ADVERTISEMENT

ಟ್ಯಾಂಗೊ! ಕಣ್ಣಲ್ಲಿ ಕಣ್ಣಿಟ್ಟು ನೋಡು

ಎಚ್.ಎಸ್.ಅನುಪಮಾ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ಟ್ಯಾಂಗೊ!  ಕಣ್ಣಲ್ಲಿ ಕಣ್ಣಿಟ್ಟು ನೋಡು
ಟ್ಯಾಂಗೊ! ಕಣ್ಣಲ್ಲಿ ಕಣ್ಣಿಟ್ಟು ನೋಡು   

ಜನಪದ ಕಲಾಪ್ರಕಾರಗಳ ಹುಟ್ಟು ಅರಸುವುದು ನದೀಮೂಲ ಹುಡುಕುವಂತೆಯೇ ನಿಗೂಢ, ಕುತೂಹಲಕರ. ಆಯಾ ದೇಶಕಾಲಗಳ ಅಗತ್ಯಗಳಿಗೆ ತಕ್ಕಂತೆ ಅದರ ನಡುವಿನಿಂದಲೇ ಎದ್ದು ಬರುವ ಸಂಪತ್ತು ಜನಪದ ಕಲೆ. ವಲಸೆ, ಪರಕೀಯರ ಪ್ರಭಾವ, ಶಿಕ್ಷಣ, ಬದಲಾದ ಆದ್ಯತೆಗಳು ಮತ್ತು ಜೀವನ ಮೌಲ್ಯಗಳ ಈಚಿನ ಶತಮಾನಗಳಲ್ಲಿ ಹೊಸಹೊಸ ಜಾನಪದ ಕಲಾಪ್ರಕಾರಗಳು ಹುಟ್ಟುತ್ತಿವೆಯೇ ಎನ್ನುವ ಕುತೂಹಲವಿತ್ತು. ಅರ್ಜೆಂಟೀನಾ ಎಂಬ ‘ಹೊಸ ನಾಡು’ ಸೃಷ್ಟಿಸಿದ ಜಾನಪದ ನರ್ತನ ಟ್ಯಾಂಗೊ ಕುರಿತ ಮಾಹಿತಿ ಅಂಥ ಕುತೂಹಲವನ್ನು ಇನ್ನಷ್ಟು ಪೋಷಿಸಿತು.

ಬ್ಯೂನಸ್ ಐರಿಸ್ ನಗರದ ಅತಿ ಹಳೆಯ ಬೀದಿ ಸ್ಯಾನ್ ಟೆಲ್ಮೊ ನೇಬರ್‌ಹುಡ್, ಬಂದರಿನ ಬಳಿಯಿದ್ದ ಲಾ ಬೊಕಾ ಸ್ಟ್ರೀಟ್, ಕಮಿನಿಟೊ ಸ್ಟ್ರೀಟ್ ಸುತ್ತುತ್ತಿದ್ದೆವು. ಅಲ್ಲಿ ಇಂಥ 48 ನೇಬರ್‌ಹುಡ್‌ಗಳಿವೆ ಎಂದು ಗೈಡ್ ಹೇಳುತ್ತಿದ್ದರು. ಬಂದರಿನ ಸುತ್ತಮುತ್ತ, ಲಾ ಪ್ಲಾಟಾ ನದಿಯ ದಂಡೆಗಳಲ್ಲಿ ಮುಂಬಯಿಯ ಚಾಳುಗಳ ಒಂದು ಕೋಣೆಯ ಮನೆಗಳನ್ನು ನೆನಪಿಸಿದ ‘ಕಾಂಬಾಂಟಿಷಿಯೊ ಮನೆಗಳು’ ವರ್ಣವೈವಿಧ್ಯತೆಯಿಂದ ಗಮನ ಸೆಳೆದವು.

ನಗರದ ಉಳಿದೆಡೆ ಮನೆಗಳಿಗೆ ಹಚ್ಚದ ಗಾಢ, ದಟ್ಟ, ಕಡುಬಣ್ಣಗಳ ವಿಚಿತ್ರ ಕಾಂಬಿನೇಷನ್ ಅನ್ನು ಗೋಡೆ, ಬಾಗಿಲು, ಕಿಟಕಿಗಳಿಗೆ ಬಳಿದು – ಅದರ ಮೇಲೆ ಚಿತ್ರ, ಘೋಷಣೆ, ಜಾಹೀರಾತುಗಳನ್ನು ತುಂಬಿಸಲಾಗಿತ್ತು. ಗೊಂಬೆಗಳನ್ನು ನಿಲ್ಲಿಸಲಾಗಿತ್ತು. ಅದು ಬಡ, ಕೆಳ ಮಧ್ಯಮ ವರ್ಗದವರು ಹೆಚ್ಚಿಗೆ ವಾಸಿಸುವ, ದೂರದ ನಾಡುಗಳಿಂದ ವಲಸೆ ಬಂದವರ ಪ್ರದೇಶ. ತಮ್ಮಿಷ್ಟದಂತೆ ಮನೆ ಕಟ್ಟಿ, ಬಣ್ಣ ಬಳಿಯುವುದು ಅವರಿಗೆ ದುಬಾರಿ. ಹಾಗಾಗಿಯೇ ಹಡಗು ಕಟ್ಟೆಯಿಂದ ಉಳಿದ ಮರಮುಟ್ಟು ತಂದು ಮನೆಕಟ್ಟಿದ್ದಾರೆ.ಉಳಿಕೆ ಬಣ್ಣಗಳ ತಂದು ಮನೆಗಳಿಗೆ ಬಳಿದಿದ್ದಾರೆ. ಒಂದು ಮನೆಯಲ್ಲಿ ಹಲವು ಕೋಣೆ; ಒಂದು ಕೋಣೆಯಲ್ಲಿ ಹಲವು ಜನ.

