ADVERTISEMENT

ಬೆಂಗಾಡು ಅರಣ್ಯವಾದ ಸಮಯ

ಹೊಸ ಹೆಜ್ಜೆ-12

​ಪ್ರಜಾವಾಣಿ ವಾರ್ತೆ
Published 11 ಜುಲೈ 2016, 19:30 IST
Last Updated 11 ಜುಲೈ 2016, 19:30 IST
ಬೆಂಗಾಡು  ಅರಣ್ಯವಾದ ಸಮಯ
ಬೆಂಗಾಡು ಅರಣ್ಯವಾದ ಸಮಯ   

ಸವಾಲುಗಳನ್ನು ಮೀರಿ ಮಾದರಿಯಾಗುವಂತಹ ಬದುಕನ್ನು ಸಾಗಿಸುತ್ತಲೇ ಹಸಿರನ್ನು ಉಸಿರಿನಂತೇ ಪ್ರೀತಿಸಿ ಸ್ವಂತ ಜಾಗದಲ್ಲಿ ಶ್ರದ್ಧೆಯಿಂದ ಅರಣ್ಯ ಸೃಷ್ಟಿಸಿದ ವೃಕ್ಷಪ್ರೇಮಿಯ ಕಥೆಯಿದು...


ಅದು 1960ರ ಸಮಯ. ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಪ್ರಾರಂಭವಾದಾಗ ಕರೂರು ಹೋಬಳಿಯ ಅರಬಳ್ಳಿಯಲ್ಲಿದ್ದ ಮಹಾಬಲಯ್ಯನವರ ಫಲವತ್ತಾದ ಹೊಲ, ಅಗಾಧ ಮರಮುಟ್ಟು, ಸಸ್ಯ ಸಂಕುಲಗಳನ್ನೊಳಗೊಂಡ ಸ್ಥಿರಾಸ್ತಿ ಎಲ್ಲವೂ ಮುಳುಗಡೆಯಾಯಿತು.

ಅವರು ಬರಿಗೈಯಲ್ಲಿ ಬೇರೆ ಜಾಗವನ್ನರಸುತ್ತಾ ಬಂದು ಆಯ್ಕೆ ಮಾಡಿಕೊಂಡ ಭೂಮಿ ಬೆಂಗಾಡಾಗಿದ್ದ ಗೊರಮನೆ. ಇದು ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಆವಿನಹಳ್ಳಿ-ಸಿಗಂದೂರು ರಸ್ತೆಯಲ್ಲಿ.

ಅಂದು ಮಲೆನಾಡಿನ ಈ ಹಳ್ಳಿಯಲ್ಲಿ ಕುಡಿಯಲು ನೀರು ಬೇಕಾದರೆ ಮೈಲು ದೂರ ಹೋಗಿ ಬರಬೇಕಾದ ದುಃಸ್ಥಿತಿ.  ಮಹಾಬಲಯ್ಯ ಕುಟುಂಬ ತುಂಬಾ ಆತಂಕದಲ್ಲಿತ್ತು. ಆಗ ಇವರ ಮನಸ್ಸಲ್ಲಿ ಮೊಳೆತಿದ್ದೇ ಕಾಡು ಬೆಳೆಸುವ ಹಂಬಲ. ಕುರುಚಲು ಪೊದೆ, ಬಿದರು ಮಟ್ಟಿಗಳಿದ್ದ 30 ಎಕರೆ ಜಾಗವನ್ನು 1960ರಲ್ಲಿಯೇ 15 ಸಾವಿರ ರೂಪಾಯಿಗಳನ್ನು ಕೊಟ್ಟು ಖರೀದಿಸಿದರು. 

ಮಹಾಬಲಯ್ಯ ಮತ್ತು ಸಹೋದರ ಮಂಜುನಾಥ ಪರಿಸರ ಸೃಷ್ಟಿಸುವ ನಿರ್ಧಾರ ಕೈಗೊಂಡರು. ಅಲ್ಲಲ್ಲಿ ಗಿಡಗಳನ್ನು ನೆಡಲು ಶುರು ಮಾಡಿದರು. ವರ್ಷದಿಂದ ವರ್ಷಕ್ಕೆ 2–3 ಎಕರೆಗಳಲ್ಲಿ ಗಿಡಗಳನ್ನು ನೆಡುತ್ತಾ ಹೋದ ಪರಿಣಾಮ ಇದೀಗ 30 ಎಕರೆ ತುಂಬ ದಟ್ಟ ಕಾಡು ತುಂಬಿದೆ. ಅಲ್ಲಿ ಬಿದ್ದ ತರಗೆಲೆಗಳೇ ಈ ಗಿಡಗಳಿಗೆ ಮದ್ದು. ಅದರ ಜೊತೆ ಈ ಸಹೋದರರ ವಿಶೇಷ ಆರೈಕೆ.

