ADVERTISEMENT

ತಬಲಾ ಪ್ರತಿಭೆ ವಿಜಯ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST
ತಬಲಾ ಪ್ರತಿಭೆ ವಿಜಯ್‌
ತಬಲಾ ಪ್ರತಿಭೆ ವಿಜಯ್‌   

ಪಂಡಿತ್ ವಿಜಯ್ ಘಾಟೆ ತಮ್ಮ ಮೂರನೇ ವಯಸ್ಸಿನಲ್ಲಿಯೇ ತಾಯಿಯನ್ನು ತಮ್ಮ ಲಯಜ್ಞಾನದಿಂದ ಚಕಿತಗೊಳಿಸಿದರು. ಮಧ್ಯಪ್ರದೇಶದ ಜಬಲ್‌ಪುರದ ತಮ್ಮ ಮನೆಯಲ್ಲಿ ತಾಯಿ ಹಾಡು ಗುನುಗುತ್ತಿದ್ದರೆ, ಮಗ ಅದಕ್ಕೆ ತಕ್ಕಹಾಗೆ ತಾಳ ಹಾಕಿದ. ಅವನ ಪ್ರತಿಭೆಯನ್ನು ಗಮನಿಸಿದ ತಂದೆ–ತಾಯಿ ತಬಲಾ ಕಲಿಯಲು ಹಚ್ಚಿದರು.

ಪ್ರೌಢನಾಗಿದ್ದಾಗ ಪಂಡಿತ್‌ ಜಾಕಿರ್‌ ಹುಸೇನ್‌ ತನ್ನ ಊರಿನಲ್ಲಿ ತಬಲಾ ನುಡಿಸಿದ್ದನ್ನು ವಿಜಯ್‌ ನೋಡಿ, ಪ್ರೇರಣೆ ಪಡೆದರು. ಜಾಕಿರ್‌ ಪ್ರೇರಣೆ ಎಷ್ಟಿತ್ತೆಂದರೆ, ಮುಂಬೈಗೆ ಹೋಗಿ ಸುರೇಶ್‌ ತಲವಾಲ್ಕರ್‌ ಅವರ ಬಳಿ ಇಪ್ಪತ್ತೊಂದು ವರ್ಷ ತಬಲಾ ಕಲಿತರು.

ಗಾಯನ, ವಾದ್ಯ ಸಂಗೀತ ಹಾಗೂ ನೃತ್ಯ ಮೂರೂ ಪ್ರಕಾರಗಳಿಗೆ ತಬಲಾ ಸಾಥ್‌ ನೀಡುವ ಪಂಡಿತ್‌ ಘಾಟೆ ಅನೇಕ ಶ್ರೇಷ್ಠ ಕಲಾವಿದರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಉಸ್ತಾದ್‌ ವಿಲಾಯತ್‌ ಖಾನ್‌, ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ, ಉಸ್ತಾದ್‌ ಅಮ್ಜದ್‌ ಅಲಿ ಖಾನ್‌, ಪಂಡಿತ್‌ ಬಿರ್ಜು ಮಹಾರಾಜ್‌, ಪಂಡಿತ್‌ ಜಸರಾಜ್‌ ಅವರಲ್ಲಿ ಪ್ರಮುಖರು. ಅಷ್ಟೇ ಅಲ್ಲದೆ ಸಮಕಾಲೀನ ಸಂಗೀತಗಾರರಾದ ಲೂಯಿ ಬ್ಯಾಂಕ್ಸ್‌, ಶಂಕರ್‌ ಮಹಾದೇವನ್‌, ಶಿವಮಣಿ ಮೊದಲಾದವರಿಗೂ ತಬಲಾ ಸಾಥ್‌ ನೀಡಿದ್ದಾರೆ.

ಫ್ಯೂಷನ್‌ ಸಂಗೀತ ಮೂಡಿಸಲು ಪಾಶ್ಚಾತ್ಯ ಕಲಾವಿದರ ಜೊತೆಗೂ ಅವರು ಯಶಸ್ವಿಯಾಗಿ ತೊಡಗಿಕೊಂಡವರು. ಪಂಡಿತ್‌ ಘಾಟೆ ‘ತಾಲ್‌ಚಕ್ರ’ ಹೆಸರಿನಲ್ಲಿ ಪುಣೆ ಸಂಗೀತೋತ್ಸವವನ್ನು ಆಯೋಜಿಸುತ್ತಾ ಬಂದಿದ್ದು, ಅದರಲ್ಲಿ ಯುವ ಹಾಗೂ ಉದಯೋನ್ಮುಖ ಕಲಾವಿದರನ್ನು ಉತ್ತೇಜಿಸುತ್ತಾ ಬಂದಿದ್ದಾರೆ.

ಪ್ರತಿಭಾವಂತರಿಗೆ ಅಗತ್ಯ ಹಣಕಾಸಿನ ನೆರವನ್ನು ಕೂಡ ಒದಗಿಸುವುದು ಅದರ ಉದ್ದೇಶ. ಈ ವರ್ಷ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಸಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT