ADVERTISEMENT

ಅಂತರ್ಜಾಲದ ಮೂಲಕ ಅಂಚೆ ನಂಟು

ಡಿ.ಜಿ.ಮಲ್ಲಿಕಾರ್ಜುನ
Published 25 ಜುಲೈ 2015, 19:30 IST
Last Updated 25 ಜುಲೈ 2015, 19:30 IST

‘ಬೆಲಾರಸ್ ದೇಶದಿಂದ ಪೋಸ್ಟ್‌ ಕಾರ್ಡ್‌ ಬಂದಿದೆ. ಬೆಲಾರಸ್ ರಾಜಧಾನಿ ಮಿನ್ಸ್ಕ್ ಮತ್ತು ನಮ್ಮ ಬೆಂಗಳೂರು ಎರಡೂ ಸಹೋದರಿ ನಗರಿಗಳು (ಸಿಸ್ಟರ್‌ ಸಿಟೀಸ್‌). ಮಿನ್ಸ್ಕ್ ನಗರದಲ್ಲಿ ಬೆಂಗಳೂರು ಸ್ಕ್ವೇರ್‌ ಇದ್ದರೆ, ಬೆಂಗಳೂರಿನಲ್ಲಿ ಮಿನ್ಸ್ಕ್ ಸ್ಕ್ವೇರ್‌ ಇದೆ. ಒಂದು ಪೋಸ್ಟ್‌ ಕಾರ್ಡ್‌ನಿಂದ ಎರಡು ದೇಶಗಳ - ಎರಡು ನಗರಗಳ ನಡುವಿನ ಬಾಂಧವ್ಯದ ಬಗ್ಗೆ ತಿಳಿಯಿತು’ ಎಂದು ಪ್ರಕಾಶ್‌ ಚಂದ್ರ ಹೇಳುವಾಗ ಅಂಚೆ ಮೂಲಕ ಬಂದ ಅವ್ಯಕ್ತ ಜ್ಞಾನದ ತುಣುಕನ್ನು ಹೊಂದಿದ ಹೆಮ್ಮೆ ಅವರಲ್ಲಿ ಕಾಣುತ್ತಿತ್ತು.

ಪ್ರಕಾಶ್‌ ಚಂದ್ರ ಅವರಿಗೆ ಕಾರ್ಡ್‌ ಕಳುಹಿಸಿದ್ದು ಪರಿಚಯದ ಗೆಳೆಯನಲ್ಲ, ಒಬ್ಬ ಅಜ್ಞಾತ ವ್ಯಕ್ತಿ! ವಿಶ್ವದಾದ್ಯಂತ ವಿವಿಧ ದೇಶಗಳ ಅಪರಿಚಿತ ವ್ಯಕ್ತಿಗಳು ಒಬ್ಬರಿಗೊಬ್ಬರು ಪೋಸ್ಟ್‌ ಕಾರ್ಡ್‌ ಕಳಿಸುತ್ತಾ ಪಡೆಯುವ ವಿಶಿಷ್ಠ ವ್ಯವಸ್ಥೆಯೊಂದು ರೂಪುಗೊಂಡಿದೆ. ಅಂಚೆ ಮೂಲಕ ಚಂದದ ಅಂಚೆಚೀಟಿಯನ್ನು ಹಚ್ಚಿಕೊಂಡು ಸಾಗಿ ಬರುವ ಬಣ್ಣದ ಕಾರ್ಡುಗಳು ಅಚ್ಚರಿ, ಹೊಸ ಸಂಗತಿ, ಜ್ಞಾನ, ಭಾಷೆ, ಸಂಸ್ಕೃತಿ ಮತ್ತು ಸ್ನೇಹವನ್ನು ಹೊತ್ತು ತರುವ ವಾಹಕಗಳಾಗಿವೆ.

