ADVERTISEMENT

ಕಲಾಭಿಮಾನಿಗಳಲ್ಲಿ ವಿನಂತಿ

ಕಥೆ

ಗೋಪಿನಾಥ ರಾವ್
Published 6 ಫೆಬ್ರುವರಿ 2016, 19:30 IST
Last Updated 6 ಫೆಬ್ರುವರಿ 2016, 19:30 IST
ಕಲಾಭಿಮಾನಿಗಳಲ್ಲಿ ವಿನಂತಿ
ಕಲಾಭಿಮಾನಿಗಳಲ್ಲಿ ವಿನಂತಿ   

ಸರಕಾರದ ವಶದಲ್ಲಿದ್ದ ಹೊಯಿಗೆದಿಣ್ಣೆ ನರಸಿಂಹ ದೇವಸ್ಥಾನದ ಉಸ್ತುವಾರಿ ಎಂಡೋಮೆಂಟ್ ಆಫೀಸರ್ ಚಿನ್ನಪ್ಪ ಗೌಡರದ್ದು. ದೇವಸ್ಥಾನದ ಹೆಸರಿನಲ್ಲೊಂದು ಯಕ್ಷಗಾನ ಮೇಳ ಕೂಡ ಇತ್ತು. ಸರಕಾರೀ ಕಾನೂನಿನಂತೆ ವರ್ಷಂಪ್ರತಿ ಮೇಳದ ಏಲಂ ನಡೆದುದನ್ನು ವಿವರವಾಗಿ ದಾಖಲಿಸಿಕೊಳ್ಳಬೇಕಿತ್ತು. ಕನಿಷ್ಠ ಮೂರು ಮಂದಿ ಬಿಡ್ಡುದಾರರು, ಇಬ್ಬರು ವಿಟ್ನೆಸ್ ಹಾಗೂ ಮೇಳದ ಕಲಾವಿದರ ಪರವಾಗಿ ಕಲಾವಿದರೊಬ್ಬರ ಸಹಿ ಹಾಕಿಸಿ ಫೈಲು ಸಿದ್ಧಪಡಿಸಿಡಬೇಕಿತ್ತು.

ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಡುವುದಕ್ಕೂ ಮೊದಲು ಮೇಳದ ಯಜಮಾನಿಕೆ ಜಯರಾಮ ಶೆಟ್ಟಿಯವರ ಕುಟುಂಬದ್ದು. ಮುಜರಾಯಿ ಇಲಾಖೆ ಬಂದ ಮೇಲೂ ಅವರೇ ಮೇಳದ ಯಜಮಾನರು. ಸರಕಾರೀ ದಾಖಲೆಗಾಗಿ ವರ್ಷಂಪ್ರತಿ ಒಂದು ದಿನ ಏಲಮಿನ ನಾಟಕ... ಏಲಂ ಮಾಹಿತಿ ಹಾಗೂ ನಿಬಂಧನೆಗಳನ್ನು ಮಂಗಳೂರಿನಿಂದ ಹೊರಡುವ ಪತ್ರಿಕೆಯಲ್ಲಿ ಪ್ರಕಟಿಸುವುದು, ಬಿಡ್ಡುದಾರರು ಇಡಬೇಕಾದ ಐದು ಸಾವಿರದ ಠೇವಣಿಗೆ ಜಯರಾಮ ಶೆಟ್ಟರೇ ಮೂರೂ ಬಿಡ್ಡುದಾರರ ಪರವಾಗಿ ಹದಿನೈದು ಸಾವಿರ ಕೊಡುವುದು. ಹೋಟೆಲಿನ ಸೀನಿಯರ್ ಸಪ್ಲಾಯರ್ ವಿಠಲ, ಹಿಂದೆ ಕ್ಷೌರಿಕ ವೃತ್ತಿಯಲ್ಲಿದ್ದು ಈಗ ಮಗನಿಗೆ ವಹಿಸಿ ನಿವೃತ್ತರಾಗಿದ್ದ ಮಹಾಬಲ ಹಾಗೂ ಜಯರಾಮ ಶೆಟ್ಟರೇ ಮೂವರು ಬಿಡ್ಡುದಾರರು... ತಿಮ್ಮಣ್ಣ ಅಥವಾ ರಾಜಪ್ಪ ಕಲಾವಿದರ ಪ್ರತಿನಿಧಿ.

ಎಂದಿನಂತೆ ದೇವಸ್ಥಾನದ ಪೂಜೆ ಮುಗಿಸಿ ಹೋಗುವ ವಿಷ್ಣು ಭಟ್ಟರನ್ನು ಕರೆದು ಒಬ್ಬ ವಿಟ್ನೆಸ್ ಅಂತಲೂ, ಸ್ವೀಟ್ – ಖಾರ – ಕಾಫಿ ತಂದ ಸಪ್ಲಾಯರನ ಹೆಸರನ್ನು ಅವನಲ್ಲೇ ಅಲ್ಲೇ ಕೇಳಿ ಬರೆದುಕೊಂಡು ಇನ್ನೊಂದು ವಿಟ್ನೆಸ್ ಎಂದೂ ಸಹಿ ಹಾಕಿಸುವುದು. ಹಾಗೂ ಎಲ್ಲರೂ ಚಹಾ ತಿಂಡಿ ಮುಗಿಸಿ ಸ್ವಲ್ಪ ಲೋಕಾಭಿರಾಮ ಮಾತನಾಡುವುದು, ಕೊನೆಗೆ ಚಿನ್ನಪ್ಪ ಗೌಡರು ಜಯರಾಮ ಶೆಟ್ಟಿಯವರಲ್ಲಿ ಕಾಡಿಬೇಡಿ ಸರ್ವಾಧಿಕ ಬಿಡ್ ಆಗಿ ಹೋದ ವರ್ಷದ ಬಿಡ್ಡಿಗಿಂತ ಮೂರೋ ನಾಲ್ಕೊ ಸಾವಿರ ಹೆಚ್ಚಿಗೆ ಬರೆಸಿ ಸಹಿ ಪಡೆದುಕೊಳ್ಳುವುದು... ಅಲ್ಲಿಗೆ ಮುಗಿಯಿತು ಏಲಂ. ವರ್ಷಗಳಿಂದ ಇದು ಹೀಗೆಯೇ ನಡೆದು ಬರುತ್ತಿತ್ತು.