ಆ ನೇಬರ್‌ಹುಡ್‌ಗಳ ಮತ್ತೊಂದು ವಿಶೇಷ – ರಸ್ತೆ ಮೇಲೆ ನರ್ತಿಸುವ ಜೋಡಿಗಳು! ಎತ್ತರದ, ದಪ್ಪದ, ಬಿಳಿಯ, ಕರಿಯ, ಎಳೆಯ, ನಡುಹರೆಯದ ಎಲ್ಲ ತರಹದ ನರ್ತಕ ನರ್ತಕಿಯರೂ ಬೀದಿಯಲ್ಲಿ ಕಂಡರು. ಬೀದಿಯಲ್ಲಿ ನರ್ತನವೇ ಎಂದುಕೊಳ್ಳುವಾಗ ನಮ್ಮ ಬಳಿ ನರ್ತಿಸುವ ತಂಡವೇ ಬಂತು. ‘ಟ್ಯಾಂಗೋ’ದ ಒಂದೆರೆಡು ಭಂಗಿ ಹೇಳಿಕೊಟ್ಟು, ಫೋಟೊ ತೆಗೆಸಿಕೊಳ್ಳಲು ಪೋಸು ಕೊಟ್ಟರೆ ಮೂರು ಭಂಗಿಗೆ 100 ‘ಪೆಸೊ’ ಕೊಡಲು ಒತ್ತಾಯಿಸಿದರು. ‘ಒಲ್ಲೆ ಒಲ್ಲೆ’ ಎಂದರೂ ಬಿಡದೇ ಕುತ್ತಿಗೆ, ಸೊಂಟಕ್ಕೆ ಕೆಂಪು ಬಟ್ಟೆ ಬಿಗಿದು, ತಲೆಗೆ ಕೆಂಪು ಹ್ಯಾಟು ಇಟ್ಟು, ಮೊದಲ ಪಾಠ ಶುರುಮಾಡೇಬಿಟ್ಟರು.

‘ಇದು ಟ್ಯಾಂಗೊ! ಕಲಿಯಬೇಕೆ? ಹಾಗಾದರೆ ಮೊದಲ ಸ್ಟೆಪ್, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು. ಮೂಗಿಗೆ ಮೂಗು ತಾಗಿಸು’. ತನ್ನ ಬಲಗೈ ಚಾಚಿ ಹೆಣ್ಣಿನ ಎಡಗೈ ಹಿಡಿದು ಅವಳ ನಡು ಬಳಸಿ ನಿಂತ ನರ್ತಕ ಹೇಳಿದ ಮೊದಲ ಮಾತು ಇದು! ಕಣ್ಣಲ್ಲಿ ಕಣ್ಣಿಟ್ಟು ನೋಡಲೆಂದೇ ಹುಟ್ಟಿದ ಯುಗಳ ನರ್ತನ ಟ್ಯಾಂಗೊ. ಅರ್ಜೆಂಟೀನಾ ಮತ್ತು ಉರುಗ್ವೆ ದೇಶಗಳ ನಡುವೆ ಇರುವ ಪ್ರಾಕೃತಿಕ ಗಡಿ ‘ಲಾ ಪ್ಲಾಟಾ’ ನದಿಯ ಎರಡೂ ದಂಡೆಗಳ ಜನರಿಂದ ರೂಪುಗೊಂಡ ನರ್ತನ ಇದು. ಇಂದು ವಿಶ್ವದ ಎಲ್ಲ ಭಾಗಗಳಿಗೂ ಹರಡಿ ಹಲವು ಶೈಲಿಗಳಲ್ಲಿ ಟ್ಯಾಂಗೊ ಚಾಲ್ತಿಯಲ್ಲಿದೆ. ಭಾರತದಲ್ಲೂ ಜನಪ್ರಿಯವಾಗಿದೆ.