ಮಿಂಚಂಚೆ (ಇ–ಮೇಲ್‌) ಬಂದ ಮೇಲೆ ಅಂಚೆ ಮರೆಯಾಯಿತು. ಸ್ಮಾರ್ಟ್‌ ಫೋನ್‌, ವ್ಯಾಟ್ಸಪ್‌, ಫೇಸ್‌ಬುಕ್‌, ಟ್ವಿಟರ್‌ ಮುಂತಾದ ಸಂಪರ್ಕ ಸೇತುಗಳಿರುವಾಗ ಕಾಗದ ಬರೆದು, ಅಂಚೆ ಚೀಟಿ ಹಚ್ಚಿ, ಡಬ್ಬಿಗೆ ಹಾಕುವ ವ್ಯವಧಾನ ಎಲ್ಲಿಯದು ಎಂಬ ಭಾವ ಸಾಮಾನ್ಯ. ಆದರೆ ವಿಶ್ವದಾದ್ಯಂತ ಇರುವ ಅಂಚೆ ಚೀಟಿ ಸಂಗ್ರಹಕಾರರಿಗೆ, ವಿವಿಧ ದೇಶಗಳ ಪೋಸ್ಟ್‌ ಕಾರ್ಡ್‌ ಸಂಗ್ರಹಕಾರರಿಗೆ ತಂತ್ರಜ್ಞಾನವೇ ವರದಾನವಾಗಿ ಪರಿಣಮಿಸಿದೆ. ಹೀಗೆ ಜನಿಸಿದ್ದೇ ‘ಪೋಸ್ಟ್‌ಕ್ರಾಸಿಂಗ್‌ ಡಾಟ್‌ ಕಾಮ್‌’.

ಪೋರ್ಚುಗಲ್‌ ದೇಶದ ಪಾಲೋ ಮೆಗಾಲ್ಹೇಸ್‌ ಎಂಬಾತನಿಗೆ ಪ್ರತಿದಿನವೂ ತನಗೆ ಪತ್ರ ಬರಲಿ, ಚಂದದ ಕಾರ್ಡ್‌ ವಿವಿಧ ದೇಶಗಳಿಂದ ಬರಲಿ ಎಂಬ ಅಭಿಲಾಷೆ. ತನ್ನದೇ ಅಭಿರುಚಿ ಹೊಂದಿರುವವರು ವಿಶ್ವದಾದ್ಯಂತ ಇರುತ್ತಾರೆ. ಅವರೆಲ್ಲರನ್ನೂ ಬೆಸೆಯುವ ಒಂದು ವೇದಿಕೆಯನ್ನು ಆತ ಅಂತರ್ಜಾಲದಲ್ಲಿ ನಿರ್ಮಿಸಿದ. ವಿಶ್ವದಾದ್ಯಂತ ಜನರು ಪೋಸ್ಟ್‌ ಕಾರ್ಡ್‌ಗಳ ಮೂಲಕ ಸಂಪರ್ಕ ಹೊಂದಬೇಕು. ಎಲ್ಲಾ ರೀತಿಯ ದೇಶ, ಭಾಷೆ, ವಯಸ್ಸು, ಬಣ್ಣ ಒಳಗೊಂಡ ಪೋಸ್ಟ್‌ ಕಾರ್ಡ್‌ಗಳ ವಿಶ್ವವೊಂದನ್ನು ಸೃಷ್ಟಿಸಬೇಕು ಎಂಬುದು ಆತನ ಬಯಕೆಯಾಗಿತ್ತು.

2005ರ ಜುಲೈ 14ರಂದು ಆತ ‘ಪೋಸ್ಟ್‌ಕ್ರಾಸಿಂಗ್‌ ಡಾಟ್‌ ಕಾಮ್‌’ ಎಂಬ ವೆಬ್‌ಸೈಟ್‌ ಪ್ರಾರಂಬಿಸಿದ. ಈ ವೆಬ್‌ಸೈಟ್‌ನಲ್ಲಿ ಸೈನ್‌ ಇನ್‌ ಆದವರಿಗೆ ಐದು ವಿಳಾಸಗಳನ್ನು ನೀಡಲಾಗುತ್ತದೆ. ಪ್ರತಿ ವಿಳಾಸದ ಜೊತೆಯಲ್ಲಿ ಪೋಸ್ಟ್‌ ಕಾರ್ಡ್‌ ಐಡಿ ಸಂಖ್ಯೆ ಕೂಡ ಇರುತ್ತದೆ. ಐದು ಪೋಸ್ಟ್‌ ಕಾರ್ಡ್‌ಗಳನ್ನು ಐದು ವಿಳಾಸಗಳಿಗೆ ಐಡಿ ಸಂಖ್ಯೆ ನಮೂದಿಸಿ ಪೋಸ್ಟ್‌ ಮಾಡಬೇಕು. ಆಯಾ ವಿಳಾಸಕ್ಕೆ ಅದು ತಲುಪುತ್ತಿದ್ದಂತೆಯೇ ವೆಬ್‌ಸೈಟ್‌ನಲ್ಲಿ ಅವರು ತಮಗೆ ಬಂದ ಕಾರ್ಡ್‌ ಮೇಲಿನ ಐಡಿ ಸಂಖ್ಯೆ ನಮೂದಿಸುತ್ತಾರೆ. ಆ ನಂತರ ಪೋಸ್ಟ್‌ ಕಾರ್ಡ್‌ ಕಳುಹಿಸಿದವರ ವಿಳಾಸವನ್ನು ಮತ್ತೊಬ್ಬರಿಗೆ ನೀಡಲಾಗುತ್ತದೆ. ತಿಳಿಯದ ಅಜ್ಞಾತ ಸ್ಥಳದಿಂದ ಪೋಸ್ಟ್‌ ಕಾರ್ಡ್‌ ಬರಲು ಪ್ರಾರಂಭವಾಗುತ್ತದೆ. ಅಲ್ಲಿ ಪೋಸ್ಟ್‌ ಕಾರ್ಡ್‌ ತಲುಪುತ್ತಿದ್ದಂತೆಯೇ ಇತ್ತ ಹೊಸ ವಿಳಾಸವನ್ನು ನೀಡಲಾಗುತ್ತದೆ. ಹೀಗೆ ಪೋಸ್ಟ್‌ ಕಾರ್ಡ್‌ ಸರಪಳಿ ಬೆಳೆಯುತ್ತಾ ಹೋಗುತ್ತದೆ.

