ADVERTISEMENT

ಬೆಳೆದು ನೋಡ್ರೀ... ಪಾಲಿಹೌಸ್‌ ತರಕಾರಿ

ಬಲ್ಲೇನಹಳ್ಳಿ ಮಂಜುನಾಥ
Published 15 ಮೇ 2017, 19:30 IST
Last Updated 15 ಮೇ 2017, 19:30 IST
ಬಲ್ಲೇನಹಳ್ಳಿ ಮಂಜುನಾಥ್
ಬಲ್ಲೇನಹಳ್ಳಿ ಮಂಜುನಾಥ್   

‘ಮನಸ್ಸೊಂದಿದ್ದರೆ ಮಾರ್ಗವು ನೂರು...’ ಎಂಬ ‘ಬಂಗಾರದ ಮನುಷ್ಯ’ನ ಹಾಡು ಕೃಷಿಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹಲವರನ್ನು ಎಂದಿಗೂ ಕಾಡುತ್ತಲೇ ಇರುತ್ತದೆ. ಸಾಲದಿಂದ ಕಂಗೆಟ್ಟು ಕೂಲಿಕೆಲಸಕ್ಕೆ ಹೋಗುತ್ತಿದ್ದ ಕುಟುಂಬವೊಂದು ಪಾಲಿಹೌಸ್ ಕಲ್ಪನೆಯನ್ನು ತಮ್ಮ ಹೊಲದಲ್ಲಿ ಸಾಕಾರಗೊಳಿಸಿಕೊಂಡು ಹತ್ತಾರು ಮಂದಿಗೆ ಉದ್ಯೋಗ ದೊರಕಿಸಿಕೊಟ್ಟ ಯಶಸ್ಸಿನ ಕಥೆ ಇಲ್ಲಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬಿಲ್ಲರಾಮನಹಳ್ಳಿಯ ಕೃಷಿಕ ದೇವರಾಜು ಹಾಗೂ ಸಿಂಧಘಟ್ಟದ ಭಾನುಪ್ರತಾಪ್ ಅಂತಹ ಯಶಸ್ವಿ ಕೃಷಿಕರು.
ಇಸ್ರೇಲ್ ಮಾದರಿಯ ಪಾಲಿಹೌಸ್ ವ್ಯವಸಾಯ ಪದ್ಧತಿಯನ್ನು ತೋಟಗಾರಿಕೆ ಇಲಾಖೆಯು ಪರಿಚಯಿಸಿದ್ದು, ಸಬ್ಸಿಡಿಯನ್ನೂ ನೀಡುತ್ತಿದೆ. ಈ ಯೋಜನೆಯ ಲಾಭ ಪಡೆದಿರುವ ಯುವಕೃಷಿಕರು ನೆಮ್ಮದಿಯ ಜೀವನ ಸಾಗಿಸುವಷ್ಟು ವರಮಾನ ಪಡೆಯುತ್ತಿದ್ದಾರೆ.

(ಪಾಲಿಹೌಸ್‌ನಲ್ಲಿ ತರಕಾರಿ ಬೆಳೆದ ಖುಷಿ)

ADVERTISEMENT

ತರಕಾರಿ, ಹೂವು ಮತ್ತು ಹಣ್ಣುಗಳನ್ನು ಪಾಲಿಹೌಸ್ ಒಳಗೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿ ಹನಿ ನೀರಾವರಿ ಮೂಲಕ ಬೆಳೆಯಬಹುದು. ಪಾಲಿಹೌಸ್ ಕಲ್ಪನೆ ನಮ್ಮಲ್ಲಿ ಇತ್ತೀಚಿನದ್ದಾದರೂ ಇಸ್ರೇಲ್ ದೇಶದಲ್ಲಿ ಜನಪ್ರಿಯ. ಮಳೆಯ ನೀರನ್ನು ವ್ಯರ್ಥ ಮಾಡದೆ ಸಂಗ್ರಹಿಸುವುದು ಹಾಗೂ ಹವಾಮಾನ ಆಧಾರಿತ ಬೆಳೆ ತೆಗೆಯುವುದು ಇದರ ಹೆಚ್ಚುಗಾರಿಕೆ. ಹೀಗಾಗಿ ರೈತರು ಬೆಳೆ ನಷ್ಟವನ್ನು ಅನುಭವಿಸುವ ಪ್ರಶ್ನೆಯೇ ಇಲ್ಲ. ಪಾಲಿಹೌಸ್‌ನ ಈ ಮಹತ್ವ ಅರಿತ ಮಂಡ್ಯದ ಯುವರೈತರು ಬಿದ್ದ ಮಳೆನೀರನ್ನೇ ಕಾಪಿಟ್ಟುಕೊಂಡು ತರಕಾರಿ ಕೃಷಿಯಲ್ಲಿ ತೊಡಗಿದರು. ಬೇಸಿಗೆಯಲ್ಲಿ ಗುಣಮಟ್ಟದ ತರಕಾರಿ ಬೆಳೆದುಕೊಡುತ್ತಿರುವ ಕಾರಣ ಕೈತುಂಬಾ ಆದಾಯ ಗಳಿಸಿದರು.

ಮಳೆಯ ನೀರನ್ನು ವೈಜ್ಞಾನಿಕ ಕ್ರಮಗಳ ಮೂಲಕ ಸಂರಕ್ಷಿಸಿ ಅದರಿಂದಲೇ ಬೇಸಾಯ ಮಾಡುವ ವ್ಯವಸ್ಥೆಯನ್ನು ಕನಿಷ್ಠ ಒಂದು ಎಕರೆ ಜಾಗವಿರುವ ಪ್ರದೇಶದಲ್ಲಿ ಮಾಡಬಹುದು. ಪಾಲಿಹೌಸ್‌ನ  ಮೇಲ್ಛಾವಣಿ ಮೇಲೆ ಬೀಳುವ ಮಳೆಯ ನೀರಿನ ಒಂದು ಹನಿಯೂ ವ್ಯರ್ಥವಾಗದಂತೆ ಅನತಿ ದೂರದಲ್ಲಿ ನಿರ್ಮಿಸಿದ ಹೊಂಡಕ್ಕೆ ಕಳುಹಿಸಲಾಗುತ್ತದೆ. ಆ ನೀರನ್ನು ಮೊದಲು ಶುದ್ಧೀಕರಣ ಯಂತ್ರಕ್ಕೆ ಕಳುಹಿಸಿ ಅಲ್ಲಿ ಶೋಧಿಸಿ ನಂತರ ಹನಿ ನೀರಾವರಿ ಪದ್ಧತಿಯ ಪೈಪ್‌ಗೆ ಕಳುಹಿಸಲಾಗುತ್ತದೆ. ಈ ಪೈಪ್ ಮೂಲಕವೇ ಗೊಬ್ಬರವನ್ನು ಮಿಶ್ರಣಮಾಡಿ ನೀರಿನೊಂದಿಗೆ ಪ್ರತಿಗಿಡದ ಬುಡಕ್ಕೆ ಹೋಗುವಂತೆ ಮಾಡಲಾಗುತ್ತದೆ.

ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧಘಟ್ಟ ಹಾಗೂ  ಬಿಲ್ಲರಾಮನಹಳ್ಳಿಯಲ್ಲಿ  ಈ ಪದ್ಧತಿ ಅಳವಡಿಸಿಕೊಂಡು ದಪ್ಪಮೆಣಸಿನಕಾಯಿ ಬೆಳೆದು ಬರಗಾಲದಲ್ಲಿಯೂ ಒಳ್ಳೆಯ ಲಾಭ ಗಳಿಸಿ ಸಾಲದ ಶೂಲದಿಂದ ಪಾರಾಗಿದ್ದಾರೆ ಪ್ರಗತಿಪರ ರೈತರು.

(ತರಕಾರಿ ಕೃಷಿಗೆ ಸಾಥ್ ನೀಡಿರುವ ಮಳೆನೀರಿನ ಹೊಂಡ)

ಪಾಲಿಹೌಸ್ ಟೆಂಟ್ ಮಾದರಿಯಲ್ಲಿದೆ. ಸಂಪೂರ್ಣವಾಗಿ ತೋಟಗಾರಿಕೆ ಇಲಾಖೆಯ ಮೇಲ್ವಿಚಾರಣೆಯಲ್ಲಿ ಅದನ್ನು ನಿರ್ಮಿಸಲಾಗುತ್ತದೆ. ವಿಸ್ತೀರ್ಣದ ಅಧಾರದ ಮೇಲೆ  ವೆಚ್ಚ ನಿರ್ಣಯವಾಗುತ್ತದೆ. ಅರ್ಧ ಎಕರೆಗೆ ಕನಿಷ್ಠ ₹10 ಲಕ್ಷ ಹಣ ಬೇಕಾಗುತ್ತದೆ. ತೋಟಗಾರಿಕೆ ಇಲಾಖೆ ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 90ರಷ್ಟು ಸಹಾಯಧನವನ್ನು ನೀಡುತ್ತದೆ.

ಪಾಲಿಹೌಸ್ ಒಳಗೆ ಸಂಪೂರ್ಣ ವೈಜ್ಞಾನಿಕ ಕ್ರಮದಲ್ಲಿ ಹವಾಮಾನ ಆಧಾರಿತ ಬೇಸಾಯ ಮಾಡಲಾಗುತ್ತದೆ. ಪ್ರತಿಯೊಂದು ಗಿಡವನ್ನು ಮಗುವಿನಂತೆ ಸಂರಕ್ಷಿಸಲಾಗುತ್ತದೆ. ಒಂದು ಪಾತಿಯಿಂದ ಪಾತಿಗೆ

4 ಅಡಿ ಅಂತರ, ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ  ಅಳವಡಿಸಿಕೊಂಡು ಗಿಡನೆಟ್ಟು ಪೋಷಿಸಲಾಗುತ್ತದೆ. ಹನಿನೀರಾವರಿ ಸೌಲಭ್ಯವನ್ನು ಹೊಂದಿರುವುದರಿಂದ ಪ್ರತಿಯೊಂದು ಗಿಡದ ಬುಡಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಗೊಬ್ಬರವನ್ನು ಹೋಗುವಂತೆ ಮಾಡಲಾಗುತ್ತದೆ. ಇದರಿಂದ ಪ್ರತಿಗಿಡದ ಆರೈಕೆ ಸಾಧ್ಯವಾಗಿ ರೋಗಮುಕ್ತ ತರಕಾರಿ–ಹಣ್ಣು ಬೆಳೆಯಲು ಅನುವಾಗುತ್ತದೆ ಎಂದು ಹೇಳುತ್ತಾರೆ ಹಿರಿಯ ತೋಟಗಾರಿಕಾ ನಿರ್ದೇಶಕ ಎಂ.ಡಿ.ರಘು.

‘ಬರಗಾಲದಿಂದ ಕಂಗೆಟ್ಟಿದ್ದ ನಮಗೆ ಪಾಲಿಹೌಸ್ ಕೃಷಿ ಪದ್ಧತಿ ನೆಮ್ಮದಿ ತಂದುಕೊಟ್ಟಿದೆ. ಹನಿನೀರಾವರಿ ಪದ್ಧತಿಯ ಮೂಲಕ ಬೇಸಾಯ ಮಾಡುತ್ತಿರುವ ಕಾರಣ ನೀರಿನ ಸಮಸ್ಯೆ ಉಂಟಾಗಿಲ್ಲ. ಅಲ್ಲದೆ ಮಳೆ ಬಿದ್ದಾಗ ಅದನ್ನು ವ್ಯರ್ಥವಾಗದಂತೆ ಸಂಗ್ರಹಿಸಿ ಬಳಕೆ ಮಾಡುತ್ತಿರುವ ಕಾರಣ ನೀರಿಗೆ ತೊಂದರೆ ಇಲ್ಲ. ದಪ್ಪಮೆಣಸಿಕಾಯಿ ಬೆಳೆದಿದ್ದು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತಿದೆ. ಈ ಕೃಷಿಪದ್ಧತಿಯಿಂದ ನಮಗೆ ಮರುಜೀವ ಸಿಕ್ಕಂತಾಗಿದೆ’ ಎನ್ನುತ್ತಾರೆ ಭಾನುಪ್ರತಾಪ್ ಹಾಗೂ ದೇವರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.