ADVERTISEMENT

ಕಾವ್ಯವೆಂದರೆ ರಸದ ನಿರ್ವಾಣ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಕಾವ್ಯವೆಂದರೆ ರಸದ ನಿರ್ವಾಣ
ಕಾವ್ಯವೆಂದರೆ ರಸದ ನಿರ್ವಾಣ   
ಸತ್ಯಮಂಗಲ ಮಹದೇವ
 
ಹೊಸತನದ ಗಾಳಿ ತಗುಲಿ ಎವೆತೆರೆದು
ನೋಡುತಲಿದ್ದೆ
ಅವಳು ನಸುಕು ಮೈನೆರೆದ ತನ್ನ ತುಟಿಯಂಚಿನ
ನಗೆಯನ್ನು ಹಂಚುತ್ತಿದ್ದಳು, ಆಗ
ಮೌನದ ಬಸಿರಿಂದ ಭಾವ  ಶಿಶುವಿನ ಗಾನ
ಶಬ್ದಗಳ ಮೀರಿ ಹೃದಯಕ್ಕೆ ದಾಟುತಿತ್ತು.
 
ಮೊಗ್ಗಿನಲಿ ಕುಡಿವರಿದ ರಸಭಾವ ಬಂಧದಲಿ
ಬಿರಿದು ಹೂವಾಗುತಲಿತ್ತು ಬಯಕೆ
ಹದವರಿತು ಬೇರುಗಳು ಬಯಸಿ ಪಡೆದಾ ಕಾಯದಲಿ
ಪ್ರಾಣ ಹರಿದಾಡಿತ್ತು 
ತನಿರಸದಿ ಅಡಗಿರುವ ಚಿಗುರು-ಒಗರುಗಳಿಗೆಲ್ಲಾ
ಬಲಿತು ಬೀಗುವ ಮಹಾನಂದದ ಘಳಿಗೆ ಬರಲಿದೆಯೆಂದು
 
ಗರಿಬಿಡಿಸಿ ಒಡೆವಾಗ ಹರಡಿಕೊಳ್ಳುವ
ಗಮ್ಮನೆಯ ಬಿಮ್ಮನಸಿ ಗುಣವು
ತಾಳಿಕೆಯಲಿ ಬಾಳಿದ ಜೀವ ತಂತುಗಳಿಗೆಲ್ಲಾ
ಜೀವರಾಗವ ಕಲಿಸಿ ನಾದಕ್ಕೆ ನುಡಿಸಿದ 
ಒಡಪಿನಾ ಒಲವಾಗಿ ಮಾಗುತಿತಲಿತ್ತು ಕೆಂದೆಳರಿನಿಂದ ಹಸಿರಿನೆಡೆಗೆ ಸತತ.
 
ಬಿಡುಗಡೆಯ ಸೀಳಿದವು ಅನಂತ ಚೇತನವೆಲ್ಲಾ
ಭಾವದಲಿ ನಲಿದು ಕರುಣೆಯಲಿ ಮಿಂದು ಬಣ್ಣವಾಗಿ
ಅಂತರಂಗವ ತೆರೆದು ಎಚ್ಚರಕೆ ಹಾರಿದವು
ಕುಸುಮಿಸಿದೆ ಅಮೃತವು ಹೊಸತು ಹೊಸತಾಗಿ
ಮಾತು ಮೌನಕೆ ಜಾರಿ ಜೀವಧ್ಯಾನಕೆ ಕೂತು 
ಪಿಸುಮಾತು ಹೊಮ್ಮುತಿದೆ 
 
ಕಾವ್ಯವೆಂದರೆ ರಸದ ನಿರ್ವಾಣ 
ಕಾರಣ ಕಾರ್ಯದಲಿ ಹೊಸೆಯಲಾರದ ಬೆಡಗು-ಬಿನ್ನಾಣ.
****
ಆಕೆಯ ಆ ಅಳು...
ಒಮ್ಮೆ ನನ್ನ ಕ್ಲಿನಿಕ್‌ಗೆ ಸ್ತ್ರೀ ರೋಗಿ ಒಬ್ಬರು ಮತ್ತು ಆಕೆಯ ಸಂಬಂಧಿ ಬಂದು ಕುಳಿತಿದ್ದರು. ಅವರ ಸರದಿ ಬಂದಾಗ ಪರೀಕ್ಷಾ ಕೊಠಡಿಗೆ ಕರೆದು ‘ಏನು ತೊಂದರೆ?’ ಎಂದು ವಿಚಾರಿಸಿದೆ. ಆ ಮಹಿಳೆ ‘ನನಗೆ ತುಂಬಾ ಸುಸ್ತು, ಆಯಾಸ’ ಎಂದು ಒತ್ತಿ ಒತ್ತಿ ಹೇಳಿದರು. ‘ನಾನು ಈ ಮೊದಲು ಈಗ ಇರುವುದಕ್ಕಿಂತ ಎರಡು ಪಟ್ಟು ದಪ್ಪ ಇದ್ದ ಆಳು’ ಎಂದರು.

