ADVERTISEMENT

ಖರ್ಚಿಲ್ಲದ ಡ್ರೈಯರ್ ಕಮ್ ಕೂಲರ್!

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 19:30 IST
Last Updated 20 ಫೆಬ್ರುವರಿ 2017, 19:30 IST
ಖರ್ಚಿಲ್ಲದ ಡ್ರೈಯರ್ ಕಮ್ ಕೂಲರ್!
ಖರ್ಚಿಲ್ಲದ ಡ್ರೈಯರ್ ಕಮ್ ಕೂಲರ್!   
ಡಾ. ಮನೋಜ ಗೋಡಬೋಲೆ
 
ಮಲೆನಾಡಿನಲ್ಲಿ ಮಂಗದ ಕಾಟ ಇತ್ತೀಚೆಗೆ ಜೋರಾಗಿದೆ. ಹೀಗಾಗಿ ಏನನ್ನೇ ಒಣಗಿಸಬೇಕೆಂದರೂ ಹರಸಾಹಸ ಪಡಬೇಕು. ಉಳ್ಳವರು ಕೃಷಿ ಉತ್ಪನ್ನಗಳನ್ನು ಒಣಗಿಸಿಕೊಳ್ಳಲು ಪ್ಲಾಸ್ಟಿಕ್‌ನಿಂದ ನಿರ್ಮಿಸಿದ ಪಾಲಿ ಹೌಸ್‌ಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಆದರೆ ಸಣ್ಣ ಹಿಡುವಳಿದಾರರು ಅಂತಹ ಹೆಚ್ಚಿನ ಖರ್ಚಿನ ನಿರ್ಮಾಣಗಳನ್ನು ತಾಳಿಕೊಳ್ಳಲಾರರು. ಅಂತಹವರ ಮನೆಯ ಕೃಷಿ ಚಟುವಟಿಕೆಗಳೇನೋ ಮುಗಿದು ಹೋಗುತ್ತದೆ. ಆದರೆ ನಂತರ ಗೃಹಿಣಿಯರ ದೈನಂದಿನ ಉಪಯೋಗಕ್ಕೆ ಬೇಕಾದ ಬಾಳಕ, ಸುಕ್ಕೇಳಿ (ಒಣಗಿಸಿದ ಬಾಳೆ ಹಣ್ಣು), ಸಂಡಿಗೆ, ಹಪ್ಪಳ, ಬೇಳೆ, ಕಾಳುಗಳು ಮುಂತಾದವುಗಳನ್ನು ಒಣಗಿಸುವುದು ದೊಡ್ಡ ಸಮಸ್ಯೆಯಾಗುತ್ತದೆ. ಮನೆ ಬಳಕೆಗೋಸ್ಕರ ಹೆಚ್ಚಿನ ಖರ್ಚಿನ ಡ್ರೈಯರ್‌ ನಿರ್ಮಿಸಿಕೊಳ್ಳುವುದು ಮೂರ್ಖತನವಾಗುತ್ತದೆ. ನೆಲಕ್ಕೆಲ್ಲಾ ಕಾಂಕ್ರೀಟ್‌ ಲೇಪವಿದ್ದರೂ ಕಾವಲು ಕೂತರೆ ಮಾತ್ರ ಮಂಗ, ಪಕ್ಷಿಗಳಿಂದ ನಮ್ಮ ಉತ್ಪನ್ನಗಳನ್ನು ಕಾಪಿಟ್ಟುಕೊಳ್ಳಲು ಸಾಧ್ಯ.
 
ಇಂತಹವರು ಯಾವುದೇ ಖರ್ಚಿಲ್ಲದೇ ಡ್ರೈಯರ್ ನಿರ್ಮಿಸಿಕೊಳ್ಳಬಹುದು! ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಿವಿಧ ಉದ್ದೇಶಕ್ಕಾಗಿ ಮನೆಯ ಮುಂದೋ, ಹಿಂದೋ, ಬದಿಗೋ ತಗಡಿನ ಮಾಡನ್ನು ನಿರ್ಮಿಸಿಕೊಂಡಿರುತ್ತಾರೆ. ಅದರ ಅರ್ಧ ಅಡಿ ಕೆಳಗೆ ಸುಲಭದಲ್ಲಿ ಸಿಗುವ ನಾಲ್ಕಾರು ದಪ್ಪನೆಯ ಕೋಲುಗಳನ್ನೋ, ಪಿವಿಸಿ ಪೈಪುಗಳನ್ನೋ ಬಳಸಿಕೊಂಡು ಚಿತ್ರದಲ್ಲಿರುವಂತೆ ಹಗ್ಗದ ಸಹಾಯದಿಂದ ಕಟ್ಟಿ, ಅದರ ಮೇಲೆ ಹಳೆಯದಾದ ತಗಡನ್ನೋ, ಇಲ್ಲವೇ ತೆಂಗಿನ ಮಡಿಲುಗಳನ್ನೋ ಹರಡಬೇಕು. ತಗಡು ಹೊಸತಾಗಿಯೇ ಇರಬೇಕೆಂದೇನೂ ಇಲ್ಲ.
 
ಯಾವುದಕ್ಕೂ ಪ್ರಯೋಜನವಿಲ್ಲದ ಜಂಗು ಬಂದಿರುವ ತಗಡಾದರೂ ನಡೆಯುತ್ತದೆ. ತಗಡಾದರೆ ಅದರ ಮೇಲೆ ಹಳೆಯ ರದ್ದಿ ಪೇಪರುಗಳನ್ನೋ, ಹಳೆಯ ಹಾಳುಮೂಳು ಬಟ್ಟೆಗಳನ್ನೋ ಮೂರ್ನಾಲ್ಕು ಇಂಚುಗಳಷ್ಟು ದಪ್ಪಕ್ಕೆ ಒಂದರ ಮೇಲೊಂದು ಪೇರಿಸಿಡಬೇಕು. ಇನ್ನು ತೆಂಗಿನ ಮಡಿಲುಗಳನ್ನು ಒತ್ತಾಗಿ ಪೇರಿಸಿಟ್ಟರೆ ಅದರ ಮೇಲೆ ಪೇಪರ್ ಹರಡಬೇಕೆಂದಿಲ್ಲ. ಇಲ್ಲಿಗೆ ನಮ್ಮ ಡ್ರೈಯರ್ ಕಮ್ ಕೂಲರ್ ಸಿದ್ಧ! ತಗಡಿನ ಮಾಡು ಸೂರ್ಯನ ಬಿಸಿಲಿನಲ್ಲಿ ವಿಪರೀತ ಕಾಯ್ದಿರುತ್ತದೆ. ಹಾಗಾಗಿ ಅದರ ಕೆಳಗಿರುವ ರಚನೆಗಳ ನಡುವಿನ ಗಾಳಿಯು ವಿಪರೀತ ಬಿಸಿಯಾಗುತ್ತದೆ. ಅದರ ಮಧ್ಯ ಇಟ್ಟ ಬಾಳಕ, ಸಂಡಿಗೆ, ಬಾಳೆಹಣ್ಣುಗಳೆಲ್ಲಾ ಯಾವುದೇ ಕಾವಲಿಲ್ಲದೇ ಎರಡೇ ದಿನಕ್ಕೇ ಒಣಗುತ್ತವೆ. ಹೀಗಾಗಿ ಗೃಹಿಣಿಯರು ನಿಶ್ಚಿಂತರಾಗಿ ತಮ್ಮ ಇತರೆ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. 
 
ತೀರಾ ಬಿಸಿಯಾಗಿರುವುದರಿಂದ ಮಂಗಗಳು, ಪಕ್ಷಿಗಳು ಹತ್ತಿರವೂ ಸುಳಿಯವು. ಇನ್ನು ಎಲ್ಲಿಯಾದರೂ ಅವುಗಳ ಕಾಟ ಶುರುವಾದರೆ ಅಂಚಿಗೆ ಬಲೆಯನ್ನೋ, ಹಳೆಯದಾದ ಸೀರೆಯನ್ನೋ ಕಟ್ಟಿಡಬಹುದು. ತಗಡಿನ ಮಾಡನ್ನು ಮನೆ ಸುತ್ತ ಅಳವಡಿಸುವುದರಿಂದ ಮನೆ ಒಳಗಿನ ತಾಪಮಾನ ಹಲವಾರು ಡಿಗ್ರಿಗಳಷ್ಟು ಏರಿಕೆಯಾಗುತ್ತದೆ. ಆದರೆ ಇಂತಹ ಎರಡನೇ ಮಾಡುಗಳನ್ನು ಅಳವಡಿಸಿಕೊಂಡರೆ ಒಂದೇ ಏಟಿಗೆ ಎರಡು ಹಕ್ಕಿ ಹೊಡೆದ ಹಾಗಾಗುತ್ತದೆ. ರದ್ದಿ ಪೇಪರು, ಬಟ್ಟೆಗಳು ಮತ್ತು ತೆಂಗು-ಕಂಗಿನ ಮಡಿಲುಗಳು ಶಾಖದ ಅವಾಹಕಗಳಾಗಿರುವುದರಿಂದ ಮನೆಯ ತಾಪಮಾನ ನಾಲ್ಕೈದು ಡಿಗ್ರಿಗಳಷ್ಟು ಕಡಿಮೆಯಾಗುತ್ತದೆ ಮತ್ತು ವಿದ್ಯುತ್ತಿನ ಅವಲಂಬನೆ ತಗ್ಗುತ್ತದೆ. ಖರ್ಚಿಲ್ಲದ ಇಂತಹ ರಚನೆಯನ್ನು ಬಲು ಸುಲಭದಲ್ಲಿ ಯಾರು ಬೇಕಾದರೂ ಮಾಡಿಕೊಳ್ಳಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.