ಹೆಣ್ಣುಗಂಡು ಜೊತೆಜೊತೆ ಮುಖಾಮುಖಿಯಾಗುವ ಮೂರೇ ಕಲಾಪ್ರಕಾರಗಳಿವೆ: ವಿಯೆನ್ನೀಸ್ ವಾಲ್ಟ್ಜ್, ಪೊಲ್ಕಾ ಹಾಗೂ ಟ್ಯಾಂಗೊ. ಈ ನೃತ್ಯಪ್ರಕಾರಗಳಲ್ಲಿ ಈಗಲೂ ಜೀವಂತವಾಗಿದ್ದು, ಅಪಾರ ಜನಪ್ರಿಯತೆ ಗಳಿಸಿರುವುದು ಟ್ಯಾಂಗೊ ಮಾತ್ರ. ತರುಣಪೀಳಿಗೆಯ ಅಚ್ಚುಮೆಚ್ಚಿನ ನರ್ತನ ಶೈಲಿ ಈ ಟ್ಯಾಂಗೊ. ಅದು ಪ್ರಣಯದ ಜೊತೆ ಸಾಂಸ್ಕೃತಿಕ ಸಂಬಂಧ ಹೊಂದಿರುವ ಕಲಾಪ್ರಕಾರ. ಅತಿಸಾಮೀಪ್ಯದಲ್ಲಿ ಅತ್ಯಂತ ಲಯಬದ್ಧವಾಗಿ ನರ್ತಕರು ಚಲಿಸುವುದರಿಂದ, ಶೃಂಗಾರಮಯ ಸಾಹಿತ್ಯದ ಕಾರಣದಿಂದ, ಅದು ವೇಶ್ಯಾಗೃಹಗಳಲ್ಲಿ ಹುಟ್ಟಿದ ನರ್ತನ ಎಂಬ ಅಪಕೀರ್ತಿಗೆ ಪಾತ್ರವಾಗಿತ್ತು.

ಅದನ್ನೆಲ್ಲ ಮೀರಿ ‘ಟ್ಯಾಂಗೊ’ ಜನಪ್ರಿಯವಾದ ಬಗೆ ಒಂದು ಕಾಲಮಾನದ ಅಧ್ಯಯನದ ವಸ್ತುವಾಗಬಲ್ಲದು. 19ನೇ ಶತಮಾನದ ಶುರುವಿಗೆ ಅರ್ಜೆಂಟೀನಾ ಸ್ಪ್ಯಾನಿಶ್ ವಸಾಹತುವಾಗಿದ್ದರೂ ಬ್ಯೂನಸ್ ಐರಿಸ್ ನಗರ ಬೆಳೆದಿರಲಿಲ್ಲ. ಯೂರೋಪಿನಿಂದ ದೂರವಿದ್ದ ದಕ್ಷಿಣ ಅಮೆರಿಕಾ ಮತ್ತು ಬ್ಯೂನಸ್ ಐರಿಸ್ ವಲಸಿಗರ ಗಮನ ಸೆಳೆದಿರಲಿಲ್ಲ.

ಆ ವೇಳೆಗೆ ರೈಲುರಸ್ತೆ ನಿರ್ಮಿಸಲು ಅರ್ಜೆಂಟೀನಾಗೆ ಬಂದ ಬ್ರಿಟಿಷರ ಕಣ್ಣು – ಅಲ್ಲಿನ ಕೃಷಿ ಸಮೃದ್ಧಿ, ಗಣಿ ಸಂಪತ್ತುಗಳ ಮೇಲೆ ಬಿದ್ದರೂ ಗುಲಾಮಗಿರಿ ನಿಷೇಧಕ್ಕೊಳಗಾದ ಕಾರಣ ಕೆಲಸ ಮಾಡಲು ಕೂಲಿಗಳಿರಲಿಲ್ಲ. ಆಗ ಅರ್ಜೆಂಟೀನಾ ಆಳ್ವಿಕರು – ವಲಸಿಗರನ್ನು ಸೆಳೆಯಲು ವಿಪುಲ ಉದ್ಯೋಗ ಅವಕಾಶ, ಸುಲಭ ವೀಸಾ, ವಸತಿ ವ್ಯವಸ್ಥೆ, ಒಂದು ವಾರ ಉಚಿತ ರೇಷನ್ ಮೊದಲಾದ ಆಮಿಷಗಳನ್ನೊಡ್ಡಿದರು.

ಉದ್ಯೋಗವನ್ನರಸಿ ಜನಪ್ರವಾಹವೇ ಅರ್ಜೆಂಟೀನಾದತ್ತ ಹರಿಯಿತು. ಕುಟುಂಬರಹಿತರಾಗಿ ವಲಸೆ ಬಂದ ಒಂಟಿಪುರುಷರಿಂದ ಬ್ಯೂನಸ್ ಐರಿಸ್ ತುಂಬಿಹೋಯಿತು. ಬಂದರಿನ ಕೇರಿಗಳು ಕೆಲಸಗಾರರಿಂದ ಕಿಕ್ಕಿರಿದ ಗೂಡುಗಳಾದವು. ಆದರೆ ವಲಸಿಗರಿಗೆ ಕೈತುಂಬ ಕೆಲಸ ಸಿಗಲೂ ಇಲ್ಲ. ಸಿಕ್ಕ ಕೆಲಸದಿಂದ ಕೈತುಂಬ ಗಳಿಸಲೂ ಆಗಲಿಲ್ಲ.

