ADVERTISEMENT

ಕಾಡುಮಾವಿನ ಭಟ್ಟರು!

ಸತೀಶ ಬೆಳ್ಳಕ್ಕಿ
Published 1 ಮೇ 2017, 19:30 IST
Last Updated 1 ಮೇ 2017, 19:30 IST
ಕಾಡುಮಾವಿನ ಭಟ್ಟರು!
ಕಾಡುಮಾವಿನ ಭಟ್ಟರು!   

ಉಜಿರು, ಮೆಂಟೆ, ಗಳೇ, ಸೋನೆ...

ಏನಿವೆಲ್ಲ ಎಂದು ತಲೆ ಕೆರೆದುಕೊಳ್ಳುತ್ತಿದ್ದೀರಾ? ರಸಭರಿತ ಕಾಡುಮಾವಿನ ಹಣ್ಣಿನ ವಿಶಿಷ್ಟ ತಳಿಗಳು ಸೋಮಿ ಇವು. ಹಣ್ಣುಗಳಲ್ಲಿ ಮಾವಿಗೆ ರಾಜನ ಸ್ಥಾನ. ಅದರಲ್ಲೂ ಕಾಡುಮಾವಿನ ರುಚಿಯ ಮುಂದೆ ನಾಡ ಹಣ್ಣುಗಳ ಖದರ್ರು ಏನೇನೂ ಇಲ್ಲ. ಘಮ್ಮೆಂದು ಪರಿಮಳ ಹೊಮ್ಮಿಸುವ ಕಾಡುಮಾವನ್ನು ಕೈಯಲ್ಲಿ ಹಿಡಿದು, ತುಸುವೇ ಬಾಗಿದ ತೊಟ್ಟನ್ನು ಹಲ್ಲಿನಿಂದ ಕಚ್ಚಿ, ತುಟಿಗೊತ್ತಿ ರಸ ಹೀರತೊಡಗಿದರೆ ಒಳಗಿರುವ ರುಚಿಮೊಗ್ಗುಗಳು ಹಿರಿಹಿರಿ ಹಿಗ್ಗುತ್ತವೆ. ಇಂತಹ 80ಕ್ಕೂ ಅಧಿಕ ಬಗೆಯ ಉತ್ಕೃಷ್ಟ ಕಾಡುಮಾವಿನ ತಳಿಗಳ ಸಂರಕ್ಷಣೆಯಲ್ಲಿ ತೊಡಗಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆ ಮರ್ಕಂಜ ಗ್ರಾಮದ ಮಾಪಲತೋಟ ಸುಬ್ರಾಯ ಭಟ್ಟರು.

ಭಟ್ಟರ ಮಾವಿನ ತೋಪಿನಲ್ಲಿ ಬೀಗುತ್ತಿರುವ ಒಂದೊಂದು ತಳಿಯ ಕಾಡುಮಾವಿನ ಹಣ್ಣಿಗೂ ಒಂದೊಂದು ರುಚಿ ಇದೆ. 90ರ ದಶಕದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರು 25 ಎಕರೆ ಜಮೀನಿನ ವಾರಸುದಾರರು. ಐದು ಎಕರೆ ಜಾಗದಲ್ಲಿ ಒಂದು ಮಾವಿನ ತೋಪಿದ್ದು, ಅಲ್ಲಿ ನೂರಾರು ಬಗೆಯ ಹೈಬ್ರಿಡ್ ಮಾವು ಬೆಳೆಯುತ್ತಾರೆ. ಎರಡು ಎಕರೆ ಜಾಗವನ್ನು ವಿಶೇಷವಾಗಿ ಕಾಡುಮಾವಿನ ತಳಿಗಳಿಗೆಂದೇ ಮೀಸಲಿಟ್ಟಿದ್ದಾರೆ. ಒಂದೊಂದು ತಳಿಯ ಎರಡೆರಡು ಗಿಡಗಳನ್ನು ಅವರು ನೆಟ್ಟು ಬೆಳೆಸಿದ್ದಾರೆ.