ಆಕೆ ಅಷ್ಟೇನೂ ವಿದ್ಯಾವಂತೆ ಅಲ್ಲದಿದ್ದರೂ ವ್ಯಾವಹಾರಿಕವಾಗಿ ಜಾಣೆ. ಆಕೆಯನ್ನು ಪರೀಕ್ಷಿಸಿದೆ. ಏನೂ ನ್ಯೂನತೆಗಳು ಕಾಣಲಿಲ್ಲ. ಸಕ್ಕರೆ ಕಾಯಿಲೆ ಇರಬಹುದು ಎಂದುಕೊಂಡು ‘ರಕ್ತಪರೀಕ್ಷೆ ಮಾಡಿಸಿ’ ಎಂದೆ. ಆ ಹೆಂಗಸು: ‘ಸ್ವಲ್ಪ ದಿನಗಳ ಮುಂಚೆ ತಜ್ಞ ವೈದ್ಯರ ಹತ್ತಿರ ತಪಾಸಣೆ ಮಾಡಿಸಿದ್ದೇನೆ.
 
ಅವರು ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರೀಕ್ಷೆ ಮಾಡಿಸಿದ್ದಾರೆ. ಆದರೆ ಸಕ್ಕರೆ ಕಾಯಿಲೆ ಇಲ್ಲ’ ಎಂದು ಲ್ಯಾಬ್ ರಿಪೋರ್ಟ್ ತೋರಿಸಿದರು. ಆದರೂ ಮತ್ತೊಮ್ಮೆ ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಕೆಲವು ಬೇರೆ ಪರೀಕ್ಷೆಗಳನ್ನು ಮಾಡಿಸಿ ಎಂದು ಚೀಟಿ ಬರೆದು ಕೊಟ್ಟು – ಸುಸ್ತಿಗೆ ಮಾತ್ರೆಗಳು, ಟಾನಿಕ್ ಬರೆಯುತ್ತಿದ್ದಾಗ, ‘ಅಯ್ಯೋ ನನ್ನ ಗಂಡ ಒಳ್ಳೆಯವನಲ್ಲ, ಕಂಡ ಕಂಡ ಹೆಂಗಸರ ಹತ್ತಿರ ಹೋಗುತ್ತಾನೆ, ವ್ಯಭಿಚಾರಿ’ ಎಂದು ಆ ಮಹಿಳೆ ಹೇಳಿದಳು.

ಕೂಡಲೇ ಆಕೆಗೆ ಎಚ್.ಐ.ವಿ. ಟೆಸ್ಟ್ ಮಾಡಿಸಬೇಕೆಂದು ಮಿಂಚಿನಂತೆ ಹೊಳೆಯಿತು. ತಕ್ಷಣ ರಕ್ತಪರೀಕ್ಷೆಗೆ ಬರೆದುಕೊಟ್ಟಿದ್ದ ಚೀಟಿಯನ್ನು ಹಿಂದಕ್ಕೆ ಪಡೆದು, ಅದರಲ್ಲಿ ಎಚ್.ಐ.ವಿ. ಟೆಸ್ಟ್ ಸೇರ್ಪಡೆ ಮಾಡಿ, ‘ಇದನ್ನು ಮಾಡಿಸಿದ ತಕ್ಷಣ ತಂದು ತೋರಿಸಿ’ ಎಂದೆ. ಅದರಂತೆಯೇ 2–3 ಗಂಟೆಗಳ ನಂತರ ಲ್ಯಾಬ್ ರಿಪೋರ್ಟ್ ತಂದರು. ನನ್ನ ಊಹೆ ಸರಿಯಾಗಿತ್ತು. ಆಕೆಗೆ ಏಡ್ಸ್ ಇತ್ತು.

