ADVERTISEMENT

ಇದು ನೈಸರ್ಗಿಕ ದಾಳಿಂಬೆ

ಹುಚ್ಚೇಶ್ವರ ಅಣ್ಣಿಗೇರಿ
Published 3 ಏಪ್ರಿಲ್ 2017, 19:30 IST
Last Updated 3 ಏಪ್ರಿಲ್ 2017, 19:30 IST
ಇದು ನೈಸರ್ಗಿಕ ದಾಳಿಂಬೆ
ಇದು ನೈಸರ್ಗಿಕ ದಾಳಿಂಬೆ   

ಸತತ ನಾಲ್ಕು ವರ್ಷಗಳ ಬರದಿಂದ ಗದಗ ಜಿಲ್ಲೆ ತತ್ತರಿಸಿದೆ. ನೀರಿನ ಕೊರತೆಯಿಂದಾಗಿ ರೈತರು ಕೃಷಿಕ್ಷೇತ್ರದಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೋಟಗಾರಿಕೆ ಬೆಳೆಯಂತೂ ನೀರಾವರಿ ಸೌಲಭ್ಯ ಇದ್ದವರಿಗೆ ಮಾತ್ರ ಸಾಧ್ಯ ಎಂಬ ಪರಿಸ್ಥಿತಿ ಇದೆ.

ಇಂತಹ ಪ್ರತಿಕೂಲ ಸನ್ನಿವೇಶದಲ್ಲಿ, ಇರುವ ಒಂದೇ ಒಂದು ಕೊಳವೆಬಾವಿ ನೀರನ್ನು ಸದ್ಬಳಕೆ ಮಾಡಿಕೊಂಡು, 11 ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ಮೂಲಕ ದಾಳಿಂಬೆ ಬೆಳೆದು ಯಶಸ್ವಿಯಾಗಿದ್ದಾರೆ ರೋಣ ತಾಲ್ಲೂಕಿನ ಮಲ್ಲಾಪುರ ಗ್ರಾಮದ ವಿಶಾಲಾಕ್ಷಿ ದಾನರಡ್ಡಿ.

ದಶಕದ ಹಿಂದಿನ ಮಾತು. ವಿಶಾಲಾಕ್ಷಿ ಹಾಗೂ ಪತಿ ರಾಜಕುಮಾರ ದಾನರಡ್ಡಿ ಅವರು ಚಿಕ್ಕಮಣ್ಣೂರು ಗ್ರಾಮದಲ್ಲಿರುವ ಜಮೀನಿನಲ್ಲಿ ಜಿಲ್ಲೆಯ ಉಳಿದ ರೈತರಂತೆ ಗೋವಿನಜೋಳ, ಬಿಳಿಜೋಳ, ಹತ್ತಿ, ಶೇಂಗಾ ಬೆಳೆಯುತ್ತಿದ್ದರು.

ADVERTISEMENT

ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ವಿಶಾಲಾಕ್ಷಿ ಅವರಿಗೆ ಯಾಕೆ ತೋಟಗಾರಿಕೆ ಬೆಳೆ ಬೆಳೆದು ನೋಡಬಾರದು ಎಂಬ ಯೋಚನೆ ಬಂತು. ಬರದ ನೆಲದಲ್ಲಿ ಎಲ್ಲಿಯಾದರೂ ಹಣ್ಣಿನ ಗಿಡ ಚಿಗುರುವುದೇ ಎಂದು ಜನರು ಮಾತನಾಡಿಕೊಂಡರು. ಇದನ್ನು ಸವಾಲಾಗಿ ಸ್ವೀಕರಿಸಿದ ಅವರು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಚಿಕ್ಕು, ನಿಂಬೆ, ನುಗ್ಗೆ ಗಿಡಗಳನ್ನು ಬೆಳೆಸಿದರು. ಚಿಕ್ಕು, ನಿಂಬೆ ನಿರೀಕ್ಷಿತ ಫಲ ನೀಡುತ್ತಿದ್ದಂತೆ ದ್ರಾಕ್ಷಿ ಬೆಳೆದು ನೋಡಿದರು. ದ್ರಾಕ್ಷಿಯಲ್ಲಿ ಲಾಭ ಬಂತು.

