ADVERTISEMENT

ಔಷಧೀಯ ಸಸ್ಯ ಲೋಕ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2015, 19:36 IST
Last Updated 24 ಆಗಸ್ಟ್ 2015, 19:36 IST
ಅಪರೂಪದ  ಕೃಷ್ಣ ಕಮಲ
ಅಪರೂಪದ ಕೃಷ್ಣ ಕಮಲ   

ಅದೊಂದು ಅಪರೂಪದ ಸಸ್ಯ ಲೋಕ. ದಟ್ಟ ಕಾನನದಲ್ಲಿರುವ ಅಮೂಲ್ಯವಾದ ಔಷಧೀಯ ಗುಣಗಳುಳ್ಳ ಸಸ್ಯ ರಾಶಿ ಅಲ್ಲಿ ಬೆಳೆದು ನಿಂತಿದೆ. ಮರೆಯಾಗುತ್ತಿರುವ ಗಿಡಮೂಲಿಕೆಗಳ ಮಹತ್ವ ಅನಾವರಣಗೊಂಡಿದೆ. ತರಹೇವಾರಿ ಸಸ್ಯಗಳೊಂದಿಗೆ ವಿಶಿಷ್ಟವಾದ ಫಲ ಪುಷ್ಪಗಳ ಸಸಿಗಳೂ ಅಲ್ಲಿ ಬೆಳೆಯುತ್ತಿವೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಗಳತಗಾ ಗ್ರಾಮದ ಕೃಷಿಕ ಸತೀಶ ಕುಲಕರ್ಣಿ ಅವರು ಅಭಿವೃದ್ಧಿಪಡಿಸಿರುವ ಶೇತಿ (ಕೃಷಿ) ಭಂಡಾರ ನರ್ಸರಿಯಲ್ಲಿ 300ರಷ್ಟು ವಿವಿಧ ಜಾತಿಯ ಸಸಿಗಳನ್ನು ಕಾಣಬಹುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾನುಗತವಾಗಿ ಗಿಡಮೂಲಿಕೆಯ ಉಪಚಾರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಆಧುನಿಕ ವೈದ್ಯ ಪದ್ಧತಿಯ ಪ್ರಭಾವ ಮತ್ತು ವಿದೇಶಿ ಸಂಸ್ಕೃತಿಯ ಪ್ರವೇಶದಿಂದಾಗಿ ಸಾಂಪ್ರದಾಯಿಕ ಔಷಧಿಯ ವ್ಯವಸ್ಥೆ ಅವನತಿಯ ಭೀತಿ ಎದುರಿಸುತ್ತಿದ್ದು, ಇದರೊಂದಿಗೆ ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದ ಗಿಡಮೂಲಿಕೆಗಳೂ ನಶಿಸಿ ಹೋಗುತ್ತಿವೆ.

ಇಂತಹ ಸನ್ನಿವೇಶದಲ್ಲಿ ಭಾರತೀಯ ಗಿಡಮೂಲಿಕೆಯ ಔಷಧಿ ಸಸ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸತೀಶ ಕುಲಕರ್ಣಿ ಅವರು ದೇಶದಾದ್ಯಂತ ಸಂಚರಿಸಿ ವಿವಿಧ ಜಾತಿಯ ಔಷಧಿಯ ಸಸಿಗಳನ್ನು ಸಂಗ್ರಹಿಸಿ ತಮ್ಮ ನರ್ಸರಿಯಲ್ಲಿ ಬೆಳೆಸುತ್ತಿದ್ದಾರೆ. ಬಿಎಸ್‌ಸಿ (ತೋಟಗಾರಿಕೆ) ಪದವೀಧರರಾಗಿರುವ ಸತೀಶ ಅವರು ‘ಅಖಿಲ ಭಾರತ ನರ್ಸರಿ ಸಂಸ್ಥೆ’ ಸದಸ್ಯರಾಗಿದ್ದು, ಪ್ರತಿ ವರ್ಷ ನಡೆಯುವ ಸಸ್ಯ ಪ್ರದರ್ಶನ ಹಾಗೂ  ಕೇರಳ, ಶ್ರೀಲಂಕಾ, ಅಂಡಮಾನ್ ಮತ್ತು ನಿಕೋಬಾರ್‌ ಸೇರಿದಂತೆ ದೇಶದ ವಿವಿಧೆಡೆ ಸಂಚರಿಸಿ ಅಪರೂಪದ ಜಾತಿಯ ಸಸಿಗಳನ್ನು ತಂದು ಇಲ್ಲಿ ಬೆಳೆಸುತ್ತಾರೆ.

