ADVERTISEMENT

ಸಾಗರ ದಾಟುತಿರುವ ಎಳನೀರು

ಶ್ರೀ ಪಡ್ರೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಅಲ್ಲಿರುವ ಸ್ಟೀಲ್‌ ಪೀಠದ ಮೇಲೆ ವಾರೆಕೋರೆಯಾಗಿ ನಿಂತಿರುವ ಸಾಲುಸಾಲು ಎಳನೀರು. ಮೇಲೊಂದು ಸ್ವಿಚ್‌ ಬೋರ್ಡ್‌. ಇಲ್ಲಿರುವ ಸ್ವಿಚ್‌ ಒತ್ತಿದ ಕೂಡಲೇ ಯಂತ್ರದ ಹೀರುನಳಿಗೆ ಬೊಂಡವನ್ನು ಚುಚ್ಚಿ ಚುಚ್ಚಿ ನೀರನ್ನೆಲ್ಲಾ ಹೀರಿ ಬಿಡುತ್ತದೆ. ನೋಡನೋಡುತ್ತಿದ್ದಂತೆ ಅರ್ಧ ನಿಮಿಷದಲ್ಲಿಯೇ ಕಾಯಿಯಲ್ಲಿರುವ ಎಳನೀರೆಲ್ಲ ಬರಿದು. ಈ ನೀರು ಎಲ್ಲಿಗೆ ಹೋಯಿತು ಎಂದು ತಿರುಗಿ ನೋಡಿದರೆ, ಪಕ್ಕದಲ್ಲಿಯೇ ಇರುವ ನೀರು ಬಾಟಲಿಯಲ್ಲಿ ಇಳಿದುಬಿಟ್ಟಿರುತ್ತದೆ!

ಇದು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿಯ ಕಡಂಬಾರು ಎಂಬ ಗ್ರಾಮದಲ್ಲಿನ ಸುಸಜ್ಜಿತ ಎಳನೀರು ಪ್ಯಾಕೇಜಿಂಗ್ ಕಂಪೆನಿಯಲ್ಲಿ ಕಂಡುಬರುವ ದೃಶ್ಯ. ಅನಾರೋಗ್ಯಕರವಾಗಿದ್ದರೂ ಹಣ ತೆತ್ತು ವಿವಿಧ ಸಾಫ್ಟ್‌ಡ್ರಿಂಕ್ಸ್‌ಗಳನ್ನು ಕುಡಿಯುವ ಇಂದಿನ ಪರಿಸ್ಥಿತಿ ನಡುವೆ, ಇವೆಲ್ಲಕ್ಕೂ ಸೆಡ್ಡು ಹೊಡೆಯುವ ರೀತಿಯಲ್ಲಿ, ಹಲವು ಕಾಯಿಲೆಗಳನ್ನು ಹೊಡೆದೋಡಿಸಬಲ್ಲ ಔಷಧೀಯ ಗುಣವುಳ್ಳ ಎಳನೀರನ್ನೀಗ ಪ್ಯಾಕೇಜ್‌ ರೂಪದಲ್ಲಿ ನೀಡುತ್ತಿದ್ದಾರೆ ಇದೇ ಊರಿನ ಎಂ.ಬಿ.ಎ ಪದವೀಧರ ಸಫ್ವಾನ್ ಮೊಯ್ದೀನ್. ಇವರ ಕಂಪೆನಿ ಹೆಸರು ಗ್ಲೋಬಲ್ ಅಸೋಸಿಯೇಟ್ಸ್. 2013 ಆಗಸ್ಟ್ನಲ್ಲಿ ಕಾರ್ಯಾರಂಭ ಮಾಡಿರುವ ಈ ಕಂಪೆನಿಯಲ್ಲಿ ‘ಪುಶ್‌ಡ್ರಿಂಕ್’ ಹೆಸರಿನ ಕಾಲು ಲೀಟರಿನ ಎಳನೀರು ಬಾಟ್ಲಿ ತಯಾರಾಗುತ್ತಿದೆ.

ಎಲ್ಲವೂ ಸ್ವಯಂಚಾಲಿತ
ಆರಂಭದಿಂದ ಪರ್ಲ್‌ಪೇಟ್ ಬಾಟ್ಲಿಯೊಳಗೆ ಎಳನೀರು ಸೇರಿ ಸೀಲ್ ಆಗುವವರೆಗಿನವರೆಗೂ ಸ್ವಯಂಚಾಲಿತ  ಕ್ರಿಯೆ. ಕಾರ್ಮಿಕರು ಸ್ಪರ್ಶಿಸುವುದಿಲ್ಲ. ಉತ್ಪಾದನಾ ನಂತರದ ಲೇಬಲಿಂಗ್, ಪ್ಯಾಕಿಂಗ್ ಇತ್ಯಾದಿಗಳು ಮಾನವ ಶ್ರಮದಲ್ಲಿ ನಡೆಯುತ್ತವೆ. ತೊಳೆದು ಶುದ್ಧಿ ಮಾಡಿದ ಎಳೆನೀರನ್ನು ಇಲ್ಲಿ ಬಳಸಲಾಗುತ್ತದೆ.