ಪೋಸ್ಟ್‌ಕ್ರಾಸಿಂಗ್‌ ಡಾಟ್‌ ಕಾಮ್‌ ಪ್ರಾರಂಭವಾದ ಮೂರು ವರ್ಷಗಳಲ್ಲೇ ವಿಶ್ವದಾದ್ಯಂತ 10 ಲಕ್ಷ ಪೋಸ್ಟ್‌ ಕಾರ್ಡುಗಳ ವಿನಿಮಯವಾಯಿತು. ವೆಬ್‌ಸೈಟ್‌ಗೆ ಈಗ 10 ವರ್ಷದ ಪ್ರಾಯ. ಇದುವರೆಗೂ 30 ದಶಲಕ್ಷ ಪೋಸ್ಟ್‌ ಕಾರ್ಡುಗಳು ವಿನಿಮಯಗೊಂಡಿವೆ. ಈ ವೆಬ್‌ಸೈಟ್‌ನ ಅಂಕಿ ಅಂಶಗಳು ಪೋಸ್ಟ್‌ ಕಾರ್ಡ್‌ಗಳ ಜಗತ್ತನ್ನೇ ಪರಿಚಯಿಸುತ್ತದೆ. ವಿಶ್ವದ 213 ದೇಶಗಳ 5,58,258 ಮಂದಿ ಪೋಸ್ಟ್‌ ಕಾರ್ಡುಗಳ ವಿನಿಮಯದಲ್ಲಿ ತೊಡಗಿದ್ದಾರೆ. ಇದರಲ್ಲಿ ಮಹಿಳೆಯರ ಪಾಲೇ ಹೆಚ್ಚೆನ್ನುವುದು ವಿಶೇಷ. ಪ್ರತಿ ಒಂದು ಗಂಟೆಗೆ 389 ಪೋಸ್ಟ್‌ ಕಾರ್ಡ್‌ಗಳು ವಿನಿಮಯವಾಗುತ್ತಿವೆ. ಹೆಚ್ಚು ಸದಸ್ಯರು ಇರುವ ದೇಶಗಳ ಪಟ್ಟಿಯಲ್ಲಿ ರಷ್ಯಾ (65,565) ಮೊದಲ ಸ್ಥಾನ ಪಡೆದಿದ್ದರೆ, ತೈವಾನ್‌ (56,292), ಅಮೇರಿಕಾ (53,619), ಚೀನಾ (52,118), ಜರ್ಮನಿ (42,311) ನಂತರದ ಸ್ಥಾನಗಳಲ್ಲಿವೆ. ಭಾರತ 18ನೇ ಸ್ಥಾನದಲ್ಲಿದ್ದು, 7,336 ಮಂದಿ ಭಾರತೀಯರು ಸದಸ್ಯರಾಗಿದ್ದಾರೆ.

