ADVERTISEMENT

ಆಲ್ಬಮ್‌ನೊಳಗಿನ ಜನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 19:30 IST
Last Updated 31 ಡಿಸೆಂಬರ್ 2016, 19:30 IST

-ಕಾವ್ಯಾ ಕಡಮೆ ನಾಗರಕಟ್ಟೆ

*
ನಮ್ಮ ಹೊರಕೋಣೆಯಲ್ಲಿರುವ ಕಪಾಟಿನಲ್ಲಿ ಪುಸ್ತಕಗಳ ಜೊತೆ ನಾನು ಹಳೆಯ ಆಲ್ಬಮ್ ಒಂದನ್ನು ಪೇರಿಸಿಟ್ಟಿದ್ದೇನೆ. ಆ ನೀಲಿ ಅಲ್ಬಮ್‌ನ ಫೋಟೋಗಳೊಳಗೆ ಹುದುಗಿರುವ ನೂರಾರು ಜನ ರಾತ್ರಿ ದೀಪವಾರುತ್ತಲೇ ಎದ್ದು ಬರುತ್ತಾರೆ.

ಕತ್ತಲಾಗುವವರೆಗೆ ತೆಪ್ಪಗೆ ತಮ್ಮ ಪಾಡಿಗೆ ತಾವು ಸ್ವಸ್ಥಾನಗಳಲ್ಲಿ ಕುಳಿತೋ ನಿಂತೋ ಒರಗಿಯೋ ‘ಚೀಸ್’ ಎಂದು ಹಲ್ಲು ತೆರೆದೋ ಉಸಿರುಗಟ್ಟಿದಂತೆ ನಿಂತಿರುವ ಇವರು, ಬೆಳಕು ನಂದಿದ ಕ್ಷಣವೇ ಅಲ್ಬಮ್‌ನಿಂದ ಹೊರಗಿಳಿದು, ಸುತ್ತಲೂ ಕಣ್ಣರಳಿಸುತ್ತ ಹೊಸ ಲೋಕದ ದರ್ಶನ ಪಡೆದಂತೆ ಸದ್ದೇ ಮಾಡದೇ ಸಂಭ್ರಮಿಸುತ್ತಾರೆ.
ಕಾಲೆಳೆಯುತ್ತ ನಡೆವ ದೂರದೂರಿನ ಚಿಕ್ಕಮ್ಮ, ತಿಳಿ ಗುಲಾಬಿ ಅಂಗಿಯ ಪಕ್ಕದ ಮನೆಯ ಪುಟ್ಟಿ, ಎಂದೋ ಬಸ್ಸಿನಲ್ಲಿ ಪರಿಚಯವಾದ ಕೆಂಪು ಟೀಶರ್ಟಿನ ವಿದೇಶಿ ಪ್ರವಾಸಿಗ, ಹರೆಯದಲ್ಲಿ ಕಣ್ಣು ಕೂಡಿಸಿದ ಮಾವನ ಮಗನ ಉತ್ಸಾಹಿ ದೋಸ್ತ, ತುಸು ಹೆಚ್ಚೇ ತುಟಿಗೆ ಬಣ್ಣ ಹಚ್ಚುವ ಅವನ ತಂಗಿ... ಎಲ್ಲರೂ ಇದ್ದಾರೆ ಈಗ ಈ ಹೊರಕೋಣೆಯೊಳಗೆ. ಎಲ್ಲ ಬಿಂಕವ ಕಳಚಿ ತಮ್ಮ ಪಾಡಿಗೆ ತಾವು ಚನ್ನೆಮಣೆಯಾಡುತ್ತಲೋ, ಅಡುಗೆಯಾಟ ಆಡುತ್ತಲೋ, ಟೀವಿಯ ಪರದೆಯ ಮೇಲೆ ಕಾಣಿಸಿದ ತಮ್ಮ ಪ್ರತಿಬಿಂಬ ಕಾಣುತ್ತಲೋ, ಪತ್ರಿಕೆಯ ಕಡೆಯ ಪುಟದಲ್ಲಿರುವ ಸುಡೊಕು ಬಿಡಿಸುತ್ತಲೋ ತಮ್ಮನ್ನು ತಾವು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆ ನಡುವೆಯೇ ಇನ್ನೇನು ಬೆಳಕು ಹರಿದು ಮನೆಯ ಜನರೆಲ್ಲ ಏಳುವ ಮುನ್ನವೇ ಪುನಃ ಆಲ್ಬಮ್‌ನೊಳಗೆ ತೆರೆಳಬೇಕೆಂದು ಒಬ್ಬರಿಗೊಬ್ಬರು ಕಣ್ಸನ್ನೆಯಲ್ಲಿಯೇ ಎಚ್ಚರಿಸಿಕೊಳ್ಳುತ್ತಿದ್ದಾರೆ.

