ADVERTISEMENT

ಛೂ ಬಾಣ

ಟೀಯೆಸ್ಸಾರ್
Published 15 ಆಗಸ್ಟ್ 2015, 19:30 IST
Last Updated 15 ಆಗಸ್ಟ್ 2015, 19:30 IST

ಜುಲೈ 8, 1972
ಮುಖ್ಯಮಂತ್ರಿ ಅರಸಿನವರು ಮೊನ್ನೆ ಬುಧವಾರ ಅಸೆಂಬ್ಲಿಯಲ್ಲಿ ಏಕ್‌ದಮ್‌ ಮೂರು ಗಂಟೆ ಕಾಲ ಸೈಡ್‌ ಕೊಡದೆ– ಬಜೆಟ್‌ ಚರ್ಚೆಗೆ ಉತ್ತರವಾಗಿ– ಭಾಷಣ ಬಿಗಿದರಂತೆ. ಇಲ್ಲೀವರೆಗೆ ಬಂದಿರುವ ಸಪ್ತರ್ಷಿಗಳ ಅಥವಾ ಏಳು ಮಂದಿ ಮುಖ್ಯಮಂತ್ರಿಗಳ ಪೈಕಿ ಇಷ್ಟೊಂದು ದೀರ್ಘೇಕ ಭಾಷಣ ಮಾಡಿ ನಿಭಾಯಿಸಿರುವ ಮೊದಲ ಮುಖ್ಯಮಂತ್ರಿ ಅರಸರಾದ್ದರಿಂದ. ಅವರಿಗೆ ‘ಭಾಷಣ ಭಯಂಕರ’ ಎಂಬ ಬಿರುದು ಕೊಡಬೇಕೆಂದು ಕೆಲವು ಮಂದಿ ಕಾಂಗೋ ನಂಬರುಗಳು ಸಲಹೆ ಮಾಡುತ್ತಿದ್ದಾರೆ!.....

***
ಕೊಡಬಹುದು, ಅಡ್ಡಿಯಿಲ್ಲ... ಆದರೆ, ಅರಸಿನವರು ಮೂರು ಗಂಟೆ ಕಾಮನ್‌ ಮ್ಯಾನಿನಂತೆ, ಕಾಮನ್‌ಸೆನ್ಸಿನಿಂದ, ಮುಚ್ಚುಮರೆಯಿಲ್ಲದೆ, ಇದ್ದದ್ದನ್ನು ಇದ್ದ ಹಾಗೇ ಸಭೆಯ ಮುಂದೆ ಬಿಚ್ಚಿಟ್ಟರಾದ್ದರಿಂದ, ‘ಬಚ್ಚಿಡದ ಬಿಚ್ಚಿಟ್‌ ಭಾಷಣ ಭೂಷಣ’ ಎಂಬುದಾಗಿ ಬಿರುದನ್ನು ಮಾರ್ಪಡಿಸಬಹುದು!
***

ಹಿಂದೊಮ್ಮೆ ಯೂ ನೋ ಗೆ ನಮ್ಮ ಪ್ರತಿನಿಧಿಗಳ ನಾಯಕರಾಗಿದ್ದ ಕೃಷ್ಣ ಮೆನನ್‌ ಒಂದೇ ಏಟಿನಲ್ಲಿ ನಲವತ್ತು ಗಂಟೆ ಮಾತನಾಡಿದ್ದ ರೆಕಾರ್ಡಿದೆ... ಮೊನ್ನೆ ಮೊನ್ನೆ ಅಮೆರಿಕದ ಕಾಂಗ್ರೆಸ್‌ನಲ್ಲಿ ಒಬ್ಬ ಸೆನೆಟರು ನಲವತ್ತಮೂರು ಗಂಟೆ ಬಿಗಿದು ಹೊಸ ರೆಕಾರ್ಡ್‌ ಸ್ಥಾಪಿಸಿದಾನೆ. ಈ ಎರಡು ಸಂದರ್ಭಗಳಲ್ಲಿ ‘ಶ್ರೋತೃ’ಗಳೆಲ್ಲ ಎರಡೆರಡು ದಿನ ಸೊಗಸಾದ ಗೊರಕೆ ಹೊಡೆದರೆಂಬುದನ್ನು ಗಮನಿಸಿ!
***
ಈ ಸಂದರ್ಭದಲ್ಲಿ ಹಾಗಲ್ಲ... ಅರಸಿನವರ ಮೂರು ಗಂಟೆ ಭಾಷಣ ಸಂದರ್ಭದಲ್ಲಿ ಹೆಚ್ಚೂ ಕಮ್ಮೀ ‘ಪಿನ್‌ ಡ್ರಾಪ್‌ ಸೈಲೆನ್‌್ಸ’ ಇದ್ದಿತಾದರೂ, ಮೆಂಬರುಗಳು ಗೊರಕೆ ಹೊಡೆಯಲಿಲ್ಲವಂತೆ; ಕಿವಿಗಳನ್ನು ನೆಟ್ಟೈಸಿಕೊಂಡು ಕೇಳಿದರಂತೆ... ಯಾಕೋ?... ಮೊತ್ತ ಮೊದಲಬಾರಿಗೆ ಮೈಸೂರಿನ ಒಬ್ಬ ಮುಖ್ಯಮಂತ್ರಿ ನಿಜ ಹೇಳುತ್ತಿದ್ದಾರೆ ಅಥವಾ ಇದ್ದದ್ದನ್ನು ಇದ್ದ ಹಂಗೇ ಹೇಳುತ್ತಿದಾರೆಂಬ ಆಶ್ಚರ್‍ಯ ಚಕಿತ ಭಾವನೆಯಿಂದಿರಬಹುದು!....
***

