ADVERTISEMENT

ಅವಳೂ ಕವಿತೆ ಬರೆಯುತ್ತಿದ್ದಾಳಂತೆ..!

ದೀಪಾವಳಿ ವಿಶೇಷಾಂಕ, ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ

ಗಿರೀಶ ಚಂದ್ರಕಾಂತ ಜಕಾಪುರೆ
Published 23 ನವೆಂಬರ್ 2013, 19:30 IST
Last Updated 23 ನವೆಂಬರ್ 2013, 19:30 IST

ಅಯ್ಯೋ..
ಛೇ.. ಅವಳೂ ಕವಿತೆ ಬರೆಯುತ್ತಿದ್ದಾಳಂತೆ..!
ಪಾಪ ಆ ಮುದ್ದುಮುದ್ದಾದ ಹುಡುಗಿಗೆ
ಈ ಸ್ಥಿತಿ ಬರಬಾರದಾಗಿತ್ತು!
ಅವಳ ಮಿಂಚುಳ್ಳ ಕಣ್ಣುಗಳು ಕಾಣಬೇಕಾದ
ಕನಸುಗಳು ಇನ್ನೂ ಬಹಳಿತ್ತು!


ಅವಳ ಅಪ್ಪ ಅಮ್ಮ ಅವಳ ಮುಂದೆಯೇ
ಜಗಳಕ್ಕಿಳಿದು ಬೈದಾಡಿಕೊಂಡಿರಬೇಕು
ಅಪ್ಪನ ಗೆಳತಿ.. ಅಮ್ಮನ ಗೆಳೆಯ.. ಇನ್ನೂ
ಏನೇನೋ ವಿಷಯಗಳು ಇದ್ದಿರಬೇಕು
ಒಳಗೊಳಗೆ ನೊಂದು ಬೇಯುತ್ತಿದ್ದಾಳಂತೆ
ಅವಳೂ ಕವಿತೆ ಬರೆಯುತ್ತಿದ್ದಾಳಂತೆ


ಅವಳ ಪ್ರೀತಿಯ ಹುಡುಗ ನಂಬಿಸಿ
ಮೋಸಮಾಡಿ ಕೈಕೊಟ್ಟು ಹೋಗಿರಬೇಕು
ಒಲ್ಲದ ಹುಡುಗನಿಗೆ ಕತ್ತು ಕೊಟ್ಟು
ತಾಳಿ ಕಟ್ಟಿಸಿಕೊಂಡು ತಾಳುತ್ತ ತೆಪ್ಪಗಿರಬೇಕು
ಅತ್ತು ಸಾಕಾಗಿ ಕುಳಿತು ಬರೆಯುತ್ತಿದ್ದಾಳಂತೆ
ಅವಳೂ ಕವಿತೆ ಬರೆಯುತ್ತಿದ್ದಾಳಂತೆ..!

ADVERTISEMENT


ಅವಳ ಅತ್ತೆ ಮಾವರಿಗೆ ಬೈಗುಳಗಳೆಂದರೆ
ಹೀಗೆ ಸುಮ್ಮನೆ.. ಸಹಜ, ನೈಸರ್ಗಿಕ.. ಅಷ್ಟೇ!
ಗಂಡನಿಗಾಗಿ ಅವಳೊಂದು ಸುಖವಸ್ತು
ಹಗಲು ಹೊಟ್ಟೆಗಾಗಿ, ರಾತ್ರಿ ರಸಕ್ಕಾಗಿ ಅಷ್ಟೇ!
ಅವನು ಸುಖಿಸುವಾಗ ಅವಳು ಸಹಿಸಿದ್ದಳು
ಅವಳು ದುಃಖಿವಾಗ ಆತ ಮಲಗಿದ್ದನಂತೆ
ಈಗ.. ಅವಳೂ ಕವಿತೆ ಬರೆಯುತ್ತಿದ್ದಾಳಂತೆ..!


ಕೋಣೆಯಲ್ಲಿ ಬಂದಿಯಾಗಿ ಕುಳಿತು
ತಾಸುಗಟ್ಟಲೆ ಕಿಟಕಿಯಿಂದ ಹಕ್ಕಿಗಳ ನೋಡಿದ್ದಾಳೆ
ಮುಕ್ತ ಹಾರುವ ಚಿಟ್ಟೆಗಳ ಮೈಬಣ್ಣ ಕಂಡು
ಮುಟ್ಟುವ ಬಯಕೆಯಿಂದ ಕೈಚಾಚಿದ್ದಾಳೆ
ತಾನೂ ಪಾತರಗಿತ್ತಿಯಾಗಿದ್ದರೆ ನುಸುಳಬಹುದಿತ್ತು
ಈ ಕಂಬಿಗಳಿಂದ ಎಂದುಕೊಳ್ಳುತ್ತಾಳಂತೆ
ಅವಳೂ ಕವಿತೆ ಬರೆಯುತ್ತಿದ್ದಾಳಂತೆ..!


ಮಳೆಯಲ್ಲಿ ಒಬ್ಬಳೇ ನಿಂತು ಮಾಳಿಗೆನಳಿಕೆಯ
ಜಲಪಾತದಗ್ನಿ ಮೃದು ಅಂಗೈಲಿ ತಡೆದಿದ್ದಾಳೆ
ಹಗಲು ಕಂಡ ಇಂದ್ರಧನುಷ್ಯಕ್ಕೆ ರಾತ್ರಿ ದಹಿಸುವ
ಚುಕ್ಕೆಗಳನು ಬೆರೆಸುತ್ತಾಳೆ.. ಕಾಗದಕ್ಕಿಳಿಸುತ್ತಾಳೆ.. 
ಅನೌಷಧ ಕಾವ್ಯರೋಗಕ್ಕೆ ಬಲಿಯಾಗಿದ್ದಾಳಂತೆ
ಅವಳೂ ಕವಿತೆ ಬರೆಯುತ್ತಿದ್ದಾಳಂತೆ..!

ದೇವರೇ..
ಅವಳಿನ್ನು ತಳಮಳಿಸಿ ತಲ್ಲಣಿಸಿ ಉದ್ವಿಗ್ನಗೊಂಡು
ಸರಿರಾತ್ರಿ ಎದ್ದು ಕುಳಿತುಕೊಳ್ಳದಿದ್ದರೆ ಸಾಕು
ಇನ್ನು ಮುಂದೆ ಅವಳಿಗೆ ಮತ್ತೆ ಕವಿತೆ ಬರೆಯುವ
ಸ್ಥಿತಿ ಬರದಿದ್ದರೆ ಸಾಕು.. ನೋವುಗಳಿರದಿದ್ದರೆ ಸಾಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.