ADVERTISEMENT

ಚಾಕೊಲೇಟ್‌ ಕೊಟ್ಟಿದ್ದು ಯಾರು?

ಭಾವಸೇತು

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST
ಚಾಕೊಲೇಟ್‌ ಕೊಟ್ಟಿದ್ದು ಯಾರು?
ಚಾಕೊಲೇಟ್‌ ಕೊಟ್ಟಿದ್ದು ಯಾರು?   
1974–75ನೇ ಇಸವಿ ಇರಬಹುದು. ನಾನಾಗ 9ನೇ ತರಗತಿ ಓದುತ್ತಿದ್ದೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಧ್ವಜಾರೋಹಣ, ಹಾಡು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಿ ಶಾಲೆಯಿಂದ ಹೊರಗೆ ಬಂದೆವು.
 
ನಮ್ಮ ಶಾಲೆ ಕುಶಾಲನಗರದ ‘ಫಾತಿಮಾ ಹೈಸ್ಕೂಲು.’ ಅದು ಇರುವುದು ಬೆಂಗಳೂರು–ಮಂಗಳೂರು ಹೆದ್ದಾರಿ ಪಕ್ಕದಲ್ಲಿ. ಸ್ವಾತಂತ್ರ್ಯೋತ್ಸವ ಮುಗಿಸಿ ಗೆಳತಿಯರೆಲ್ಲಾ ಶಾಲೆಯಲ್ಲಿ ಕೊಟ್ಟ ಸಿಹಿ ಮೆಲ್ಲುತ್ತಾ ಗೇಟು ದಾಟಿ ಹೊರ ಬರುವುದಕ್ಕೂ, ನಮ್ಮ ಪಕ್ಕ ಒಂದು ಕಾರು ಬಂದು ಗಕ್ಕನೆ ನಿಲ್ಲುವುದಕ್ಕೂ ಸರಿಹೋಯಿತು. ನಾವೆಲ್ಲಾ ಗಾಬರಿಯಿಂದ ನಿಂತಾಕ್ಷಣ ಒಂದು ಗಡಸು ಧ್ವನಿ – ‘ಕಮ್‌ ಆನ್‌, ಟೇಕ್‌ ಇಟ್‌’ ಎಂದು ಬೊಗಸೆ ತುಂಬಾ ಚಾಕೊಲೇಟ್‌ಗಳನ್ನು ನಮ್ಮ ಕೈ ತುಂಬಿಸಿತು.
 
ಆ ಕ್ಷಣದಲ್ಲಿ ಯಾರು? ಏನು? ಎಂದು ಒಂದೂ ಗೊತ್ತಾಗಲಿಲ್ಲ. ಕಾರು ಮುಂದೆ ಮಡಿಕೇರಿ ದಾರಿ ಹಿಡಿಯಿತು. ನಾವು ಚಾಕೊಲೇಟ್‌ ಮೆಲ್ಲುತ್ತಾ ಮನೆದಾರಿ ಹಿಡಿದೆವು. 
ಮಾರನೇ ದಿನ ಮಡಿಕೇರಿಯ ಸ್ವಾತಂತ್ರ ದಿನಾಚರಣೆಯಲ್ಲಿ ಜನರಲ್‌ ಫೀಲ್‌್ಡ ಮಾರ್ಷಲ್‌  ಕಾರ್ಯಪ್ಪ ಅವರು ಧ್ವಜ ದಿನಾಚರಣೆ ನೆರವೇರಿಸಿದ ಚಿತ್ರ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು ನೋಡಿ ನನಗೂ, ನನ್ನ ಗೆಳತಿಯರಿಗೂ ಆಶ್ಚರ್ಯ–ಸಂಭ್ರಮ. ಮಡಿಕೇರಿಗೆ ಹೋಗುವ ದಾರಿಯಲ್ಲಿ ನಮಗೆ ಚಾಕೊಲೇಟ್‌ ಕೊಟ್ಟವರು ಅವರೇ ಆಗಿದ್ದರು.
 
ನಾವು ಆಗಸ್‌್ಟ 15ರಂದು ಚಾಕೊಲೇಟ್ ಪಡೆದಿದ್ದು ಆ ಮಹಾನ್‌ ವ್ಯಕ್ತಿಯಿಂದ ಎಂದು ತಿಳಿದು ಬಂದು ತುಂಬಾ ಸಂತೋಷವಾಯಿತು. ಆ ಸವಿ ನೆನಪು ಪ್ರತಿ ಆಗಸ್‌್ಟ 15ರಂದು ನನ್ನನ್ನು ಕಾಡುತ್ತಿರುತ್ತದೆ.
–ಎಂ.ಪಿ. ಮಂಜುಳಾದೇವಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.