ಹತ್ತೂವರೆಯ ಬಸ್ಸಿನಲ್ಲಿ ಬಂದಿಳಿದವರೇ ಚಿನ್ನಪ್ಪ ಗೌಡರು ಆಫೀಸಿಗೆ ಬರುವ ದಾರಿಯಲ್ಲಿ ಗಾಯತ್ರಿ ಭವನ ಹೊಕ್ಕು ‘‘ವಿಠಲನನ್ನು ಕಳುಹಿಸಿ, ಇವತ್ತು ಮೇಳ ಏಲಂ ಅಲ್ವಾ? ನಮ್ಮ ಲೆಕ್ಕದಲ್ಲಿ ಅವನೂ ಒಬ್ಬ ಬಿಡ್ಡರು ಸ್ವಾಮೀ... ಮತ್ತೆ ಹನ್ನೊಂದುವರೆಯ ಹೊತ್ತಿಗೆ ಹತ್ತು ಪ್ಲೇಟ್ ಸ್ವೀಟ್, ಖಾರ, ಮಸಾಲೆ ದೋಸೆ ಮತ್ತು ಚಾ... ಸಹಿ ಮಾಡಲು ಬರುವ ಒಬ್ಬ ಸಪ್ಲಾಯರನ ಕೈಯಲ್ಲಿ ಕಳುಹಿಸಿ’’ ಅಂತ ಹೇಳಿಯೇ ಆಫೀಸಿನತ್ತ ಹೆಜ್ಜೆ ಹಾಕಿದ್ದರು.

ಅಲ್ಲೇ ದೇವಸ್ಥಾನದ ಗೇಟಿನ ಮುಂದೆ ಬಿಸಿಲಿಗೆ ಚಳಿ ಕಾಯಿಸುತ್ತ ಕೂತಿದ್ದ ಮಹಾಬಲ. ‘‘ನಮಸ್ಕಾರ ಸರ್. ನಾನು ನಿಮ್ಮನ್ನೇ ಕಾಯುತ್ತಿರುವುದು’’ ಅಂತಂದು ಇಷ್ಟಗಲ ನಕ್ಕ. ಏಲಮ್ಮಿನ ಕೊನೆಗೆ ಸಿಗುವ ತಿಂಡಿಗಳಿಗೆ ಆತನ ಬಾಯಲ್ಲಿ ಆಗಲೇ ನೀರೂರಿತ್ತು. ‘‘ಬನ್ನಿ ಬನ್ನಿ’’ ಅನ್ನುತ್ತ ಚಿನ್ನಪ್ಪ ಗೌಡರು ಅವನನ್ನೂ ತಮ್ಮೊಂದಿಗೆ ಕರೆದು ತಂದರು.

‘‘ತಿಮ್ಮಣ್ಣ ಆಗಲೇ ಬಂದು ಅಲ್ಲೇ ಒಳಗೆ ಕೂತಿದ್ದಾರೆ’’ ಎಂದ ಕ್ಲಾರ್ಕ್ ನರಸಿಂಹ. ‘‘ಸರಿ ಸರಿ ಹಾಗಾದ್ರೆ. ಏಲಂ ಏರ್ಪಾಡೆಲ್ಲ ಸುಸೂತ್ರವಾಗಿದೆ ಅಂತ ಅನ್ನು’’ ಎನ್ನುತ್ತ ತನ್ನ ಕ್ಯಾಬಿನ್ನು ಹೊಕ್ಕರು ಚಿನ್ನಪ್ಪ ಗೌಡರು. ಏಲಂ ಫೈಲು ತೆಗೆದು ನರಸಿಂಹನ ಕೈಯಲ್ಲಿಟ್ಟು ‘‘ಜಯರಾಮ ಶೆಟ್ರು ಬಂದ ಮೇಲೆ ಕಾಯಿಸಬಾರದು... ಕೂಡಲೇ ಸಭೆ ಶುರು ಮಾಡಬೇಕು’’ ಎಂದು ಸೂಚನೆಯಿತ್ತರು. ಜಯರಾಮ ಶೆಟ್ಟಿಯವರಿಗೆ ಫೋನ್ ಮಾಡಿ ‘‘ನಮಸ್ಕಾರ ಶೆಟ್ರೆ, ಇವತ್ತು ಮೇಳ ಏಲಂ, ಹನ್ನೊಂದು ಗಂಟೆಗೆ... ನೆನಪುಂಟಲ್ಲ... ಬೇಗ ಬನ್ನಿ’’ ಎಂದು ನೆನಪಿಸಿದರು.

‘‘ಓಹೋ... ನಮಸ್ಕಾರ, ನಮಸ್ಕಾರ. ಇದೀಗ ಹೊರಟೆ, ನೀವು ಯೋಚನೆ ಮಾಡಬೇಡಿ’’ ಎಂದರು ಆತ.
ಅಷ್ಟರಲ್ಲಿ ಬಿಳೀ ಬಣ್ಣದ ಕಾರಿನಲ್ಲಿ ಬಂದು ಮೂರು ಮಂದಿ ಇಳಿದು ಎಂಡೋಮೆಂಟ್ ಆಫೀಸರರ ಕ್ಯಾಬಿನ್ನಿಗೆ ನುಗ್ಗಿದರು. ‘‘ಏಲಂ ಯಾವಾಗ?’’ ಎಂದ ಅವರಲ್ಲೊಬ್ಬಾತ.

