ADVERTISEMENT

ಮಠಾಧೀಶರ ಕೃಷಿ ಪ್ರೀತಿ

ನಾಗರಾಜ ಎಸ್‌.ಹಣಗಿ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಮಠಾಧೀಶರ ಕೃಷಿ ಪ್ರೀತಿ
ಮಠಾಧೀಶರ ಕೃಷಿ ಪ್ರೀತಿ   
ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಬಾಳೆಹೊಸೂರು ಗ್ರಾಮದ ದಿಂಗಾಲೇಶ್ವರಮಠದ ಕುಮಾರ ದಿಂಗಾಲೇಶ್ವರ ಸ್ವಾಮೀಜಿಯವರು ಧಾರ್ಮಿಕ ಕಾರ್ಯದೊಂದಿಗೆ ತೋಟಗಾರಿಕೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
 
ಪ್ರವಚನ ಪ್ರವೀಣರಾಗಿರುವ ಕುಮಾರ ದಿಂಗಾಲೇಶ್ವರ ಸ್ವಾಮೀಜಿ ಮಠಕ್ಕೆ ಸಂಬಂಧಿಸಿದ 18 ಎಕರೆಯಲ್ಲಿ ಹಸಿರನ್ನು ಚಿಮ್ಮಿಸಿದ್ದಾರೆ. ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಕೃಷಿಕಾರ್ಯದಲ್ಲಿ ತೊಡಗುತ್ತಾರೆ. ಪರಿಸರಪ್ರಿಯರಾಗಿರುವ ಸ್ವಾಮೀಜಿ, ಕಳೆದ ಎರಡು ವರ್ಷಗಳ ಹಿಂದೆ ನೂತನ ಮಠದ ಉದ್ಘಾಟನೆ ಸಂದರ್ಭದಲ್ಲಿ 20ಸಾವಿರ ಗಿಡಗಳನ್ನು ಬೆಳೆಸುವ ಸಂಕಲ್ಪ ತೊಟ್ಟಿದ್ದರು.
 
ಸಂಕಲ್ಪದಂತೆ ಅಂದಿನ ಕಾರ್ಯಕ್ರಮಕ್ಕೆ ಮಠಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ 10 ಸಾವಿರ ಮಾವು ಮತ್ತು ತೆಂಗಿನ ಸಸಿಗಳನ್ನು ವಿತರಿಸಿ ಅವುಗಳನ್ನು ಬೆಳೆಸುವಂತೆ ಸೂಚಿಸಿದ್ದರು. ಇನ್ನು ಹತ್ತು ಸಾವಿರ ಸಸಿಗಳನ್ನು ತಾವೇ ಬೆಳೆಯಲು ಮುಂದಾದರು. ಅದರ ಪ್ರತಿಫಲವಾಗಿ ಸದ್ಯ ಅವರ ತೋಟದಲ್ಲಿ ವಿವಿಧ ಜಾತಿಯ ಹತ್ತು ಸಾವಿರ ಗಿಡಗಳು ಕಂಗೊಳಿಸುತ್ತಿವೆ. 
 
ಎರಡು ವರ್ಷವಷ್ಟೇ ಆಗಿರುವ ಮಠದ ತೋಟದಲ್ಲಿ 500 ಮಾವು, 300 ನೆಲ್ಲಿ, 2ಸಾವಿರ ಸಾಗುವಾನಿ, 300 ಅಂಜೂರ, 500 ತೆಂಗು, 500 ಲಿಂಬು, 300 ಮೋಸಂಬಿ, 500 ಚಿಕ್ಕು, 500 ಕರಿಬೇವು, 500 ಸಿಲ್ವರ್‌ ಓಕ್‌ ಸೇರಿದಂತೆ 50 ಜಾತಿಯ ಮರಗಳಿವೆ. ಹುಣಸೆ, ಬೇವು, ಹೆಬ್ಬೇವು, ಮಸಾಲೆ, ಕುಂಕುಮ ಮತ್ತು ನೂರಾರು ಪಪ್ಪಾಯ, ನುಗ್ಗೆ ಗಿಡಗಳೂ ಸ್ವಾಮೀಜಿಯವರ ಆರೈಕೆಯಲ್ಲಿ ಸೊಗಸಾಗಿ ಬೆಳೆಯುತ್ತಿವೆ. 
 