ಮೂವತ್ತು ವರ್ಷಗಳ ಹಿಂದೆ ಮಲೆನಾಡ ಹಳ್ಳಿಗಳಿಗೆ ಅನಾನಸ್‌ ಪರಿಚಯವಾದಾಗ ಬಹಳ ಜನ ಇವರ ಬಳಿ ಬಂದು ‘ಇಂಥದ್ದೊಂದು ಭೂಮಿಯನ್ನು ಅರಣ್ಯಕ್ಕೋಸ್ಕರ ಹಾಳು ಮಾಡಬೇಡಿ.  ಅನಾನಸ್‌ ಬೆಳೆಸಿ ಆದಾಯ ಗಳಿಸಿ’ ಎಂಬ ಸಲಹೆ ನೀಡಿದ್ದರಂತೆ.

ಆದರೆ ಆಗ ಮಹಾಬಲಯ್ಯ ಇದನ್ನು ನಯವಾಗಿ ತಿರಸ್ಕರಿಸಿದ್ದರು. ಅಂದು ಅವರ ಮಾತನ್ನು ಕೇಳಿದ್ದರೆ, ಲಾಭವೇನೋ ಸಿಗುತ್ತಿತ್ತು. ಆದರೆ ಅರಣ್ಯ ಸಂರಕ್ಷಣೆ ಮಾಡಿದ ಖುಷಿ ಸಿಗುತ್ತಿರಲಿಲ್ಲ ಎನ್ನುತ್ತಾರೆ ಅವರು.

ಈ ಖುಷ್ಕಿ ಭೂಮಿಯಲ್ಲಿ  ಸದ್ಯ 70ಕ್ಕೂ ಅಧಿಕ ವೈವಿಧ್ಯಮಯ ಗಿಡ ಮರಗಳಿವೆ. 1962ರಲ್ಲಿ ನೆಟ್ಟ ನೇರಳೆ ಸಸಿಯೊಂದು ಇಂದು 75 ಅಡಿ ಎತ್ತರ ಆರು ಅಡಿ ಸುತ್ತಳತೆಯಲ್ಲಿ ಬೆಳೆದು ನಿಂತಿದೆ. ಮಹಾಬಲಯ್ಯ ಅವರು ಬೆಳೆಸಿದ ಕಾಡು ಅರಣ್ಯ ಇಲಾಖೆಯ ರಕ್ಷಿತಾರಣ್ಯ ಪ್ರದೇಶಕ್ಕೆ ಏನೂ ಕಡಿಮೆ ಇಲ್ಲದಂತೆ ಬೆಳೆದಿದೆ. 

ಇವರು ಸೃಷ್ಟಿಸಿದ ಕಾಡಿನಲ್ಲಿ ಅತ್ತಿ, ಆಲ, ಅಂಟವಾಳ, ಹಲಸು, ಬಿಲಕುಂಬಿ, ಎತ್ತೇಗ, ಬಿಲ್ವಪತ್ರೆ, ನೆಲ್ಲಿ, ತಾರಿ, ಸಂಪಿಗೆ, ಸಾಗುವಾನಿ ಹೀಗೆ ಮರಗಳ ಪಟ್ಟಿ ಬೆಳೆಯುತ್ತದೆ. ಹಲವು ಜಾತಿಯ ಹಣ್ಣಿನ ಗಿಡ ಬೆಳೆದಿವೆ. ನೇರಳೆ, ಪೇರಲೆ, ಸಂಪಿಗೆ, ಗೇರು, ಹೊಳೆ ದಾಸವಾಳ, ಇವೂ ಅರಣ್ಯದ ಸೊಬಗನ್ನು ಹೆಚ್ಚಿಸಿವೆ.  ಕೌಲು, ಕಣಗಳು ಮತ್ತಿತರ ಔಷಧೀಯ ಮರಗಳೂ ಇಲ್ಲಿವೆ.