‘‘ನೀವು ಯಾರು? ಏಲಮಿಗೂ ನಿಮಗೂ ಏನು ಸಂಬಂಧ?’’ ಅಂದರು ಚಿನ್ನಪ್ಪ ಗೌಡರು.

‘‘ಏಲಂ ಇನ್ನೂ ಮುಗಿಯಲಿಲ್ಲವಲ್ಲ... ಏಲಂಗೆ ನನ್ನ ಹೆಸರೂ ಬರ್ಕೊಳ್ಳಿ... ಹೆಸರು ರಂಗನಾಥ’’ ಅಂದ ಅವರಲ್ಲೊಬ್ಬ.

ಚಿನ್ನಪ್ಪ ಗೌಡರು ಚುರುಕಾದರು. ಇದು ಮೇಳದ ಚರಿತ್ರೆಯಲ್ಲೇ ಮೊದಲು! ಆದರೂ ಸಾವರಿಸಿ ‘‘ಠೇವಣಿ ಡಿಡಿ ತಂದಿದ್ದೀರಾ?’’ ಕೇಳಿದರು.

‘‘ತಂದಿಲ್ಲ. ಯಾವ ಹೆಸರು. ಅಮೌಂಟು ಎಷ್ಟೆಂದು ಹೇಳಿ. ಇಲ್ಲೇ ಬ್ಯಾಂಕಿದೆಯಲ್ಲ, ತರುತ್ತೇವೆ’’ ಅಂದ ಇನ್ನೊಬ್ಬ. ಚಿನ್ನಪ್ಪ ಗೌಡರು ವಿವರ ಬರೆದುಕೊಟ್ಟರು. ‘‘ಈಗ ಬರುತ್ತೇವೆ. ಹನ್ನೊಂದಕ್ಕಲ್ಲವಾ ಏಲಂ? ಅಷ್ಟರ ಒಳಗೆ ಬರುತ್ತೇವೆ’’ ಎನ್ನುತ್ತ ಮೂವರೂ ಎದ್ದು ಹೋದರು.

ಇದೇನು ಹೊಸ ಬೆಳವಣಿಗೆ?

ಲಾಗಾಯ್ತಿನಿಂದ ಮೂರು ಬಿಡ್ಡರು ಮತ್ತೆರಡು ವಿಟ್ನೆಸ್ ಅಂತ ಐದು ಜನರನ್ನು ಸೇರಿಸಿ ಏಲಂ ನಡೆಸುವುದೇ ದುಸ್ತರವಾಗಿದ್ದಲ್ಲಿ ಹೆಸರು ಪರಿಚಯ ಇಲ್ಲದವರು ಬಂದು– ‘‘ಬಿಡ್ಡಿಗೆ ನನ್ನ ಹೆಸರೂ ಬರ್ಕೊಳ್ಳಿ...’’ ಅಂದರೆ ಏನೋ ಗಂಡಾಂತರ ಕಾದಿದೆ ಅನ್ನುವುದು ಶತಃಸಿದ್ಧ. ಚಿನ್ನಪ್ಪ ಗೌಡರು ತುರ್ತಾಗಿ ಇನ್ನೊಮ್ಮೆ ಜಯರಾಮ ಶೆಟ್ಟರಿಗೆ ಫೋನ್ ಮಾಡಿ ವಿವರ ತಿಳಿಸಿದರು. ‘‘ಹೀಗೆಲ್ಲ ಉಂಟಾ... ಈಗ ಬರುತ್ತೇನೆ, ನೋಡೋಣ’’ ಎಂದರಾತ.

ಏಲಂ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರೆ ಎಂದು ಆತಂಕಗೊಂಡ ಚಿನ್ನಪ್ಪಗೌಡರು ಪೋಲೀಸು ಸ್ಟೇಶನ್ನಿಗೂ ಪೋನಿನಲ್ಲಿ ಮಾಹಿತಿ ನೀಡಿದರು.
ಇಷ್ಟು ದಿನಗಳ ಏಲಮ್ಮಿನ ಸಭೆಗೂ ಇಂದಿನ ಸಭೆಗೂ ಅಜಗಜಾಂತರ. ಚಿನ್ನಪ್ಪ ಗೌಡರು ಗಂಭೀರರಾಗಿ ಏಲಮ್ಮಿನ ವಿಧಿನಿಯಮಗಳನ್ನು ಓದಿ ಹೇಳಿದರು. ಆ ಬಳಿಕ ನಾಲ್ವರು ಬಿಡ್ಡುದಾರರ ಹೆಸರನ್ನೂ ಓದಿ ಹೇಳಿ, ಏಲಮ್ಮಿನ ಆರಂಭದ ಸಂಕೇತವಾಗಿ ಮರದ ಸುತ್ತೆಯನ್ನು ಮೇಜಿಗೆ ತಟ್ಟಿ ಮೊದಲ ಬಿಡ್ಡು ಜಯರಾಮ ಶೆಟ್ಟರದ್ದು– ಹೋದವರ್ಷ ಅಖೈರಾದ ಬಿಡ್ಡು... ‘‘ಒಂಬತ್ತು ಲಕ್ಷ... ಸರಿ, ಇನ್ನು ಬಿಡ್ಡು ಆರಂಭಿಸಿ...’’ ಅಂದರು.