(ಸಮೃದ್ಧ ದಾಳಿಂಬೆ ತೋಟ)

ನೀರನ್ನು ಕಡಿಮೆ ಬಳಸಿಕೊಂಡು ತೋಟಗಾರಿಕೆ ಕ್ಷೇತ್ರ ವಿಸ್ತರಿಸಲು ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಲು ಜೀವಾಮೃತ ಬಳಸಿ ನೋಡಿದರು. ಇದು ಕೂಡ ಅತ್ಯುತ್ತಮ ಫಲಿತಾಂಶ ನೀಡಿತು. ನಾಲ್ಕು ವರ್ಷಗಳ ಹಿಂದೆ 1,200 ಕೇಸರ ತಳಿಯ ದಾಳಿಂಬೆ ಸಸಿಗಳನ್ನು ತಂದು ನಾಟಿ ಮಾಡಿದರು. ಈ ಗಿಡಗಳೆಲ್ಲವೂ ಈ ಬೆಳೆದು ಈಗ ಸಮೃದ್ಧ ಇಳುವರಿ ನೀಡುತ್ತಿದೆ. ಇದರ ನಡುವೆ ಅಂತರ ಬೆಳೆಯಾಗಿ ಕಲ್ಲಂಗಡಿ ಬೆಳೆದು ಯಶಸ್ಸು ಕಂಡಿದ್ದಾರೆ. ಕಲ್ಲಂಗಡಿ ಲಾಭ ತಂದಿರುವುದರಿಂದ ಉತ್ಸಾಹಗೊಂಡಿರುವ ಅವರು, ನಾಲ್ಕು ತಿಂಗಳ ನಂತರ ಇದೇ ದಾಳಿಂಬೆ ತೋಟದಲ್ಲಿ ಅಂತರ ಬೆಳೆಯಾಗಿ ಪಪ್ಪಾಯಿ ಬೆಳೆಯುವ ಯೋಜನೆ ಹೊಂದಿದ್ದಾರೆ.

‘ದ್ರಾಕ್ಷಿ, ದಾಳಿಂಬೆ ಮಾತ್ರವಲ್ಲ, ನಮ್ಮ ಜಮೀನಿನಲ್ಲಿ ಮೆಣಸು, ಅಡಿಕೆ, ಉಳ್ಳಾಗಡ್ಡಿ, ಬದನೆಕಾಯಿ ಸೇರಿದಂತೆ ಬಹುವಿಧ ಬೆಳೆಗಳನ್ನು ಬೆಳೆಸಲಾಗಿದೆ. ನೈಸರ್ಗಿಕ ಕೃಷಿಪದ್ಧತಿ ಅಳವಡಿಸಿಕೊಂಡಿರುವುದರಿಂದ ಹೆಚ್ಚು ಇಳುವರಿ ಬರುತ್ತಿದೆ. ನಾವು ಭೂಮಿಗೆ ಗೊಬ್ಬರ ಸುರಿಯುವುದಿಲ್ಲ. ಜೀವಾಮೃತ ಉಣಿಸುತ್ತೇವೆ. ಬೆಳೆ ಕಟಾವಿನ ಸಮಯದಲ್ಲಿ ಮಾತ್ರ ಕೂಲಿಯಾಳುಗಳ ನೆರವು ಪಡೆದುಕೊಳ್ಳುತ್ತೇವೆ. ಉಳಿದ ಸಮಯದಲ್ಲಿ ಇಡೀ ಕುಟುಂಬ ಬೆವರು ಸುರಿಸಿ ದುಡಿಯುತ್ತೇವೆ. ಅನ್ನ ನೀಡುವ ಭೂಮಿ ನಮ್ಮ ಕೈ ಬಿಡುವುದಿಲ್ಲ’ ಎನ್ನುತ್ತಾರೆ ವಿಶಾಲಾಕ್ಷಿ. 

