ADVERTISEMENT

ಆ ಬೆಟ್ಟದಲ್ಲಿ... ದನಕರುಗಳಲ್ಲಿ!

ಸಹನಾ ಕಾಂತಬೈಲು
Published 15 ಏಪ್ರಿಲ್ 2017, 19:30 IST
Last Updated 15 ಏಪ್ರಿಲ್ 2017, 19:30 IST
ಆ ಬೆಟ್ಟದಲ್ಲಿ... ದನಕರುಗಳಲ್ಲಿ!
ಆ ಬೆಟ್ಟದಲ್ಲಿ... ದನಕರುಗಳಲ್ಲಿ!   

ಇತ್ತೀಚಿನ ನನ್ನ ಅಮೆರಿಕ ಪ್ರವಾಸದಲ್ಲಿ ವಾರಾಂತ್ಯದಲ್ಲೊಮ್ಮೆ ಹಾಲಿವುಡ್ ಮತ್ತು ಯುನಿವರ್ಸಲ್ ಸ್ಟುಡಿಯೋಗೆ ಹೋಗಿದ್ದೆವು. ಪ್ರಯಾಣದುದ್ದಕ್ಕೂ ಹಾಲಿವುಡ್‌ಗಿಂತಲೂ ನನ್ನನ್ನು ಹೆಚ್ಚು ಸೆಳೆದದ್ದು – ಮಾರ್ಗದ ಇಕ್ಕೆಲಗಳಲ್ಲಿ ಚಿನ್ನದ ಬಣ್ಣದಿಂದ ಹೊಳೆವ ಗುಡ್ಡದಲ್ಲಿ ಸ್ವಚ್ಛಂದವಾಗಿ ಮೇಯುತ್ತಿರುವ ಹಸುಕರುಗಳು. ನನಗೆ ಅಂತಹ ಒಂದು ಬೆಟ್ಟ ಹತ್ತಿ ಹಸುಗಳನ್ನು ಹತ್ತಿರದಿಂದ ನೋಡುವ ಬಯಕೆ ತೀವ್ರವಾಗಿ ಕಾಡಿತು. ನನ್ನ ಆಸೆಯನ್ನು ತಂಗಿಗೆ ಹೇಳಿದೆ. ‘ಅದಕ್ಕೇನಂತೆ? ಮುಂದಿನ ಶನಿವಾರ ಮಿಶನ್ ಪೀಕ್‌ಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ದನಗಳು ಮೇಯುತ್ತಿರುತ್ತವೆ’ ಎಂದಳು.

ಅದು ಬೇಸಿಗೆಯ ಕೊನೆ. ಚಳಿಗಾಲದ ಆರಂಭದ ಸಮಯವಾದರೂ ಹಗಲಿನಲ್ಲೂ ವಿಪರೀತ ಚಳಿ ಇತ್ತು. ನಾವು ಸ್ವೆಟರ್, ಜರ್ಕಿನ್, ಟೋಪಿ, ಮಫ್ಲರ್ ಧರಿಸಿ ಹೊರಟೆವು. ಮಕ್ಕಳು ಎರಡೆರಡು ಸ್ವೆಟರ್ ಹಾಕಿಕೊಂಡಿದ್ದರೂ ‘ಚಳಿ, ಚಳಿ’ ಎನ್ನುತ್ತಿದ್ದರು. ಬೆಟ್ಟಗುಡ್ಡಗಳಿಂದ ಆವೃತವಾದ ಕೊಡಗಿನಲ್ಲಿ ವಾಸ ಮಾಡುವ ನನಗೆ ಚಾರಣವೆಂದರೆ ನೀರು ಕುಡಿದಷ್ಟೇ ಸಲೀಸು. ಎಲ್ಲರೂ ಹೈಕಿಂಗ್ ಶೂ ಧರಿಸಿದರೆ ನಾನು ಮಾತ್ರ ಚಪ್ಪಲಿ ಹಾಕಿದ್ದೆ. ನನ್ನ ಹತ್ತಿರ ಶೂ ಇರಲಿಲ್ಲ, ಅದರ ಅಗತ್ಯವೂ ಕಾಣಲಿಲ್ಲ.