ADVERTISEMENT

‘ನಮ್ಮದು ಕೃಷಿ ಪರಂಪರೆಯ ವಂಶ. ನನ್ನ ತಂದೆ ಕಾಡುಮಾವಿನ 30ಕ್ಕೂ ಅಧಿಕ ಉತ್ಕೃಷ್ಟ ತಳಿಗಳ ಗಿಡಗಳನ್ನು ಬೆಳೆಸಿದ್ದರು. ಆ ಗಿಡಗಳೆಲ್ಲ ಕಸಿ ಕಟ್ಟಿ ಬೆಳೆಸಿದ್ದಲ್ಲ; ಬದಲಾಗಿ ಗೊರಟೆಯಿಂದ ಬೆಳೆಸಿದ ಸಸಿ ನೆಟ್ಟು ಪೋಷಿಸಿದವು. ಹಾಗಾಗಿ ಆ ಗಿಡದ ಹಣ್ಣುಗಳು ಪರಮರುಚಿಯಿಂದ ಕೂಡಿದ್ದವು. ನನ್ನ ತಂದೆ ಬೆಳೆಸಿದ ಗಿಡಗಳಲ್ಲಿ ಕೆಲವು ಈಗಿಲ್ಲ. ಆಗ ನಾನಿನ್ನೂ ಚಿಕ್ಕವನಿದ್ದ ಕಾರಣ ಅವುಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಅರಿವು ಇರಲಿಲ್ಲ. ಈಗ ನೆನೆದರೆ ತುಂಬ ಬೇಸರವಾಗುತ್ತದೆ’ ಎನ್ನುವ ಸುಬ್ರಾಯ ಭಟ್ಟರಿಗೆ ಕಾಡುಮಾವು ತಳಿಯ ಸಂರಕ್ಷಣೆ ಎಂಬುದು ಒಂದು ಹವ್ಯಾಸವಂತೆ.

ಭಟ್ಟರು ಹೋದಲ್ಲೆಲ್ಲಾ ಹುಡುಕುತ್ತಿದ್ದುದು ಕಾಡುಮಾವಿನ ತಳಿಯನ್ನೇ. ಹೀಗೆ ಹೋದ ಕಡೆಯಿಂದ ಸಂಗ್ರಹಿಸಿ ತಂದ ತಳಿಗಳನ್ನೆಲ್ಲ ಕೂಡಿಸಿ ಲೆಕ್ಕ ಹಾಕಿದರೆ ಈಗ ಅವರ ಬಳಿ ಹತ್ತಿರತ್ತಿರ ನೂರು ಕಾಡು ತಳಿಯ ಗಿಡಗಳಿವೆ. ತಂದೆ ಗೊರಟೆಯಿಂದ ಗಿಡ ಬೆಳೆಸಿದರೆ; ಇವರು ಸಂಗ್ರಹಿಸಿರುವ ತಳಿಗಳೆಲ್ಲವೂ ಕಸಿಮಾಡಿ ಬೆಳೆಸಿರುವ ಗಿಡಗಳು. ಕಾಡುಮಾವಿಗೆ ನಿರ್ದಿಷ್ಟ ಸ್ಥಾನಮಾನವಿಲ್ಲ, ಹೆಸರೂ ಇಲ್ಲ ಎನ್ನುವ ಭಟ್ಟರು, ‘ಕಾಡುಮಾವು ಅಂದರೆ ಕಾಡುಮಾವು ಅಷ್ಟೇ. ಗುರುತಿಗೆ ಇರಲಿ ಎಂದು ನಾವೇ ಒಂದು ಹೆಸರಿಡುತ್ತೇವೆ. ಪ್ರತಿಯೊಂದು ಕಾಡುಮಾವಿನದ್ದೂ ಒಂದೊಂದು ಸೊಗಸು. ಒಂದರ ರುಚಿ ಮತ್ತೊಂದಕ್ಕಿಂತ ಭಿನ್ನ. ತಿಂದಾಗ ಎಲ್ಲವೂ ಚೆನ್ನ’ ಎನ್ನುತ್ತಾರೆ.

‘ಸಾಸಿವೆ ಹಣ್ಣು, ಸಕ್ಕರೆ ಹಣ್ಣು. ಗಳೇ ಮರದ ಹಣ್ಣು, ಉಜಿರು ಹುಳಿ ಹೀಗೆ ಕಾಡು ತಳಿಯ ಮಾವಿನ ಹಣ್ಣುಗಳೆಲ್ಲವೂ ಶ್ರೇಷ್ಠವೇ. ಈ ಹಣ್ಣಿನಲ್ಲಿರುವ ಹುಳಿ, ಸಿಹಿ ಗಮ್ಮತ್ತೇ ಮಜಬೂತಾಗಿರುತ್ತದೆ. ತಿಂದಾಗಲೇ ನಮಗೆ ರುಚಿಯಲ್ಲಿನ ವ್ಯತ್ಯಾಸ ಅರಿವಿಗೆ ಬರುತ್ತದೆ. ಎಷ್ಟು ತಿಂದರೂ ತೃಪ್ತಿ ಮಾತ್ರ ಸಿಗುವುದಿಲ್ಲ. ತಿಂದಷ್ಟು ಮತ್ತೆ ತಿನ್ನಬೇಕು ಎನ್ನುವ ಆಸೆ ಮನಸ್ಸಲ್ಲಿ ಚಿಗುರುತ್ತದೆ’ ಎನ್ನುತ್ತಾ ಬಾಯಲ್ಲಿ ನೀರೂರುವಂತೆ ಮಾಡುತ್ತಾರೆ.