ನಿನ್ನೆ ಮಧ್ಯರಾತ್ರಿ ಬಾತ್‌ರೂಮಿಗೆ ಹೋಗಲೆಂದು ಎದ್ದವಳು ಅದೇಕೋ ತಪ್ಪಿ ಹೊರಕೋಣೆಯಲ್ಲಿ ಇಣುಕಿ ನೋಡಿದೆ. ತಮ್ಮ ಅಮೂಲ್ಯ ಗುಟ್ಟೊಂದು ಅಕಾರಣವಾಗಿ ಒಡೆದುಹೋಯಿತೆಂಬ ಪಶ್ಚಾತಾಪದಿಂದ ಅವರೆಲ್ಲ ಮಾಡುತ್ತಿರುವ ಕೆಲಸ ಬಿಟ್ಟು ನನ್ನೆಡೆ ತಪ್ಪಿತಸ್ಥರಂತೆ ಕಣ್ಣು ಹಾಯಿಸಿದರು. ಅದನ್ನು ನಾನು ಸರೀ ರಾತ್ರಿಯಲ್ಲಿ ಕಂಡ ಕನಸೆಂದು ತಿಳಿಯಲಿ ಎಂದು ಅವರು ತಮ್ಮ ಲೋಕದ ದೇವರಿಗೆ ಮೊರೆಯಿಡುತ್ತಿರುವ ಹಾಗೆ ಅವರ ನಿಷ್ಪಾಪಿ ಕಣ್ಣುಗಳನ್ನು ಕಂಡ ನನಗೆ ಭಾಸವಾಯಿತು.
ಆಗಲೇ ಬಂದದ್ದು ನನಗೆ ಆ ಕಿಲಾಡಿ ಯೋಚನೆ. ಮೆಲ್ಲಗೆ ಹೋಗಿ ಅವರು ಹೊರಬಂದಿದ್ದ ಆ ನೀಲಿ ಆಲ್ಬಮ್‌ ಅನ್ನು ಕೈಯಲ್ಲಿ ತೆಗೆದುಕೊಂಡೆ. ಖಾಲಿ ಹಾಳೆಗಳಂತಿದ್ದ ಆಲ್ಬಮ್‌ನ ಪುಟಗಳ ಮೇಲೆಲ್ಲ ಪದ್ಯ ಬರೆದೆ, ಚಿತ್ರ ಬಿಡಿಸಿದೆ. ಮತ್ತದನ್ನು ಯಾರಿಗೂ ಕಾಣದ ಹಾಗೆ ನನ್ನ ಮಲಗುವ ಕೋಣೆಯ ಮಂಚದಡಿ ಬಚ್ಚಿಟ್ಟುಬಿಟ್ಟೆ.
ನಸುಕಿನಲ್ಲಿ ಕಿಟಕಿಯ ಪರದೆ ಸರಿಸಿ ನೋಡಿದಾಗ ಅವರೆಲ್ಲ ತೆರಳಲು ಮನೆಯಿಲ್ಲದೇ, ನಮ್ಮ ಹೊರಕೋಣೆಯಲ್ಲೂ ಹೆಚ್ಚು ಹೊತ್ತು ನಿಲ್ಲಲಾಗದೇ ಬೀದಿಯಲ್ಲಿ ಸಾಲಾಗಿ ನಡೆಯುವುದನ್ನು ಕಂಡೆ.

ಅವರನ್ನು ನೀವೂ ಭೇಟಿಯಾಗಿರಬಹುದು. ಇಂದು ಬೆಳಿಗ್ಗೆ ಬಸ್ಸಿನಲ್ಲಿ, ರಸ್ತೆಯ ಮೇಲೆ, ಸಂತೆಯಲ್ಲಿ, ಚಹದಂಗಡಿಯಲ್ಲಿ ನಿಮ್ಮನ್ನು ಕಾರಣವೇ ಇಲ್ಲದೇ ದುರುಗುಟ್ಟಿಕೊಂಡು ನೋಡುತ್ತಿದ್ದರಲ್ಲ, ಅವರೆಲ್ಲ ಇವರೇ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.