ಸಣ್ಣ, ದೊಡ್ಡ ಮರಳಿನ ರಾಶಿಯನ್ನು ಹತ್ತಿರ ಹತ್ತಿರ ಜೋಡಿಸಿದಂತೆ ಕಾಣುವ ಬೆಟ್ಟಗಳ ಸಮೂಹವೇ ‘ಮಿಶನ್ ಪೀಕ್’. ಈ ಬೆಟ್ಟ ಸಾಲು ಸ್ಯಾನ್‌ಫ್ರಾನ್ಸಿಸ್ಕೋದ ಫ್ರೀಮಾಂಟ್ ಊರಿನಲ್ಲಿದೆ. ಇವು ಸಣ್ಣ ಸಣ್ಣ ಹರಳುಗಲ್ಲುಗಳಿಂದ ಆವೃತವಾಗಿದ್ದು – ಇಲ್ಲಿ ಗಿಡಮರಗಳ ಸಂಖ್ಯೆ ಕಡಿಮೆ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ‘ಮಿಶನ್ ಪೀಕ್’ ಸಾರ್ವಜನಿಕರಿಗೆ ತೆರೆದಿರುತ್ತದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ADVERTISEMENT

ಆಗಷ್ಟೇ ಬೇಸಿಗೆ ಮುಗಿದಿತ್ತು. ಒತ್ತೊತ್ತಾಗಿ ಬೆಳೆದ ಹುಲ್ಲು ಒಣಗಿ ಹಳದಿ ಬಣ್ಣಕ್ಕೆ ತಿರುಗಿ ಇಡೀ ಬೆಟ್ಟವನ್ನು ಚಿನ್ನದಿಂದ ಹೊದೆಸಿದಂತೆ ಕಾಣುತ್ತಿತ್ತು. ‘ಓಹ್! ಅದ್ಭುತ’ ನಾನು ಉದ್ಘರಿಸಿದೆ.

‘ಡಿಸೆಂಬರ್‌ನಿಂದ ಜುಲೈವರೆಗೆ ಹುಲ್ಲು ಚಿಗುರಿ ಹಸಿರು ಮಕಮಲ್ ಹಾಸಿದಂತೆ ಕಾಣುತ್ತದೆ. ಅದು ಒಂದು ರೀತಿ ಚಂದ. ಇದು ಇನ್ನೊಂದು ರೀತಿ ಚಂದ’ ಎಂದು ತಂಗಿ ಹೇಳಿದಳು. ಬೆಟ್ಟದ ತುದಿಯವರೆಗೆ ಮಣ್ಣಿನ ಮಾರ್ಗ ಮಾಡಿದ್ದರು. ಇಲ್ಲಿನ ಹಾಗೆ ಅಲ್ಲಿ ಗುಡ್ಡದ ಮೇಲೆ ಅಲ್ಲಲ್ಲಿ ಓಡಾಡುವಂತಿಲ್ಲ. ಬೇಕೆಂದ ಹಾಗೆ ಹತ್ತುವಂತಿಲ್ಲ. ನಿಗದಿತ ಮಾರ್ಗದಲ್ಲೇ ಸಾಗಬೇಕು. ಬೆಟ್ಟದಲ್ಲಿನ ಜೀವಜಾಲಕ್ಕೆ, ಸಸ್ಯವರ್ಗಕ್ಕೆ ತೊಂದರೆಯಾಗಬಾರದೆಂದು ಈ ನಿರ್ಬಂಧ. ಆದರೆ ಗುಡ್ಡ ಹತ್ತಲು ಯಾರ ಅನುಮತಿಯನ್ನೂ ಪಡೆಯಬೇಕಿಲ್ಲ. ತಿಂಡಿ ತಿನಿಸು ಒಯ್ಯಲೂ ಅವಕಾಶ ಇದೆ.

