ADVERTISEMENT

ಬಾಂದಾರ ತಂದ ಹೊಸ ಬದುಕು

ಬರದಲ್ಲೂ ಕೊನರು– 1

ಮೋಹನ್ ಕುಮಾರ್‌
Published 2 ಜನವರಿ 2017, 19:30 IST
Last Updated 2 ಜನವರಿ 2017, 19:30 IST
ಬಾಂದಾರ ತಂದ ಹೊಸ ಬದುಕು
ಬಾಂದಾರ ತಂದ ಹೊಸ ಬದುಕು   

ಜಮೀನಿದ್ದರೂ ಕೃಷಿ ಮಾಡಲಾಗದ ಅಸಹಾಯಕತೆ ಇವರದ್ದು. ಆದ್ದರಿಂದ ದೂರದ ಊರುಗಳಿಗೆ ಹೋಗಿ ಕೂಲಿ ಕೆಲಸ ಮಾಡುತ್ತಿದ್ದರು. ಇತ್ತ ಕಾಡಿನಲ್ಲೂ ಇರಲಾಗದೆ, ನಾಡಿನಲ್ಲಿಯೂ ಬದುಕಲಾರದೆ ಮುಖ್ಯವಾಹಿನಿಯಿಂದ ದೂರ ಉಳಿದು ಸಂಕಷ್ಟದ ಬದುಕು ಸಾಗಿಸುತ್ತಿದ್ದರು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ ಸಾಮ್ರಾಣಿ ಹೋಬಳಿ, ಕೆಸುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡವಳ್ಳಿ ವಾಡ ಹಾಡಿಯ ಸಿದ್ದಿಗಳು. ಆದರೆ ಗ್ರಾಮದಲ್ಲಿ ಬಾಂದಾರ ನಿರ್ಮಾಣದ ನಂತರ ಇವರ ಬದುಕು ಬದಲಾಗುತ್ತಿದೆ.

ಇಲ್ಲಿ ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ, ಬೇಸಿಗೆ  ಬಂತೆಂದರೆ ಬರದ ಪರಿಸ್ಥಿತಿ. ಮಳೆನೀರು ಸಂಗ್ರಹಿಸಿಕೊಳ್ಳಲು ಸಿದ್ದಿಗಳು ಹರಸಾಹಸ ಪಡುತ್ತಿದ್ದರು. ಹಳ್ಳಕ್ಕೆ ಮರಳಿನ ಮೂಟೆಗಳಿಂದ ಸಣ್ಣ ಪುಟ್ಟ ಕಟ್ಟೆ ನಿರ್ಮಿಸಿದರೂ ಆ ಕಟ್ಟೆಗಳು ಮಳೆಯ ರಭಸ ತಡೆಯಲಾರದೆ ಕೊಚ್ಚಿ ಹೋಗುತ್ತಿದ್ದವು. ಪ್ರತಿವರ್ಷವೂ ಇದೇ ಗೋಳು. ತಾಲ್ಲೂಕು ಕೇಂದ್ರದಿಂದ 17ಕಿ.ಮೀ ದೂರ ಸಾಗಿದರೆ ಪಶ್ಚಿಮ ಘಟ್ಟದ ಸಹ್ಯಾದ್ರಿ ಶ್ರೇಣಿಯ ಕಾನನದ ನಡುವೆ ಇದೆ ಈ ಗ್ರಾಮ. ವಾಡದಲ್ಲಿ 67 ಕುಟುಂಬಗಳು, 370 ಸಿದ್ದಿ ಜನರು ವಾಸವಿದ್ದಾರೆ.

ಜೀವ ತಂದ ಬಾಂದಾರ
ವಾಡ ಗ್ರಾಮದಲ್ಲಿ ನೀರಿನ ಮೂಲಗಳಾದ ಕೆರೆ, ಕುಂಟೆ, ಹೊಂಡಗಳು ಇರಲಿಲ್ಲ. ಇಲ್ಲಿನ ಪ್ರಮುಖ ನೀರಿನ ಮೂಲವೆಂದರೆ ಹಳ್ಳವೊಂದೇ. ಅದೂ ಮಳೆಗಾಲದಲ್ಲಿ ತುಂಬಿ ಹರಿದು, ಬೇಸಿಗೆಯಲ್ಲಿ ಬರಿದಾಗಿಬಿಡುತಿತ್ತು. ನಂತರ ನೀರಿಗಾಗಿ ಇವರದ್ದು ಪರದಾಟ. ಜಾನುವಾರುಗಳಿಗೆ, ಪ್ರಾಣಿಪಕ್ಷಿಗಳಿಗೂ ಕುಡಿಯಲು ನೀರು ಸಿಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಮನಗಂಡ ಸಣ್ಣ ನೀರಾವರಿ ಇಲಾಖೆಯು, ಬಾಂದಾರ  ನಿರ್ಮಾಣ ಮಾಡಿ, ಹರಿವ ನೀರಿಗೆ ಜೀವ ಕೊಡುವ ಮೂಲಕ ಸಿದ್ದಿಗಳ ಬದುಕಲ್ಲಿ ಕನಸು ಚಿಗುರೊಡೆಯುವಂತೆ ಮಾಡಿತು.

ಬಾಂದಾರ ನಿರ್ಮಾಣ ಮಾಡುವ ಜೊತೆಗೆ ಅದೇ ಜಾಗದಲ್ಲಿ ಎಡ, ಬಲದಂಡೆಗೆ ಪ್ರತ್ಯೇಕವಾಗಿ ಬಾಂದಾರದಿಂದ ನೀರನ್ನು ಮೇಲೆತ್ತಿ ಏತ ನೀರಾವರಿ ಸೌಲಭ್ಯವನ್ನು ಒದಗಿಸಿಕೊಟ್ಟಿತು. ಇದರಿಂದ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿಯಲು ರಹದಾರಿ ಮಾಡಿಕೊಟ್ಟಿತು. ಕೃಷಿ ಕೆಲಸ ಕೈಗೊಳ್ಳದೇ ಹಾಳುಬಿದ್ದಿದ್ದ 80 ಎಕರೆ ಕೃಷಿ ಭೂಮಿ ಹಸಿರಾಗತೊಡಗಿತು. ವಲಸೆ ಹೋಗಿದ್ದ ಹಲವು ಸಿದ್ದಿಗಳು ಗ್ರಾಮಕ್ಕೆ ಮರಳಿದರು. ಇದರಿಂದ ವೃದ್ಧ ತಂದೆ ತಾಯಿಗಳು ಸಂತಸಗೊಳ್ಳುವ  ಜೊತೆಗೆ ಸ್ಥಳೀಯವಾಗಿ ಸಿದ್ದಿಗಳು ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳಲು ಬಾಂದಾರ ನೆರವಾಗುತ್ತಿದೆ.

ಇಲಾಖೆಯು ಕಾಮಗಾರಿ ಮುಗಿದ ನಂತರ ಬಾಂದಾರವನ್ನು ಸಮುದಾಯದ ನಿರ್ವಹಣೆಗೆ ಹಸ್ತಾಂತರಿಸಿರುವುದರಿಂದ ಸ್ಥಳೀಯ ಜನರೇ ನೀರು ನಿರ್ವಹಣೆಗಾಗಿ ಸಂಘಟಿತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಳೆಗಾಲ ಮುಗಿಯುವ ಸ್ವಲ್ಪ ಸಮಯದ ಮೊದಲು ಬಾಂದಾರದ ಗೇಟ್‌ಗಳನ್ನು ಹಾಕಿ ನೀರನ್ನು ಸಂಗ್ರಹಿಸಿ ಕೃಷಿಗೆ ಬಳಸಿಕೊಳ್ಳಲಾಗುತ್ತಿದೆ. ಹಾಗೇ ಮಳೆ ಆರಂಭವಾಗುತ್ತಿದ್ದಂತೆ ಬಾಂದಾರ ಗೇಟ್‌ಗಳನ್ನು ತೆಗೆಯಲಾಗುತ್ತದೆ.

ಬಾಂದಾರದ ಎಡದಂಡೆಯಲ್ಲಿ 40 ಎಕರೆ, ಬಲದಂಡೆಯಲ್ಲಿ 40 ಎಕರೆ ಕೃಷಿ ಜಮೀನಿಗೆ ನೀರುಣಿಸಲಾಗುತ್ತಿದೆ. ವಾಡದ ಅಚ್ಚುಕಟ್ಟು ಪ್ರದೇಶದ ರೈತರೆಲ್ಲರೂ ಸಣ್ಣಹಿಡುವಳಿದಾರರಾಗಿದ್ದು, ಅಚ್ಚುಕಟ್ಟು ಪ್ರದೇಶದ ಕೊನೆ ರೈತನಿಗೂ ನೀರು ಸಮರ್ಪಕವಾಗಿ ದೊರೆಯುವಂತೆ ಸಿದ್ದಿಗಳು ಪ್ರತಿ ವರ್ಷ ಯೋಜನೆ ಸಿದ್ಧಪಡಿಸಿಕೊಳ್ಳುತ್ತಾರೆ.

ಬಾಂದಾರದ ನೀರಿನ ಪ್ರಮಾಣ ನೋಡಿ ಯಾವ ಬೆಳೆ ಬೆಳೆಯಬಹುದು ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ನೀರನ್ನು ಪಾಳಿ ಪ್ರಕಾರ, ಹಂತಹಂತವಾಗಿ ಸಮಾನವಾಗಿ ಜಮೀನುಗಳಿಗೆ ವಿತರಿಸಲಾಗುತ್ತದೆ. ಈ ಜವಾಬ್ದಾರಿಯನ್ನು ನೀರಗಂಟಿ ನಿರ್ವಹಿಸುತ್ತಾನೆ. ಇದಕ್ಕೆ ಯಾರೂ ಕಿರಿಕಿರಿ ಮಾಡದೆ ಎಲ್ಲರ ತೀರ್ಮಾನದಂತೆ ನಡೆದುಕೊಳ್ಳುವುದು ಇಲ್ಲಿನ ವಿಶೇಷ.

ಬೇಸಿಗೆಯಲ್ಲೂ ಕಬ್ಬು, ಭತ್ತ,ಬಾಳೆ ಬೆಳೆದರು!
ಬಾಂದಾರದಲ್ಲಿ ನೀರು ಹೆಚ್ಚು ಶೇಖರಣೆ ಮಾಡಿರುವುದರಿಂದ ಹಾಡಿಯ ಜನರ ತೀರ್ಮಾನದಂತೆ ಈ ವರ್ಷ ಕಬ್ಬು, ಭತ್ತ, ಬಾಳೆ ಬೆಳೆಯುವವರು ಬೆಳೆಯಬಹುದು. ಇದರಿಂದ ನೀರು ಇನ್ನೂ ಉಳಿಯುತ್ತದೆ ಎಂದು ಅಂದಾಜಿಸಿ ಆದೇಶಿಸಲಾಯಿತು. ಇದರಂತೆ ಇವುಗಳನ್ನು ಬೆಳೆಯುವ  ಮೂಲಕ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ. ಕೆಲವು ರೈತರು ತರಕಾರಿ, ರಾಗಿ, ಹೆಸರು, ಹತ್ತಿ, ಬೆಳೆಗಳನ್ನು ಬೆಳೆದಿದ್ದಾರೆ.

ವಾಡ ಹಾಡಿಯ ಶಿಮಾವೊ, ಪರೋಚಿ, ನಾರಾಗೋಲಕರ್ ಬಾಂದಾರ ನಿರ್ಮಾಣಕ್ಕಿಂತ ಮೊದಲು ಕೃಷಿಭೂಮಿಯಲ್ಲಿ ವ್ಯವಸಾಯ ಮಾಡಲಾಗದೆ ಬೇರೆಡೆ ಕೂಲಿ ಕೆಲಸಕ್ಕೆ ಹೋಗಿದ್ದರು. ಅವರು ಈಗ ತಮ್ಮ ಎರಡು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ‘ನನ್ನ ಸಂಪೂರ್ಣ ಬದುಕು ಕೂಲಿ ಕೆಲಸ ಮಾಡುವುದರಲ್ಲೇ ಕಳೆಯಿತು. ಈಗ 52ನೇ ವಯಸ್ಸಿನಲ್ಲಿ ನೆಮ್ಮದಿ ದೊರಕಿದೆ. ನನ್ನ ಸ್ವಂತ ಜಮೀನಿನಲ್ಲಿ ಕುಟುಂಬಸ್ಥರೆಲ್ಲ ಸೇರಿ ಒಟ್ಟಿಗೆ ಕೃಷಿ ಮಾಡುವ ಅವಕಾಶವನ್ನು ಬಾಂದಾರ ಒದಗಿಸಿದೆ’ ಎನ್ನುತ್ತಾರೆ.

ರುಜಾಯು ಎಂಬುವವರ ಬಾಳೆಯ ತೋಟ ಬಾಂದಾರದ ಬದಿಯಲ್ಲೇ ಇರುವುದರಿಂದ ತೋಟಕ್ಕೆ ಹೆಚ್ಚಿನ ತೇವಾಂಶ ಬಂದು, ಉತ್ತಮ ಇಳುವರಿ ಬಂದಿದೆ. ಇದೇ ರೀತಿ ಬಾಂದಾರದಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ವಾಡ ಹಾಡಿಯ ಶಿಮಾವುಗಾಡಿ, ಅಂತೋಣಿ ದಿಗ್ಗೆಕರ್, ಮರೀನಾ ಸೋಜಾ, ಮ್ಯಾನ್ಯುಯಲ್ ಸಿದ್ದಿಯಂತಹ ನೂರಾರು ಸಿದ್ದಿಗಳು. ಹಲವು ಯುವಕರು ಕೃಷಿಬದುಕಿಗೆ ನೇಗಿಲು ಕೊಟ್ಟಿದ್ದಾರೆ. ಸಿದ್ದಿಗಳು ಕೃಷಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿರುವುದರ ಜೊತೆಗೆ ಕಾಡನ್ನು ನಿರ್ಲಕ್ಷಿಸದೆ ಕಳ್ಳ-ಕಾಕರಿಂದಲೂ ಕಾನನವನ್ನು ರಕ್ಷಿಸುತ್ತಿದ್ದಾರೆ.

ಉದ್ಯೋಗಖಾತ್ರಿ ಕೆಲಸ ಕೊಡಲಿಲ್ಲ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಉದ್ಯೋಗ ಖಾತ್ರಿ’ಯಿಂದ ಇದುವರೆಗೆ ವಾಡ ಗ್ರಾಮದ ಯಾರೊಬ್ಬರಿಗೂ ಕೆಲಸ ಸಿಕ್ಕಿಲ್ಲ.  ಸಚಿವರು   ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಆಗಿದ್ದು ಮಾತ್ರ ಶೂನ್ಯ. ಬಾಂದಾರ ಈ ಜನರ ಪಾಲಿಗೆ ವರದಾನ. ಆದರೆ ಮೂಲಸೌಕರ್ಯ ಮಾತ್ರ ಸಚಿವರ ಮಾತಿನ ಜೊತೆಯೇ ಕರಗಿಹೋಗಿದೆ! ಇದೇ ಹಳ್ಳಕ್ಕೆ ಕೆಳಗೆ ಮತ್ತೊಂದು ಬಾಂದಾರ ನಿರ್ಮಾಣ ಮಾಡಿದರೆ ಮತ್ತಷ್ಟು ಜಮೀನುಗಳಿಗೆ ಜೀವ ಬರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಸಿದ್ದಿಗಳು ಶ್ರಮದಾನದ ಮೂಲಕ ಬಾಂದಾರದ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯುವುದು, ಗೇಟ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಸೇರಿದಂತೆ ಬಾಂದಾರಕ್ಕೆ ಯಾವುದೇ ಹಾನಿಯಾಗದಂತೆ ಜವಾಬ್ದಾರಿಯಿಂದ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

*
ಒಂದೇ ಒಂದು ಬಾಂದಾರ, ಸಿದ್ದಿ ಜನರ ಬದುಕನ್ನೇ  ಬದಲಿಸುತ್ತಿರುವ ಉದಾಹರಣೆ ನಮ್ಮ ಕಣ್ಣಮುಂದಿದೆ. ಇದೇ ರೀತಿ ನದಿಗಳಿಗೆ, ಹಳ್ಳಕೊಳ್ಳಗಳಿಗೆ ಬಾಂದಾರ ನಿರ್ಮಾಣ ಮಾಡಿದರೆ ನೀರಿನ ಸಮಸ್ಯೆ ಪರಿಹಾರವಾಗುವಲ್ಲಿ ಸಂದೇಹವಿಲ್ಲ. ಇಂತಹ ಪರಿಕಲ್ಪನೆಗಳಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಬೇಕಿದೆ.
–ಎಚ್.ಸುರೇಶ್ಕಾರ್ಯನಿರ್ವಾಹಕ ಎಂಜಿನಿಯರ್‌,  ಸಣ್ಣನೀರಾವರಿ ಇಲಾಖೆ, ಬೆಳಗಾವಿ

ADVERTISEMENT

ನಿಮ್ಮ ಅನುಭವ ಬರೆಯಿರಿ
ಬರವನ್ನು ಹಿಮ್ಮೆಟ್ಟಿ ಕೃಷಿಯಲ್ಲಿ ನೆಲೆ ಕಂಡುಕೊಂಡಿದ್ದೀರಾ ಅಥವಾ ಅಂಥವರನ್ನು ನೀವು ನೋಡಿದ್ದೀರಾ? ಬರಗಾಲದ ಈ ದಿನಗಳಲ್ಲಿ ನಿಮ್ಮ ಕೃಷಿ ಬದುಕು ಇತರರಿಗೂ ಮಾದರಿಯಾಗಲಿ. ಆ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಲೇಖನ 500–600 ಶಬ್ದಗಳ ಮಿತಿಯಲ್ಲಿರಲಿ. 3–4 ಉತ್ತಮ ಗುಣಮಟ್ಟದ ಫೋಟೊ ಜೊತೆಗಿರಲಿ. ಇ–ಮೇಲ್‌ ವಿಳಾಸ ಹಾಗೂ ದೂರವಾಣಿ ಸಂಖ್ಯೆಗೆ ಮೊದಲ ಪುಟದ ಅಂಚನ್ನು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.