ADVERTISEMENT

ಧನುಷ್ಕೋಟಿ

​ಪ್ರಜಾವಾಣಿ ವಾರ್ತೆ
Published 6 ಮೇ 2017, 19:30 IST
Last Updated 6 ಮೇ 2017, 19:30 IST
ಧನುಷ್ಕೋಟಿ
ಧನುಷ್ಕೋಟಿ   

ರಾಮೇಶ್ವರಂನಿಂದ 20 ಕಿ.ಮೀ. ದೂರದಲ್ಲಿರುವ ಪಂಬನ್ ದ್ವೀಪದಲ್ಲಿನ ತುತ್ತತುದಿಯಲ್ಲಿ ಧನುಷ್ಕೋಟಿ ಇದೆ. ತಮಿಳುನಾಡಿನ ಈ ಸ್ಥಳ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಎರಡರ ಗಡಿ. ಐದುನೂರಕ್ಕೂ ಹೆಚ್ಚು ಮೀನುಗಾರರು ಅಲ್ಲಿ ವಾಸ ಮಾಡುತ್ತಿದ್ದಾರೆ. ಉಳಿದಂತೆ ಅಲ್ಲಿ ಜನವಸತಿಯಿಲ್ಲ.

ಒಂದು ಕಾಲದಲ್ಲಿ ಧನುಷ್ಕೋಟಿ ಭಾರತದ ಪ್ರಮುಖ ನಗರವಾಗಿತ್ತು. ಭಾರತಕ್ಕೆ ಪ್ರವೇಶಿಸುವ ಮಾರ್ಗವೂ ಆಗಿತ್ತು. ಈಗಿನ ಶ್ರೀಲಂಕಾ ಆಗ ಸಿಲೋನ್ ಆಗಿತ್ತು. ಅಲ್ಲಿನ ತಲೈಮನ್ನಾರ್‌ಗೆ ಪ್ರವಾಸಿಗರು, ವ್ಯಾಪಾರಿಗಳು ಲಗ್ಗೆ ಇಡುತ್ತಿದ್ದರು. ಅಲ್ಲಿ ರೈಲು ನಿಲ್ದಾಣ, ಆಸ್ಪತ್ರೆ, ಶಾಲೆ ಹಾಗೂ ಅಂಚೆಕಚೇರಿ ಇದ್ದವು. ಹೋಟೆಲ್‌ಗಳು, ಅಂಗಡಿಗಳು, ರಾಮೇಶ್ವರಂಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರಿಗಾಗಿ ವಿಶ್ರಾಂತಿ ಕೊಠಡಿಗಳು ಕೂಡ ಇದ್ದವು.

1964ರಲ್ಲಿ ದೊಡ್ಡ ಪ್ರವಾಹ ಇಲ್ಲಿನ ಸ್ಥಿತಿಯನ್ನೇ ಬದಲಿಸಿಬಿಟ್ಟಿತು. ಇಡೀ ನಗರ ನಾಶವಾಯಿತು. ಪಂಬನ್–ಧನುಷ್ಕೋಟಿ ಪ್ಯಾಸೆಂಜರ್ ರೈಲಿನಲ್ಲಿದ್ದ 110 ಪ್ರಯಾಣಿಕರು ಪ್ರವಾಹದಲ್ಲಿ ಕೊಚ್ಚಿಹೋದರು. ಆ ದುರಂತದ ಭಾಗವಾಗಿದ್ದ ರೈಲಿನ ಕೊನೆಯಯಾತ್ರೆ ಯಾವ ಹಳಿಯ ಮೇಲೆ ಆಗಿತ್ತೋ ಅದು ಮಾತ್ರ ಪಳೆಯುಳಿಕೆಯಂತೆ ಇದೆ.

ADVERTISEMENT

ದ್ವೀಪ ಹಾಗೂ ಮುಖ್ಯಭೂಮಿಯನ್ನು ಸಂಪರ್ಕಿಸಿದ್ದ ಪಂಬನ್ ಸೇತುವೆ ಕೂಡ ಪ್ರವಾಹದಲ್ಲಿ ನಾಶವಾಯಿತು. 3000 ಜನ ಸಂಪರ್ಕವಿಲ್ಲದೆ ಆಗ ಪರದಾಡಿದ್ದರು. ನಾಲ್ಕು ರೇಡಿಯೋ ಪ್ರಸಾರಕೇಂದ್ರಗಳು ಮಾತ್ರ ಧನುಷ್ಕೋಟಿಯಲ್ಲಿ ಸುದ್ದಿ ಬಿತ್ತರಿಸುವುದನ್ನು ಮುಂದುವರಿಸಿದ್ದವು. ಅದರಿಂದಲೇ ಅಲ್ಲಿನ ದುರಂತದ ಚಿತ್ರಣಗಳು ಜನರಿಗೆ ಗೊತ್ತಾದವು. ನಾಶವಾದ ಸೇತುವೆ ಬಳಿ ಸತತ ಹನ್ನೆರಡು ತಾಸು ನೆಲೆನಿಂತು, ರೇಡಿಯೊ ಬಾತ್ಮೀದಾರರು ಪ್ರತ್ಯಕ್ಷ ವರದಿಗಳನ್ನು ನೀಡಿದರು.

ಪ್ರವಾಹಾನಂತರ ಸರ್ಕಾರ ಧನುಷ್ಕೋಟಿಯನ್ನು ‘ವಿನಾಶಗೊಂಡ ನಗರಿ’ (ಘೋಸ್ಟ್ ಸಿಟಿ) ಎಂದು ಘೋಷಿಸಿತು. ಭಾರತ ಹಾಗೂ ಶ್ರೀಲಂಕಾದ ಏಕೈಕ ಅತಿ ಸಣ್ಣ ಗಡಿಪ್ರದೇಶವಿದು.15 ಕಿ.ಮೀ. ಉದ್ದದ ಕಡಲತಟವೂ ಇದೆ. ಕುತೂಹಲವಿರುವ ಪ್ರವಾಸಿಗರು ಲಾರಿ ಹಾಗೂ ಜೀಪುಗಳಲ್ಲಿ ಕಡಲತಟದ ಮೂಲಕ ಸಾಗಿ, ಈ ಸ್ಥಳವನ್ನು ತಲುಪುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.