ಭಟ್ಟರ ತೋಟದಲ್ಲಿ ಉತ್ತರ ಕನ್ನಡ, ಅರಸೀಕೆರೆ, ಕೊಡಗು, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕುಂದಾಪುರ, ಕೊಡಗು ಹೀಗೆ ರಾಜ್ಯದ ವಿವಿಧ ಭಾಗದಿಂದ ತಂದು ಕಸಿಮಾಡಿ ಬೆಳೆಸಿದ ಕಾಡು ಮಾವಿನ ತಳಿಯ ಗಿಡಗಳಿವೆ. ಕಾಡುಮಾವು ಬೆಳೆಸುವುದಕ್ಕೂ, ನಾಡ ತಳಿಯ ಮಾವುಗಳನ್ನು ಪೋಷಿಸುವುದಕ್ಕೂ ವ್ಯತ್ಯಾಸ ಇದೆಯೇ ಎಂಬ ಪ್ರಶ್ನೆಗೆ, ‘ರಾತ್ರಿ ಹಗಲಿನ ವ್ಯತ್ಯಾಸ’ ಎಂಬ ಒಗಟಿನ ರೂಪದಲ್ಲಿ ಉತ್ತರಿಸುತ್ತಾರೆ. ಭಟ್ಟರು ಕಸಿ ಮಾಡಿ ಜಮೀನಿನಲ್ಲಿ ನೆಟ್ಟ ಕಾಡು ತಳಿಯ ಗಿಡಗಳನ್ನು ಬೆಳೆಸಲು ಅವುಗಳಿಗೆ ವಿಶೇಷ ಆರೈಕೆಯನ್ನೇನೂ ಮಾಡುವುದಿಲ್ಲವಂತೆ. ಆರಂಭದ ಎರಡು ವರ್ಷ ಚೆನ್ನಾಗಿ ನಿಗಾ ಮಾಡಿದರೆ, ಮುಂದೆ ಗಿಡಗಳು ಪೊಗದಸ್ತಾಗಿ ಬೆಳೆದು ಚೆನ್ನಾಗಿ ಫಸಲು ನೀಡುತ್ತವೆ ಎನ್ನುತ್ತಾರೆ.

ನೆಟ್ಟ ಆರೇಳು ವರ್ಷದಲ್ಲಿ ಗಿಡ ಫಸಲು ಕೊಡಲು ಆರಂಭಿಸುತ್ತದೆ. ಗೊರಟೆಯಿಂದ ಬೆಳೆಸಿದ ಮರವಾದರೆ 50ರಿಂದ 80 ವರ್ಷ ಬದುಕುತ್ತದೆ. ಕಸಿ ಮಾಡಿದ್ದಾದರೆ 35 ವರ್ಷದ ತನಕ ಬಾಳುತ್ತದೆ. ಗೊರಟೆಯಿಂದ ಬೆಳೆಸಿದ ಗಿಡ ನೀಡುವ ಹಣ್ಣಿಗೂ, ಕಸಿ ಮಾಡಿ ಬೆಳೆಸಿದ ಗಿಡ ನೀಡುವ ಹಣ್ಣಿನ ಗುಣ–ರುಚಿಯಲ್ಲಿ ತುಂಬ ವ್ಯತ್ಯಾಸ ಇರುತ್ತದೆ. ಕಸಿ ಗಿಡಗಳಲ್ಲಿ ಮೂಲದ ರುಚಿ ಕೆಲವೊಮ್ಮೆ ಕಂಡುಬರದೆಯೂ ಹೋಗಬಹುದು. ಕಾಡು ಮಾವು ಇಂತಹ ಸೀಮೆಗೆ ಮಾತ್ರ ಮೀಸಲು ಎಂಬುದಿಲ್ಲ, ಎಲ್ಲಿ ಬೇಕಾದರೂ ಅದನ್ನು ಬೆಳೆಯಬಹುದು ಎಂದೆನ್ನುವ ಭಟ್ಟರು, ರುಚಿ ಮಾತ್ರದಿಂದಲೇ ಯಾವ ಕಾಡುಮಾವು ಎಂಬುದನ್ನು ಗುರುತಿಸಬಲ್ಲರು.

