ADVERTISEMENT

ಅಣ್ಣ ಹೇಳಿದ ಎರಡು ಮಾತುಗಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 19:30 IST
Last Updated 15 ಜುಲೈ 2017, 19:30 IST
ಚಿತ್ರ: ಶಿಲ್ಪಾ ಕಬ್ಬಿಣಕಂತಿ­
ಚಿತ್ರ: ಶಿಲ್ಪಾ ಕಬ್ಬಿಣಕಂತಿ­   

ಡಾ. ಸ.ಜ. ನಾಗಲೋಟಿಮಠ ಕನ್ನಡನಾಡು ಕಂಡ ಶ್ರೇಷ್ಠ ಪೆಥಲಾಜಿಸ್ಟ್. ಪೆಥಲಾಜಿಯಲ್ಲಿ ಅವರದು ಅದ್ವಿತೀಯ ಪರಿಣತಿ. ಆ ವಿಷಯದಲ್ಲಿ ಅವರಿಗೆ ದೇಶದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಇತ್ತು. ಅವರು ವೈದ್ಯಕೀಯ ವಿಜ್ಞಾನ ಓದುವಾಗ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ, ಎದುರಿಸಿದ ಎಡರು ತೊಡರುಗಳಿಗೆ ಎಣೆ ಇಲ್ಲ. ಅವರು ಪ್ರಥಮ ಎಂ.ಬಿ.ಬಿ.ಎಸ್‌.ನಲ್ಲಿದ್ದಾಗ ತಂದೆ ಕ್ಷಯದಿಂದ ಅಸು ನೀಗಿದರು.

ಪ್ರಿಂಟಿಂಗ್ ಪ್ರೆಸ್ಸಿನ ಮಾಲೀಕರಾಗಿದ್ದ ಅವರು ಒಂದಿಷ್ಟು ಆಸ್ತಿ ಮಾಡಿಕೊಂಡಿದ್ದರು. ಅವರ ಮರಣಾನಂತರ ಸಾಲ ಕೊಟ್ಟಿದ್ದೇವೆಂದು ಪೀಡಿಸುವವರ ಪಾಲಾಯಿತು ಎಲ್ಲ ಆಸ್ತಿ, ಮನೆಯೊಂದು ಮಾತ್ರ ಉಳಿಯಿತು. ಶಿಕ್ಷಣ ಹೇಗೆ ಮುಂದುವರೆಸುವುದು ಎಂಬ ಸಮಸ್ಯೆ ಉದ್ಭವಿಸಿತು.

ಶಿಕ್ಷಣದ ವೆಚ್ಚ ಭರಿಸಲು ಮುಂದೆಬಂದ ಶ್ರೀಮಂತರೊಬ್ಬರ ಮಗಳನ್ನು ಮದುವೆಯಾದರು. ತಾಯಿ–ತಂಗಿಯನ್ನು ಮನೆಯಲ್ಲಿರಿಸಿ ಹುಬ್ಬಳ್ಳಿಗೆ ಹೋದರು. ಕೆಲವು ತಿಂಗಳುಗಳ ಹಿಂದೆ ಯಾವ ಹೊಲದ ಒಡತಿಯಾಗಿದ್ದಳೋ ಅದೇ ಹೊಲದಲ್ಲಿ ತಾಯಿ ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆದುಕೊಂಡರು.

ADVERTISEMENT

ನಾಗಲೋಟಿಮಠರು ಎಂ.ಬಿ.ಬಿ.ಎಸ್‌ ತೃತೀಯ ವರ್ಷದಲ್ಲಿದ್ದಾಗ ತಾಯಿ ಕ್ಯಾನ್ಸರ್ ರೋಗ ಪೀಡಿತರಾದರು. ಗೆಳೆಯ ಕಂಬಳ್ಯಾಳ ಅವರಿಂದ ಹಣ ಪಡೆದು ತಾಯಿಯನ್ನು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಿಕಿತ್ಸೆ ಶುರುವಾಯಿತು.

ನಾಗಲೋಟಿಮಠರು ಫುಟ್‌ಪಾತ್‌ ಪಾಲಾದರು. ಬ್ರೆಡ್ಡು ತಿಂದು ಬೀದಿಯಲ್ಲಿ ನೀರು ಕುಡಿದು ದಿನ ನೂಕಿದರು. ಬೇನೆ ಗುಣವಾಗುವುದಿಲ್ಲವೆಂದು ವೈದ್ಯರು ಹೇಳಿದರು. ಊರಿಗೆ ಬಂದು ತಾಯಿ, ತಂಗಿಯನ್ನು ಗೆಳೆಯ ಸಿದ್ಧಣ್ಣನ ಸುಪರ್ದಿಯಲ್ಲಿ ಬಿಟ್ಟು ಮತ್ತೆ ಹುಬ್ಬಳ್ಳಿಗೆ ಬಂದರು. ಮರು ತಿಂಗಳೇ ತಾಯಿ ತೀರಿ ಹೋದರೆಂಬ ಟೆಲಿಗ್ರಾಮ್ ಬಂದಿತು.