ಇಲ್ಲಿ ಬಳಸುವ ತಂತ್ರಜ್ಞಾನವನ್ನು ತೆಂಗು ಅಭಿವೃದ್ಧಿ ಮಂಡಳಿಯಿಂದ ಪಡೆದುಕೊಳ್ಳಲಾಗಿದೆ. ಯಂತ್ರಗಳು ದೇಶದ ಬೇರೆ ಬೇರೆ ಭಾಗಗಳಲ್ಲಿ ನಿರ್ಮಾಣವಾಗಿವೆ. ದಿನಕ್ಕೆ 2,500 ಬಾಟಲಿಗಳನ್ನು ತುಂಬುವ ಸಾಮರ್ಥ್ಯ ಇದಕ್ಕಿದೆ.  ಪ್ರಯತ್ನಪಟ್ಟರೆ ಈ ಸಂಖ್ಯೆಯನ್ನು ಇನ್ನೂ ಹೆಚ್ಚಿಸಲು ಸಾಧ್ಯ ಎನ್ನುತ್ತಾರೆ ಸಫ್ವಾನ್. ಕರ್ನಾಟಕದಲ್ಲಿ ಮದ್ದೂರು ಬಳಿ ‘ಕೊಕೊಜಲ್’ ಎಳನೀರು ಪ್ಯಾಕೇಜಿಂಗ್ ಉದ್ದಿಮೆ ಬಿಟ್ಟರೆ ರಾಜ್ಯದಲ್ಲಿ ಈ ರೀತಿಯ ಉದ್ದಿಮೆ ಮತ್ತೊಂದಿಲ್ಲ ಎನ್ನುತ್ತಾರೆ ಅವರು.

ಕಚ್ಚಾ ಎಳನೀರು ಸ್ವಲ್ಪ ಸ್ಥಳೀಯರಿಂದ,  ಉಳಿದದ್ದು ಕರ್ನಾಟಕ ಮತ್ತು ತಮಿಳುನಾಡಿನಿಂದ ಖರೀದಿಸಲಾಗುತ್ತದೆ. ಪ್ರತಿದಿನ ಉತ್ಪಾದನೆ ಇಲ್ಲ. ಬೇಡಿಕೆಗೆ ಅನುಸಾರವಾಗಷ್ಟೇ ತಯಾರಿ. ತಿಂಗಳಿಗೆ ಸುಮಾರು ಹದಿನೈದು ದಿನ ಉತ್ಪಾದನೆ ನಡೆಯುತ್ತದೆ. ‘ನಾವು ಇದನ್ನು ಪ್ರಕೃತಿಯ ಎನರ್ಜಿ ಡ್ರಿಂಕ್ ಅಂತಲೇ ಪ್ರೊಮೋಟ್ ಮಾಡುತ್ತಿದ್ದೇವೆ. ಜಾಲತಾಣ ನೋಡಿ ಹೊಸಹೊಸ ಬೇಡಿಕೆಗಳು ಬರುತ್ತಿವೆ. ಪ್ರಾಯೋಗಿಕ ಉತ್ಪಾದನೆಯನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಒಂದು ವರ್ಷದ ಅನುಭವ ಆಗಿದೆ. ಈಗ ಮಾರ್ಕೆಟಿಂಗ್ ಬಗ್ಗೆ ಆತ್ಮವಿಶ್ವಾಸ ಮೂಡಿದೆ’ ಎನ್ನುತ್ತಾರೆ ಸಫ್ವಾನ್.