ಮಲೆನಾಡಿನ ಹೊಳೆ ಅಂಚಿನಲ್ಲಿ ನಿಸರ್ಗದತ್ತವಾಗಿ ಯಥೇಚ್ಛವಾಗಿ ಬೆಳೆದು ಕಂಗೊಳಿಸುತ್ತಿದ್ದ ಮಾವಿನ ಹಣ್ಣಿನ ಮರ, ಅಪ್ಪೆ ಮಾವಿನ ಮರಗಳು ಇಂದು ಕಣ್ಮರೆಯಾಗುತ್ತಿವೆ. ಆದರೆ ಮಹಾಬಲಯ್ಯ ಅವರ ವಿಶಾಲ ಹೊಲದ ಸುತ್ತ ಸಣ್ಣ ಹಳ್ಳದಂತಹ ಭೂಮಿಯಲ್ಲಿ ಮಳೆ ನೀರು ಹರಿದುಹೋಗುವ ತೋಡಿನ ಇಕ್ಕೆಲಗಳಲ್ಲಿ ನೂರಕ್ಕೂ ಹೆಚ್ಚು ದೊಡ್ಡ ಮಾವಿನ ಮರಗಳಿವೆ.

ಮಹಾಬಲಯ್ಯ ಅಲ್ಲಲ್ಲಿ ಕಂಡ ವಿಶಿಷ್ಟ ರೀತಿಯ ಮಾವನ ಗೊರಟನ್ನು ತಂದು ಬೆಳೆಸಿದ ಸಸ್ಯಗಳೇ ಇಂದು ಹೆಮ್ಮರವಾಗಿವೆ.  ವರ್ಷವೊಂದಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಾವಿನ ಮಿಡಿಗಳು ಮಾರಾಟಕ್ಕೆ ಸಿಗುತ್ತಿವೆ. 

ವಿಶೇಷ ರುಚಿಯ ಹಣ್ಣಿನ ಮರಗಳೂ ಇವೆ.  ಕಡುಗಾಗಿ, ಕುಚ್ಚುಗಾಯಿ, ಕಾಯಿರಸ, ನೀರುಗೊಜ್ಜಿಗೆ ಆಗುವಂತಹ ಮಾವಿನ ಕಾಯಿ ಸಿಗುವ ದೊಡ್ಡ ಮರಗಳ ಸಾಲೇ ಇದೆ. ಇದರಿಂದ ಆದಾಯದೊಂದಿಗೆ ಮಣ್ಣಿನ ಸವಕಳಿ ನಿಯಂತ್ರಣವಾಗುತ್ತಿದೆ.

ಹಿಂದೆ ಇವರು ಒಂದು ಕಿ.ಮೀ. ದೂರದಿಂದ ಎತ್ತಿನ ಗಾಡಿ ಮುಖಾಂತರ ನೀರು ತರುತ್ತಿದ್ದರು. ಈಗ ಸಣ್ಣ ಹೊಂಡ ನಿರ್ಮಾಣ ಮಾಡಿ ನೀರನ್ನು ವೈಜ್ಞಾನಿಕವಾಗಿ ನಿಂತು ಹರಿಯುವಂತೆ ಮಾಡಿದ್ದಾರೆ. ಇದಕ್ಕಾಗಿ ಪುಟ್ಟ ತಡೆಗಾಗಿ ಬಿದಿರಿನ ಮೆಳೆ ಬೆಳೆಸಿದ್ದಾರೆ. ಮಹಾಬಲಯ್ಯನವರದು ಈಗ 87ಇಳಿ ವಯಸ್ಸು. ತುಂಬು ಕುಟುಂಬ. ಮಕ್ಕಳು ಮೊಮ್ಮಕ್ಕಳೊಂದಿಗೆ ಇಡೀ ಕಾಡು ಸುತ್ತುತ್ತಾರೆ. 82 ವರ್ಷದ ಸಹೋದರ ಮಂಜುನಾಥ ಇವರಿಗೆ ಸಾಥ್ ಕೊಡುತ್ತಾರೆ.

‘ನಾನು ಬೆಳೆಸಿದ ಸಸಿಗಳು ಹೆಮ್ಮರವಾಗಿ ಬೆಳೆದು ನೆರಳು, ತಂಪು ನೀಡುವಾಗ ಆಗುವ ಮಹದಾನಂದ ಇನ್ನೊಂದಿಲ್ಲ.  ಪ್ರತಿಯೊಬ್ಬರೂ ವರ್ಷಕ್ಕೆ ಒಂದಾದರೂ ಸಸಿ ನೆಟ್ಟು ಬೆಳೆಸಲಿ’ ಎನ್ನುತ್ತಾರೆ ಮಹಾಬಲಯ್ಯ.

ADVERTISEMENT

ಸಂಪರ್ಕಕ್ಕೆ 9480544998.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.