ಎಂಟು ತಿಂಗಳಿಗೊಮ್ಮೆ ದಾಳಿಂಬೆ ಕಟಾವಿಗೆ ಬರುತ್ತದೆ. ಶೇ 80ರಷ್ಟನ್ನು ಬೆಂಗಳೂರು ಮಾರುಕಟ್ಟೆಗೆ ರಫ್ತು ಮಾಡುತ್ತಾರೆ. ಉಳಿದಿದ್ದನ್ನು ತಾಲ್ಲೂಕಿನ ಚಿಕ್ಕಮಣ್ಣೂರ, ಹಿರೇಮಣ್ಣೂರ, ಬೆಳವಣಿಕಿ ಸೇರಿದಂತೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಕೂಲಿಯಾಳುಗಳ ಸಹಾಯದಿಂದ ಮಾರಾಟ ಮಾಡುತ್ತಿದ್ದಾರೆ. ಎಂಟು ತಿಂಗಳಿಗೊಮ್ಮೆ ₹ 3.5 ಲಕ್ಷ ಖರ್ಚಾಗುತ್ತಿದೆ. ಎಲ್ಲ ವೆಚ್ಚ ಕಳೆದು ಏನಿಲ್ಲವೆಂದರೂ ₹15 ಲಕ್ಷ ಲಾಭ ಬರುತ್ತಿದೆ. ಇವರ ಯಶಸ್ಸಿನ ಹಿನ್ನೆಲೆಯಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕಳೆದ ಸಾಲಿನಲ್ಲಿ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.

(ವಿಶಾಲಾಕ್ಷಿ ದಾನರಡ್ಡಿ)

ಕೀಟ ನಿಯಂತ್ರಣ ಗುಟ್ಟು
ಕಳೆದ ಒಂದು ಎರಡು ವರ್ಷಗಳಿಂದ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದನ್ನು ವಿಶಾಲಾಕ್ಷಿ ನಿಲ್ಲಿಸಿದ್ದಾರೆ. ಕೇವಲ ಜೀವಾಮೃತ ಬಳಸುತ್ತಿದ್ದಾರೆ. ಸ್ಥಳೀಯವಾಗಿ ಲಭ್ಯವಾಗುವ ವಸ್ತುಗಳನ್ನೇ ಬಳಸಿ, ಕ್ರಿಮಿಕೀಟಗಳ ಹಾವಳಿ ನಿಯಂತ್ರಿಸಿದ್ದಾರೆ.

‘ಗೋಮೂತ್ರ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಮತ್ತು ಬೇವಿನ ಸೊಪ್ಪನ್ನು ನೀರಿನಲ್ಲಿ ನೆನೆಸಿಟ್ಟು, ಚೆನ್ನಾಗಿ ಕಳಿತ ನಂತರ, ಈ ದ್ರಾವಣವನ್ನು ಸೋಸಿ ಬೆಳೆಗಳಿಗೆ ಸಿಂಪಡಿಸಿದರೆ, ಕ್ರಿಮಿಕೀಟಗಳು ಹತ್ತಿರ ಸುಳಿಯುವುದಿಲ್ಲ’ ಎನ್ನುತ್ತಾರೆ ವಿಶಾಲಾಕ್ಷಿ.

ಗಿಡಗಳಿಗೆ ಗೊಬ್ಬರ ಹಾಕಿದರೆ, ತಾತ್ಕಾಲಿಕ ಫಲ ನಿರೀಕ್ಷಿಸಬಹುದು. ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಭೂಮಿಯೂ ಉಳಿಯಬೇಕು, ಲಾಭವೂ ಬರಬೇಕು ಎಂದರೆ ನೈಸರ್ಗಿಕ ಕೃಷಿಪದ್ಧತಿಗೆ ಅಳವಡಿಸಿಕೊಳ್ಳಬೇಕು ಎನ್ನುವುದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.