ADVERTISEMENT

ನಿಸರ್ಗದ ಕನ್ನಡಿ ‘ದೇವರಿಯಾ ತಾಲ್’

ಚಿನುವಾ
Published 23 ಏಪ್ರಿಲ್ 2016, 19:30 IST
Last Updated 23 ಏಪ್ರಿಲ್ 2016, 19:30 IST
ದೈತ್ಯ ಚೌಖಂಭ ಪರ್ವತ
ದೈತ್ಯ ಚೌಖಂಭ ಪರ್ವತ   

ಹಿಮಪರ್ವತಗಳ ಉದ್ದನೆಯ ಸಾಲು, ಅದರ ಪಕ್ಕದಲ್ಲೆ ನಡುನಡುವೆ ತೋರುವ ಗುಡ್ಡಬೆಟ್ಟಗಳು, ತಣ್ಣನೆ ಹರಿಯುವ ಗಂಗಾ, ಯಮುನಾ ನದಿಗಳು, ವಿವಿಧ ಬಣ್ಣಗಳ ಹೂವು, ಹಣ್ಣು, ಪಕ್ಷಿಗಳಿಂದ ಕೂಡಿರುವ ಉತ್ತರಾಖಂಡ ಪ್ರವಾಸಿಗರ ನೆಚ್ಚಿನ ತಾಣ. ಹಲವಾರು ದೇವಾಲಯಗಳ ನೆಲೆಬೀಡಾಗಿರುವ ಉತ್ತರಾಖಂಡವನ್ನು ‘ದೇವಭೂಮಿ’ ಎನ್ನುತ್ತಾರೆ. ಹಿಮದ ರಾಶಿಯನ್ನೇ ಹೊದ್ದುಕೊಂಡಿರುವ ಪರ್ವತಗಳ ಸಾಲು, ನೀರಿನ ಸೆಲೆಗಳು, ಗುಡ್ಡ ಹಾಗೂ ಕಾಡುಗಳ ಈ ನಾಡು ಪ್ರವಾಸಿಗರಿಗೆ ಅಪರೂಪದ ಅನುಭವ ನೀಡುತ್ತದೆ.

ಹಿಮಾಲಯದ ಸೌಂದರ್ಯ ಹಾಗೂ ಅಗಾಧತೆಯನ್ನು ಅನುಭವಿಸಲು ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. ರಾಜಧಾನಿ ಡೆಹ್ರಾಡೂನ್, ನೈನಿತಾಲ್, ಅಲ್ಮೋರಾ ಮುಂತಾದವು ಪ್ರಕೃತಿ ಸೌಂದರ್ಯದಿಂದ ಮನಸೆಳೆದರೆ ರಿಷಿಕೇಶ, ಹರಿದ್ವಾರ, ಬದರೀನಾಥ, ಕೇದಾರನಾಥ ಮುಂತಾದವು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು. ಈ ರಾಜ್ಯದಲ್ಲಿರುವ ‘ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ’ವೂ ಹೆಸರುವಾಸಿ. ಉತ್ತರಾಖಂಡದ ಉತ್ತರಭಾಗದಲ್ಲಿ ಟಿಬೆಟ್ ಇದ್ದರೆ ಪೂರ್ವ ದಿಕ್ಕಿನಲ್ಲಿ ನೇಪಾಳವಿದೆ. ರಾಜ್ಯದಲ್ಲಿ ಕುಮಾನ್ ಹಾಗೂ ಘರ್ವಾಲ್ ಎಂಬ ಎರಡು ವಿಭಾಗಗಳು ಮತ್ತು 13 ಜಿಲ್ಲೆಗಳಿವೆ.

ನಮ್ಮ ಶಾಲೆ (ಬೆಂಗಳೂರಿನ ‘ಪೂರ್ಣ ಲರ್ನಿಂಗ್ ಸೆಂಟರ್’) ಕಳೆದ ಡಿಸೆಂಬರ್‌ನಲ್ಲಿ ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಮಕ್ಕಳಿಗಾಗಿ ಉತ್ತರಾಖಂಡದಲ್ಲಿ ಚಳಿಗಾಲದ ಚಾರಣ ಆಯೋಜಿಸಿತ್ತು. ಯಶವಂತಪುರದಿಂದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ದೆಹಲಿ, ಅಲ್ಲಿಂದ ಬಸ್ಸಿನಲ್ಲಿ ರಿಷಿಕೇಶ ತಲುಪಿದೆವು. ದೇವರಿಯಾ ಅಥವಾ ದಿಯೋರಿಯಾ ತಾಲ್‌ಗೆ (ದೇವರ ಕೆರೆ) ಭೇಟಿನೀಡುವುದು ನಮ್ಮ ಪ್ರವಾಸದ ಪ್ರಮುಖ ಅಂಶವಾಗಿತ್ತು.

ಪ್ರವಾಸದ ನಾಲ್ಕನೇ ದಿನದಂದು  ರಿಶಿಕೇಶ್‌ನಿಂದ 280 ಕಿ.ಮೀ. ದೂರದಲ್ಲಿರುವ ಸಾರಿ ಎಂಬ ಹಳ್ಳಿಯನ್ನು ಮಧ್ಯಾಹ್ನ ತಲುಪಿ ಸಾಯಂಕಾಲ ದೇವರ ಕೆರೆಯತ್ತ ಚಾರಣ ಹೊರಟೆವು. ಮೂರು ಕಿ.ಮೀ. ಬೆಟ್ಟ ಹತ್ತಬೇಕಾಗಿತ್ತು. ಸುಂದರವಾಗಿ ಅರಳಿನಿಂತ ರೋಡೊಡೆಂಡ್ರಾನ್ ಹೂವುಗಳು, ಮುಂದೆ ಕಾಣಿಸುತ್ತಿದ್ದ ದೈತ್ಯ ಚೌಕಂಭ ಪರ್ವತ, ಹಿಂದೆ ಕಾಣಿಸುತ್ತಿದ್ದ ಗುಡ್ಡದ ಹಿನ್ನೆಲೆಯಲ್ಲಿ ನೇರಳೆ, ಕಂದು, ಕೇಸರಿ, ಕೆಂಪು ಬಣ್ಣದ ಆಗಸವನ್ನು ನೋಡುತ್ತಾ ಗಿಡಮರಗಳಿಂದ ಸುತ್ತುವರೆದ ಕಡಿದಾದ ಹಾದಿಯಲ್ಲಿ ಸಾಗುತ್ತಿದ್ದಂತೆ ನಡೆಯುವ ಕಷ್ಟವೇ ಮರೆತು ಹೋಗುತ್ತಿತ್ತು.

ಕರ್ನಾಟಕಕ್ಕೆ ಶ್ರೀಗಂಧದ ಮರ ಹೇಗೆಯೋ ಹಾಗೆ ಉತ್ತರಾಖಂಡಕ್ಕೆ ರೋಡೊಡೆಂಡ್ರಾನ್ ‘ರಾಜ್ಯದ ಮರ’. ದಟ್ಟ ಹಸುರು ಎಲೆಗಳು ಹಾಗೂ ಗುಲಾಬಿ, ರಕ್ತಕೆಂಪು ಹಾಗೂ ತಿಳಿನೇರಳೆ ಬಣ್ಣದ ಹೂವುಗಳಿರುವ ಆ ಮರ ಬಹಳ ಉಪಯುಕ್ತವಂತೆ. ನಾನು ಪ್ರವಾಸದಿಂದ ವಾಪಸಾಗುವಾಗ ರೊಡೊಡೆಂಡ್ರಾನ್ ಹೂವಿನ ಸ್ಕ್ವಾಶ್ ಕೊಂಡುತಂದೆ. ಅದರ ಜ್ಯೂಸ್ ಬಹಳ ರುಚಿ. 

ದಿಯೋರಿಯಾ ತಾಲ್ ಕುರಿತು ಪುರಾಣದ ಕಥೆಗಳಿವೆ. ಪುರಾಣ ಕಾಲದಲ್ಲಿ ದೇವತೆಗಳು ಈ ಸರೋವರದಲ್ಲಿ ಸ್ನಾನ ಮಾಡುತ್ತಿದ್ದುದರಿಂದ ಈ ಹೆಸರು ಬಂದಿತು ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಮಹಾಭಾರತದ ಯಕ್ಷಪ್ರಶ್ನೆ ಪ್ರಸಂಗಕ್ಕೆ ಈ ಕೆರೆ ಸಾಕ್ಷಿಯಾಯಿತು ಎಂಬ ನಂಬಿಕೆಯೂ ಇದೆ. ಈ ಕೆರೆಯು ಕೇದಾರನಾಥ ವನ್ಯಜೀವಿ ಸಂರಕ್ಷಿತ ಅರಣ್ಯದ ಒಂದು ಭಾಗ. ಈ ಸರೋವರ ಸಮುದ್ರ ಮಟ್ಟದಿಂದ ಸುಮಾರು 2,400 ಮೀಟರ್ ಎತ್ತರದಲ್ಲಿದೆ. ಅಲ್ಲಿ ಜಿಂಕೆ, ಕರಡಿ, ಚಿರತೆ ಮುಂತಾದ ಪ್ರಾಣಿಗಳಿವೆ.

ಆ ರಾಜ್ಯದ ಪ್ರವಾಸೋದ್ಯಮ ಇಲಾಖೆಯನ್ನು ಸಂಪರ್ಕಿಸಿದರೆ ಅದರ ಅಧಿಕಾರಿಗಳು ದಿಯೋತಾರ್ ತಾಲ್ ಪ್ರದೇಶದಲ್ಲಿ ಡೇರೆಗಳಲ್ಲಿ ಉಳಿಯಲು ಅಗತ್ಯ ಅನುಕೂಲ ಮಾಡಿಕೊಡುತ್ತಾರೆ. ಅಲ್ಲಿ ರಾತ್ರಿಯ ತಾಪಮಾನ ಮೈನಸ್ 10 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯಬಹುದು ಎಂದು ನಮಗೆ ಹೇಳಿದ್ದರು. ಆ ಚಳಿಯಲ್ಲಿ ನಡುಗದಂತೆ  ಬೆಚ್ಚಗಿನ ಉಡುಪು ಧರಿಸಿದ್ದೆವು. ಡೇರೆ ಕೂಡ ಬೆಚ್ಚಗೆ ಇತ್ತು. ಮಧ್ಯರಾತ್ರಿ ಎಚ್ಚರಗೊಂಡ ನಾನು ಕುತೂಹಲದಿಂದ ಡೇರೆಯಿಂದ ಹೊರಗೆ ತೂರಿ ನನ್ನ ಬಳಿ ಇದ್ದ ಪುಟ್ಟ ಥರ್ಮೊಮೀಟರ್ ನೋಡಿದೆ. ಅದು ಮೈನಸ್ 4 ಡಿಗ್ರಿ ತೋರಿಸುತ್ತಿತ್ತು!

ಬೆಳಗ್ಗೆ ಎದ್ದಾಗ ಚೌಕಂಭ ಪರ್ವತದ ಪ್ರತಿಬಿಂಬ ಸರೋವರದ ಪ್ರಶಾಂತ ತಿಳಿನೀರ ಮೇಲೆ ಬೀಳುತ್ತಿತ್ತು. ಸರೋವರದ ಸ್ವಲ್ಪ ಭಾಗ ಮಂಜುಗಟ್ಟಿತ್ತು. ಆ ತಾಣದಿಂದ ಚೌಕಂಭ ಪರ್ವತ ಹಾಗೂ ನೀಲ್‌ಕಂಠ ಪರ್ವತಗಳು ಕಾಣಿಸುತ್ತವೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡು ಕೆಳಗಿಳಿದೆವು. ದಾರಿಮಧ್ಯೆ ಒಂದು ಶಿವನ ದೇವಾಲಯವಿದೆ. ಉತ್ತರಾಖಂಡ ಪ್ರವಾಸ ಪೂರ್ಣಗೊಳಿಸುವ ಮುನ್ನ ರುದ್ರಪ್ರಯಾಗ, ಉಖಿಮಠ, ಗುಪ್ತಕಾಶಿ, ಚೊಪ್ತ, ತುಂಗನಾಥ್ ಹಾಗೂ ದೇವ್‌ಪ್ರಯಾಗ್ ಮುಂತಾದ ಸ್ಥಳಗಳಿಗೂ ನಾವು ಭೇಟಿ ನೀಡಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.