ಪೋಸ್ಟ್‌ ಕಾರ್ಡ್‌ಗಳ ಮೂಲಕ ಪರಿಚಯಗೊಂಡ ಸದಸ್ಯರಲ್ಲಿ ಹಲವರು ತಮ್ಮದೇ ಸ್ನೇಹ ಸಂಘಗಳನ್ನು ರಚಿಸಿಕೊಂಡಿದ್ದಾರೆ. ಫೇಸ್‌ಬುಕ್‌ ಮೂಲಕ ಸಂಘಟನೆಗಳನ್ನು ಮಾಡಿಕೊಂಡು ಹಲವು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ವಿಶ್ವದ ನಾನಾ ಕಡೆ ಪೋಸ್ಟ್‌ ಕಾರ್ಡ್‌ಗಳ ಪ್ರದರ್ಶನಗಳೂ ನಡೆಯುತ್ತಿವೆ. ನೆದರ್‌ಲ್ಯಾಂಡ್‌ ದೇಶದ ಅಂಚೆ ಇಲಾಖೆ ವಿಶ್ವದಾದ್ಯಂತ ಸ್ನೇಹಭಾವವನ್ನು ಪ್ರತಿಬಿಂಬಿಸುವ ಪೋಸ್ಟ್‌ ಕ್ರಾಸಿಂಗ್‌ ವ್ಯವಸ್ಥೆಯನ್ನು ಗೌರವಿಸಿ 2011ರಲ್ಲಿ ಅಂಚೆ ಚೀಟಿಯನ್ನು ಹೊರತಂದಿದೆ. ರಷ್ಯಾ, ಸ್ಲೊವೇನಿಯ, ಯೂರೋಪ್‌ನಲ್ಲಿರುವ ಗುರ್‍ನ್‌ಸೆ, ಬೆಲಾರಸ್‌, ಫಿನ್‌ಲ್ಯಾಂಡ್‌ ಮುಂತಾದ ದೇಶಗಳು ಕೂಡ ಪೋಸ್ಟ್‌ ಕ್ರಾಸಿಂಗ್‌ ಅನ್ನು ಗೌರವಿಸುವ ಅಂಚೆ ಚೀಟಿಗಳನ್ನು ಹೊರತಂದಿವೆ.

ಅಂಚೆ ಚೀಟಿ ಹಚ್ಚಿದ ಪೋಸ್ಟ್‌ ಕಾರ್ಡ್‌ಗೆ ಅಂಚೆ ಕಚೇರಿಯಲ್ಲಿ ಠಸ್ಸೆ ಬೀಳುತ್ತಿದ್ದಂತೆ ಅದರಲ್ಲಿ ದಿನಾಂಕವು ನಮೂದಾಗುತ್ತದೆ. ಅಲ್ಲಿಗೆ ಅದೊಂದು ಇತಿಹಾಸದ ತುಣುಕು. ಮುಂದೆ ಅದು ಸಂಗ್ರಹಕಾರರ ವಿಶಿಷ್ಟ ವಸ್ತುವಾಗಿಬಿಡುತ್ತದೆ. ವಿಶ್ವ ಭ್ರಾತೃತ್ವದ ಪ್ರತಿನಿಧಿಯಾದ ಈ ಹವ್ಯಾಸ ಕಾಲ, ದೇಶ, ಭಾಷೆಗಳನ್ನು ಒಂದುಗೂಡಿಸುವ, ವಿಶ್ವಮಾನವನಾಗುವತ್ತ ಸಾಗುವ ಪಯಣವಾಗಿದೆ. ಪೋಸ್ಟ್‌ ಕಾರ್ಡ್‌ ಹವ್ಯಾಸಿಗರಲ್ಲಿ ಕೆಲವರು ವಿಶೇಷ ವಿಷಯಕ್ಕೆ ಸಂಬಂಧಿಸಿದ ಕಾರ್ಡುಗಳನ್ನು ಸಂಗ್ರಹಿಸುತ್ತಾರೆ. ಅಜ್ಞಾತ ಸ್ಥಳದಿಂದ ಅನೂಹ್ಯ ರೀತಿಯಲ್ಲಿ ಸಾಗಿಬರುವ ಕೌತುಕದ ಪೋಸ್ಟ್‌ ಕಾರ್ಡ್‌ಗಳನ್ನು ಹೊತ್ತು ತರುವ ಅಂಚೆಯಣ್ಣ ಆತ್ಮಬಂಧುವಿನಂತೆ ಕಾಣಿಸತೊಡಗುತ್ತಾನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.