ADVERTISEMENT

ಜಲದ ಹೂ ಅರಳಲೆಂದು

ಸುಬ್ಬು ಹೊಲೆಯಾರ್
Published 1 ಏಪ್ರಿಲ್ 2017, 19:30 IST
Last Updated 1 ಏಪ್ರಿಲ್ 2017, 19:30 IST
ಚಿತ್ರ: ಶಶಿಕಿರಣ ದೇಸಾಯಿ
ಚಿತ್ರ: ಶಶಿಕಿರಣ ದೇಸಾಯಿ   

ವಿನಯದ ಕಲ್ಲು ಹೊತ್ತು ನಿಂತಿದ್ದಾರೆ
ಒಳ್ಳೆಯವರಾಗುವುದಕ್ಕೆ, ಕರುಣೆ ಉಕ್ಕಿಸಲಿಕ್ಕೆ
ಎಷ್ಟು ಕಷ್ಟನೋಡಿ 
ಹೀಗೆ ಬರೆದಷ್ಟು ಸುಲಭವೇ ಈ ಭಾರ
ಅರಿವಿಲ್ಲ ಅಜ್ಞಾಪಿಸಿದವರಿಗೆ ಗುಲಗಂಜಿಯ ತೂಕ
ಇವರ ಹಲ್ಲು ಉಗುರುಗಳಲ್ಲಿ ಅಂಟಿಕೊಳ್ಳದ ನೆತ್ತರ
ಮೀಸೆಯಲ್ಲಿ ಕಂಡೂ ಕಾಣದಂತೆ ಇದ್ದು 
ಹೇಳುವುದಿತ್ತು ಕಿರೀಟ ಹೊತ್ತು ಮಲಗುತ್ತೀರ? ಎಂದು

ಇವರು ಬರೆದಿದ್ದು ಅವರು ಹೇಳಿದ್ದು
ಕೇಳಿಸಿಕೊಳ್ಳಲೇಬೇಕಾದ ಕಿವಿಗಳು
ಓದಲೇಬೇಕಾದ ಮುಖಗಳು
ಕಾಲ–ದ ಮೇಲೆ  ಎಷ್ಟು ನೀರು ಹರಿದಿದೆ ಎಂದು ಖಾತ್ರಿಯಿಲ್ಲ ಗೆಳೆಯ
ನಿಂತರೆ ಇವರ ಕಾಲುಗಳು ಕರಗಿಹೋಗುತ್ತವೆ
ನಡೆದರೆ ಇವರ ಕಾಲುಗಳು ಹೂತುಹೋಗುತ್ತವೆ.
ಕೂತವರ ಖುಷಿಗೆ ಎಷ್ಟೊಂದು ಹಬ್ಬಗಳು

ಮುಷ್ಟಿಗಾತ್ರದ ಮಣ್ಣು ಉತ್ಪಾದನೆಗೆ ಅದೆಷ್ಟು ಸಾವಿರ ವರ್ಷಗಳು
ಎಂದು ಹೇಳಿದ ಪರಿಸರದ ನಾಗೇಶ ಹೆಗಡೆ
ಗುಟುಕು ನೀರಿಗೆ ಎಷ್ಟು ಲಕ್ಷ ಕೋಟಿ ಕಣಗಳು ಬೇಕು
ಹೊಸನೀರಿಗೆ ಎಷ್ಟೊತ್ತು ಬೊಗಸೆ ಹಿಡಿದು ನಿಲ್ಲಬೇಕು ಸರ್

ADVERTISEMENT

ಹೊಟ್ಟೆ ತುಂಬಿದವರ ಹಸಿವು ಹೆಚ್ಚಿದೆ
ಸಹನೆಯ ಸೊಲ್ಲಡಗಿಸಲು ಸಂತರ ಕೈಯ್ಯಲ್ಲಿ
ಎಷ್ಟೋಂದು ಆಯುಧಗಳ ಹಿಡಿದ
ಲೋಕದ ಸಹಿಷ್ಣುತೆಯ ಮಂದಹಾಸದ ದೇವರ ಮುಖದಲ್ಲಿ
ಈಗ ಹುಟ್ಟಿದ ಮಗುವಿನ ಅಳು

ಸಿದ್ದಾಂತಗಳು ಎಷ್ಟೋಂದು, ಕೆಟ್ಟ ಬಸ್ಸಿನಂತೆ ನಿಂತು ನಿದ್ರಿಸುತ್ತಿವೆ
ಆಕಳಿಸುವ ಮಂತ್ರ ತಂತ್ರಗಳು ಹೊಳೆಯುತ್ತಿವೆ ತುಟಿಗಳಮೇಲೆ
ಕೇರಿಗಳು ದಾಟಲಾಗದೆ ಕಟ್ಟಿಕೊಂಡು ಬೇಲಿಗಳ
ಹಾರಿ ಬೀಳುತ್ತಿವೆ ! ಎಂಥ ನಗೆಪಾಟಲಿನ ಜನರು
ನೋಯದಿರುವ ಲೋಕದಲ್ಲಿ

ಹೆಚ್ಚಾಯ್ತು ಅನ್ನಿಸುತ್ತದೆ ಈ ಬೆಳಕು
ಕಣ್ಣು ಕುಕ್ಕಿಸುವ ಉರಿಬಿಸಿಲಿಗೆ
ಉರಿದು ಹೋದ ಉಸಿರು ಹಾಲುಚೆಲ್ಲಿದ ಚಂದ್ರನ ತಂಪು
ಯಾರ ಎದೆಯಲ್ಲಿ ಈಗ

ಬರುತ್ತಿರುವವನು ದೂರದಲ್ಲಿ ಇಷ್ಟು ಸಣ್ಣದಾಗಿ ಕಾಣುತ್ತಾನೆ
ಹಾಗಂತ ಆಳೆತ್ತರ ನಿಂತ ನನಗೆ, ಬರುತ್ತಿರುವವನಿಗೆ ನಾನು
ಅವನಿಗಿಂತ ಸಣ್ಣದಾಗಿ ಕಾಣಿಸುತ್ತಿರುವೆನೆಂದು ಅರಿವಾಗಿ
ಎಷ್ಟೊಂದು ದೋಷ ಈ ಕಣ್ಣು ಮನಸ್ಸುಗಳಿಗೆ
ಚಿಗುರಲಾರ ಮತ್ತೆ ಮತ್ತೆ ಗರಿಕೆಯಂತೆ

ಎಲ್ಲರನ್ನು ಸಂತೈಸುವ ಗಾಳಿಯ ಕೈಹಿಡಿದು
ಕೇಳಬೇಕು ಅನ್ನಿಸುತ್ತದೆ
ಎಲ್ಲರೊಳಗೆ ಹೋಗಿಬರುವ ನೀನು
ಒಂದಿಷ್ಟು ಬುದ್ದಿ ಹೇಳಬಾರದ ಎಂದರೆ
ಗಾಳಿಮಾತು ಅಂದುಬಿಡುತ್ತಾರೆ ಗೆಳೆಯ.

ಜೀವ ಮೊಳಕೆಯೊಡೆದ ನೆಲದಲ್ಲಿ
ಬೀದಿಗಳು ಬಿಕ್ಕಳಿಸುತ್ತಿವೆ, ಮಾತುಗಳು ಮುಗಿಯದ ನಗರಗಳಲ್ಲಿ
ಸಿಂಕ್ ಟ್ಯಾಂಕ್ ಮೇಲೆ ಕೂತ ಹಕ್ಕಿಗಳಿಗೆ ನೀರು ಸಿಗುತ್ತಿಲ್ಲ
ಅವುಗಳ ಕಣ್ಣೀರಿನ ಭಾರಕ್ಕೆ 
ಪರ್ವತಗಳೇ ಕರಗಿ ಹರಿಯುತ್ತಿವೆ ಎಂದು ಗುನುಗುತ್ತಾ ಕುಳಿತಿದ್ದೇನೆ.

ದು:ಖವಿಲ್ಲದ ಯಾವ ಊರಿನಿಂದ ಸುರಿಯುವ
ಈ ಮಳೆಯ ನೀರು ಬೀಸುವ ಗಾಳಿಯ ಮೇಲೆ
ಯಾರ ಸಹಿಯಿದೆ ನಿಂತ ನೆಲದ ಮೇಲೆ

ಬರದ ಬಿರುಕುಗಳಲ್ಲಿ ಜಲದ ಹೂ ಅರಳಲೆಂದು
ಕರುಣಿಸು ದೇವರೆ ಪ್ರಾರ್ಥಿಸುತ್ತೇನೆಂದು ಹೇಳಬಹುದಿತ್ತು
ಆದರೆ ಆಕಾಶದ ನಕ್ಷತ್ರಗಳ ಎಣಿಸಿ ಮುಗಿಸುವುದು ಯಾವಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.