‘ನನ್ನ ತೋಟದಲ್ಲಿ ಸಾಂಬಾರ್‌ ಮಾವು, ಜೀರಿಗೆ ಅಪ್ಪೆ, ಮೆಂಟೆ ಅಪ್ಪೆ ತಳಿಯ ಗಿಡಗಳಿವೆ. ಪರಿಮಳ ಮತ್ತು ಸೋನೆ ಇರುವ ಮಾವು ಉಪ್ಪಿನಕಾಯಿ ತಯಾರಿಕೆಗೆ ಹೇಳಿ ಮಾಡಿಸಿದಂತಿರುತ್ತದೆ. ನಮ್ಮ ತೋಟದಲ್ಲಿ ಉಪ್ಪಿನಕಾಯಿಗೆ ಬೇಕಾದ ಮಾವೂ ಇದೆ. ರಸಹೀರುತ್ತಾ ಆಸ್ವಾದಿಸಬಹುದಾದ ಸಿಹಿ ಮಾವೂ ಇದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅಂದಹಾಗೆ, ಸುಬ್ರಾಯ ಭಟ್ಟರು ಮಂಚಿ ಎಂಬ ಒಂದು ಸೊಗಸಾದ ತಳಿಯ ಮಾವಿನ ಗಿಡ ನೆಟ್ಟು ಪೋಷಿಸಿದ್ದಾರೆ. ಅವರೇ ಹೇಳುವಂತೆ ಇದರ ಹಣ್ಣಿನ ರುಚಿ ಮುಂದೆ ಯಾವುದೂ ಇಲ್ಲವಂತೆ. ಮಂಚಿ ಮುಂದೆ ಎಲ್ಲ ಹಣ್ಣುಗಳನ್ನೂ ನೀವಾಳಿಸಿ ಎಸೆಯಬೇಕು ಎಂಬುದು ಅವರ ಮಾತು.

‘ಮಂಚಿ ಗ್ರಾಮದಲ್ಲಿ ನಾರಾಯಣಾಚಾರ್ ಅಂತ ಇದ್ದಾರೆ. ಅವರ ಬಳಿಯಿಂದ ನಾನೊಂದು ಮಾವಿನ ತಳಿ ತಂದು ಬೆಳೆಸಿದ್ದೇನೆ. ಅವರ ಬಳಿ ಇದ್ದ ಆ ಮಾವಿನ ಮರ ಈಗ ಇಲ್ಲ. ಅದು ಕಾಡು ಮಾವೂ ಅಲ್ಲ; ಹಾಗಂತ ಕಸಿ ಮಾವೂ ಅಲ್ಲ. ನಾನು ನೋಡಿರುವಂತೆ ರುಚಿಯಲ್ಲಿ ‘ದಿ ಬೆಸ್ಟ್’ ಎನ್ನುವಂತಹ ಹಣ್ಣು ಕೊಡುವ ಮರ ಅದು. ಮಾವು ಪ್ರದರ್ಶನದಲ್ಲಿ ಈ ಹಣ್ಣು ಇದ್ದರೇ ಅದಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ. ಅಷ್ಟು ರುಚಿ ಇರುವ ಹಣ್ಣು ಅದು. ಈ ತಳಿಯ ಎರಡು ಗಿಡಗಳು ನನ್ನ ತೋಟದಲ್ಲಿವೆ’ ಎನ್ನುವ ಹೆಮ್ಮೆ ಭಟ್ಟರದು.

ಕಾಡು ತಳಿಯ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿ ದುಡ್ಡು ಸಂಪಾದನೆ ಮಾಡಬೇಕು ಎಂಬ ಆಸೆಯಿಲ್ಲ. ತೋಪಿನಲ್ಲಿರುವ ಕಾಡು ಮಾವಿನ ಗಿಡಗಳು ಸೀಸನ್‌ಗಳಲ್ಲಿ ಸಾಕಷ್ಟು ಹಣ್ಣು ಬಿಡುತ್ತದೆ. ಮನಸ್ಸಿಗೆ ತೃಪ್ತಿಯಾಗುವಷ್ಟು ತಿನ್ನುತ್ತೇವೆ. ಬೇರೆಯವರಿಗೂ ಹಂಚುತ್ತೇವೆ. ಉಳಿದ ಹಣ್ಣುಗಳು ನೆಲಕ್ಕೆ ಬಿದ್ದು ಅಲ್ಲೇ ಕೊಳೆಯುತ್ತವೆ. ಕಾಡು ತಳಿ ಬೆಳೆಸುವ ಆಸೆ ಇದ್ದವರಿಗೆ ಕಸಿ ಗಿಡಗಳನ್ನು ಕೊಡುತ್ತೇನೆ; ಅದೂ ಉಚಿತವಾಗಿ’ ಎನ್ನುವಾಗ ಸುಭ್ರಾಯ ಭಟ್ಟರ ಕಂಗಳಲ್ಲಿ ಮತ್ತಷ್ಟು ಕಾಡು ಮಾವಿನ ತಳಿಯನ್ನು ಸಂಗ್ರಹಿಸಬೇಕು ಎನ್ನುವ ಆಸೆ ಜಿನುಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.