ಸಂಸಾರವಂದಿಗರಾಗುವ ಎಂದರೆ ಅಲ್ಲಿ ಹೆಣ್ಣುಗಳೇ ಇರಲಿಲ್ಲ. ಒಂದೆಡೆ ಕಿತ್ತು ತಿನ್ನುವ ಒಂಟಿತನ. ಮತ್ತೊಂದೆಡೆ ಬಡತನ. ಎಲ್ಲೆಲ್ಲೂ ನಿರಾಶ ಗಂಡಸರು. ಎಲ್ಲಿ ನೋಡಿದರೂ ಗಂಡಸರು! ಒಬ್ಬಂಟಿತನವು ಗಲ್ಲಿಗಲ್ಲಿಗಳ ಉಸಿರುಕಟ್ಟಿಸುತ್ತಿದ್ದ ಕಾಲದಲ್ಲಿ ಅವರವರೇ ಹಾಡಿಕೊಂಡರು, ನರ್ತಿಸಿದರು. ಕೆಲವರು ಗಿಟಾರ್, ಕೊಳಲು, ಪಿಯಾನೊ ನುಡಿಸಿದರು.

ಆಫ್ರಿಕನ್ ಗುಲಾಮರು ಮತ್ತು ಯೂರೋಪಿಯನ್ ಕೂಲಿಗಳ ಸಂಸ್ಕೃತಿಗಳು ಹದವಾಗಿ ಮಿಶ್ರಣಗೊಂಡು; ಆಫ್ರಿಕನ್ ನೃತ್ಯಲಯ, ಯೂರೋಪಿಯನ್ನರ ಹಾಡು ಮಿಳಿತಗೊಂಡು ಟ್ಯಾಂಗೊ ರೂಪುಗೊಂಡಿತು. ಬ್ಯೂನಸ್ ಐರಿಸ್ ಮತ್ತು ಮಾಂಟೆವಿಡಿಯೊ ನಗರಗಳ ಕೆಳವರ್ಗಗಳ ಜನವಸತಿ ಪ್ರದೇಶದಲ್ಲಿ ಟ್ಯಾಂಗೊ ಬೆಳೆಯಿತು. ಯಾವುದೇ ಇತಿಹಾಸ ಬರೆದಿಡಲಾಗದ ಜನ ಟ್ಯಾಂಗೊ ನೃತ್ಯವನ್ನು ಸೃಷ್ಟಿಸಿದರು. ಯುದ್ಧ–ಹಿಂಸೆ–ವಲಸೆ–ವಿಕೋಪಗಳಲ್ಲಿ ತಮ್ಮ ಪ್ರಾಣ ತೆರುವ ಹೊರತು ಮತ್ತಾವ ಚರಿತ್ರೆಯನ್ನೂ ಬರೆದಿಡಲಾರದ ಜನ ಟ್ಯಾಂಗೊ ಬೆಳೆಸಿದರು.

ಶ್ರಮಿಕ ವರ್ಗವನ್ನು ಕಾಡುವ ಒಂಟಿತನವು ಯಾವ್ಯಾವುದನ್ನು ನಾಗರಿಕ ಜಗತ್ತು ‘ಅಪರಾಧ’ ಎನ್ನುವುದೋ, ಅವೆಲ್ಲ ಅಲ್ಲಿ ಬೇರು ಬಿಡಲು ಕಾರಣವಾಯಿತು. ವೇಶ್ಯಾವಾಟಿಕೆ ವೇಗವಾಗಿ ಬೆಳೆಯಿತು. ವೇಶ್ಯೆಯರ ಸಂಖ್ಯೆ ಕಡಿಮೆಯಿದ್ದುದರಿಂದ ವೇಶ್ಯಾಗೃಹಗಳಲ್ಲಿ ಲೈನ್ ಹಚ್ಚಿ ಕ್ಯೂನಲ್ಲಿ ಕಾಯುವವರ ಸಂಖ್ಯೆ ಅದಕ್ಕಿಂತ ವೇಗವಾಗಿ ಬೆಳೆಯಿತು.

ಕಾಯುವವರ ಬೇಸರ ಕಳೆಯಲು ವೇಶ್ಯಾಗೃಹಗಳ ಮಾಲೀಕರು ಸ್ಥಳೀಯ ಟ್ಯಾಂಗೊ ಸಂಗೀತಗಾರರನ್ನು, ನರ್ತನಕಾರರನ್ನು ನೇಮಿಸಿದರು. ನರ್ತನ ಬಲುಬೇಗ ಜನಪ್ರಿಯವಾಯಿತು. ಏಕೆಂದರೆ ಆಗ ಹೆಣ್ಣಿನ ಸಾಮೀಪ್ಯಕ್ಕೆ ಇದ್ದದ್ದು ಎರಡೇ ದಾರಿ: ನರ್ತನ ಅಥವಾ ವೇಶ್ಯಾಗೃಹ. ಒಳ್ಳೆಯ ನರ್ತನ ಕಲಿತರೆ ಉತ್ತಮ ಹೆಣ್ಣುಗಳ ಜೊತೆ ನರ್ತಿಸಲು ಅವಕಾಶ ಸಿಗುತ್ತಿತ್ತು.

ಉತ್ತಮ ನರ್ತಕರೊಡನೆ ನರ್ತಿಸಲು ಹೆಣ್ಣುಗಳೂ ಬಯಸುತ್ತಿದ್ದರು. ಹೀಗೆ ಹೆಣ್ಣಿನ ಸಂಪರ್ಕಕ್ಕೆ ಬರುವ ಏಕಮೇವ ಹಂಬಲದೊಂದಿಗೆ ತರುಣರು ಟ್ಯಾಂಗೊ ಕಲಿಯತೊಡಗಿದರು. ಎಲ್ಲೇ ‘ಲೈವ್’ ಸಂಗೀತ ಕೇಳಿದರೂ ತರುಣರು ಹೆಜ್ಜೆ ಹಾಕತೊಡಗಿದರು. ಮಧ್ಯಮ ವರ್ಗದವರು ಹೆಣ್ಣುಗಳೊಂದಿಗೆ ನರ್ತಿಸುವ ಕೆಳವರ್ಗದ ಹಾಡುಗಾರರನ್ನು ಮೊದಲು ನೋಡಿದ್ದು ವೇಶ್ಯಾಗೃಹಗಳಲ್ಲಿ. ಹಾಗಾಗಿ ಆ ವರ್ಗದ ಇತಿಹಾಸಕಾರರು ಟ್ಯಾಂಗೊ ವೇಶ್ಯಾಗೃಹದಲ್ಲಿ ಹುಟ್ಟಿತೆಂದು ಭಾವಿಸಿದರು.

ಕೆಳವರ್ಗದವರಿಂದ ಶುರುವಾದ ಕಾರಣ ಸಮಾಜದ ಗಮನ ಸೆಳೆಯದೆ, ನಿಷೇಧ ದಾಟಲಾಗದೆ ಟ್ಯಾಂಗೊ ‘ಗೌರವಾನ್ವಿತ’ ಎನ್ನಿಸಿಕೊಳಲು ಬಹುಕಾಲ ಕಾಯಬೇಕಾಯಿತು.ಅದಕ್ಕೆ ಸರಿಯಾಗಿ ಮೊದಮೊದಲು ‘ಟ್ಯಾಂಗೊ ಸಾಹಿತ್ಯ’ ತಮಾಷೆಯ, ‘ಅಸಭ್ಯ’ ಎಂದು ಕರೆಸಿಕೊಳುವ ಪದ, ಸಾಲುಗಳಿಂದ ತುಂಬಿತ್ತು. ಆದರೆ ಯಾವಾಗ ಯೂರೋಪು ತಲುಪಿ, ಮತ್ತೆ ಅರ್ಜೆಂಟೀನಾಗೆ ಬಂದು ಮಧ್ಯಮವರ್ಗದ ಹುಡುಗ ಹುಡುಗಿಯರು ಕಲಿಯುವ ನರ್ತನವಾಯಿತೋ ಆಗ ಸಾಹಿತ್ಯ ಬದಲಾಯಿತು. ಹೊಸ ವಾದ್ಯಗಳು ಸೇರ್ಪಡೆಯಾದವು. ಅತ್ಯುತ್ತಮ ಸಂಗೀತ, ಹಾಡುಗಾರರು ಬಂದರು. ಅರ್ಜೆಂಟೀನಾ ಮತ್ತು ಉರುಗ್ವೆ ಸೃಷ್ಟಿಸಿದ ಅತ್ಯುತ್ತಮ ಕವಿಗಳು ಟ್ಯಾಂಗೊ ಹಾಡು ಬರೆದರು.

ಅದು ಟ್ಯಾಂಗೊದ ಉಚ್ಛ್ರಾಯ ಕಾಲ. ನಂತರ ಮಿಲಿಟರಿ ಆಡಳಿತವು ಟ್ಯಾಂಗೋ ನಿಷೇಧಿಸಿದರೆ, ನಂತರ ಅರ್ಜೆಂಟೀನಾ ಆಡಳಿತದ ಚುಕ್ಕಾಣಿ ಹಿಡಿದ ಪೆರೋನ್ ಅವರು ಟ್ಯಾಂಗೊ ನೃತ್ಯ ಪ್ರಕಾರಕ್ಕೆ ಮಾನ್ಯತೆ ತಂದುಕೊಟ್ಟರು. ನಂತರ ಮತ್ತೆ ಬಂದ ಮಿಲಿಟರಿ ಸರ್ವಾಧಿಕಾರ ಅದನ್ನು ನಿಷೇಧಿಸಿತು. ಅದರ ಸಾಹಿತ್ಯ ಬದಲಾಯಿತು.ವಾದನಶೈಲಿ ಬದಲಾಯಿತು. ಕೊನೆಗೆ ವಿಶ್ವಕಪ್ ಫುಟ್ಬಾಲ್ ವೇಳೆ ಟ್ಯಾಂಗೊ ಮತ್ತೆ ಜನಪ್ರಿಯವಾಯಿತು.

ನಿಷೇಧವೋ ಪ್ರೋತ್ಸಾಹವೋ, ನರ್ತನದ ಷೋಗಳಿಗೆ ಜನ ಹೋಗುವುದು ನಿಲ್ಲಲಿಲ್ಲ. ಏಳುಬೀಳು ಕಾಣುತ್ತ ಹೋದರೂ ಟ್ಯಾಂಗೊ ಜಗತ್ತಿನ ಅತ್ಯಂತ ಜನಪ್ರಿಯ ಕಲಾಪ್ರಕಾರಗಳಲ್ಲಿ ಒಂದು ಎನಿಸಿಕೊಳುವುದನ್ನು ಯಾರೂ ತಡೆಯಲಾಗಲಿಲ್ಲ.

ಕುಣೀಬೇಕ, ಮೈ ಮಣೀಬೇಕ...
ಹಗಲಿಡೀ ತಲೆಯಲ್ಲಿ ಟ್ಯಾಂಗೊ ತುಂಬಿಕೊಂಡು ಬ್ಯೂನಸ್ ಐರಿಸ್ ಸುತ್ತಿದ ನಮಗೆ, ಆ ರಾತ್ರಿ ಡಾನ್ಸ್ ಫ್ಲೋರಿನಲ್ಲಿ ಅವಿಸ್ಮರಣೀಯ ಅನುಭವವಾಯಿತು. ಯಾವುದೋ ಹಾಲಿವುಡ್ ಸಿನಿಮಾ ದೃಶ್ಯವೊಂದರಲ್ಲಿ ನಾವಿಲ್ಲವಷ್ಟೆ ಎಂದು ಮತ್ತೆಮತ್ತೆ ಮುಟ್ಟಿ ನೋಡಿಕೊಂಡೆವು. ಜೆಟ್‌ಲ್ಯಾಗಿನಿಂದ ಉರಿಯುತ್ತಿದ್ದ ಕಣ್ಣುಗಳು, ಇಡಿಯ ದಿನ ತಿರುತಿರುಗಿ ದಣಿದ ಕಾಲುಗಳು ಇಲ್ಲ ಎಂದು ಹೇಳುತ್ತಿದ್ದವು.

ಅದೊಂದು ಭವ್ಯ ಹೋಟೆಲಿನ ವೈಭವೋಪೇತ ವಿಶಾಲ ಹಜಾರ. ಅಕೋ ಅಷ್ಟು ದೂರದಲ್ಲಿ ರಂಗಸ್ಥಳ. ಇಳಿಬಿಟ್ಟ ನೀಲಿ ಪರದೆಯ ಹಿಂದೆ ಥಳಥಳಿಸುವ ಲೈಟು. ಎದುರು ಬದುರು 1+1, 2+2, 3+3 ಜನ ಕೂರುವಂತೆ ಸಾಲುಸಾಲಾಗಿ ಟೇಬಲ್ಲು ಕುರ್ಚಿಗಳು. ಟೇಬಲ್ಲಿನ ಮೇಲೆ ಮುಟ್ಟಿದರೆ ಮಾಸುವುದೇನೊ ಅನ್ನಿಸುವಷ್ಟು ಬಿಳಿಯ ಕರ್ಚೀಫು.

ಆಗಲೇ ಅಲ್ಲೊಬ್ಬರು ಇಲ್ಲೊಬ್ಬರು ಬಂದು ಕೂತಿದ್ದರು. ರಂಗ ಚೆನ್ನಾಗಿ ಕಾಣುವ ಒಂದು ಜಾಗ ಆರಿಸಿ ಮಬ್ಬು ಬೆಳಕಿನಲ್ಲಿ ನಾವೂ ಕುಳಿತೆವು. ತರಹೇವಾರಿ ಹ್ಯಾಟು, ಲಂಗ, ಮಿನಿಲಂಗ ತೊಟ್ಟು ತಂತಮ್ಮ ಪುರುಷರ ಕೈಹಿಡಿದು ಜೋಡಿಗಳು ಬಂದೇಬಂದವು. ‘ಟೈಟಾನಿಕ್’ ಸಿನಿಮಾದಲ್ಲಿ ಹಡಗು ಒಡೆಯುವ ಮುನ್ನ ರೋಸ್ ಮತ್ತು ಜ್ಯಾಕ್ ಬಾಲ್ ರೂಮಿಗೆ ಬಂದ ದೃಶ್ಯ ನೆನಪಾಯಿತು. ಬೃಹತ್ ಹಾಲಿನಲ್ಲಿ 300–400 ಜನ ತುಂಬಿದರು.

ನಮ್ಮ ಕಣ್ಣನ್ನು ರಂಗದ ಮೇಲೆ ಕೀಲಿಸಿಕೊಂಡೇ ಇದ್ದೆವು. ಪಿಸಿಪಿಸಿ ಮಾತನಾಡುತ್ತಿದ್ದ ಆಚೀಚಿನವರು ಟಣಟಣ ಸದ್ದು ಕೇಳಿದ್ದೇ ಮೌನವಾದರು. ಟ್ರಾಲಿಯಲ್ಲಿ ತರತರಹದ ಬಾಟಲಿ, ಗ್ಲಾಸು, ಚಮಚ, ಫೋರ್ಕುಗಳು ಬಂದವು. ತಣ್ಣಗೆ ಕೊರೆವ ಎಸಿ ಹಾಲಿನಲ್ಲಿ ಒಂದೊಂದು ಟೇಬಲ್ಲಿಗೆ ಒಬ್ಬೊಬ್ಬ ಶಿಸ್ತಿನ ಸಹಾಯಕ ನಿಂತು ಕೇಳಕೇಳಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ಕೊಡುತ್ತಿದ್ದ. ಒಂದೆರೆಡು ತಾಸಿನಲ್ಲಿ ಎಲ್ಲರ ಊಟ ಮುಗಿಯಿತು. ತೆರೆ ಮೇಲೆದ್ದಿತು.

ಝಗಮಗಿಸುವ ರಂಗದೊಳಗಿನ ಬಾಲ್ಕನಿಯಲ್ಲಿ ಐದಾರು ಜನ ವಾದ್ಯ ಬಾರಿಸುತ್ತ ಕೂತಿದ್ದರು. ಅತ್ಯಾಕರ್ಷಕ ಮೈಮಾಟ, ದಿರಿಸಿನ ಒಂದು ಜೋಡಿ ರಂಗದ ಮೇಲೆ ಬಂತು.ಹಿನ್ನೆಲೆಯ ಲೈವ್ ಹಾಡಿಗೆ ನೃತ್ಯವೇ ಮೈವೆತ್ತಂತೆ ತನ್ಮಯವಾಗಿ ನರ್ತಿಸಿತು. ನಂತರ ಒಂದಾದಮೇಲೊಂದು ಐದಾರು ಜೋಡಿಗಳು ಒಂದೂವರೆ ತಾಸು ಕಾಲ ‘ನಾ ಕುಣೀಬೇಕ, ಮೈ ಮಣೀಬೇಕ’ ಎನ್ನುವಂತೆ ನರ್ತಿಸಿದರು.

ಎಲ್ಲ ಹಾಡೂ, ವಿವರಣೆಯೂ ಸ್ಪ್ಯಾನಿಶ್–ಪೋರ್ಚುಗೀಸ್ ಭಾಷೆಯಲ್ಲೇ ಇತ್ತು. ಆ ಭಾಷೆ ಹಾಗೂ ಪಾಶ್ಚಾತ್ಯ ಸಂಗೀತ ಕುರಿತ ನಮ್ಮ ಅಜ್ಞಾನದ ಕಾರಣ ಆವೇಶಭರಿತರಾಗಿ, ಭಾವಭರಿತವಾಗಿ ಹಾಡುಗಾರ–ಹಾಡುಗಾರ್ತಿಯರು ಹಾಡಿದರೂ; ಎಲ್ಲ ಚಪ್ಪಾಳೆ ತಟ್ಟಿ ಉದ್ಗಾರ ಸೂಸುತ್ತಿದ್ದರೂ ಹಾಡು ವಿಶೇಷವೆನಿಸಲಿಲ್ಲ. ತಾರಕದ ಹಾಡು ಗಲಾಟೆಯಂತೆ ಕೇಳಿಸಿದರೆ, ಹಿನ್ನೆಲೆ ವಾದ್ಯದ ಆವೇಗ ಟಾಮ್ ಅಂಡ್ ಜೆರ್ರಿಯನ್ನು ನೆನಪಿಸಿತು. ಹಾಡು ಅರ್ಥವಾಗದಿದ್ದರೇನಂತೆ, ಸಾಮರಸ್ಯ ಮತ್ತು ಲಯ ಅನನ್ಯವಾಗಿ ಬೆರೆತ, ಲವಲೇಶದಷ್ಟೂ ಕುಂದಿಲ್ಲದ ನರ್ತನವು ಭಾಷೆಯ ಹಂಗಿಲ್ಲದೆ ಕಣ್ಮನ ತಣಿಸಿತು.

ನಮಗೆ ಹೊಚ್ಚಹೊಸದಾದ ಲಯ–ಭಂಗಿಗಳಲ್ಲಿ, ಅತಿ ವಿಶಿಷ್ಟವಾದ ಶೈಲಿಯಲ್ಲಿ ಕಲಾವಿದರು ಪ್ರದರ್ಶನ ನೀಡಿದರು. ಹುರಿಹುರಿಯಾದ ಸಪೂರ ಮೈಕಟ್ಟಿನ ನರ್ತಕ ನರ್ತಕಿಯರು ಥಳಥಳಿಸುವ ಬಟ್ಟೆ ತೊಟ್ಟು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, ಅಪ್ಪಿ ಹಿಡಿದ ಭಂಗಿಯಲ್ಲಿ ನರ್ತಿಸುತ್ತಿದ್ದರು. ಅದರ ಮೂಲಭಂಗಿ ‘ಅಬ್ರಾಜೊ’ (ಎಂಬ್ರೇಸ್) – ಎಂದರೆ ಅಪ್ಪುಗೆ. ದುಃಖ, ಕಾತರ, ವಿಷಾದ, ಸಂತಸ, ವಿರಹಗಳ ತೀವ್ರ ಭಾವಾಭಿವ್ಯಕ್ತಿಗೂ ಆಂಗಿಕ ಅಭಿನಯಕ್ಕಿಂತ ಮಿಂಚಿನ ಚಲನೆಗೇ ಅಲ್ಲಿ ಆದ್ಯತೆ. ಎರಡು ದೇಹಗಳು ಒಂದೇ ರೀತಿ ಚಲಿಸಿದವು. ಇಬ್ಬರದೂ ಒಂದೇ ಪಾದವೇನೊ ಎನ್ನುವಷ್ಟು ಹೊಂದಾಣಿಕೆಯ ಲಾಲಿತ್ಯಪೂರ್ಣ ಚಲನೆ.

ಸಮತೋಲನದ ಲಯ ಮತ್ತು ವೇಗವೇ ಟ್ಯಾಂಗೊ ನೃತ್ಯದ ಹೆಚ್ಚುಗಾರಿಕೆ. ಬಾಗುವುದು, ಬಳುಕುವುದು, ಬಗ್ಗಿಸುವುದು, ಬಿಸಾಡುವುದು, ದೂಡುವುದು, ಬೀಳಿಸುವುದು, ಎತ್ತುವುದು ಮೊದಲಾದ ಚಿತ್ರವಿಚಿತ್ರ ಚಲನೆಗಳನ್ನು ತೆರೆದ ಬಾಯಿಮುಚ್ಚದೇ ನೋಡಿದೆವು. ಒಲಿಸುವ, ಒಲಿಯುವ, ಆನಂದಮಯವಾಗುವ ಚಲನೆಗಳೇ ಇದ್ದಂತೆನಿಸಿತು.

ಕಲಾವಿದರು ಸುತ್ತಲ ಪರಿವೆಯೇ ಇಲ್ಲದಂತೆ ನರ್ತಿಸಿ ಗಂಧರ್ವಲೋಕ ಸೃಷ್ಟಿಸಿದರು. ನೋಡುಗರೂ ಕಾಲದೇಶಗಳ ಮರೆವಂತೆ ಮಾಡಿದರು. ಆ ಸಂಗೀತ ಮಾದಕ.ನರ್ತಿಸುವವರ ಮೈಮಾಟ ಮಾದಕ. ನರ್ತನ ಶೈಲಿ ಮಾದಕ. ಮತ್ತು ಏರಿಸಲು ಏನೇನು ಬೇಕೋ ಎಲ್ಲ ಅದರಲ್ಲಿದೆ. ಕೆನ್ನೆಗೆ ಕೆನ್ನೆ, ಎದೆಗೆ ಎದೆ, ತೊಡೆಗೆ ತೊಡೆ ತಾಗಿಸಿ ಕಾಲುಗಳ ನಡುವೆ ಕಾಲುಗಳ ಸರಾಗ ಹರಿದಾಡಿಸಿ ವೇಗವಾಗಿ ಚಲಿಸುವ ಜೋಡಿಗಳು ಅರ್ಧನಾರೀಶ್ವರರಂತೆ ಕಾಣಿಸಿದವು.

ಈ ಚಲನೆ, ಈ ನರ್ತನ ಏನು ಹೇಳುತ್ತಿದೆ? ಸಮಾಜ ಗಂಡು–ಗಂಡಾದರೆ ಎದುರಾಗುವ ಅಪಾಯಗಳ ಕುರಿತೆ? ಒಂಟಿ ದೇಹ–ಮನಸುಗಳ ತೀವ್ರ ಭಾವಾಭಿವ್ಯಕ್ತಿಯನ್ನು ಚಲನೆಯಲ್ಲಿ ಮಣಿಸಬಹುದೆಂದೆ? ಸಾಂಗತ್ಯವು ಕಾಮಕೇಂದ್ರಿತವಾಗಷ್ಟೇ ಅಲ್ಲದೆ ಜೀವನೋತ್ಸಾಹದ ಸೆಲೆಯಾಗುವುದು ಹೇಗೆಂದು ಹೇಳುತ್ತಿದೆಯೆ?
ಏನಾದರೂ ಇರಲಿ, ಕಣ್ಣಲ್ಲಿ ಕಣ್ಣಿಟ್ಟು ನೋಡಲೂ ಪುರುಸೊತ್ತಿಲ್ಲದೆ ಸಂಬಂಧಗಳು ಹದಗೆಡುತ್ತಿರುವ ವೇಗದ ಕಾಲದಲ್ಲಿ ಕಣ್ಣಿಟ್ಟು ನೋಡುವುದನ್ನಾದರೂ ಕಲಿಸುವ ಕಲೆಗೆ ಮನುಷ್ಯ ಕುಲ ಋಣಿಯಾಗಿರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT