮೀನಿನಲ್ಲಿ ನಂತರ ಅಳವಡಿಸುತ್ತಾರೆ.

ಇದಕ್ಕೆ ಉದಾಹರಣೆ ಬೆಳೆಗಳಿಗೆ ಪ್ಲಾಸ್ಟಿಕ್‌ ಹೊದಿಕೆ ಬಳಕೆ. ಎತ್ತರದ ಮಡಿಗಳನ್ನು ಮಾಡಿ ಹನಿರಸಾವರಿ ಪದ್ಧತಿ ಅಳವಡಿಸುವುದು ಪ್ಲಾಸ್ಟಿಕ್ ಹೊದಿಕೆ ಕೃಷಿಯ ಮುಖ್ಯ ಅಂಶ. ಈ ತಂತ್ರಜ್ಞಾನದಿಂದ ಕೀಟ-ರೋಗ ಬಾಧೆ ಕಡಿಮೆಯಾಗುವುದು ಮಾತ್ರವಲ್ಲದೇ ನೀರಿನ ಬಳಕೆಯಲ್ಲಿ ಉಳಿತಾಯವಾಗುತ್ತದೆ ಜೊತೆಗೆ ಕಳೆ ನಿರ್ವಹಣೆ ಪರಿಣಾಮಕಾರಿಯಾಗುತ್ತದೆ.

ಬೆಳೆ ಬೇಗನೆ ಕಟಾವಿಗೆ ಬರುತ್ತದೆ ಕೂಡ. ಆದರೆ ರಾಜಬುದ್ಧಿಯವರು ಈ ಎಲ್ಲಾ ತಂತ್ರಜ್ಞಾನಗಳನ್ನು ಎಲ್ಲಾ ಬೆಳೆಗಳಿಗೆ ಉಪಯೋಗಿಸುವ ಬದಲು ಅಲ್ಪ ಅವಧಿಯ ಅಥವಾ ವಾರ್ಷಿಕ ಬೆಳೆಗಳಾದ ಕಲ್ಲಂಗಡಿ, ಚೆಂಡುಹೂ, ಟೊಮೆಟೊ, ಕ್ಯಾಪ್ಸಿಕಂ, ಹಾಗಲಕಾಯಿ, ಸೋರೆಕಾಯಿ, ಬಾಳೆ ಇತ್ಯಾದಿಗಳಿಗೆ ಉಪಯೋಗಿಸಿದ್ದಾರೆ.

‘ಬಹುವಾರ್ಷಿಕ ಬೆಳೆಗಳಿಂದ ಬರುವ ಆದಾಯ ನಿಧಾನ ಹಾಗೂ ಕಡಿಮೆ. ಉದಾಹರಣೆಗೆ ಅಲ್ಪ ಅವಧಿಯ ಬೆಳೆ ಕಲ್ಲಂಗಡಿಯನ್ನು ತೆಗೆದುಕೊಳ್ಳಿ. ಒಂದು ಎಕರೆ ಕಲ್ಲಂಗಡಿ ಬೆಳೆಯಲ್ಲಿ 60–75 ದಿನಗಳಲ್ಲಿ ಕನಿಷ್ಠ ಎಕರೆಗೆ ₹60ಸಾವಿರ ಲಾಭ ಬರುತ್ತದೆ. ಅದೇ ಒಂದು ಎಕರೆ ತೆಂಗಿನತೋಟದಿಂದ ಬರುವ ನಿವ್ವಳ ಲಾಭ ಎಕರೆಗೆ ₹15ರಿಂದ 20 ಸಾವಿರ. ಅದೂ ಒಂದು ವರ್ಷ ಕಾಯಬೇಕು’ ಎನ್ನುತ್ತಾರೆ.

