ADVERTISEMENT

ಕುಂಟೆ ಹೊಡೆಯಲು ಬೈಕ್‌ ಬಳಕೆ!

ಚಳ್ಳಕೆರೆ ವೀರೇಶ್
Published 19 ಡಿಸೆಂಬರ್ 2016, 19:30 IST
Last Updated 19 ಡಿಸೆಂಬರ್ 2016, 19:30 IST
ಕುಂಟೆ ಹೊಡೆಯಲು ಬೈಕ್‌ ಬಳಕೆ!
ಕುಂಟೆ ಹೊಡೆಯಲು ಬೈಕ್‌ ಬಳಕೆ!   

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕು ಭಾಗಗಳಿಗೆ ಕಳೆದ 8–10 ವರ್ಷಗಳಿಂದ ಸರಿಯಾಗಿ ಮಳೆ ಬರಲಿಲ್ಲ. ಆದ್ದರಿಂದ ಬೆಳೆನಷ್ಟ, ಸಾಲಬಾಧೆ ರೈತರನ್ನು ಬಾಧಿಸದೇ ಬಿಟ್ಟಿಲ್ಲ. ಈ ಕಷ್ಟಗಳ ನಡುವೆಯೂ ಪ್ರಯೋಗಮುಖಿಯಾಗಿ ಮುನ್ನಡೆದಿದ್ದಾರೆ ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚೌಳೂರು ಗ್ರಾಮದ ರೈತ ನಿಂಗಣ್ಣ.

‘ಕಷ್ಟದ ನಡುವೆ ಕೃಷಿ ಮಾಡುವ ನಾವು, ನಮ್ಮ ಬಳಿ ಇರುವ ಯಂತ್ರೋಪಕರಣಗಳನ್ನೇ ಕೃಷಿಗೆ ಬಳಸಿಕೊಂಡು ಲಾಭ ಸಾಧ್ಯವಿದೆ’ ಎನ್ನುವ ನಿಂಗಣ್ಣ, ಈ ನಿಟ್ಟಿನಲ್ಲಿ ಸಾಧಿಸಿ ತೋರಿಸಿದ್ದಾರೆ. ಬರಗಾಲದಿಂದಾಗಿ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.

ದನಕರುಗಳಿಗೆ ಮೇವಿಲ್ಲದೆ ಅವುಗಳನ್ನು ಸಾಕುವುದೇ ಸವಾಲಿನ ಕೆಲಸವಾಗಿದೆ. ಅದರಲ್ಲೂ ಒಂದು ಎತ್ತಿಗೆ ಒಂದು ಲಕ್ಷ ರೂಪಾಯಿವರೆಗೂ ಬೆಲೆ ಇದೆ. ಕೃಷಿ ಕಾರ್ಯಕ್ಕೆ ಎರಡು ಎತ್ತು ಬೇಕು. ಜೊತೆಗೆ ಅವುಗಳ ಲಾಲನೆ ಪಾಲನೆ, ಪೋಷಣೆಗೆ ದಿನನಿತ್ಯವೂ 200–300 ರೂಪಾಯಿ ಬೇಕಾಗುತ್ತದೆ. ಇಂತಹ ಪರಿಸ್ಥಿತಿ ಇರುವ ಕಾರಣ ನಿಂಗಣ್ಣ ಅವರು ತಮ್ಮಲ್ಲಿರುವ ಬೈಕ್‌ನಲ್ಲಿಯೇ ಎಡೆಕುಂಟೆಯನ್ನು ಹೊಡೆಯುವ ಪ್ರಯತ್ನಕ್ಕೆ ಮುಂದಾಗಿ ಯಶಸ್ವಿಯಾಗಿದ್ದಾರೆ.

ಈ ಭಾಗದಲ್ಲಿ ರೈತರು ಮಳೆಯಾಶ್ರಿತ ಕೃಷಿಯನ್ನು ಮಾಡುವವರೇ ಹೆಚ್ಚು, ಒಣ ಭೂಮಿಯಲ್ಲಿ ಶೇಂಗಾ ಯಥೇಚ್ಛವಾಗಿ ಬೆಳೆಯುವ ಬೆಳೆ. ಭೂಮಿಗೆ ಬಿತ್ತನೆ ಮಾಡಿದ ಇಪ್ಪತ್ತು ದಿನದೊಳಗೆ ಕಳೆ ತೆಗೆಯಲೇ ಬೇಕು.

ಒಂದು ವೇಳೆ ಸಕಾಲಕ್ಕೆ ಕಳೆ ತೆಗೆಯದೇ ಕೈ ಬಿಟ್ಟರೆ ಅಂದುಕೊಂಡಷ್ಟು ಇಳುವರಿಯನ್ನು ಪಡೆಯಲು ಸಾಧ್ಯವಿಲ್ಲ. ಇತ್ತ ಬಾಡಿಗೆಗೂ ಎತ್ತುಗಳು ಸಿಗುವುದು ವಿರಳ. ಆದ್ದರಿಂದ ನಿಂಗಣ್ಣ ಅವರು ತಮ್ಮಲ್ಲಿರುವ ಬೈಕ್‌ ಅನ್ನು ಐದು ಎಕರೆ ಜಮೀನ ಎಡೆಕುಂಟೆ ಹೊಡೆಯಲು ಬಳಕೆ ಮಾಡಿಕೊಂಡಿದ್ದಾರೆ. ಬಿತ್ತನೆ ಮಾಡಿದವರು ಸಕಾಲಕ್ಕೆ ಎಡೆಕುಂಟೆ ಬಳಸಿ ಕಳೆ ತೆಗೆದು ಕಳೆ ಹುಟ್ಟದಂತೆ ನೋಡಿಕೊಂಡಿದ್ದಾರೆ.

‘ಎಡೆಕುಂಟೆ ಹೊಡೆಸಲು ಒಂದು ಜತೆ ಎತ್ತಿಗೆ ದಿನಕ್ಕೆ ಬಾಡಿಗೆ ಒಂದರಿಂದ ಒಂದೂವರೆ ಸಾವಿರ ರೂಪಾಯಿಯವರೆಗೂ ಕೇಳುತ್ತಾರೆ. ಎತ್ತುಗಳು ಸಿಗುವುದೂ ಕಷ್ಟವಿದೆ.ಎತ್ತುಗಳಿಂದ ಐದು ಎಕರೆ ಜಮೀನನ್ನು ಎರಡು ದಿನಗಳು ಎಡೆಕುಂಟೆ ಹೊಡೆಸಬೇಕಾಗುತ್ತದೆ. ಆದರೆ, ನನ್ನ ಬೈಕ್‌ನಲ್ಲಿ ಒಂದೂವರೆ ದಿನದಲ್ಲಿಯೇ ಎಡೆಕುಂಟೆ ಹೊಡೆದಿದ್ದೇನೆ.

ಸಮಯ, ಕೂಲಿಗಾರರಿಗೆ ಹಣ, ಎತ್ತುಗಳ ಬಾಡಿಗೆಯೂ ಉಳಿಯುತ್ತದೆ’ ಎನ್ನುತ್ತಾರೆ ನಿಂಗಣ್ಣ. ಕೇವಲ 200 ರೂಪಾಯಿ ಪೆಟ್ರೋಲ್ ಹಾಕಿಸಿ ಎಡೆಕುಂಟೆ ಹೊಡೆದಿದ್ದಾರೆ. ಈ ಮೂಲಕ, ಒಂದು ದಿನಕ್ಕೆ ಒಬ್ಬ ಕೂಲಿಗೆ ನೀಡಬೇಕಿದ್ದ 300ರೂಪಾಯಿ ಸೇರಿದಂತೆ ನಾಲ್ಕು ಮಂದಿಗೆ 1,200 ರೂಪಾಯಿ, ಜೊತೆಗೆ ಉಳಿದ ಖರ್ಚು ಎಲ್ಲಾ ಸೇರಿ ದಿನಕ್ಕೆ ಒಟ್ಟು 1800-2100 ರೂಪಾಯಿವರೆಗೆ ಉಳಿತಾಯ ಮಾಡುತ್ತಿದ್ದಾರೆ.

ಹೀಗಿದೆ ಉಳುಮೆ
ಮೋಟರ್‌ಬೈಕ್‌ನ ಹಿಂಬದಿಯ ಕ್ಯಾರಿಯರ್ ಕಂಬಿಗೆ ಅಡ್ಡ ಒಂದು ಕೋಲು ಕಟ್ಟಿಕೊಂಡಿದ್ದಾರೆ. ಇದರ ಮೇಲೆ ಎರಡು ಎಡೆಕುಂಟೆ ಕಟ್ಟಿದ್ದಾರೆ. ಈ ಮೂಲಕ ಕಳೆ ತೆಗೆಯುತ್ತಿದ್ದಾರೆ. ಬೆಳೆ ಕೈ ಸೇರುವವಷ್ಟರಲ್ಲಿ ಎರಡು ಬಾರಿ ಕಳೆ ತೆಗೆಯುತ್ತಿದ್ದಾರೆ. ‘ಎತ್ತಿನ ಎಡೆಕುಂಟೆ ಬೇಸಾಯಕ್ಕೆ ಹೋಲಿಸಿದರೆ ಕಳೆತೆಗೆಯಲು ಬೈಕೇ ಹೆಚ್ಚು ಉಪಯುಕ್ತವಾಗಿದೆ. ಕಡಿಮೆ ತೇವಾಂಶ ಹಾಗೂ ಕಲ್ಲುರಹಿತ ಒಣ ಜಮೀನುಗಳಲ್ಲಿ ಸುಲಭವಾಗಿ ಬೈಕ್‌ ಬಳಸಿ ಕಳೆ ತೆಗೆಯಬಹುದು. ಮನೆಯಲ್ಲಿಯೇ ಇರುವ ಕೆಲವು ಯಂತ್ರೋಪಕರಣಗಳನ್ನು ಕೃಷಿಗೂ ಬಳಸಿಕೊಂಡು ಯಶಸ್ಸು ಕಾಣಬಹುದು’ ಎನ್ನುತ್ತಾರೆ ಅವರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.