‘‘ಒಂಬತ್ತು ಲಕ್ಷದ ಒಂದು ಸಾವಿರ’’ ಅಂದ ಮಹಾಬಲ. ಅವನಿಗೊಂದು ಹೊಸ ಹುರುಪು. ಈ ರೀತಿಯಲ್ಲಿ ನಡೆಯುತ್ತಿರುವ ಮೊದಲ ಏಲಮ್ಮು! ‘‘ಒಂಬತ್ತು ಲಕ್ಷದಾ ಎರಡು ಸಾವಿರಾ’’ ಅಂದ ವಿಠ್ಠಲ. ಅವನಿಗೂ ಅಷ್ಟೇ! ‘‘ಎರಡು ಮಸಾಲೇ... ಅಥವಾ ಚಾ ಒಂದೂ’’ ಅಂತ ಮಾತ್ರ ಕೂಗಿ ಕರೆದು ಮಾತ್ರ ಅಭ್ಯಾಸ! ಇವತ್ತು ಲಕ್ಷಗಳ ಏಲಮ್ಮಿನಲ್ಲಿ ಅಧಿಕೃತ ಬಿಡ್ಡುದಾರನಾದ ಖುಷಿಯಲ್ಲಿ ಹೆಚ್ಚುಕಡಿಮೆ ಅದೇ ರಾಗದಲ್ಲಿ ಸ್ವಲ್ಪ ಗಟ್ಟಿಯಾಗಿಯೇ ಬಿಡ್ ಕೂಗಿದ್ದ! ಜಯರಾಮ ಶೆಟ್ಟಿಯವರು ‘‘ಒಂಬತ್ತು ಲಕ್ಷದ ಐದು ಸಾವಿರ’’ ಅಂದರು. ಮತ್ತೆ ಎಲ್ಲರ ಗಮನ ಹೊಸ ಪಾರ್ಟಿಯಾದ ರಂಗನಾಥರ ಮೇಲೆ.

‘‘ಹತ್ತು ಲಕ್ಷ’’ ಅಂದರಾತ.
ಅಲ್ಲಿಂದ ಶುರುವಾದ ಪೈಪೋಟಿಯಲ್ಲಿ ಬಿಡ್ಡು ಕ್ಷಣಗಳಲ್ಲಿ ಇಪ್ಪತ್ತುಲಕ್ಷ ತಲುಪಿತು. ಜಯರಾಮ ಶೆಟ್ಟಿಯವರು ತನ್ನ ಕೈ ಸೋಲುತ್ತಿರುವುದನ್ನು ಕಣ್ಣಾರೆ ಕಾಣುತ್ತಲೇ ಬೆವತು ಹೋಗಿದ್ದರು. ಇವರು ಸಾವಿರ ಏರಿಸಿದರೆ ರಂಗನಾಥ ಹತ್ತುಸಾವಿರ ಏರಿಸುತ್ತಿದ್ದ. ಇವರು ಹತ್ತು ಸಾವಿರ ಏರಿಸಿದರೆ ಆತ ಅದರ ಮೇಲಿನ ಲಕ್ಷಕ್ಕೇ ಏರಿಸುತ್ತಿದ್ದ. ಆದರೂ ಉಗುಳು ನುಂಗಿಕೊಳ್ಳುತ್ತ ಪ್ರತಿಷ್ಠೆಗಾಗಿ ಬಿಡ್ಡನ್ನು ಇಲ್ಲಿಯವರೆಗೆ ಬಿಟ್ಟುಕೊಟ್ಟಿರಲಿಲ್ಲ.

ಒಂದು ಆಟಕ್ಕೆ ಸಿಗುವುದು ಸರಾಸರಿ ಇಪ್ಪತ್ತೈದು ಸಾವಿರ, ಯಾರ್‍ಯಾರ ಕೈಕಾಲು ಹಿಡಿದರೂ ಹೆಚ್ಚೆಂದರೆ ಸೀಸನ್ನಿಗೆ ನೂರ ನಲುವತ್ತು ನೂರಾ ಐವತ್ತು ಆಟಗಳು. ಸಂಬಳ, ಭತ್ತೆ, ಟ್ರಾನ್ಸ್‌ಪೋರ್ಟು, ಜನರೇಟರು ಅಂತ ಹದಿನೈದು ಲಕ್ಷ ಖರ್ಚಿದೆ. ಇನ್ನು ಬಿಡ್ಡು ಏರಿಸಿದರೆ ನಷ್ಟ ಖಚಿತ. ಆದರೂ ವರ್ಷಗಳಿಂದ ಮೇಳದ ಮೆನೇಜರ್ ಎಂದು ಗೌರವಕ್ಕೆ ಪಾತ್ರನಾದ ತಾನು ಹೀಗೆ ಯಾವುದೋ ಮೂಲೆಯಿಂದ ಎದ್ದುಬಂದ ಈ ಹಾತೆಗೆ ಸೋಲುವುದೇ! ಕೊನೆ ಪ್ರಯತ್ನವಾಗಿ ‘‘ಇಪ್ಪತ್ತು ಲಕ್ಷ ಹತ್ತು ಸಾವಿರ’’ ಅಂದರು ಜಯರಾಮ ಶೆಟ್ಟರು.

ರಂಗನಾಥರು ‘‘ಇಪ್ಪತ್ತೊಂದು ಲಕ್ಷ’’ ಅಂದದ್ದೇ ತಡ, ಹತಾಶ ಜಯರಾಮ ಶೆಟ್ಟಿಯವರು ‘‘ನನ್ನದಿಲ್ಲ’’ ಅಂತ ಹೇಳಿ ಬೆವರೊರಸಿಕೊಂಡರು.
ಹಾಗೆ ರಂಗನಾಥ ಬಿಡ್ಡು ಇಪ್ಪತ್ತೊಂದು ಲಕ್ಷಕ್ಕೆ ತನ್ನ ಹೆಸರಿಗೆ ಬರೆಯಿಸಿಕೊಂಡರು. ಜಯರಾಮ ಶೆಟ್ಟರ ಮುಖ ನೋಡಲಾಗದೆ ಚಿನ್ನಪ್ಪಗೌಡರು ರಂಗನಾಥರಲ್ಲಿ ‘‘ಮೊದಲ ಕಂತು ಮೂರುಲಕ್ಷ, ಒಂದು ವಾರದೊಳಗೆ ಕಟ್ಟಬೇಕು. ಮತ್ತೆ ಎರಡು ಕಂತುಗಳಲ್ಲಿ ಉಳಿದ ಹಣ ಕಟ್ಟಬೇಕು. ಮೂರು ಮೂರು ತಿಂಗಳ ಸಮಯಾವಕಾಶ ಇದೆ. ಕಂಡಿಶನ್ನುಗಳನ್ನೆಲ್ಲ ಇಲ್ಲಿ ವಿವರವಾಗಿ ಕೊಟ್ಟಿದೆ’’ ಎಂದು ತೋರಿಸಿಕೊಡುತ್ತಿರುವಾಗ ಜಯರಾಮ ಶೆಟ್ಟರು ಬಿರುಸಿನಲ್ಲಿ ಎದ್ದು ಹೊರಟುಹೋಗಿದ್ದರು.

