ADVERTISEMENT

ಕಾವ್ಯಮಂಡಲದಲ್ಲಿ ಕೀರಂ

ಕವಿತೆ

ನಟರಾಜ ಹುಳಿಯಾರ್
Published 27 ಜುಲೈ 2013, 19:59 IST
Last Updated 27 ಜುಲೈ 2013, 19:59 IST

ಆ ಸಂಜೆ
ಅವರು ಲೆಕ್ಕದ ಬುಕ್ಕುಗಳನ್ನು ನೋಡಿದರು;
ಸದರಿ ಕ್ರಿಯೆ ಕೂಡ ಸವಕಲು
ಕವಿಸಮಯವಿರಬೇಕೆಂದು ನಕ್ಕರು.

ಲವಾಜಮೆ, ವಿಮೆಗಳ ಮೇಲೆ ಅಡ್ಡಾಡಿದ ಆ ಕಣ್ಣು
ಅಲ್ಲೆಲ್ಲೂ ನಿಲ್ಲುತ್ತಿರಲಿಲ್ಲ;
ನಿಜ ಹೇಳಬೇಕೆಂದರೆ
ರೊಕ್ಕದ ಮೇಲೆ ಆ ಕಣ್ಣು ಅಷ್ಟಾಗಿ ಕೂರುತ್ತಿರಲಿಲ್ಲ;
ಜೊತೆಗೆ, ತಾವು ನೋಡುತ್ತಿರುವುದು ಏನೆಂಬುದರ ಬಗ್ಗೆ
ಅವರಿಗೇ ಖಾತ್ರಿಯಿರಲಿಲ್ಲ.
`ಐವತ್ತು ಕಳೆದರೂ ಐವತ್ತು ಉಳಿದಿತ್ತು'
ಎಂದು ನಿಟ್ಟುಸಿರಿಟ್ಟ `ಹೂಕವಿ'ಯ ಆರಾಮು ಕೂಡ ಅಲ್ಲಿರಲಿಲ್ಲ.

ಮುಸ್ಸಂಜೆ ದಿಬ್ಬದ ಮೇಲೆ ನಿಂತವರಿಗೆ
`ನಡೆದು ಬಂದ ದಾರಿಯ ಕಡೆಗೆ ಕಣ್ಣ ಹೊರಳಿಸಬೇಡ'
ಎಂದ ಅಡಿಗರ ಅಡಿಗೆರಗಿ ಮುತ್ತಿಕ್ಕಬೇಕೆನಿಸಿತು.
ಇಂಥ ನೂರಾರು ಪ್ರತಿಮೆಗಳು ತಮ್ಮಳಗೆ
ಅನುದಿನವು ನುಡಿಯುವುದು ನೆನಪಾಗಿ
ಮೊದಲೇ ಬಾಗಿದ್ದ ಕತ್ತು ಮತ್ತಷ್ಟು ಬಾಗಿತು;
ಇಂಥ ಕವಿಸಾಲುಗಳನ್ನು ನಿತ್ಯ ನುಡಿಸಿದ್ದರ ಬಗ್ಗೆ
ಸಣ್ಣ ಪುಳಕವಿತ್ತು ಹಾಗೂ ವಿನಯವಿತ್ತು.

ADVERTISEMENT

ಈತನಕ ನಡೆದ ಹಾದಿಯ ತಿರುವುಗಳು
ಕಾಣದಿದ್ದರೇನಂತೆ,
ತಾವು ಊರೂರ ತೋಟಗಳಲ್ಲಿ ಒಗೆದ ಬೀಜಗಳು ಸಸಿಯಾಗಿ
ಮರವಾಗಿ ಎಂತೆಂಥ ಹಣ್ಣು ಬಿಟ್ಟಿರಬಹುದೆಂದು
ನೋಡಿ ಬರುವ ಕುತೂಹಲ ಕೂಡ ಅವರಲ್ಲಿರಲಿಲ್ಲ;
ತಮ್ಮ ಮಾತುಗಳನ್ನು ಗಿಳಿಗಳ ಹಾಗೆ ಉಲಿದವರ ಬಗ್ಗೆ
ಹೆಮ್ಮೆ ಕೂಡ ಇದ್ದಂತಿರಲಿಲ್ಲ;
ಇದ್ದರೂ ಅದು ಎದ್ದು ಕಾಣುವಂತಿರಲಿಲ್ಲ.

ತಾವು ಕ್ಲಾಸುಗಳಲ್ಲಿ ಹಾದಿಬೀದಿಗಳಲ್ಲಿ
ಬಾರು ಗಡಂಗುಗಳಲ್ಲಿ
ಚಿಮುಕಿಸಿದ ಬೇಂದ್ರೆ ಅಡಿಗ ಪಂಪ ಲಂಕೇಶ ದೇವನೂರು
ನೂರಾರು ಎದೆಗಳಲ್ಲಿ ತೊರೆಯಾಗಿ ಹರಿದಿರಬಹುದೆಂಬ
ಧನ್ಯತೆಯ ಎಳೆ ಕೂಡ ಅಲ್ಲಿ ಹೆಚ್ಚಿಗಿರಲಿಲ್ಲ;
ತಮ್ಮಿಂದ ಪಡೆದವರು ಸೂಚಿಸಿದ ಧನ್ಯತೆಗೆ
ಒಂದು ಸಣ್ಣ ಕಣ್ಣು ಮಿಟುಕಿಗಿಂತ
ಹೆಚ್ಚಿನ ಉತ್ತರ ಅವರಲ್ಲಿರಲಿಲ್ಲ.
ಹಾಗೆ ನೋಡಿದರೆ,
ಹೀಗೊಂದು ದಿನ ಕೂತು
ಜುಜುಬಿ ಲೆಕ್ಕದ ಬುಕ್ಕುಗಳನ್ನು ನೋಡುವುದು ಕೂಡ
ಅವರ ಇರಾದೆಯಾಗಿರಲಿಲ್ಲ.