ಆಂಧ್ರಪ್ರದೇಶ, ಧಾರವಾಡ, ಬೆಳಗಾವಿಗಳಿಂದ ಸಸಿಗಳನ್ನು ತರಿಸಿರುವ ಸ್ವಾಮೀಜಿ ಕಲ್ಲಿನಿಂದ ತುಂಬಿದ್ದ ತೋಟಕ್ಕೆ ಟ್ರ್ಯಾಕ್ಟರ್‌ಗಳಿಂದ 10 ಸಾವಿರ ಟ್ರಿಪ್‌ ಮಣ್ಣನ್ನು ಹಾಕಿಸಿದ್ದಾರೆ. ಅಲ್ಲದೆ ತೋಟದ ಸುತ್ತಲೂ ತಂತಿಬೇಲಿ ಅಳವಡಿಸಿದ್ದಾರಲ್ಲದೆ ಹನಿ ನೀರಾವರಿ ಮೂಲಕ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಇದೆಲ್ಲ ಸೇರಿ ಈವರೆಗೆ ತೋಟಕ್ಕಾಗಿ 28 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. 
 
ಲಾಭದ ಕುರಿತು ಸ್ವಾಮೀಜಿಯವರನ್ನು ಪ್ರಶ್ನಿಸಿದರೆ ‘ಲಾಭಾಂಶವನ್ನು ನೆಚ್ಚಿಕೊಂಡು ತೋಟ ಮಾಡಿಲ್ಲ. ಅದಕ್ಕೆ ಬದಲಾಗಿ ಪರಿಸರ ಉಳಿಯಬೇಕು. ಅಲ್ಲದೆ ಪರಿಸರದ ಬಗ್ಗೆ ಜನತೆಯಲ್ಲಿ ಅರಿವು ಮೂಡಬೇಕು ಎಂಬುದು ನಮ್ಮ ಮೂಲ ಉದ್ದೇಶ’ ಎನ್ನುತ್ತಾರೆ.  
 
ತೋಟಕ್ಕೆ ಜವಾರಿ ಆಕಳುಗಳ ಸೆಗಣಿ ಮತ್ತು ಗೋಮೂತ್ರವನ್ನು ಬಳಸುತ್ತಾರೆ. ಅದಕ್ಕಾಗಿ ಅಂದಾಜು 30 ಜವಾರಿ ಆಕಳುಗಳನ್ನು ಮಠದಲ್ಲಿ ಸಾಕಿದ್ದಾರೆ. ನಿತ್ಯ ಅವುಗಳಿಂದ ದೊರೆಯುವ ತ್ಯಾಜ್ಯವನ್ನು ಗಿಡಗಳಿಗೆ ಗೊಬ್ಬರವನ್ನಾಗಿ ಬಳಸುತ್ತಾರೆ. ಆಕಳುಗಳ ಆಹಾರಕ್ಕಾಗಿ ಹಸಿರು ಮೇವನ್ನು ಬೆಳೆಸಿದ್ದಾರೆ. 
ಮಠಕ್ಕೆ ಬರುವ ಭಕ್ತರು ಸ್ವಾಮೀಜಿಯವರು ಮಾಡಿರುವ ತೋಟವನ್ನು ಕಣ್ಣಾರೆ ಕಂಡು ಖುಷಿ ಪಡುತ್ತಾರೆ. ನಿತ್ಯವೂ ಆಕಳುಗಳಿಗೆ ಮೇವು ಹಾಕುವುದು ಇವರ ಕೆಲಸ. ಸಂಪರ್ಕಕ್ಕೆ 9916694100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.