ADVERTISEMENT

ತಂಬಾಕಿಗೆ ಪರ್ಯಾಯ ಕುಪ್ರಿ ಜ್ಯೋತಿ

ಹೊಸ ಹೆಜ್ಜೆ

ಎಚ್.ಎಸ್.ಸಚ್ಚಿತ್
Published 28 ನವೆಂಬರ್ 2016, 19:30 IST
Last Updated 28 ನವೆಂಬರ್ 2016, 19:30 IST
ಹುಣಸೂರು ತಾಲ್ಲೂಕಿನ ಹಸೀಬ್‌ ಅವರ ಹೊಲದಲ್ಲಿ ಕುಪ್ರಿ ತಳಿಯ ಆಲೂಗಡ್ಡೆ
ಹುಣಸೂರು ತಾಲ್ಲೂಕಿನ ಹಸೀಬ್‌ ಅವರ ಹೊಲದಲ್ಲಿ ಕುಪ್ರಿ ತಳಿಯ ಆಲೂಗಡ್ಡೆ   
ಮೈಸೂರು ಜಿಲ್ಲೆ ಹುಣಸೂರು ಉಪವಿಭಾಗದ ನಾಲ್ಕು ತಾಲ್ಲೂಕು ಸೇರಿದಂತೆ ಹಾಸನ ಜಿಲ್ಲೆಯ ರಾಮನಾಥಪುರ ಭಾಗದಲ್ಲಿ ವಾಣಿಜ್ಯ ಬೆಳೆ ವರ್ಜೀನಿಯ ತಂಬಾಕು ಬೇಸಾಯ ಇಷ್ಟು ವರ್ಷ ಮೆರೆಯುತ್ತಿತ್ತು. ಆದರೆ ಈಗ ಈ ಕೃಷಿಯನ್ನು 2020ರೊಳಗೆ ಹಂತಹಂತವಾಗಿ ಕೇಂದ್ರ ಸರ್ಕಾರ ಕಡಿತಗೊಳಿಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಈ ಭಾಗದ ರೈತರು ಆಲೂಗಡ್ಡೆಯ ಮೊರೆ ಹೋಗಿ ಬದುಕು ಕಂಡುಕೊಳ್ಳುತ್ತಿದ್ದಾರೆ. ‘ಕುಪ್ರಿ ಜ್ಯೋತಿ’ ತಳಿ ಇವರ ನೆರವಿಗೆ ಬಂದಿದೆ.
 
ಹುಣಸೂರು ಉಪವಿಭಾಗದ ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರು ಅರೆ ಮಲೆನಾಡು ಪ್ರದೇಶಕ್ಕೆ ಸೇರಿದ್ದು, ಈ ಭಾಗದಲ್ಲಿ ಉಷ್ಣಾಂಶ ಹಾಗೂ ಮಳೆ ಪ್ರಮಾಣ ಉತ್ತಮವಾಗಿರುವುದರಿಂದ ಆಲೂಗಡ್ಡೆ ಬೇಸಾಯ ತಂಬಾಕಿಗೆ ಪರ್ಯಾಯ ಆಗುವ ಲಕ್ಷಣ ಎದುರಾಗಿದೆ. ಆಲೂಗಡ್ಡೆ ಬೇಸಾಯಕ್ಕೆ 35 ಡಿಗ್ರಿ ಉಷ್ಣಾಂಶ ಹಾಗೂ ಹದವಾದ ಮಳೆ ಬೇಕಾಗಿದ್ದು,  ಅರೆ ಮಲೆನಾಡಿನಲ್ಲಿ ಈ ಕೃಷಿಗೆ   ಪೂರಕವಾದ ಹವಾಮಾನ ಇದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ರಮೇಶ್‌.  ಮರಳು ಮಿಶ್ರಿತ ಕೆಂಪು ಮಣ್ಣು ಈ ಬೇಸಾಯಕ್ಕೆ ಉತ್ತಮ. ಮಳೆ ಅಥವಾ ಹಾಯಿಸಿದ ನೀರಾವರಿಯಲ್ಲೂ  ಆಲೂಗಡ್ಡೆ ಬೆಳೆಯಲು ಸಾಧ್ಯ.
 
ವಾತಾವರಣದಲ್ಲಿ ಉಷ್ಣಾಂಶ 35 ಡಿಗ್ರಿಗಿಂತಲೂ ಹೆಚ್ಚಾದಲ್ಲಿ ಗಡ್ಡೆಯ ಗಾತ್ರ ಕಡಿಮೆಯಾಗುವ ಸಾಧ್ಯತೆ ಇದೆ. ಭೂಮಿಯಲ್ಲಿ  ತೇವಾಂಶ ಕಾಪಾಡಿಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರ ಅಗತ್ಯ. ಈ ರೀತಿ ಮಾಡಿದಲ್ಲಿ  ಉತ್ತಮ ಫಸಲು ನಿರೀಕ್ಷಿಸಬಹುದು. ವರ್ಜೀನಿಯ ತಂಬಾಕು ಬೇಸಾಯ ಮಾಡುವ ಹಲವು ರೈತರು ಈಗಾಗಲೇ ಶುಂಠಿ ಬೇಸಾಯಕ್ಕೆ ವಲಸೆ ಹೋಗಿದ್ದಾರೆ. ಈ ಬೇಸಾಯಕ್ಕೆ ಅತಿಯಾದ ಔಷಧಿ ಹಾಗೂ ಬಂಡವಾಳ ಬೇಕಾಗಿದ್ದು, ಲಾಭ ಬಂದರೂ ಖರ್ಚಿಗೆ ಹೋಲಿಸಿದರೆ ತಂಬಾಕು ಮತ್ತು ಶುಂಠಿ ಎರಡೂ ಒಂದು ನಾಣ್ಯದ ಎರಡು ಮುಖ ಎಂದರೆ ತಪ್ಪಾಗದು.
 
ಹುಣಸೂರು ತಾಲ್ಲೂಕಿನ ಅಜಾದ್‌ನಗರ ಗ್ರಾಮದಲ್ಲಿ ಡಿಪ್ಲೊಮಾ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿದ ಯುವಕ ಹಸೀಬ್‌ ತನ್ನ ಎರಡು ಎಕರೆ ಭೂಮಿಯಲ್ಲಿ ಆಲೂಗಡ್ಡೆ ಬೇಸಾಯ ಆರಂಭಿಸಿ ಸಾಂಪ್ರದಾಯಿಕ ಬೆಳೆ ತಂಬಾಕಿಗೆ ವಿದಾಯ ಹೇಳಿದ್ದಾರೆ. ‘ಎರಡು ವರ್ಷದಿಂದ ಆಲೂಗಡ್ಡೆ ಕೃಷಿ ಆರಂಭಿಸಿದ್ದು, ತನಗೆ ಆರ್ಥಿಕ ಹೊರೆ ಇಲ್ಲದೆ, ಕೃಷಿ ನೆಮ್ಮದಿಯಿಂದ ಮಾಡುತ್ತಿದ್ದೇನೆ. ಆಲೂ ಬೇಸಾಯಕ್ಕೆ ಕೂಲಿ ಕಾರ್ಮಿಕರ ಅವಲಂಬನೆ ಅತಿ ಕಡಿಮೆ’ ಎನ್ನುತ್ತಾರೆ ಹಜೀಬ್‌. ಸ್ಥಳೀಯ ವಾತಾವರಣಕ್ಕೆ ‘ಕುಪ್ರಿ ಜ್ಯೋತಿ’ ತಳಿ ಆಲೂಗಡ್ಡೆ ಹೊಂದಿಕೊಳ್ಳುತ್ತಿದ್ದು, ಒಂದು ಹೆಕ್ಟೇರ್‌ ಪ್ರದೇಶಕ್ಕೆ ₹50 ಸಾವಿರ ಬಿತ್ತನೆ ಬೀಜ ಖರೀದಿ ಸೇರಿದಂತೆ ಕೂಲಿ, ಗೊಬ್ಬರ ಖರ್ಚು ತಗಲುತ್ತದೆ. ಅರೆ ಮಲೆನಾಡು ಪ್ರದೇಶದಲ್ಲಿ ಈ ತಳಿ   ಆಲೂಗಡ್ಡೆ ಒಂದು ಎಕರೆಗೆ 10 ಟನ್‌ ಇಳುವರಿ ಸರಾಸರಿ ಬರಲಿದ್ದು, ಪ್ರತಿ ಕ್ವಿಂಟಾಲ್‌ಗೆ ಮಾರುಕಟ್ಟೆಯಲ್ಲಿ ಕನಿಷ್ಠ ಎರಡೂವರೆಯಿಂದ ಮೂರು ಸಾವಿರ ರೂಪಾಯಿ ಸಿಗಲಿದೆ ಎನ್ನುತ್ತಾರೆ.
 
ರೋಗ ಮುಕ್ತ: ಅರೆ ಮಲೆನಾಡಿನಲ್ಲಿ ಬೆಳೆಯುವ ಆಲೂಗಡ್ಡೆಗೆ ರೋಗ ಬಾಧೆ ಇರುವುದಿಲ್ಲ. ಆಕಸ್ಮಿಕವಾಗಿ ಬಂದಲ್ಲಿ ಲೆಟ್‌ಪ್ಲೈಟ್‌ ಎಂಬ ರೋಗ ತಗುಲಬಹುದು. ಸೂಕ್ತ ಔಷಧಿ ಸಿಂಪಡಣೆಯಿಂದ ರೋಗ ಹತೋಟಿ ಸಾಧ್ಯ. ಕಳೆದ ಎರಡು ವರ್ಷದಿಂದ ತನ್ನ ಹೊಲದಲ್ಲಿ ಮಳೆ ಆಶ್ರಯದಲ್ಲಿ ಬೇಸಾಯ ಮಾಡುತ್ತಿರುವ ಹಜೀಬ್‌, ಆಲೂಗಡ್ಡೆ ಬೇಸಾಯದಿಂದ ಸಂತೃಪ್ತನಾಗಿದ್ದೇನೆ  ಎನ್ನುತ್ತಾರೆ.
 
ಕೃಷಿ ಕಾರ್ಮಿಕ: ಆಲೂ ಬೇಸಾಯಕ್ಕೆ ಕೃಷಿ ಕೂಲಿ ಕಾರ್ಮಿಕರ ಅವಲಂಬನೆ ಅತ್ಯಂತ ಕಡಿಮೆ. ಬಿತ್ತನೆ ಹಾಗೂ ಕಟಾವು ಹಂತದಲ್ಲಿ ಕಾರ್ಮಿಕರು ಬೇಕಾಗುತ್ತದೆ. ಉಳಿದಂತೆ ಮನೆಯವರೇ ಸೇರಿ ಕಳೆ ತೆಗೆದು ಕುಂಟೆ ಹೊಡೆಯಲು ಕೈ ಜೋಡಿಸಿದರೆ ಉತ್ಪಾದನಾ ವೆಚ್ಚ ತಗ್ಗಿ ಲಾಭಾಂಶ ಹೆಚ್ಚಿಸಿಕೊಳ್ಳಬಹುದು. ತಂಬಾಕು ಬೇಸಾಯದಲ್ಲಿ ಇಷ್ಟು ಸುಲಭವಿಲ್ಲ ಎನ್ನುತ್ತಾರೆ. 
 
ಆಲೂಗಡ್ಡೆ ನಾಟಿ ಮಾಡುವ ವಿಧಾನ ಬಲು ಸುಲಭ. ಒಂದು ಆಲೂಗಡ್ಡೆಯನ್ನು ಎರಡು ಭಾಗ ಮಾಡಿ ಮೊಳಕೆ ಒಡೆದ ಭಾಗವನ್ನು ಮೇಲ್ಭಾಗ ಮಾಡಿ ನಾಟಿ ಮಾಡಬೇಕು. ನಾಟಿ ಮಾಡುವ ಮುನ್ನ ಭೂಮಿಯನ್ನು ಸಂಪೂರ್ಣ ತಂಪಾಗಿಸುವುದು ಕಡ್ಡಾಯ. ಬಿತ್ತನೆ ಮಾಡುವ ಮುನ್ನ ಹಾಗೂ ನಂತರದಲ್ಲಿ ಕಳೆ ನಿಯಂತ್ರಣ ಅತಿ ಮುಖ್ಯ. ಆಲೂಗಡ್ಡೆ 3 ತಿಂಗಳ ಬೇಸಾಯ. ಬಿತ್ತನೆ ಕಾರ್ಯ ಮಾಡಿದ 15 ದಿನಕ್ಕೆ ಕಳೆ ತೆಗೆದು ಕುಂಟೆ ಹೊಡೆದ ಬಳಿಕ 3ನೇ ಕಳೆ ತೆಗೆದು ನೀರು ಕಟ್ಟುವುದರಿಂದ ಆಲೂಗಡ್ಡೆ ಹೂವು ಕಚ್ಚಲು ಆರಂಭವಾಗುತ್ತದೆ. ಈ ಬೆಳೆಗೆ ಪ್ರತಿ ಎಕರೆಗೆ 10 ಟನ್‌ ಕೊಟ್ಟಿಗೆ ಗೊಬ್ಬರ ಸೇರಿದಂತೆ 20:20 ರಸಗೊಬ್ಬರ 2 ಬಾರಿ ನೀಡಿದರೆ ಸಾಕು. ನಾಟಿ ಮಾಡಿದ 20 ದಿನಗಳ ಬಳಿಕ ಮತ್ತು ಒಂದು ತಿಂಗಳ ನಂತರದಲ್ಲಿ ಒಂದು ಎಕರೆಗೆ 100 ಕೆ.ಜಿ. ರಸಾಯನಿಕ ಗೊಬ್ಬರ ನೀಡಿಬೇಕು.
 
ಇಳುವರಿ: ಅರೆ ಮಲೆನಾಡಿಗೆ ಹೊಂದಿಕೊಳ್ಳುವ ಕುಪ್ರಿ ಜ್ಯೋತಿ ಅಥವಾ ಬಲ್ಬ್‌ ತಳಿ ಹಾಸನ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಪ್ರತಿ ಎಕರೆಗೆ 15 ಟನ್‌ ಇಳುವರಿ ಬರಲಿದ್ದು, ಅರೆ ಮಲೆನಾಡಿನಲ್ಲಿ 10 ರಿಂದ 12 ಟನ್‌ ಎಕರೆಗೆ ಬರಲಿದೆ. ಸ್ಥಳೀಯವಾಗಿ ಬೇಡಿಕೆ ಇರುವ ಈ ತಳಿ ಉತ್ತಮ ಇಳುವರಿಯೂ ಸಿಗಲಿದೆ. ಮಾರುಕಟ್ಟೆಯಲ್ಲೂ ಬಲ್ಬ್ ತಳಿ ಆಲೂಗಡ್ಡೆಗೆ ಭಾರಿ ಬೇಡಿಕೆ ಇರುವುದರಿಂದ ರೈತನಿಗೆ  ಲಾಭದಾಯಕವೂ ಹೌದು . ಹಸೀಬ್‌ ಅವರ ಸಂಪರ್ಕಕ್ಕೆ: 
99641 34747.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.