ಫ್ರಾನ್ಸ್‌ ಪ್ರೇರಣೆ
ಎಳನೀರಿನ ಉದ್ದಿಮೆ, ಅದರಲ್ಲೂ ಹಳ್ಳಿಯಲ್ಲೇ ಇದನ್ನು ಆರಂಭಿಸಲು ಪ್ರೇರಣೆ ಏನು ಎಂದು ಕೇಳಿದರೆ, ‘ಕಾಲೇಜಿಗೆ ಹೋಗುತ್ತಿದ್ದಾಗ ಒಮ್ಮೆ ಫ್ರಾನ್ಸಿಗೆ ಹೋಗುವ ಸಂದರ್ಭ ಬಂತು. ಅಲ್ಲಿ ಅದೆಷ್ಟೋ ಅಮೆರಿಕನ್ ಬ್ರಾಂಡಿನ ಎಳನೀರೂ ಇತ್ತು. ಆದರೆ ಇಷ್ಟೊಂದು ತೆಂಗು ಬೆಳೆಯುವ ಪ್ರದೇಶ ನಮ್ಮಲ್ಲಿದ್ದರೂ, ಇಂಥದ್ದೊಂದು ಉದ್ದಿಮೆ ಏಕಿಲ್ಲ ಎಂಬ ಜಿಜ್ಞಾಸೆ ಮೂಡಿತ್ತು. ಮನಸ್ಸಿನಲ್ಲಿ ಇದು ಕೊರೆಯುತ್ತಲೇ ಇತ್ತು. ಆದ್ದರಿಂದ ಎಂ.ಬಿ.ಎ ಪದವಿ ನಂತರ, ಬೇರೆಲ್ಲ ಉದ್ಯೋಗದ ಆಸೆ ಬಿಟ್ಟು ನನ್ನ ಊರಿನಲ್ಲೇ ಆರಂಭಿಸಿದೆ’ ಎನ್ನುತ್ತಾರೆ ಅವರು.

ಇವರ ಈವರೆಗಿನ ಅತಿ ದೊಡ್ಡ ಯಶ ಎಂದರೆ ಎರಡು ಕಂಪೆನಿಗಳಿಗೆ ಎಳನೀರು ಪ್ಯಾಕೇಜಿಂಗ್ ಮಾಡಿಕೊಡಲು ಗುತ್ತಿಗೆ ಸಿಕ್ಕಿರುವುದು. ಇದರಲ್ಲೊಂದು ಇಟಲಿಯ ‘ಕೊಕೊ ವಿಡ’ ಎಂಬ ಪ್ರತಿಷ್ಠಿತ ಕಂಪೆನಿ. ಇನ್ನೊಂದು ಗುಜರಾತಿನ - ‘ಕೊಕೊ ಸಿಪ್’. ಇಷ್ಟರೊಳಗೆ ‘ಪುಶ್ ಡ್ರಿಂಕ್’ ಹೆಸರು ಸಾಗರದಾಚೆಗೂ ತಲುಪಿದೆ. ಯೂರೋಪಿಗೆ ಒಂದಷ್ಟು ಉತ್ಪನ್ನ ರಫ್ತು ಆಗಿದೆ. ಇನ್ನೊಂದು ಬ್ಯಾಚ್ ದುಬೈಗೆ ಹೋಗುವ ಸಿದ್ಧತೆಯಲ್ಲಿದೆ.

‘ಹೀಗಾಗಿ ನಮ್ಮ ಉತ್ಪಾದನಾ ಸಾಮರ್ಥ್ಯದ ಬಹುಪಾಲು ಹೀಗೆ ಔಟ್‌ಸೋರ್ಸಿಂಗ್‌ಗೆ ಬಳಕೆಯಾಗಲಿದೆ. ಈ ನಡುವೆ ನಮ್ಮ ಗುರುತಿಗಾಗಿ ನಮ್ಮದೇ ಬ್ರಾಂಡ್ ಆರಂಭಿಸಿದ್ದೇವೆ’ ಎನ್ನುತ್ತಾರೆ ಸಫ್ವಾನ್. ಈಗ ಇವರಿಗೆ ಸರಬರಾಜಾಗುತ್ತಿರುವ ಎಳನೀರಿನಲ್ಲಿ ನಾನೂರರಿಂದ ಐನೂರು ಮಿಲಿಲೀಟರ್ ಜ್ಯೂಸ್ ಇರುತ್ತದೆ. ಲಾರಿ ಲೋಡಿನಿಂದ ನೂರು ಬೊಂಡ ತೆಗೆದು ನೀರೆಷ್ಟಿದೆ ಎಂದು ನೋಡಿ ಅಂದಾಜು ಮಾಡಿ ವ್ಯವಹಾರ ನಿಶ್ಚಯಿಸುತ್ತಾರೆ.

‘ಬೇರೆ ಬೇರೆ ಮೂಲಗಳಿಂದ ಬರುವ ಬೊಂಡ ಮತ್ತು ವರ್ಷದ ಬೇರೆ ಬೇರೆ ಕಾಲ ಅನುಸರಿಸಿ ಜ್ಯೂಸಿನ ರುಚಿಯಲ್ಲಿ ವ್ಯತ್ಯಾಸ ಆಗುತ್ತದೆ. ಅಂತಹ ಸಂದರ್ಭಗಳಲ್ಲಿ ಇದನ್ನು ಪರಿಹರಿಸುವುದು ಸುಲಭವಲ್ಲ. ನಮ್ಮ ಗುತ್ತಿಗೆ ಗ್ರಾಹಕರಿಗೆ ನಾವಿದನ್ನು ಮೊದಲೇ ತಿಳಿಸಿದ್ದೇವೆ’ ಎನ್ನುತ್ತಾರೆ ಸಫ್ವಾನ್.