ರೋಗಿಯನ್ನು ಕೋಣೆಯಿಂದ ಹೊರಗೆ ಕಳುಹಿಸಿ ಆಕೆಯ ಸಂಬಂಧಿಗೆ ಕಾಯಿಲೆ ಬಗ್ಗೆ ವಿವರಿಸುತ್ತಿದ್ದೆ. ಅಷ್ಟರಲ್ಲಿ ಆಕೆ ತಕ್ಷಣ ಒಳಬಂದು, ‘ಅದೇನು ಸರಿಯಾಗಿ ಹೇಳಿ’ ಎಂದು ಕಾಲು ಹಿಡಿದುಕೊಂಡು ಗೋಳಾಡತೊಡಗಿದಳು. ಆಕೆಗೆ ತನ್ನ ಕಾಯಿಲೆ ಏನು ಎಂದು ಅರ್ಥವಾಗಿಬಿಟ್ಟಿತ್ತು.

ನಾನು ಎಷ್ಟು ಸಮಾಧಾನ ಮಾಡಿದರೂ ಸುಮ್ಮನಾಗದೆ, ಹೊರ ಬಂದು ಎದೆ ಬಡಿದುಕೊಳ್ಳುತ್ತ ರೋದಿಸತೊಡಗಿದಳು. ‘ನನ್ನದೇನೂ ತಪ್ಪಿಲ್ಲ, ಎಲ್ಲಾ ನನ್ನ ಗಂಡನದೇ ತಪ್ಪು. ಆತ ವ್ಯಭಿಚಾರಿ’ ಎಂದು ಅಳತೊಡಗಿದರು. ಆ ಸಮಯದಲ್ಲಿ ಕ್ಲಿನಿಕ್‌ನಲ್ಲಿ ಬೇರೆ ಯಾವ ರೋಗಿಯೂ ಇರಲಿಲ್ಲ. ಆಕೆಯ ಜೊತೆಯಲ್ಲಿ ಬಂದಿದ್ದ ಸುಮಾರು 15 ವರ್ಷದ ಮಗ, ಏನೂ ಅರ್ಥವಾಗದೆ ಅಳತೊಡಗಿದ. ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವ ಆ ಕ್ಷಣ ನನ್ನ ಮನಸಿನಲ್ಲಿ ಅಚ್ಚೊತ್ತಿಬಿಟ್ಟಿದೆ.
–ಅರಿಯೂರು ಡಾ. ಎಸ್. ನಟರಾಜ್, ತುಮಕೂರು
****
ಗಂಡನ ಊಟ ಕೊಟ್ಟ ತಾಯಿ!
ಇದು ನನ್ನ ಬಾಲ್ಯದ ಘಟನೆ. ಒಂದು ಮಧ್ಯಾಹ್ನ ಉರಿಬಿಸಿಲಿನಲ್ಲಿ ಆಟವಾಡುತ್ತಿದ್ದೆ. ಗಂಗವ್ವನೆಂಬ ಗೃಹಿಣಿ ನನ್ನನ್ನು ಕರೆದು ‘ಊಟ ಮಾಡಿದೆಯಾ?’ ಎಂದಳು. ಆಟದ ಮೂಡಿನಲ್ಲಿದ್ದ ನಾನು ‘ಇಲ್ಲ’ ಎಂದೆ.

ನನ್ನ ಅಮ್ಮ ಹಾಗೂ ಗಂಗವ್ವ ಆತ್ಮೀಯರಾಗಿದ್ದರು. ಗಂಗವ್ವ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಗಂಗಾಳದಲ್ಲಿ ರಾಗಿ ಮುದ್ದೆ ಹಾಗೂ ಗೊಡ್ಡು ಖಾರ (ಕೆಂಪು ಮೆಣಸಿನಕಾಯಿ ಚಟ್ನಿ) ಹಾಕಿಕೊಟ್ಟರು. ಮುದ್ದೆಯನ್ನು ಬಾಯಿಗೆ ಇಟ್ಟ ತಕ್ಷಣ ಅತೀವ ಖಾರದಿಂದ ಕಣ್ಣಲ್ಲಿ ಗಳಗಳನೆ ನೀರು ಸುರಿಯಲಾರಂಭಿಸಿತು. ನನಗೆ ವಿಪರೀತ ಖಾರ ಆಗಿರುವುದನ್ನು ಕಂಡ ಗಂಗವ್ವ ‘ಚೂರು ಬೆಲ್ಲ ಕೊಡೋಣ ಅಂದ್ರೆ ಬೆಲ್ಲಾನು ಖಾಲಿ ಆಗಿದೆ’ ಎಂದರು. ನನಗೆ ಇದ್ಯಾವುದರ ಪರಿವೆಯೂ ಇಲ್ಲದೆ ಗೊಡ್ಡುಖಾರ ಮುದ್ದೆ ಮೆಲ್ಲತೊಡಗಿದೆ.

ನನ್ನ ಊಟ ಮುಗಿಯುತ್ತಿದ್ದಂತೆಯೇ ಗಂಗವ್ವನ ಗಂಡ ರಂಗಪ್ಪ ಉರಿಬಿಸಿಲಿನಲ್ಲಿ ಬೆವೆತು, ತನ್ನ ವ್ಯವಸಾಯದ ಕೆಲಸವನ್ನು ಮುಗಿಸಿ ಮನೆಗೆ ಬಂದ. ‘ಉಸ್ಸಪ್ಪ’ ಎಂದು ಒಂದು ಚೆಂಬು ನೀರು ಕುಡಿದ. ‘ಊಟ ಮಾಡಿದೆಯೇನೋ’ ಎಂದು ನನ್ನನ್ನು ಕೇಳಿದರು. ನಾನು ‘ಇಲ್ಲೇ ಗೊಡ್ಡುಸಾರು ಮುದ್ದೆ ಊಟ ಮಾಡಿದೆ’ ಎಂದೆ. ಗಂಗವ್ವ ಮಾತ್ರ ಏನೋ ಕಳೆದುಕೊಂಡಂತೆ ಅತ್ತ ಇತ್ತ ತಿರುಗುತ್ತಿದ್ದಳು. ಹಸಿದ ಗಂಡನಿಗೆ, ‘ನಿಮ್ಮ ಮುದ್ದೆ ಗೊಡ್ಡುಗಾರ ಆ ಮಗೀಗೆ ಕೊಟ್ಟೆ. ಮನೇಲಿ ರಾಗೀನೂ ಇಲ್ಲ ಹಿಟ್ಟೂ ಇಲ್ಲ’ ಎಂದು ಮೂಲೆಯಲ್ಲಿ ಸುಮ್ಮನೆ ಕುಳಿತಳು.
 

ಮುದ್ದೆ ಕರಗುವವರೆಗೂ ಕುಣಿದು ಕುಪ್ಪಳಿಸಿದ ನನಗೆ ಅವರ ಬಡತನದ ಪರಿವೆಯೇ ಇರಲಿಲ್ಲ. ಪುನಾ ಸಂಜೆ ಅವರ ಮನೆಯ ಕಡೆ ಹೋದರೆ ಹೊಲೆಗೆ ಬೆಂಕಿಯೇ ಹಾಕಿರಲಿಲ್ಲ. ಗಂಗವ್ವ ಅವರಿವರ ಮನೆಗೆ ಒಂದೆರೆಡು ಸೇರು ರಾಗಿಗಾಗಿ ಅಂಗಲಾಚುತ್ತಿದ್ದರು.

ನನಗೆ ಬುದ್ಧಿ ತಿಳಿದ ನಂತರ – ಗಂಗವ್ವನ ಜೊತೆ ನನ್ನಮ್ಮನೂ ಒಂದೆರೆಡು ಸೇರು ರಾಗಿಗಾಗಿ ತಿರುಗುತ್ತಿದ್ದಳು ಎಂಬ ವಿಚಾರ ತಿಳಿಯಿತು. ಗಂಗವ್ವನ ಹೃದಯವಂತಿಕೆಯನ್ನು ಈಗ ನೆನಪಿಸಿಕೊಂಡರೆ ಮನಸ್ಸು ತುಂಬಿಬರುತ್ತದೆ. ತನ್ನ ಗಂಡನ ಊಟವನ್ನೇ ನನಗೆ ಬಡಿಸಿದ್ದ ಆಕೆ ಓರ್ವ ಅಪರೂಪದ ತಾಯಿ.
–ಎಂ.ಜೆ. ಅಲ್ಪೋನ್ಸ್‌ ಪಿಂಟೋ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.