ಬನಹಟ್ಟಿಗೆ ಬಂದು ತಾಯಿಯನ್ನು ಮಣ್ಣು ಮಾಡಿದರು. ಮನೆಗೆ ಕೀಲಿಹಾಕಿ ತಂಗಿಯೊಂದಿಗೆ ಹುಬ್ಬಳ್ಳಿಯೆಡೆಗೆ ನಡೆದರು. ತಂಗಿಯನ್ನು ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿಸಿ ಹಾಸ್ಟೆಲ್‌ನಲ್ಲಿರಿಸಿದರು. ಇನ್ನು ಬದುಕು ನಿರಮ್ಮಳಾಯಿತೆನ್ನುತ್ತಿದ್ದಂತೆಯೇ ತಂಗಿಯ ಪರೀಕ್ಷೆ ಮುಗಿದು ಹಾಸ್ಟೆಲ್ ಖಾಲಿ ಮಾಡಬೇಕಾಗಿ ಬಂದಿತು. ಅವಳನ್ನು ಎಲ್ಲಿರಿಸಬೇಕೆಂಬ ಸಮಸ್ಯೆ ಧುತ್ತೆಂದು ಬಂದು ನಿಂತಿತು.

ಗೆಳೆಯನ ಸೋದರ ಮಾವ ಗಂಗಣ್ಣ ಬುಳಗಣ್ಣವರ ಅವರ ಎದುರು ನಿಂತು ‘ಯಜಮಾನ್ರೇ, ನನ್ನ ತಂಗಿಗೆ ಒಂದು ತಿಂಗಳ ಮಟ್ಟಿಗೆ ನಿಮ್ಮ ಮನೆಯಲ್ಲಿ ಆಶ್ರಯ ನೀಡಿರಿ. ಹಾಸ್ಟೆಲ್ ಶುರು ಆಗಾನ ಕರ್ಕೊಂಡು ಹೋಗ್ತಿನಿ’ ಎಂದು ಕೈ ಮುಗಿದರು. ಗಂಗಣ್ಣ ಒಪ್ಪಿಗೆ ಕೊಟ್ಟರು. ಒಂದೂವರೆ ತಿಂಗಳ ನಂತರ ತಂಗಿ ಮತ್ತೆ ಹಾಸ್ಟೆಲ್ ಸೇರಿದಳು.

ಮುಂದಿನ ವರ್ಷ ಇದೇ ಸಮಸ್ಯೆ ಎದುರಾಯಿತು. ‘ಈ ಸಲ ಬುಳಗಣ್ಣವರರಿಗೆ ವಜ್ಜಿ ಮಾಡೂದು ಬ್ಯಾಡ’ ಎಂದಂದುಕೊಂಡು ನಾಗಲೋಟಿಮಠರು ಕುಬಸದ ಗುರುಸಿದ್ಧಪ್ಪನವರ ಬಳಿ ಹೋಗಿ ವಿನಂತಿಸಿಕೊಂಡರು.

ಈ ಎರಡೂ ಮನೆಗಳಲ್ಲಿ ತಂಗಿಯನ್ನಿರಿಸುವ ಮುಂಚೆ ಅಣ್ಣ ತಂಗಿಗೆ ಎರಡು ಮಾತು ಹೇಳಿದರು. ‘ತಂಗೀ ಶಾರದಾ, ನೀ ಇರೂ ಮನ್ಯಾನವರು ಹುಡುಗಿ ಎಷ್ಟ ಉಣತೈತ್ಲಾ ಅಂತ ಅಂದಾರು, ಹುಡುಗಿ ಬರೆ ಖ್ಯಾಲಿ ಕುಂಡ್ರತೈತಲಾ ಅಂತ ಅಂದಾರು’. ಅಣ್ಣನ ಆಶಯದಂತೆ ತಂಗಿ ಆ ಎರಡೂ ಮನೆಗಳಲ್ಲಿ ಅರೆಹೊಟ್ಟು ಉಂಡು, ಮೈತುಂಬ ಕೆಲಸ ಮಾಡಿ ಅಣ್ಣನಿಗೆ ಹೂವು ತಂದಳೇ ಹೊರತು, ಹುಲ್ಲು ತರಲಿಲ್ಲ.
–ಜಯವಂತ ಕಾಡದೇವರ, ಬನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.