ಮಂಗಳೂರಿನ ಒಂದೆರಡು ಖಾಸಗಿ ಆಸ್ಪತ್ರೆಗಳಿಗೆ ‘ಪುಶ್‌ಡ್ರಿಂಕ್’ ಹೋಗುತ್ತಲಿದೆ. ‘ಆಸ್ಪತ್ರೆಗಳಿಂದ ಒಳ್ಳೆಯ ಬೇಡಿಕೆ ಇದೆ. ಅಲ್ಲಿ ಕಚ್ಚಾ ಎಳನೀರನ್ನು ವಾರ್ಡಿಗೆ ಒಯ್ಯಲು ಬಿಡುವುದಿಲ್ಲವಲ್ಲಾ’ ಎನ್ನುತ್ತಾರೆ ಸಫ್ವಾನ್. ಈವರೆಗಿನ ಉತ್ತೇಜಕ ಪ್ರತಿಕ್ರಿಯೆ ಈ ತರುಣರ ಹುಮ್ಮಸ್ಸನ್ನು ಹೆಚ್ಚಿಸಿದೆ. ಇದೇ ರೀತಿ ಆರ್ಡರ್ ಸಿಕ್ಕರೆ ಬಹುಬೇಗನೆ ಪೂರ್ತಿ ಸ್ವಯಂಚಾಲಿತ ಯಂತ್ರ ಅಳವಡಿಸಬೇಕೆಂದಿದ್ದಾರೆ. ಲಿಂಬೆ ಮತ್ತು ಪೈನಾಪಲ್ ಪರಿಮಳಗಳಲ್ಲಿ ಎಳನೀರನ್ನು ಸಾದರಪಡಿಸುವ ಯೋಜನೆಯೂ ಇದೆ.

ಕಂಪೆನಿಗೆ ಒಟ್ಟು ₨ 1.7 ಕೋಟಿ  ಬಂಡವಾಳ ಹೂಡಿದ್ದಾರೆ. ಈಚೆಗೆ ಯುರೋಪಿಗೆ ಒಂದು ಲಾಟ್ ರಫ್ತು ಮಾಡುವ ಅವಕಾಶ ಸಿಕ್ಕಿರುವುದು ಇವರ ಆತ್ಮಸ್ಥೈರ್ಯ ಹೆಚ್ಚಿಸಿದೆ. ಉತ್ತರ ಭಾರತ ದಿಂದಲೂ ಬೇಡಿಕೆ ಬರುತ್ತಲಿದೆಯಂತೆ. ‘ಬಯೋ ಪ್ರಿಸರ್ವೇಟಿವ್’ ಸೇರಿಸಿದ ಈ ಉತ್ಪನ್ನಕ್ಕೆ ಒಂಬತ್ತು ತಿಂಗಳ ಶೆಲ್ಫ್ ಲೈಫ್ ಇದೆ.

ಮೊತ್ತಮೊದಲ ಸವಾಲು, ಇಂಥದೊಂದು ಉತ್ಪನ್ನ ಮಾರುಕಟ್ಟೆಗೆ ಬಂದಿದೆ ಎನ್ನುವುದನ್ನು ಗ್ರಾಹಕವರ್ಗಕ್ಕೆ ತಿಳಿಸುವುದು. ಈ ನಿಟ್ಟಿನಿಂದ ಹೆಚ್ಚುಹೆಚ್ಚು ಕಂಪೆನಿಗಳು ಈ ಕೆಲಸ ಆರಂಭಿಸಿದರೆ ಒಟ್ಟಾರೆಯಾಗಿ ಅನುಕೂಲವೇ ಎನ್ನುವುದು ಈ ಯುವಕರ ನಿಲುವು. ಸದ್ಯದಲ್ಲಿಯೇ, ಸಫ್ವಾನ್ ಇನ್ನೂ ನಾಲ್ಕು ಸಾಫ್ಟ್ ಡ್ರಿಂಕ್‌ಗಳನ್ನು ಮಾರುಕಟ್ಟೆಗಿಳಿಸುವುದರಲ್ಲಿದ್ದಾರೆ. ನಮ್ಮ ದೇಶದಲ್ಲಿ ಅಷ್ಟು ಪರಿಚಿತವಲ್ಲದ  ಎಳನೀರಿನ ‘ನಾಟಾ ಡಿ ಕೊಕೋ’ ಇವರ ಮುಂದಿನ ಉತ್ಪನ್ನ. ಇದಕ್ಕೆ ಹೊರದೇಶಗಳಿಂದ ಒಳ್ಳೆ ಬೇಡಿಕೆಯಿದೆಯಂತೆ. ಅವರ ಸಂಪರ್ಕ ಸಂಖ್ಯೆ: 09986281788

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.