ADVERTISEMENT

ಏಕ್ತಾ... ಯೇಗ್ದಾಗೆಲ್ಲಾ ಐತೆ!

ಥಳುಕು ಬಳುಕು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2013, 19:59 IST
Last Updated 27 ಏಪ್ರಿಲ್ 2013, 19:59 IST

ಣೆ ಮೇಲೆ ಅಗಲ ಕುಂಕುಮ. ಅಷ್ಟೂ ಹಲ್ಲುಗಳನ್ನು ಕಾಣಿಸುವಂಥ ನಗು. ಕ್ಷಣ ಚಿತ್ತ ಕ್ಷಣ ಪಿತ್ಥ ಎಂಬಂಥ ವರ್ತನೆ. ಮದುವೆಯ ವಿಷಯ ಪ್ರಸ್ತಾಪ ಮಾಡುವವರಿಗೆ ಮಾತಿನ ಹೊಡೆತ. ಹೀಗೆಯೇ ಪಟ್ಟಿ ಮಾಡುತ್ತಾ ಹೋದರೆ ಏಕ್ತಾ ಕಪೂರ್ ವ್ಯಕ್ತಿಚಿತ್ರದ ಒಂದಿಷ್ಟು ಭಾಗ ಸಿಕ್ಕೀತು.

ಭಾರತದ ಚಾನೆಲ್ ಲೋಕದಲ್ಲಿ ಮಹಿಳೆಯರು ಧಾರಾವಾಹಿಯ ವ್ಯಸನಕ್ಕೆ ಬೀಳುವಂತೆ ಮಾಡಿದ ಖ್ಯಾತಿ ಅಥವಾ ಕುಖ್ಯಾತಿ ಏಕ್ತಾ ಕಪೂರ್‌ಗೆ ಸಲ್ಲಬೇಕು.ಎರಡು ದಶಕ ವಾಹಿನಿಗಳಲ್ಲಿ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳನ್ನು ತೇಲಿಬಿಟ್ಟ ಅವರನ್ನು `ಸೀರಿಯಲ್ ಕ್ವೀನ್' ಎಂದು ಕೆಲವರು ಹೊಗಳಿದರೆ, `ಸೀರಿಯಲ್ ಕಿಲ್ಲರ್' ಎಂದು ಕೆಲವರು ಟೀಕಿಸುವುದೂ ಇದೆ. ವಹಿವಾಟಿನ ಮರ್ಮ ಅರಿತು, ಮಹಿಳೆಯರು ಕದಲದಂತೆ ಕುಳಿತು ನೋಡುವಂಥ ಧಾರಾವಾಹಿಗಳನ್ನು ವರ್ಷಗಟ್ಟಲೆ ಕೊಟ್ಟ ಲೆಕ್ಕಾಚಾರಸ್ಥೆ ಏಕ್ತಾ, ಅವರೀಗ ಸಿನಿಮಾ ರಂಗದಲ್ಲಿ ಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದಾರೆ.

ವರ್ಷಗಟ್ಟಲೆ ಧಾರಾವಾಹಿ ಲೋಕದಲ್ಲೇ ಮುಳುಗಿದ್ದ ನೀವು ಸಿನಿಮಾರಂಗದಲ್ಲಿ ಹಣ ಹೂಡಲು ಮನಸ್ಸು ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಏಕ್ತಾ ಕೊಡುವ ಉತ್ತರ ಹೀಗಿದೆ: `ಧಾರಾವಾಹಿಯಲ್ಲಿ ಹೆಚ್ಚೆಂದರೆ ಹತ್ತು ವರ್ಷ ಏಕಸ್ವಾಮ್ಯ ಸಾಧಿಸಬಹುದು. ಮೊದಮೊದಲು ನಾನು ನಿರ್ಮಿಸಿದ ಧಾರಾವಾಹಿಗಳು, ತೇಲಿಬಿಟ್ಟ ಪರಿಕಲ್ಪನೆಗಳು ಒಂದು ಬಗೆಯಲ್ಲಿ ಬೌದ್ಧಿಕ ಸಂಪತ್ತು ಎನಿಸಿಕೊಂಡಿತು. ಆಮೇಲೆ ಹಾಗಾಗಲಿಲ್ಲ. ಏನು ಯೋಚಿಸಿದರೂ ಮತ್ತ್ಯಾರೋ ಅದನ್ನೇ ಯೋಚಿಸಿರುತ್ತಿದ್ದರು. ಹಾಗಾಗಿ ಸ್ಕ್ರೀನ್‌ಪ್ಲೇ ಅವಲಂಬಿಸಿ ಧಾರಾವಾಹಿಗಳನ್ನು ಮಾಡಲು ಪ್ರಾರಂಭಿಸಿದೆ. ಬರಬರುತ್ತಾ ಲಾಭದ ಪ್ರಮಾಣ ಕೂಡ ಕಡಿಮೆಯಾಯಿತು. ಆ ಲೋಕದಲ್ಲಿ ದಶಕಗಟ್ಟಲೆ ನನ್ನ ಹೆಸರು ಚಾಲ್ತಿಯಲ್ಲಿ ಇದ್ದಿದ್ದರಿಂದ ಈಗಲೂ ಧಾರಾವಾಹಿಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ ಅಷ್ಟೆ. ದೊಡ್ಡದಾಗಿ ಯೋಚಿಸುವುದು ನನ್ನ ಜಾಯಮಾನ, ಅದಕ್ಕೇ ಸಿನಿಮಾ ನಿರ್ಮಾಪಕಿಯಾಗಲು ತೀರ್ಮಾನಿಸಿದೆ'.

ಅಪ್ಪ ಜಿತೇಂದ್ರ ಒಂದು ಕಾಲದ ಜನಪ್ರಿಯ ನಟ. ಅಣ್ಣ ತುಷಾರ್ ಕಪೂರ್‌ಗೂ ಚಿತ್ರರಂಗದ ಒಳಸುಳಿವು ಗೊತ್ತು. ಇಂಥ ಹಿನ್ನೆಲೆ ಇದ್ದೂ ಏಕ್ತಾ ಚಿತ್ರ ನಿರ್ಮಾಪಕಿಯಾದ ಹಾದಿ ಸುಲಭವಾಗಿಯೇನೂ ಇರಲಿಲ್ಲ. ಜನಪ್ರಿಯ ನಟರನ್ನು ಮಾತನಾಡಿಸಿ, ಸಿನಿಮಾ ನಿರ್ಮಿಸುವ ಯೋಚನೆ ಮುಂದಿಟ್ಟಾಗಲೆಲ್ಲಾ, `ಒಳ್ಳೆಯದೇ, ಮಾಡಿ' ಎನ್ನುತ್ತಿದ್ದರಷ್ಟೆ; ಕಾಲ್‌ಷೀಟ್ ಕೊಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಧಾರಾವಾಹಿಯಲ್ಲಿ ಸ್ಟಾರ್‌ಗಳನ್ನು ಹುಟ್ಟುಹಾಕಿದ ನಿರ್ಮಾಪಕಿಗೆ ಸಿನಿಮಾ ಸ್ಟಾರ್‌ಗಳಿಂದ ಡೇಟ್ಸ್ ಪಡೆಯುವುದು ಕಷ್ಟ ಎಂಬುದು ಗೊತ್ತಾಯಿತು. ಆಗ ಅವರಿಗೆ ಹೊಳೆದದ್ದೇ ಪರ್ಯಾಯ ಮಾರ್ಗ.

ನಿರ್ದೇಶಕ ಮಿಲನ್ ಲುಥೇರಾ ಹೊಸ ಚಿತ್ರದ ಮೂಲಕ ತಮ್ಮ ಸಾಮರ್ಥ್ಯ ರುಜುವಾತು ಪಡಿಸಲು ನಿರ್ಮಾಪಕರನ್ನು ಹುಡುಕುತ್ತಿದ್ದರು. ಅವರಿಗೆ ನಟ ಅಜಯ್ ದೇವಗನ್ ಬೆಂಬಲ ಇತ್ತು. ಏಕ್ತಾ, ಅಜಯ್ ಒಮ್ಮೆ ಮಾತನಾಡಿದಾಗ ಹೊಸ ಚಿತ್ರದ ಪ್ರಸ್ತಾಪ ತೇಲಿಬಂತು. ಅದರ ಫಲ- ಮಿಲನ್ ನಿರ್ದೇಶಕ, ಏಕ್ತಾ ನಿರ್ಮಾಪಕಿ. ನಾಯಕಿಯ ಜಾಗಕ್ಕೆ ವಿದ್ಯಾ ಬಾಲನ್ ಬಂದರು. `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಹಿಂದಿ ಚಿತ್ರ ಸಿದ್ಧಗೊಂಡಿತು.

ಆ ಚಿತ್ರ ಬಿಡುಗಡೆಯಾಗುವ ಮೊದಲೇ `ದಿ ಡರ್ಟಿ ಪಿಕ್ಚರ್' ಚಿತ್ರದ ಸ್ಕ್ರಿಪ್ಟ್ ಎದುರಲ್ಲಿತ್ತು. ಅದೂ ಏಕ್ತಾಗೆ ತುಂಬಾ ಮೆಚ್ಚಾಗಿತ್ತು. ವಿದ್ಯಾ ಮೊದಮೊದಲು ಆ ಚಿತ್ರದ ಪ್ರಮುಖ ಪಾತ್ರಕ್ಕೆ ಒಪ್ಪಿಕೊಳ್ಳಲಿಲ್ಲ. `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಬಿಡುಗಡೆಗೆ ಕಾಯುವುದಾಗಿ ತೀರ್ಮಾನಿಸಿದರು. ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದೇ ತಡ `ಡರ್ಟಿ ಪಿಕ್ಚರ್'ಗೆ ವಿದ್ಯಾ ಜೈ ಎಂದರು. ಮಹಿಳಾ ಪ್ರಧಾನ ಚಿತ್ರಗಳು ಓಡುವುದಿಲ್ಲ ಎಂಬ ಕಾಲಘಟ್ಟದಲ್ಲಿ ಆ ಸಾಹಸಕ್ಕೆ ಏಕ್ತಾ ಕೈಹಾಕಿದ್ದರು. ಚಿತ್ರದಲ್ಲಿ ಒಂದಿಷ್ಟು ಮಸಾಲೆ, ಸೆಕ್ಸ್ ಅಪೀಲಿಂಗ್ ದೃಶ್ಯಗಳು ಇದ್ದರೆ ಚಿತ್ರ ಓಡುವುದರಲ್ಲಿ ಅನುಮಾನವೇ ಇಲ್ಲ ಎಂಬ ಓಬೀರಾಯನ ಕಾಲದ ಸೂತ್ರ ಅವರಿಗೆ ಗೊತ್ತಿಲ್ಲದೇ ಇರಲಿಲ್ಲ. ಒಂದು ಕಾಲದ ಸಿನಿಮಾ ಕ್ಯಾಬರೆ ಡಾನ್ಸರ್ ಸಿಲ್ಕ್ ಸ್ಮಿತಾ ಬದುಕಿನ ಕಥೆ `ಡರ್ಟಿ ಪಿಕ್ಚರ್'ನಲ್ಲಿದೆ ಎಂದು ಹೇಳಿ ಅವರು ಚಿತ್ರಕ್ಕೆ ಭಾರೀ ಪ್ರಚಾರ ಪಡೆದುಕೊಂಡರು. ಸಿನಿಮಾ ನಿರೀಕ್ಷೆ ಮೀರಿ ಗೆದ್ದಿತು. ವಿಪರೀತ ಲಾಭ ತಂದಿತ್ತಿತು. ವಿದ್ಯಾ ಬಾಲನ್ ಅಭಿನಯಕ್ಕೆ ಸಿಕ್ಕ ಮನ್ನಣೆಯೂ ದೊಡ್ಡದು.

ಏಕ್ತಾ ಚಿತ್ರರಂಗದಲ್ಲಿ ತಾವು ಇಡಬೇಕಾದ ಹೆಜ್ಜೆಗಳನ್ನು ಸ್ಪಷ್ಟಪಡಿಸಿಕೊಂಡರು. ಸ್ಟಾರ್‌ಗಳ ಹಂಗು, ದೊಡ್ಡ ಬಜೆಟ್‌ನ ಗೀಳು ಎರಡೂ ಇಲ್ಲದೆ ಸ್ಕ್ರಿಪ್ಟ್ ನೆಚ್ಚಿಕೊಂಡು, ತಮ್ಮದೇ ಸೂತ್ರಕ್ಕೆ ಲೆಕ್ಕಾಚಾರ ಬೆಸೆದು ಸಿನಿಮಾಗಳನ್ನು ನಿರ್ಮಿಸಲಾರಂಭಿಸಿದರು. `ಲವ್ ಸೆಕ್ಸ್ ಔರ್ ಧೋಖಾ', `ರಾಗಿಣಿ ಎಂಎಂಎಸ್', `ಕ್ಯಾ ಸೂಪರ್ ಕೂಲ್ ಹೈ ಹಮ್' ಚಿತ್ರಗಳು ಬಂದವು. ಹಣಕ್ಕೇನೂ ಮೋಸವಾಗಲಿಲ್ಲ.

ಈಗ ಏಕ್ತಾ ಒಂಬತ್ತು ಹಿಂದಿ ಚಿತ್ರಗಳ ಮೇಲೆ ಬಂಡವಾಳ ತೊಡಗಿಸುವ ಒಪ್ಪಂದಕ್ಕೆ ಒಳಪಟ್ಟು, ಮತ್ತೆ ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. `ಏಕ್ ಥಿ ದಾಯನ್' ಕಳೆದ ವಾರ ತೆರೆಕಂಡಿದೆ. `ಶೂಟೌಟ್ ಅಟ್ ವಾಡಾಲಾ', `ಕುಕು ಮಾಥುರ್ ಕಿ ಝಾಂಡ್ ಹೋ ಗಯೀ', `ಲೂಟೇರಾ', `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ-2', `ರಾಗಿಣಿ ಎಂಎಂಎಸ್ 2', `ಶಾದಿ ಕೆ ಸೈಡ್ ಎಫೆಕ್ಟ್ಸ್', `ಮೈ ತೇರಾ ಹೀರೋ', `ದಿ ವಿಲ್ಲನ್' ವಿಚಿತ್ರ ಹೆಸರುಗಳ ಚಿತ್ರಗಳ ಪಟ್ಟಿ ರೋಚಕವಾಗಿಯೇನೋ ಇದೆ.

ದೈವಭಕ್ತೆಯಾದ ಏಕ್ತಾ ಈಗ ಧ್ಯಾನ ಮಾಡುವುದನ್ನು ದೈನಿಕದ ಭಾಗವಾಗಿಸಿಕೊಂಡು ತಮ್ಮ ಕೋಪದ ಪ್ರಮಾಣವನ್ನು ಶೇಕಡಾ 70ರಷ್ಟು ಇಳಿಸಿಕೊಂಡಿದ್ದಾರಂತೆ. ಲಾಭದ ಪ್ರಮಾಣ ಅದರಿಂದ ಹೆಚ್ಚಾದೀತು ಎಂಬುದು ಅವರ ತಾಯಿಯ ಲೆಕ್ಕಾಚಾರ. ದೈವಭಕ್ತಿಯಲ್ಲೂ ಲೆಕ್ಕಾಚಾರವೇ ಎಂದು ಯಾರೋ ಕಿಚಾಯಿಸಿದ್ದಕ್ಕೆ, ಏಕ್ತಾ ಹಣೆ ಮೇಲಿನ ಅಗಲ ಕುಂಕುಮ ನಕ್ಕಿತಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.