ತನಗೆ ಇವೆಲ್ಲ ಗೊತ್ತಿದೆ ಎಂಬಂತೆ ಮುಗುಳ್ನಗುತ್ತ ರಂಗನಾಥರು ದಾಖಲೆ ಪತ್ರಗಳಿಗೆ ಸಹಿ ಮಾಡಿ ‘ಚಹಾ ತಿಂಡಿಯಿದೆ’ ಎಂದರೂ ಕಾಯದೆ ಹೊರಟು ಹೋಗಿದ್ದರು. ಮಹಾಬಲ ಸಹಿತ ಯಾರಿಗೂ ತಿಂಡಿ ತಿನ್ನುವ ಮನಸ್ಸಾಗದೆ ತರಿಸಿದ್ದೆಲ್ಲವೂ ಹಾಗೆಯೇ ಹಳಸಿ ಹೋಯಿತು.
ಅರ್ಧಗಂಟೆಯೊಳಗೆ ನಡೆದು ಹೋದ ಈ ಘಟನೆಗಳಿಗೆ ಮೂಕ ಸಾಕ್ಷಿಗಳಾಗಿದ್ದವರ ಬಾಯಿಯಿಂದ ಈ ರೋಮಾಂಚಕ ಕತೆ ಕೇಳಿದ ಊರ ಜನತೆ ವಿಸ್ಮಯದಿಂದ ಮಾತಾಡಿಕೊಳ್ಳುತ್ತಿದ್ದ ವಿಷಯ ಅಂದರೆ... ಯಾರು ಈ ರಂಗನಾಥ? ಒಂಬತ್ತು ಲಕ್ಷದ ಬಿಡ್ಡನ್ನು ಆತ ಇಪ್ಪತ್ತೊಂದಕ್ಕೆ ಏರಿಸಿದ್ಯಾಕೆ? ಹಣಕಾಸಿಗೆ ಅವರ ಬೆನ್ನ ಹಿಂದೆ ಯಾರಿದ್ದಾರೆ? ಅವರದ್ದೇನು ಐಡಿಯಾ?

***
ಹಾಕಿಕೊಂಡ ವೇಷದಲ್ಲಿಯೇ ಎರಡೂ ಕೈ ಮುಗಿದು ರಂಗಸ್ಥಳದ ಮೈಕಿನ ಎದುರು ಬಂದು ನಿಂತಿದ್ದರು ರಾಜಪ್ಪ.
‘‘ಉತ್ತಮ ಕಲಾಪ್ರಸ್ತುತಿಯ ನಡುವೆ ರಸಭಂಗ ಮಾಡಿದುದಕ್ಕೆ ಕ್ಷಮೆ ಕೇಳುತ್ತ ನನ್ನ ಮನದಾಳದ ಎರಡು ಮಾತನ್ನು ನಿಮ್ಮ ಮುಂದಿಡಲು ಅನುಮತಿ ಬೇಡುತ್ತಿದ್ದೇನೆ.

ನಿಮಗೆಲ್ಲ ತಿಳಿದಂತೆ ಶ್ರೀ ದೇವರ ಸನ್ನಿಧಿಯ ಹೆಸರಿನಲ್ಲಿ ನಮ್ಮ ಮೇಳ ಇದ್ದರೂ ಇದರ ನಿರ್ವಹಣೆಯನ್ನು ಹಿಂದಿನಿಂದಲೂ ದೇವಸ್ಥಾನ ಕಂಟ್ರಾಕ್ಟ್ ಕೊಟ್ಟು ನಡೆಸಿಕೊಂಡು ಬರುತ್ತಿದೆ. ಹತ್ತು ಹಲವು ವರ್ಷಗಳಿಂದ ಈ ಕಂಟ್ರಾಕ್ಟನ್ನು ಪಡೆದು ನಮ್ಮ ಜಯರಾಮ ಶೆಟ್ರು ಮೇಳದ ಮೇನೇಜರ್ ಅಂತಲೇ ಹೆಸರು ಮಾಡಿದವರು. ಅವರ ಕೈಕೆಳಗೆ ಎಲ್ಲವೂ ಒಂದು ಮಟ್ಟದಲ್ಲಿ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ಆದರೆ, ಕಳೆದ ಏಲಮ್ಮಿನಲ್ಲಿ ನಡೆದ ಜಿದ್ದಾಜಿದ್ದಿಯ ಬಿಡ್ಡಿಂಗಿನಲ್ಲಿ ದಾಖಲೆ ಮೊತ್ತಕ್ಕೆ ಮೇಳ ಇನ್ನೊಬ್ಬರ ಪಾಲಾಗಿ ಆಮೇಲೆ ಮೇಳದ ನಿರ್ವಹಣೆಯಲ್ಲಿ ಬಂದ ಏರುಪೇರಿನ ವಿವರಗಳನ್ನೆಲ್ಲ ತಿಳಿದೇ ಇರುವ ತಮಗೆ, ಪುನಃ ಅದನ್ನೆಲ್ಲ ಇಲ್ಲಿ ನಾನು ಹೇಳಲು ಬಯಸುವುದಿಲ್ಲ.