ಅಶ್ವಗಂಧ, ಶತಾವರಿ, ಸರ್ಪಗಂಧ, ಮೆಹಂದಿ, ಶಂಖಪುಷ್ಪ, ರುದ್ರಾಕ್ಷಿ, ವೈಜಯಂತಿ ಮಣಿ, ಅಗ್ನಿ ಮಂಥನ, ದಿಕಮಲಿ, ಮಸ್ಕಿಟೋ ರನ್ನರ್‌, ಕೊಂಕಣ ಕೋಕೋನಟ್‌, ಕುಂಕುಮ ತುಳಸಿ, ಆಲ್‌ ಸ್ಪೈಸ್‌, ಗುಡ್ಡದ ನೆಲ್ಲಿ, ಗಗ್ಗುಲ, ಹಿಪ್ಪಲಿ, ಅಂಟವಾಳ, ಶೀಗೇಕಾಯಿ, ಇನ್‌ಸುಲಿನ್‌, ಬ್ರಾಹ್ಮಿ, ತುಳಸಿ, ಮಧುಪರ್ಣಿ, ಪೌರಾಣಿಕ ವೃಕ್ಷಗಳಾದ ಕದಮ್, ಆಲ, ಕೃಷ್ಣ, ಕಠೋರಾ, ಖೈರ್‌ ಸೇರಿದಂತೆ 100ರಷ್ಟು ವನಸ್ಪತಿ ಸಸ್ಯಗಳು ಮತ್ತು ಅಪರೂಪದ ಸಸ್ಯಗಳ ಸಂಗ್ರಹ ನರ್ಸರಿಯಲ್ಲಿದೆ.

ಸುಮಾರು 50 ಬಗೆಯ ಪುಷ್ಪಗಳ ಸಸಿಗಳು ಹಾಗೂ 50 ರಷ್ಟು ಹಣ್ಣಿನ ಸಸಿಗಳು, ಗೃಹಾಲಂಕಾರಿಕ ಸಸಿಗಳು, ಬೊನ್ಸಾಯ್‌ ಗಿಡಗಳೂ ಇಲ್ಲಿವೆ. ವಿಶೇಷವಾಗಿ ಇವರು ಸಾವಯವ ಪದ್ಧತಿಯಲ್ಲಿಯೇ ಇವುಗಳನ್ನು ಬೆಳೆಸುತ್ತಾರೆ. ಸತೀಶ ಅವರ ತಂದೆ  ಪ್ರಭಾಕರ ಕುಲಕರ್ಣಿ ಅವರೂ ಈ ಔಷಧಿಯ ಸಸ್ಯ ಪರಂಪರೆಯ ಉಳಿವಿಗಾಗಿ ಶ್ರಮಿಸಿದವರೇ. ಔಷಧಿಯ ಸಸ್ಯ ಸಂಪತ್ತು ಸಂರಕ್ಷಣೆ ಮತ್ತು ಸಂವರ್ಧನೆಯ ಕಾರ್ಯವನ್ನು ಸತೀಶ ಅವರೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ವನಸ್ಪತಿ ಸಸ್ಯಗಳ ಕುರಿತು  ಅಧ್ಯಯನಗೈದಿರುವ ಇವರು ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಸಸ್ಯ ಪ್ರಾತ್ಯಕ್ಷಿಕೆಯನ್ನು ನೀಡುತ್ತಾರೆ. ಅಲ್ಲದೇ ಔಷಧಿಯ ಸಸ್ಯೋದ್ಯಾನ ಬೆಳೆಸಲೂ ಸಹಕರಿಸುತ್ತಾರೆ. ‘ನರ್ಸರಿಯಿಂದ ಲಾಭ ಗಳಿಸುವ ಉದ್ದೇಶದಿಂದ ನರ್ಸರಿ ಅಭಿವೃದ್ಧಿಪಡಿಸಿಲ್ಲ. ಅಪರೂಪದ ಸಸ್ಯ ಸಂಪತ್ತು ಉಳಿಯಬೇಕು ಎಂಬ ಕಾಳಜಿಯಿಂದ ಮಾತ್ರ. ಇದು ನನ್ನ ಹವ್ಯಾಸವೂ ಆಗಿದೆ’ ಎನ್ನುತ್ತಾರೆ ಸತೀಶ ಕುಲಕರ್ಣಿ.

ಸಂಪರ್ಕಕ್ಕೆ: 9731980288.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.