‘ಇದ್ದದ್ದನ್ನ ಇದ್ದ ಹಂಗೇ ಹೇಳಿದರೆ ಸಿದ್ದಪ್ಪನಿಗೆ ಸಿಡಿಲು ಬಡೀತು’ ಎಂಬ ಗಾದೆಯಿದೆ... ಇದು ರಾಜಕೀಯಕ್ಕೂ ಸೊಗಸಾಗಿ ಅನ್ವಯಿಸುತ್ತಾದ್ದರಿಂದ, ನೇರವಾಗಿ ನಿಜ ಹೇಳುವುದನ್ನು ಅರಸಿನವರು ಸ್ವಲ್ಪ ಕಮ್ಮಿ ಮಾಡಿದರೆ ರಾಜಕೀಯದಲ್ಲಿ ಬಚಾವಾಗಿ, ಬಹುಕಾಲ ಬಾಳಿಯಾರು!
***

ನಿಜ ಹೇಳಲೇಬೇಕಾಗಿ ಬಂದಾಗಲೂ ಆ ‘ನಿಜ’ದ ಮುಖಕ್ಕೆ ಒಂದು ಮುಸುಕು ಅಥವಾ ‘ಬುರ್ಖಾ’ ಹಾಕಿ ಹೇಳಬೇಕು!... ಆಗ ಅದು ನಿಜವೋ? ಸುಳ್ಳೋ?, ಹೆಣ್ಣೋ? ಗಂಡೋ ಎಂಬ ಅನುಮಾನ ಜನಕ್ಕುಂಟಾಗಿ, ಮುಸುಕಿನಲ್ಲಿರುವ ಮುತ್ತಿನಂಥ ಮಾತನ್ನು ನಂಬಿ ಬಿಡುತ್ತಾರೆ!– ಅದು ರಾಜತಂತ್ರ!
***

ಇಂಥ ರಾಜತಂತ್ರ ಅಥವಾ ‘ಡಿಪ್ಲೊಮೆಸಿ’ ಅರಸಿನವರಿಗೆ ತಿಳಿಯದು, ಪಾಪ!– ಬಡಪ್ರಾಣಿ!, ಅರಸಾಡಳಿತವನ್ನರಿಯದ ಅರಸು!... ಮೇಲಾಗಿ ಪಟ್ಟುಗಳನ್ನು ಬಲ್ಲ ಕೇವಲ ಗರಡಿ ಪೈಲ್ವಾನ್‌!... ಇಂಥ ಸರಳ, ಸಾಮಾನ್ಯ ಜನಕ್ಕೆ ಮುಖ್ಯಮಂತ್ರಿಗಳಾದರೂ ಸುಳ್ಳು ಹೇಳೋಕ್ಕೆ ಬರೊಲ್ಲ!...
***

ಸುಳ್ಳು ಹೇಳೋಕ್ಕೆ ಬರೊಲ್ಲ... ಇದು ಪ್ರಜಾಪ್ರಭುತ್ವದ ಒಂದು ದುರ್ಲಕ್ಷಣವೆಂದರೂ ಸರಿ, ಸುಲಕ್ಷಣವೆಂದರೂ ಸರಿ... ಸದ್ಯಕ್ಕೆ... ಅಂದರೆ ಕಳೆದ ಕಾಲು ಶತಮಾನದ ಅನುಭವವನ್ನು ಗಮನಿಸಿದರೆ ಇದು ‘ದುರ್ಲಕ್ಷಣ’ವೇ!
***