ಕಲಾವಿದರಾದ ನಮಗೆ ಯಾರ ಕೈಕೆಳಗೆಯೂ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ. ಹಾಗೆಯೇ ಹೊಸ ಆಡಳಿತದಲ್ಲಿಯೇ ಕಲಾಸೇವೆ ಕೈಗೊಳ್ಳಲು ನಾವೆಲ್ಲ ಮಾನಸಿಕವಾಗಿ ನಮ್ಮನ್ನು ಸಿದ್ಧಗೊಳಿಸಿಕೊಂಡಿದ್ದೆವು. ಎರಡು ತಿಂಗಳಲ್ಲಿ ಹೊಸ ಯಜಮಾನರು ಹೇಳಿದ ಹಾಗೆ ಕುಣಿದೆವು. ಯಕ್ಷಗಾನ ಆಟದ ಹೆಸರಿನಲ್ಲಿ ಕಲಾದೇವಿಯ ಸೇವೆ ಬಿಟ್ಟು ಬೇರೆ ಏನೆಲ್ಲ ಆಟ ಆಡಿದ್ದೆವು. ಪದ್ಯಕ್ಕೆ ಅರ್ಥ ಹೇಳುವ ಬದಲು ರಾಜಕೀಯದ ಘೋಷಣೆಗಳನ್ನು ಹೊರಡಿಸಿದೆವು. ಪಕ್ಷ ರಾಜಕಾರಣ ಎಂಬ ಹಣವಂತರ ಮೇಲಾಟದಲ್ಲಿ ಸೇರಿಕೊಳ್ಳದೆ ಸ್ವಂತ ಹೊಟ್ಟೆ ಪಕ್ಷಕ್ಕಾಗಿ ಕುಣಿಯುತ್ತಿದ್ದ ಬಡ ಕಲಾವಿದರನ್ನು ಒಂದು ಪಕ್ಷದ ಚುನಾವಣಾ ಪ್ರಚಾರದ ಕೆಲಸಕ್ಕೆ ಜೀತದಾಳುಗಳ ಹಾಗೆ ಬಳಸಿಕೊಳ್ಳಲಾಯಿತು.

ಚುನಾವಣೆಯ ಕಾವು ಮುಗಿದದ್ದೇ ತಡ, ಹಣ ಇಲ್ಲ, ಲಾಸಾಗಿದೆ ಎಂದು ಹೇಳಿ ನಮ್ಮ ಯಜಮಾನರು ಕಾಣೆಯಾದರು. ಮೂರು ತಿಂಗಳಲ್ಲಿ ಕಟ್ಟಬೇಕಿದ್ದ ಏಲಮ್ಮಿನ ಎರಡನೇ ಕಂತು ಕಟ್ಟಲು ಆ ಪಾರ್ಟಿ ಬರಲಿಲ್ಲ. ಅವರಿಗೆ ಮೇಳ ಎರಡು ತಿಂಗಳಿಗೆ ಮಾತ್ರ ಬೇಕಿತ್ತು. ಯಕ್ಷಗಾನದ ಪ್ರೇಕ್ಷಕರನ್ನು ಮತಬ್ಯಾಂಕಾಗಿ ಪರಿವರ್ತಿಸಿಕೊಂಡು ಅವರನ್ನು ಬರಸೆಳೆದ ಕಲಾವಿದರನ್ನೂ ಮೇಳವನ್ನೂ ಊಟ ಮುಗಿದಮೇಲೆ ಎಂಜಲೆಲೆ ಬಿಟ್ಟು ಹೋಗುವ ಹಾಗೆ ನಡುನೀರಿನಲ್ಲಿ ಬಿಟ್ಟು ಹೋದರು.

ಸರಕಾರಕ್ಕೆ ಸಾರಾಯಿ ಏಲಂ ಅಥವಾ ಮೇಳದ ಏಲಂ ಎರಡೂ ಒಂದೇ. ಒಂದೇ ತರಹದ ಕಾನೂನು. ನಿಯಮಗಳ ಅನುಸಾರ ಸರಕಾರಿ ಅಧಿಕಾರಿಗಳು ಅವರಿಗೆ ನೋಟೀಸು ಕೊಟ್ಟು ಮೇಳದ ಪೆಟ್ಟಿಗೆ ಹಿಂದಕ್ಕೆ ಪಡೆಯುವ ಸೂಚನೆ ನೀಡಿದಾಗ ನಾವೆಲ್ಲ ಹೆದರಿ ಹೋದೆವು. ಜಯರಾಮ ಶೆಟ್ರನ್ನು ಬೇಡಿಕೊಂಡರೆ ಅವರು ನಷ್ಟ ಮಾಡಿಕೊಂಡು ಎಂಡೋಮೆಂಟ್ ಆಫೀಸರ್ ಹೇಳಿದ ಹಾಗೆ ಮೇಳ ನಡೆಸಲು ಬರುವುದಿಲ್ಲ, ಮೇಳವನ್ನು ಒಳಕ್ಕೆ ಕರೆಯಲಿ, ಪುನಃ ಏಲಂ ನಡೆಸಲಿ... ಆಗ ನನ್ನ ರೇಟಿಗೆ ಮೇಳವನ್ನು ಒಪ್ಪಿಕೊಳ್ಳುತ್ತೇನೆ ಅಂದು ಬಿಟ್ಟರು.

ಪೆಟ್ಟಿಗೆ ಒಮ್ಮೆ ಒಳಕ್ಕೆ ಹೋದರೆ ಗೊಂದಲ ಎಲ್ಲ ತಿಳಿಯಾಗಿ ಪುನಃ ಏಲಂ ನಡೆಯಲು ಕಡಿಮೆಯೆಂದರೂ ಐದಾರು ವಾರ ತೆಗೆದುಕೊಳ್ಳುತ್ತದೆ, ನಡುವೆ ಯಾರಾದರೂ ಕೋರ್ಟಿಗೆ ಹೋದರೆ ಇಡೀ ವರ್ಷವೇ ತೆಗೆದುಕೊಂಡರೂ ಅಚ್ಚರಿಯಿಲ್ಲ ಎಂದು ತಿಳಿದಾಗ ನಾವೆಲ್ಲ ಬೆಚ್ಚಿಬಿದ್ದೆವು. ಮೇಳ ಮುಂದುವರಿಯುವುದೇ ಸಂಶಯ ಅನ್ನುವ ಸ್ಥಿತಿಯಲ್ಲಿ ಕಲೆಯನ್ನೇ ನಂಬಿ ಹೆಂಡತಿ ಮಕ್ಕಳ ಹೊಟ್ಟೆ ಹೊರೆಯುವ ಹೊಣೆ ಹೊತ್ತ ನಾವು ಮೂವತ್ತು ಕಲಾವಿದರಿಗೆ ತ್ರಿಶಂಕು ಪ್ರಸಂಗ ಎದುರಾಗಿತ್ತು.

ಇಂತಹ ಅನಿವಾರ್ಯ ಸನ್ನಿವೇಶದಲ್ಲಿ ಮೇಳದಲ್ಲಿ ಹಿರಿಯನಾದ ನಾನು ಕೈಚೆಲ್ಲಿ ಕುಳಿತುಕೊಳ್ಳಲಾಗದೆ ಕಲಾವಿದರ ಹೊಟ್ಟೆಪಾಡಿಗಾಗಿ ಏಲಮ್ಮಿನ ಬಾಕಿ ಕಂತು ಕಟ್ಟಲು ಒಪ್ಪಿಕೊಂಡು ಮೇಳದ ಯಜಮಾನಿಕೆ ವಹಿಸಿಕೊಂಡಿದ್ದೇನೆ. ಹೆಸರು ರಾಜಪ್ಪ, ಮಾಡುವುದು ರಾಜವೇಷ, ದಿನವೂ ವೈಭವದ ಒಡ್ಡೋಲಗ ಕೊಡುವವನು– ಆದರೂ ಮೂರನೇ ಕ್ಲಾಸಿನವರೆಗೆ ಮಾತ್ರ ಶಾಲೆಗೆ ಹೋದವ ನಾನು. ಆಡಳಿತ ನಿರ್ವಹಿಸುವುದು ಅಂದರೇನೆಂದೇ ತಿಳಿಯದ ನಾನು ಬೆಳೆ ಕಾಯುವ ಬೈಹುಲ್ಲಿನ ಬೆರ್ಚಪ್ಪನಾಗಿ ಮೇಳದವರ ಹಿತ ಕಾಯಲು ನಿಂತಿದ್ದೇನೆ.

ಹೇಗಾದರೂ ಈ ವರ್ಷದ ತಿರುಗಾಟವೆಂಬ ನೆರೆಯ ಪ್ರವಾಹದಿಂದ ನನ್ನನ್ನು ನೀವೆಲ್ಲ ಎತ್ತಿ ದಡ ತಲುಪಿಸಬೇಕು. ಕಲಾಪ್ರದರ್ಶನವೇ ನಮ್ಮ ಬದುಕು, ಅದುವೇ ನಮ್ಮ ಅನ್ನ. ತಿರುಗಾಟದ ಇನ್ನುಳಿದ ತೊಂಬತ್ತು ತೊಂಬತ್ತೈದು ದಿನಗಳಲ್ಲಿ ಎಪ್ಪತ್ತು ಆಟ ಸಿಕ್ಕಿದರೂ ನಮ್ಮ ಚೀಟಿ ಮೇಲೆಬಿದ್ದಂತೆ. ಹರಕೆ ಆಟಗಳು ಮತ್ತು ಹತ್ತು ಸಮಸ್ತರ ಕಾಯಂ ಆಟಗಳು ಅಂತ ನಲುವತ್ತು ಆಟಕ್ಕೆ ಬುಕ್ಕಿಂಗ್ ಇದೆ. ಇನ್ನು ಮೂವತ್ತು ಮೂವತ್ತೈದು ಆಟಗಳನ್ನು ಆಡಿಸಲು ಯಾರಾದರೂ ಸಹೃದಯರು ಮುಂದೆ ಬರಬೇಕು. ಚೌಕಿಗೆ ಬಂದರೆ ಯಾವ ಯಾವ ದಿನಗಳಲ್ಲಿ ಬುಕ್ಕಿಂಗಿಲ್ಲ ಅಂತ ವಿವರ ನೀಡುತ್ತೇವೆ. ಹೇಗಾದರೂ ತಾವು ಆಟ ಹೊಂದಿಸಿಕೊಟ್ಟು ನಮ್ಮ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಕಲೆಗೆ ಆಶ್ರಯ ನೀಡುವ ಸಹೃದಯರಿಗೆ ಶ್ರೀ ದೇವರ ಅನುಗ್ರಹ ಸದಾ ಸಿಗುತ್ತದೆ ಎನ್ನುವುದು ತಮಗೆಲ್ಲ ತಿಳಿದ ವಿಷಯ. ತಮ್ಮಂಥಾ ಕಲಾಪೋಷಕರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ.