ತೋಟಗಾರಿಕೆ ಇಲಾಖೆ ವತಿಯಿಂದ ಅವರ ತೋಟದಲ್ಲಿ ನೀಡಿದ ಪ್ರಾತ್ಯಕ್ಷಿಕೆಯಲ್ಲಿ ನಾವು ಮಾಡಿದ ಶಿಫಾರಸಿನಂತೆ ಕಲ್ಲಂಗಡಿ ಬೆಳೆಗೆ ಸಾಲಿನಿಂದ ಸಾಲಿಗೆ ಆರು ಅಡಿ ಹಾಗೂ ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರ ಕೊಟ್ಟು ನಾಟಿ ಮಾಡಿ ಉತ್ತಮ ಬೆಳೆ, ಅಧಿಕ ಇಳುವರಿ ಹಾಗೂ ಉತ್ತಮ ನಿವ್ವಳ ಆದಾಯ ಪಡೆದರು. ಆದರೆ ಎರಡನೆಯ ಬೆಳೆಗೆ ತಮ್ಮದೇ ಬುದ್ಧಿ ಉಪಯೋಗಿಸಿದರು.

ಒಂದು ಜೋಡಿ ಸಾಲಿನಿಂದ ಮತ್ತೊಂದು ಜೋಡಿ ಸಾಲಿನ ನಡುವೆ12 ಅಡಿ ಅಂತರ, ಒಂದು ಜೋಡಿ ಸಾಲಿನ ನಡುವೆಯಿರುವ ಸಾಲುಗಳೆರಡರ ನಡುವೆ ಎರಡು ಅಡಿ ಅಂತರ ಹಾಗೂ ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರವಿಟ್ಟು ಬೆಳೆ ಬೆಳೆದು ಸಂಪೂರ್ಣ ಯಶಸ್ವಿಯಾದರು. ಜೋಡಿ ಸಾಲುಗಳೆರಡರ ನಡುವಿನ ಅಂತರ ಹೆಚ್ಚಿರುವುದರಿಂದ ಅಂತರ ಬೇಸಾಯ ಬಹು ಸುಲಭ.

ಟ್ರ್ಯಾಕರ್ ಕೂಡ ಬಳಸಬಹುದು, ಬೆಡ್ (ಏರುಮಡಿ) ತಯಾರಿಯಲ್ಲಿ ಬೇಕಾಗುವ ಕಾರ್ಮಿಕರ ಸಂಖ್ಯೆಯಲ್ಲೂ ಇಳಿಕೆ, ಎಕರೆವಾರು ಬೇಕಾಗುವ ಹನಿಕೊಳವೆ ಹಾಗೂ ಪಾಲಿಥೀನ್ ಹೊದಿಕೆಗಳ ಅವಶ್ಯಕತೆ ಪ್ರತಿಶತ 50ರಷ್ಟು ಕಡಿಮೆಯಾಗುವುದು ಜೊತೆಗೆ ಅಷ್ಟು ಹಣ ಕೂಡ ಉಳಿತಾಯ ಎಂಬುದನ್ನು ಈ ಹೊಸ ಪದ್ಧತಿ ಮೂಲಕ ಅವರು ತೋರಿಸಿಕೊಟ್ಟರು. ಈ ಮೂಲಕ ಈ ಹೊಸ ಪದ್ಧತಿ ಇತರರಿಗೂ ಮಾದರಿಯಾಯಿತು!

ಬೋದು ಪದ್ಧತಿಯಿಂದ ಏರುಮಡಿಗೆ, ಏರುಮಡಿಯಿಂದ ಹನಿ ನೀರಾವರಿಗೆ, ಹನಿ ನೀರಾವರಿಯಿಂದ ಹನಿರಸಾವರಿಗೆ, ಹನಿರಸಾವರಿಯಿಂದ ಪ್ಲಾಸ್ಟಿಕ್ ಹೊದಿಕೆಗಳಿಗೆ, ಏಕ ಸಾಲು ಪದ್ಧತಿಯಿಂದ ಜೋಡಿ ಸಾಲು ಪದ್ಧತಿಗೆ ಅವರ ಕೃಷಿ ಪ್ರಯಾಣ ನಿರಂತರ. ಈ ವಿಕಾಸ ಅಲ್ಲಿಗೇ ನಿಲ್ಲವುದಿಲ್ಲ. ಏನಾದರೊಂದು ಅನ್ವೇಷಣೆ, ಹೊಸದನ್ನು ಕಂಡುಕೊಂಡು ಅದನ್ನು ಅಳವಡಿಸುವುದು ಅವರ ವೈಜ್ಞಾನಿಕ ಹಾಗೂ ವೈಚಾರಿಕ ದೃಷ್ಟಿಕೋನಕ್ಕೆ ದೊಡ್ಡ ಉದಾಹರಣೆ.

ಕೃಷಿ ಮಾಡಲು ಸ್ಫೂರ್ತಿ ಬೇಕಾದವರಿಗೆ ಇವರು ಉತ್ತಮ ಮಾದರಿಯಾಗಬಲ್ಲರು. ಅಪಾರ ಶ್ರಮ, ಪ್ರಾಯೋಗಿಕ ಮನಸ್ಸು,  ಮನೆಯವರೆಲ್ಲರೂ ಒಟ್ಟಾಗಿ ದುಡಿಯುವುದು, ಕೃಷಿ ವಿಜ್ಞಾನಿಗಳು, ತಜ್ಞರು ಹಾಗೂ ಪ್ರಗತಿಪರ ರೈತರೊಂದಿಗಿನ ನಿರಂತರ ಒಡನಾಟ, ಯೋಜಿತ ಕೃಷಿ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾದಂತೆ ಬೆಳೆ ಉತ್ಪಾದನೆ, ಸಮಗ್ರ ಕೃಷಿ ಪದ್ಧತಿಗಳ ಅಳವಡಿಕೆ, ನೂತನ ತಂತ್ರಜ್ಞಾನಗಳು... ಇತ್ಯಾದಿ ಅವರನ್ನು ಮಾದರಿ ಕೃಷಿಕನನ್ನಾಗಿಸಿದೆ.

2006ರಿಂದ ಇವರ ಕಲ್ಲಂಗಡಿ ಕೃಷಿ ಪ್ರಾರಂಭವಾಗಿ, ಇದುವರೆವಿಗೂ ಒಟ್ಟು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಭೂಮಿಯಲ್ಲಿ 14 ಬಾರಿ ಕಲ್ಲಂಗಡಿ ಬೆಳೆದಿದ್ದಾರೆ. ಅತಿ ಹೆಚ್ಚೆಂದರೆ ಎಕರೆಯೊಂದರಿಂದ ಬಂದ ನಿವ್ವಳ ಲಾಭ 60 ದಿನಗಳಲ್ಲಿ ₹1.25ಲಕ್ಷ. ಅತಿ ಕಡಿಮೆಯೆಂದರೆ ಎಕರೆಗೆ ₹50ಸಾವಿರ.

ಈ ವರ್ಷ ಒಂದು ಎಕರೆಯಲ್ಲಿ ಬಾಳೆ, ಟೊಮೆಟೊ ಮತ್ತು ಹೂಕೋಸು ಬೆಳೆಗಳನ್ನು ಸಂಯೋಜಿಸಿ ಒಟ್ಟಿಗೇ ನಾಟಿ ಮಾಡಿದ್ದಾರೆ. ಹೂಕೋಸು ಕಟಾವಾಗಿ ಈಗಾಗಲೇ 60 ಸಾವಿರ ರೂಪಾಯಿ ಇವರ ಕೈಸೇರಿದೆ. ‘ದರ ಅಸ್ಥಿರವಾಗಿರುವ ಟೊಮೆಟೊದಿಂದ ಯಾವಾಗಲೂ ಹೆಚ್ಚಿನ ನಿರೀಕ್ಷೆ ಮಾಡುವುದಿಲ್ಲ.

ಹೊಡೆದರೆ ಲಾಟರಿ ಅಷ್ಟೆ’ ಎನ್ನುತ್ತಾರೆ. ಬಾಳೆಯಲ್ಲಿ ಮೂರು ಲಕ್ಷ ನಿವ್ವಳ ಲಾಭಗಳಿಸುವ ಆಶಾದಾಯಕ ನಿರೀಕ್ಷೆ ಇವರದ್ದು. ನೆರಳುಮನೆ ಹಾಗೂ ಪಾಲಿಹೌಸ್‌ಗಳನ್ನೂ ನಿರ್ಮಿಸಿಕೊಂಡು ತರಕಾರಿ ನರ್ಸರಿ ಹಾಗೂ ಕ್ಯಾಪ್ಸಿಕಂ ಮುಂತಾದ ವಾಣಿಜ್ಯ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ.
ಇವರ ಸಂಪರ್ಕಕ್ಕೆ- 09632827891.
(ಲೇಖಕರು ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.