ಹೊಚ್ಚ ಹೊಸದಾಗಿ... ಹೇಳ ಹೆಸರಿಲ್ಲದ ಮೈನಾರಿಟಿ ಮುಖ್ಯಮಂತ್ರಿಯೊಬ್ಬ ಮುಚ್ಚುಮರೆಯಿಲ್ಲದೆ ನಿಜ ಹೇಳಿ ನಿಭಾಯಿಸಿಕೊಳ್ಳುವುದೆಂದರೆ, ಅದೇನು ತಮಾಷೆಯೋ? ದೊಂಬರಾಟವೋ? ಸರ್ಕಸ್ಸೋ? ಇಲ್ಲವೇ ಮಟ್ಟಿ ಕಸರತ್ತೋ?... ನಿಜ ಹೇಳುವುದು ಇಷ್ಟು ಸುಲಭವಲ್ಲ!...
***

ನಿಜ ಹೇಳುವುದು ಸುಲಭವಲ್ಲ ಮತ್ತು ಸು ಲಾ ಭವಲ್ಲವೆಂಬುದು ದೇವರಾಜ ಅರಸಿನವರಿಗೆ ಅನತಿ ಕಾಲದಲ್ಲಿಯೇ ಮನವರಿಕೆಯಾಗಿ ಮುಂದಿನ ಅಸೆಂಬ್ಲಿ ಸೆಷನ್ನಿನ ಹೊತ್ತಿಗೆ ಅವರು ‘ಸೀಜನ್‌ಡ್‌ ಡಿಪ್ಲೊಮ್ಯಾಟ್‌’ ಆಗುವರೆಂದು ನಮ್ಮ ಚಿತ್ರಗುಪ್ತ ಭವಿಷ್ಯ ನುಡಿಯುತ್ತಿಧಾನೆ... ಪಾಕಲಾಮ್‌!

ADVERTISEMENT

***
ಜುಲೈ 15, 1972
ಕನ್ನಡ ರಾಜ್ಯದ ಹೊಸಾಹೊಸ (ಅರಸು) ಮಂತ್ರಿ ಮಂಡಲದ ಹಲವು ಮಂತ್ರಿಗಳು ‘ತಮ್ಮ ತಮ್ಮವ’ರನ್ನೇ ‘ಐನಾತಿ’ ಸ್ಥಾನಗಳಿಗೆ ನೇಮಕ ಮಾಡಿರುವ ಬಗ್ಗೆ ವಾಚಕ ಮಹನೀಯರನ್ನೇಕರು– ಈ ಸಂಬಂಧದ ಛೂಬಾಣವನ್ನು ಮೀರಿಸುವಂಥ ಸುದ್ದಿಗಳನ್ನು ನೀಡುತ್ತಿದ್ದಾರೆ... ನಿಜ ಪರಿಸ್ಥಿತಿಯ ನಿರೂಪಣೆ!... ಅಷ್ಟೆ!...
***

ನಿಜ ಪರಿಸ್ಥಿತಿಯ ನಿರೂಪಣೆ... ಈ ಹಿಂದೆಯೇ ಈ ಕಾಲಮ್ಮಿನಲ್ಲಿ ಬರೆದಂತೆ, (ಅರಸರು ‘ಅರಸ’ರನ್ನೇ ಖಾಸಾ ಕೆಲಸಕ್ಕೆ ನೇಮಿಸಿಕೊಳ್ಳಲು ಸಾಧ್ಯವಿಲ್ಲವಾದರೂ) ಬಾಕೀ ಮಂತ್ರಿಗಳ ಪೈಕಿ, ಬಹುತೇಕ ಮಂದಿ ‘ತಮ್‌ ತಮ್‌’ ಅವರನ್ನೇ ಖಾಸಾ ಸ್ಟಾಫ್‌ಗೆ ನೇಮಿಸಿಕೊಂಡಿದಾರೆಂಬುದು ಈಗಾಗಲೇ ವ್ಯಕ್ತವಾಗಿದೆಯಷ್ಟೆ...
***

‘ತಮ್‌ ತಮ್ಮವರ’ರಿಗೆ ಐನಾತಿ ಸ್ಥಾನಗಳನ್ನು ಹಂಚಿಯಾದ ಮೇಲೆಯೂ, ಉಳಿದಿರುವ ಇಂಪಾರ್ಟೆಂಟ್‌ ‘ತಮ್ಮವ’ರಿಗೆ ಹೊಸ ಸ್ಥಾನಗಳನ್ನು ಸೃಷ್ಟಿಸುವ ಬಗ್ಗೆ ಕೆಲವು ಮಂತ್ರಾಲಯಗಳ ಗಮನಹರಿಯುತ್ತಿದೆಯೆಂದು ನಮ್ಮ ಚಿತ್ರಗುಪ್ತ ವರದಿ ಮಾಡುತ್ತಾನೆ!... ಇಲ್ಲವಾದರಿಲ್ಲವೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.