ನಾವು ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಪ್ರವಾಸಿಗರಿಗೆ ಕಲ್ಪಿಸಿದ ಕಾಲುಹಾದಿಯಲ್ಲಿ ಚಾರಣ ಆರಂಭಿಸಿದೆವು. ನಾನು ಚಪ್ಪಲಿಯಲ್ಲೇ ಸರಾಗವಾಗಿ ಬೆಟ್ಟ ಹತ್ತುವುದನ್ನು ನೋಡಿದ ಒಬ್ಬ ಸುಂದರ ಅಮೆರಿಕನ್ ಯುವಕ ನನ್ನ ಕಿವಿ ಬಳಿ ಬಂದು – ‘ಐ ಇಮ್‌ಪ್ರೆಸ್ಡ್, ಯೂ ಆರ್ ಇನ್ ಸ್ಯಾಂಡಲ್’ ಎಂದು ಪಿಸುಗುಟ್ಟಿದ. ನಾನು ನಕ್ಕೆ. ಏನೂ ಹೇಳಲಿಲ್ಲ.

ಬೆಟ್ಟದುದ್ದಕ್ಕೂ ಕಪ್ಪು ಬಣ್ಣದ ದೈತ್ಯ ದನಗಳು ಓಡಾಡಿಕೊಂಡಿದ್ದವು. ಅವುಗಳ ಮೈಮೇಲೆ ದಟ್ಟವಾಗಿ ಬೆಳೆದ ಉದ್ದುದ್ದ ಕೂದಲು. ಅವುಗಳನ್ನು ಆರ್ಗ್ಯಾನಿಕ್ ವಿಧಾನದಲ್ಲಿ ಮಾಂಸಕ್ಕಾಗಿ ಸಾಕುತ್ತಾರಂತೆ. ಎಲ್ಲದಕ್ಕೂ ಕಿವಿಯಲ್ಲಿ ತೂತು ಕೊರೆದು ತಗಡಿನ ಗುರುತು ಹಾಕಿದ್ದರು. ಈಗ ನಾನು ಹಸುಗಳ ಗುಂಪು ಇರುವಲ್ಲಿ ಹತ್ತಲಾರಂಭಿಸಿದೆ. ಅಲ್ಲಿ ಒಂದು ಪುಟ್ಟ ಕರು ಅದರ ಪಾಡಿಗೆ ಅದು ಮೇಯುತ್ತಿತ್ತು. ಸಮೀಪ ಹೋಗಿ ಮೈದಡವಿದೆ. ಎಲ್ಲಿತ್ತೋ ಒಂದು ಬೃಹದಾಕಾರದ ಹಸು ಓಡೋಡಿ ಬಂದು, ನನ್ನನ್ನು ತಿಂದು ಬಿಡುವಂತೆ ನೋಡಿತು. ನಾನು ಹೆದರಿ ‘ಬದುಕಿದರೆ ಬೇಡಿ ತಿನ್ನುವೆ’ ಎಂದು ಒಂದೇ ಓಟಕ್ಕೆ ತಂಡದವರನ್ನು ಸೇರಿದೆ. ಮತ್ತೆ ನಾನು ಹಾದಿ ಬಿಟ್ಟು ಚಲಿಸಲಿಲ್ಲ. ಅಲ್ಲಲ್ಲಿ ಟರ್ಕಿ ಕೋಳಿಗಳು ಕಣ್ಣಿಗೆ ಬಿದ್ದವು.

ಬೆಟ್ಟದ ಮಧ್ಯಭಾಗದಲ್ಲಿ ಬೆಂಚುಗಳನ್ನು ಇಟ್ಟಿದ್ದರು. ನಾಯಿಗೆ ನೀರು ಕುಡಿಸಲು ಬಟ್ಟಲೂ ಇತ್ತು. ನಾವು ಅಲ್ಲಿ ಕುಳಿತು ತಂದ ತಿಂಡಿಗಳನ್ನು ತಿಂದೆವು. ಬೆಟ್ಟದ ಮೇಲೂ ಕಸ ಬಿಸಾಡುವಂತಿಲ್ಲ. ಅದಕ್ಕಾಗಿ ಅಲ್ಲಲ್ಲಿ ಟ್ರಾಶ್ ಬಾಕ್ಸ್‌ಗಳನ್ನು ಇಟ್ಟಿದ್ದರು. ಸ್ವಲ್ಪ ಹೊತ್ತು ಅಲ್ಲೇ ಕುಳಿತು ದಣಿವಾರಿಸಿಕೊಂಡು ಮತ್ತೆ ಬೆಟ್ಟವೇರಲು ಶುರುಮಾಡಿದೆವು. ಈಗಂತೂ ಅಸಾಧ್ಯ ಚಳಿ. ಅದನ್ನು ಲೆಕ್ಕಿಸದೆ ವೇಗವಾಗಿ ಏರಿ ತುತ್ತತುದಿ ತಲಪಿದೆವು. ಅಲ್ಲಿ ನಮ್ಮನ್ನು ಎತ್ತಿಕೊಂಡು ಹೋಗುವಷ್ಟು ರಭಸದಿಂದ ಗಾಳಿ ಬೀಸುತ್ತಿತ್ತು. ನಾವು ಕುಳಿರ್ಗಾಳಿಗೆ ಗಡಗಡ ನಡುಗುತ್ತಲೇ ಸುತ್ತಲೂ ಕಣ್ಣು ಹಾಯಿಸಿದೆವು. ದೂರದಲ್ಲಿ ಬೆಟ್ಟಗಳ ಸಾಲು, ಫೆಸಿಫಿಕ್ ಸಾಗರ, ಸ್ಯಾನ್‌ಫ್ರಾನ್ಸಿಸ್ಕೋ ಪೇಟೆಯ ರಮಣೀಯ ದೃಶ್ಯ ಕಾಣಿಸುತ್ತಿತ್ತು. ಮೇಲೆ ಕಡು ನೀಲಿ ಆಗಸ.

ಆಗಲೇ ಗಂಟೆ ಐದು ಕಳೆದಿತ್ತು. ಹಸುಗಳು ‘ಗೂಂ, ಗೂಂ’ (ಇಲ್ಲಿ ಕೂಗುವಂತೆ ಅಂಬಾ ಎಂದು ಅಲ್ಲ) ಎಂದು ಶಂಖನಾದ ಮಾಡುವಂತೆ ಕೂಗತೊಡಗಿದವು. ಒಂದು ಹೋರಿಯ ಹಿಂದೆ ನಾಲ್ಕೈದು ಹಸುಕರುಗಳಂತೆ ಗುಂಪು ಮಾಡಿಕೊಂಡು ಬೆಟ್ಟದಿಂದ ಸಾಲಾಗಿ ಶಿಸ್ತಿನಿಂದ ಇಳಿಯತೊಡಗಿದವು. ಮಕ್ಕಳು ‘ನಾವೂ ಇಳಿಯೋಣ’ ಎನ್ನಲು ಶುರುಮಾಡಿದರು. ನಾವು ಇಳಿಯುವಾಗ ಕೆಲವರು ಬೆನ್ನಿನಲ್ಲಿ ಭಾರವಾದ ಚೀಲ ಹೊತ್ತು ಹತ್ತುತ್ತಿದ್ದರು. ಅವರು ಬೆಟ್ಟದ ತುದಿಗೆ ಹೋಗಿ ಗ್ಲೈಡಿಂಗ್ ಮಾಡುವವರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.