ಸಂಜೆಗೆಂಪೆಲ್ಲ ಚದುರಿ ಮಬ್ಬು ನೆಲಕ್ಕಿಳಿದಾಗ
ಒಳಗು ಬೆಳಗಲೆಂದು ಒಂದೆರಡು ಲಾರ್ಜ್ ಇಳಿಸಿ
ಛಾರ್ಜಾಗುವ ದಿನಚರಿ ಕೂಡ ಅವತ್ತು ಮಜವೆನ್ನಿಸಲಿಲ್ಲ;

ಜಾರುತ್ತಿದ್ದ ಪ್ಯಾಂಟನ್ನು ಎರಡೂ ಕೈಯಿಂದ
ಸೊಂಟಕ್ಕೆಳೆದುಕೊಳ್ಳುತ್ತಾ ಸುಮ್ಮನೆ ಸಾಗಿ ಸರ್ಕಲಿನಲ್ಲಿ
ನಿಲ್ಲುವುದು ಕೂಡ ಅವರ ಪಾಲಿಗೆ ಅಂಥ ಸಂಕೇತವೇನಾಗಿರಲಿಲ್ಲ;
ಕಾರಣ, ಅವರು ಒಪ್ಪುವ ಕವಿಗಳು
ಇಷ್ಟು ಆರಾಮದ ಸಂಕೇತಗಳನ್ನು ಎಂದೂ ಬಳಸುತ್ತಿರಲಿಲ್ಲ.

ದಿನ ರಾತ್ರಿ ಸಂಕೇತಗೊಳದಲ್ಲಿ ಮುಳುಗೇಳುತ್ತಾ
ಕೀರಂ ತಾವೇ ಸಂಕೇತವಾದದ್ದನ್ನು ಜನ ಗಮನಿಸಿರಲಿಕ್ಕಿಲ್ಲ:
ಅವರು ಸಂಕೇತವಾದದ್ದು-
ಓದಿನ ಸೀಮೋಲ್ಲಂಘನಕ್ಕೆ, ಅದ್ಭುತ ಅಂತರ್‌ಪಠ್ಯೀಯತೆಗೆ,
ಕಾವ್ಯಸಂಭ್ರಮಕ್ಕೆ, ಹೆಣ್ತನದ ಮಡಿಲಿಗೆ,
ಕೊಡುವುದಕ್ಕೆ, ಹಂಚುವುದಕ್ಕೆ,
ಪೂರ್ವಪಶ್ಚಿಮಗಳನ್ನು ಬೆಸೆದು ಪಡೆದ ಪಾಂಡಿತ್ಯಕ್ಕೆ,
ಸ್ವಾರ್ಥವಿಲ್ಲದ ಸಾಹಿತ್ಯಜಗಳಕ್ಕೆ.

ಇಷ್ಟೆಲ್ಲ ಆಡುತ್ತ ಆಡುತ್ತ ಕೀರಂ ಕಾಯುತ್ತಲೇ ಇರುತ್ತಾರೆ
ನಾಗಲಿಂಗಯೋಗಿಯ ಹಾಗೆ ತಿರುಗುತ್ತಲೇ ಇರುತ್ತಾರೆ
ಪ್ರತಿಮೆ ರೂಪಕ ಸಂಕೇತಗಳ ಸಂಗದಲ್ಲಿ ಮಾತ್ರವೇ
ಮೂಡುವ ಆ ದಿವ್ಯ ಅರಿವಿಗಾಗಿ...

ಹೀಗೆ ಸದಾ ಅರಿವಿನ ಇರುವಲ್ಲಿರುವ ಕೀರಂ
ಇನ್ನಿಲ್ಲವೆಂದು ತಿಳಿದವರು
ಕಾವ್ಯದ ಕಣ್ಣು ಕಳಕೊಂಡು ಮುಕ್ಕಾಗುತ್ತಾರೆ:

ಕಾವ್ಯಮಂಡಲ ಬಿಟ್ಟು ಕೀರಂ ಇನ್ನೆಲ್ಲಿ ಹೋಗುತ್ತಾರೆ?
ಇಲ್ಲೇ ಎಲ್ಲೋ ಕನ್ನಡ ಕಾವ್ಯಮಂಡಲದಲ್ಲಿ
ಎಡೆಬಿಡದೆ ತಿರುಗುತ್ತಲೇ ಇರುತ್ತಾರೆ;
ನಮ್ಮ ಆತ್ಮಗಳನ್ನು ಗರಗರ ತಿರುಗಿಸುತ್ತಲೇ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.