ಇನ್ನೊಂದು ಮಾತು... ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎನ್ನುವ ಹಾಗೆ ರಾಜಕೀಯದ ಆಟಗಾರರ ಕೈಯಲ್ಲಿ ಸಿಕ್ಕಿ ನಾವೆಲ್ಲ ನಮ್ಮ ಸಂಸ್ಕೃತಿ, ವ್ಯವಹಾರ, ಜೀವನೋಪಾಯಗಳನ್ನೆಲ್ಲ ಕಳೆದುಕೊಂಡು ನೆಮ್ಮದಿಯಿಲ್ಲದೆ ಸೋತುಹೋಗಿದ್ದೇವೆ. ಅವರ ಗಾಣಗಳಲ್ಲಿ ಯಾಂತ್ರಿಕವಾಗಿ ಸುತ್ತುತಿರುಗುವ ಎತ್ತುಗಳಾಗಿದ್ದೇವೆ. ಇಂತಹ ಸಂಕಷ್ಟದ ಪರಿಸ್ಥಿತಿ ಅಲ್ಲಲ್ಲಿ ಅವರಿವರಿಗೆ ಬಂದಾಗ ನಾವು ಉಳಿದವರೆಲ್ಲ ಸುಮ್ಮನಿರುತ್ತಾ ಬಂದಿದ್ದೇವೆ. ನಮ್ಮ ಸ್ವಂತ ಕುಂಡೆಗೆ ಕೊಳ್ಳಿ ಬಾರದೆ ನಾವು ಎಚ್ಚೆತ್ತುಕೊಳ್ಳುವುದಿಲ್ಲ.

ಇವತ್ತು ನಮಗೆ, ನಾಳೆ ನಿಮಗೆ... ಎಲ್ಲ ಕ್ಷೇತ್ರಗಳಿಗೂ ಲಗ್ಗೆ ಇಟ್ಟು ಹಾಳುಗೆಡಹುವ ಈ ರಾಜಕೀಯದವರಿಂದ ಯಾರಿಗೂ ಬದುಕಿನಲ್ಲಿ ನೆಮ್ಮದಿ ಇಲ್ಲ. ಇದನ್ನು ನಾವು ಎಷ್ಟು ಬೇಗ ತಿಳಿದುಕೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು. ತಮ್ಮ ಧನಮೋಹ, ಅಧಿಕಾರಮೋಹಕ್ಕೆ ನಮ್ಮ ಪೂರ್ವಜರು ಬೆಳೆಸಿಕೊಂಡು ಬಂದ ಪರಂಪರೆ, ಧರ್ಮ, ಶಿಕ್ಷಣ, ಕಲೆ, ಸಾಹಿತ್ಯ, ಸಾಂಸ್ಕೃತಿಕ ವ್ಯವಸ್ಥೆಗಳನ್ನೆಲ್ಲ ಹಾಳುಗೆಡಹುತ್ತಿದ್ದಾರೆ. ನಾನೊಬ್ಬ ಸಣ್ಣ ಕಲಾವಿದ. ನೀವೆಲ್ಲ ವಿದ್ಯಾವಂತರಿದ್ದೀರಿ, ಬುದ್ಧಿವಂತರಿದ್ದೀರಿ.. ನಮ್ಮ ಮಕ್ಕಳಿಗೆ ಯಾವುದನ್ನು ಉಳಿಸಿಕೊಳ್ಳಬೇಕು ಅನ್ನುವ ಪ್ರಜ್ಞೆ ಇದ್ದವರಿದ್ದೀರಿ. ನೀವೆಲ್ಲ ಕಾರ್ಯಪ್ರವೃತ್ತರಾಗಬೇಕು. ನಾನು ಕಲಾವಿದ ಮಾತ್ರ ಅಲ್ಲ, ಒಬ್ಬ ತಂದೆ ಕೂಡ.

ಸಾವಿರಾರು ಸಾಮಾನ್ಯ ಜನರ ಪ್ರತಿನಿಧಿ ಕೂಡ. ಸುತ್ತಮುತ್ತೆಲ್ಲ ಕ್ಯಾನ್ಸರ್ ಹರಡುತ್ತಿರುವುದನ್ನು ಕಂಡು ಕಂಗಾಲಾದವರಲ್ಲಿ ನಾನೂ ಒಬ್ಬ. ನಮ್ಮ ಮೇಳದ ಕಲಾವಿದರ ಶೋಚನೀಯ ಪರಿಸ್ಥಿತಿಯನ್ನು ವಿವರಿಸಲು ಬಂದ ನನ್ನ ಬಾಯಲ್ಲಿ ಸಮಾಜದ ದಯನೀಯ ಪರಿಸ್ಥಿತಿಯ ಬಗ್ಗೆಯೂ ನಾಲ್ಕು ಮಾತುಗಳು ಬಂದು ಹೋದವು. ನಿಮ್ಮ ಕಲಾಸ್ವಾದನೆಯ ನಡುವೆ ನನ್ನ ಈ ಮಾತುಗಳು ಅಧಿಕಪ್ರಸಂಗ ಅನ್ನಿಸಿದ್ದರೆ ಕ್ಷಮಿಸಿ ಅಂತ ಬೇಡಿಕೊಳ್ಳುತ್ತ ಪ್ರಸಂಗ ಮುಂದುವರೆಸಲು ಅನುಮತಿ ಕೇಳುತ್ತಿದ್ದೇನೆ. ನಮಸ್ಕಾರ’’ ಕೈ ಮುಗಿದು ರಾಜಪ್ಪ ರಂಗಸ್ಥಳದಿಂದ ನಿರ್ಗಮಿಸುತ್ತಿದ್ದಂತೆ ಭಾಗವತರು ಪದ್ಯ ಆರಂಭಿಸಿದ್ದರು...

‘‘ಇತ್ತ ಕುರುಕ್ಷೇತ್ರದಿಂ ಕುರುರಾಯ ಇದನೆಲ್ಲ ಕಂಡು ಸಂತಾಪದೀ
ಮರುಗೀ ಎನ್ನಯ ಭಾಗ್ಯ ಎನುತಾ...’’ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT