ADVERTISEMENT

ಬಲೂನ್‌ ಬದನೆ!

ಕೊನರು–15

ಗಣಂಗೂರು ನಂಜೇಗೌಡ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ತರಕಾರಿ ಬೆಳೆಗಳಲ್ಲಿ ಹೊಸ ಹೊಸ ತಳಿಗಳ ಶೋಧನೆ ಶುರುವಾಗಿರುವ ಈ ಕಾಲಘಟ್ಟದಲ್ಲಿ ರೈತರೊಬ್ಬರು ಅಮೆರಿಕ ಮೂಲದ ಬಲೂನ್‌ ಬದನೆ ಬೆಳೆದು ಯಶಸ್ವಿಯಾಗಿ ಫಸಲು ತೆಗೆಯುತ್ತಿದ್ದಾರೆ.

 ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿ ಗ್ರಾಮದ ರೈತ ಬಳ್ಳೆಕಟ್ಟೆ ಕುಮಾರ್‌, ಮೂರು ಎಕರೆ ಜಮೀನಿನಲ್ಲಿ ಬಲೂನ್‌ ಬದನೆ ಬೆಳೆದಿದ್ದಾರೆ. ಹತ್ತಿಯ ತೋಟದಲ್ಲಿ ಅಂತರ ಬೆಳೆಯಾಗಿ ಈ ಬದನೆ ಬೆಳೆಯಲಾಗುತ್ತಿದೆ. ಹೆಸರೇ ಹೇಳುವಂತೆ ಈ ಬದನೆ ಕಾಯಿ ಬಲೂನ್‌ ಗಾತ್ರವಿದೆ. ಒಂದೊಂದು ಬದನೆ ಕಾಯಿ 900 ಗ್ರಾಂ ನಿಂದ ಒಂದು ಕೆ.ಜಿ ವರೆಗೆ ತೂಕ ಹೊಂದಿದೆ. ನೇರಳೆ ಬಣ್ಣದ ಈ ಬದನೆ ಸಾಮಾನ್ಯ ಬದನೆಗಿಂತ ನಾಲ್ಕು ಪಟ್ಟು ದಪ್ಪದಾಗಿದೆ.

ಬಲೂನ್‌ ಬದನೆ ಕಾಯಿಯ ಒಳಭಾಗ ಬೆಣ್ಣೆಯ ಬಣ್ಣದಿಂದ ಕೂಡಿದ್ದು, ಮೃದುವಾಗಿದೆ. ಹಾಗಾಗಿ ಇದಕ್ಕೆ ‘ಬೆಣ್ಣೆ ಬದನೆ’ ಎಂಬ ಮತ್ತೊಂದು ಹೆಸರೂ ಉಂಟು. ಆಕಾರದಲ್ಲಿ ಉಡುಪಿ ಮೂಲದ ‘ಹಸಿರು ಗುಳ್ಳ’ ಬದನೆಯಂತೆ ಕಾಣುತ್ತದೆ. ಆದರೆ ಗಾತ್ರ ಮತ್ತು ಬಣ್ಣದಲ್ಲಿ ವಿಭಿನ್ನವಾಗಿದೆ. ರುಚಿಯಲ್ಲೂ ವಿಶಿಷ್ಟವಿದ್ದು, ಕಾಯಿಯ ಒಳ ಭಾಗದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಬೀಜಗಳಿವೆ.

ಮಾರುಕಟ್ಟೆ ಹೀಗಿದೆ
ಬಲೂನ್‌ ಬದನೆ ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಸ್ಥಳೀಯವಾಗಿ ಬೇಡಿಕೆ ಕಡಿಮೆ. ಆದರೆ ಮಹಾನಗರಗಳಲ್ಲಿನ ಮಾಲ್‌ಗಳಲ್ಲಿ ಬೇಡಿಕೆ ಮತ್ತು ಬೆಲೆ ಎರಡೂ ಇದೆ. ಕುಮಾರ್‌ ತಾವು ಬೆಳೆದಿರುವ ಬಲೂನ್‌ ಬದನೆಯನ್ನು ಬೆಂಗಳೂರಿನ ಮಾಲ್‌ಗಳಿಗೆ ಪೂರೈಸುತ್ತಿದ್ದಾರೆ. ಪ್ರತಿ ಕೆ.ಜಿಗೆ ರೂ 30ರಿಂದ ರೂ 35ರವರೆಗೆ ಬೆಲೆ ಸಿಗುತ್ತಿದೆ. ಒಂದು ಬಾರಿಗೆ ಎರಡರಿಂದ ಎರಡೂವರೆ ಟನ್‌ ಬದನೆ ಕಾಯಿ ಕೀಳುತ್ತಿದ್ದಾರೆ. ಈ ಬದನೆಯನ್ನು 10 ದಿನಗಳ ಕಾಲ ಇಟ್ಟರೂ ಅದು ಕೆಡದೆ ತಾಜಾತನ ಉಳಿಸಿಕೊಂಡಿರುತ್ತದೆ. ಹಾಗಾಗಿ ವಿದೇಶಗಳಿಗೂ ಇದು ರಫ್ತಾಗುತ್ತದೆ ಎನ್ನುತ್ತಾರೆ ಕುಮಾರ್‌.

ಬೆಳೆಯುವ ವಿಧಾನ
ನರ್ಸರಿಯಲ್ಲಿ ಬೀಜ ಬಿತ್ತಿ ಬೆಳೆಸಿಕೊಂಡ 25– 28 ದಿನದ ಪೈರನ್ನು ಹದ ಮಾಡಿದ ಭೂಮಿಯಲ್ಲಿ ನಾಟಿ ಮಾಡಬೇಕು. ವಾರಕ್ಕೆ ಎರಡು ಬಾರಿ ನೀರು ಕೊಡಬೇಕು. ಕೊಟ್ಟಿಗೆ ಗೊಬ್ಬರದ ಜತೆಗೆ ಮಿತ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಕಿದರೆ ಉತ್ತಮ ಎನ್ನುವುದು ಕುಮಾರ್‌ ಅವರ ಹೇಳಿಕೆ.

ಬದನೆ ಬೆಳೆಗೆ ಹುಳು ಬಾಧೆ ಹೆಚ್ಚಾಗಿರುವುದರಿಂದ ವಾರಕ್ಕೊಮ್ಮೆ ಕೀಟನಾಶಕ ಸಿಂಪಡಿಸಬೇಕು. ಪೈರು ನಾಟಿ ಮಾಡಿದ 105 ದಿನಗಳಲ್ಲಿ ಕಾಯಿಯನ್ನು ಕೊಯ್ಲು ಮಾಡಬಹುದು. ಗರಿಷ್ಠ 10 ಅಡಿ ಎತ್ತರದವರೆಗೂ ಈ ಗಿಡ ಬೆಳೆಯುತ್ತದೆ. ಕೂಳೆ ಆಗುವ ತನಕ ಪ್ರತಿ ಗಿಡ 20 ಕೆಜಿಗೂ ಹೆಚ್ಚು ಬದನೆ ಕಾಯಿ ಕೊಡುತ್ತದೆ. ಜೊಪ್ಪೆ ಬದನೆ, ಒಂಟಿ ಬದನೆ, ಗುಂಡು ಬದನೆ ತಳಿಗಳು ಮೂರು ತಿಂಗಳಿಗೆ ಫಸಲಿಗೆ ಬರುತ್ತವೆ. ಆದರೆ ಬಲೂನ್‌ ಬದನೆ ಕೊಯ್ಲಿಗೆ ಬರಲು ಮೂರೂವರೆ ತಿಂಗಳು ಬೇಕು. ಗಿಡದ ಬಾಳಿಕೆಯೂ ದೀರ್ಘವಾಗಿರುತ್ತದೆ.

‘ಬಲೂನ್‌ ಬದನೆ ಇಂಡೋ– ಅಮೆರಿಕನ್‌ ಕಂಪೆನಿ ಸಂಶೋಧಿಸಿರುವ ತಳಿ. ಸ್ನೇಹಿತರ ಮೂಲಕ ದೆಹಲಿಯಿಂದ ಬೀಜ ತರಿಸಿಕೊಂಡಿದ್ದೇನೆ. ಮೂರು ಎಕರೆಗೆ 5 ಸಾವಿರ ಸಸಿ ನಾಟಿ ಮಾಡಲಾಗಿದೆ. ಎಚ್ಚರಿಕೆ ವಹಿಸಿ ಗಿಡವನ್ನು ಕಾಪಾಡಿಕೊಂಡರೆ ಒಂದು ವರ್ಷದವರೆಗೆ ಕಾಯಿ ಕೊಯ್ಲು ಮಾಡಬಹುದು. ಬಲೂನ್‌ ಬದನೆ ಬೆಳೆಯಲು ಒಂದು ಲಕ್ಷ ರೂಪಾಯಿ ಖರ್ಚಾಗಿದೆ. ರೂ 5 ಲಕ್ಷ ರೂಪಾಯಿ ಆದಾಯ ನಿರೀಕ್ಷೆ ಮಾಡಿದ್ದೇನೆ’ ಎನ್ನುತ್ತಾರೆ ಕುಮಾರ್‌.  ಅವರ ಸಂಪರ್ಕಕ್ಕೆ 99801 11264.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.