ADVERTISEMENT

ಪಂಜರದೊಳಗ ಅಂಜಿದ ಕಂದ...

ರಮೇಶ ಅರೋಲಿ
Published 11 ನವೆಂಬರ್ 2017, 19:30 IST
Last Updated 11 ನವೆಂಬರ್ 2017, 19:30 IST
ಚಿತ್ರ: ಸಿದ್ರಪಾಲ
ಚಿತ್ರ: ಸಿದ್ರಪಾಲ   

ಕೂ ಕೂ ಕೂಗಿದ್ದು ಯಾರಣ್ಣ... ಮರದ ಮೇಲಿನ ಸ್ವರವಣ್ಣ
ಗೂ ಗೂ ಗುಟರಿದ್ದು ಯಾರಣ್ಣ... ದೊಡ್ಡ ಕಣ್ಣಿನ ಗಿಡುಗಣ್ಣ

ಮೆಲ್ಲನೆ ತಂದು ಹುಲ್ಲಿನ ಕಡ್ಡಿ, ಚೊಂಚಲಿ ಹೆಣೆಯುತ ಪುಟಾಣಿ ದೊಡ್ಡಿ
ತೂಗುವ ಗಾಳಿಗೆ ಮೈಯನುವೊಡ್ಡಿ, ತುಂತುರು ಹನಿಗೆ ಬಾಯಿಯ ಒಡ್ಡಿ
ಚಿಂವ್ ಚಿಂವ್ ಚೀರಿದ್ದು ಯಾರಣ್ಣಾ... ಬೂದಿಯ ಬಣ್ಣದ ಗುಬ್ಬಣ್ಣ!

ತೊಟ್ಟಿಹ ಕಪ್ಪನೆ ಕೋಟಿನ ಅಂಗಿ, ಗಂಟಲುದಾಗ ಕೀರಲು ಪುಂಗಿ
ಸಿಕ್ಕದ್ದೆಲ್ಲ ಕುಕ್ಕುತ ನುಂಗಿ, ಗೂಡನು ಕಟ್ಟಲು ಹುಡುಕುತ ಟೊಂಗಿ
ಕಾಂವ್ ಕಾಂವ್ ಮಾಡಿದ್ದು ಯಾರಣ್ಣಾ... ಕೊಂಬೆ ಮ್ಯಾಲಿನ ಕಾಕಣ್ಣ!

ADVERTISEMENT

ಹಸಿರೆಲೆ ರಂಗನು ಕೈಗಡ ತಂದ, ಪುಟಾಣಿ ಕಡಲೆಗೆ ಪುರ್‍ರನೆ ಬಂದ
ಪಂಜರದೊಳಗೆ ಅಂಜಿದ ಕಂದ, ಕೆಂಪನೆ ತಮಾಟೆ ಗೆಬರುತ ತಿಂದ
ಊರಿಗೆ ಪಂಡಿತ ಯಾರಣ್ಣಾ... ಪುರಾಣ ಹೇಳುವ ಗಿಳಿಯಣ್ಣ!

ನೆತ್ತಿಯ ಮ್ಯಾಲೆ ಸೂರ್ಯನ ಹರಳು, ಲೋಕವೆ ತನ್ನ ಕಾಲಡಿ ನೆರಳು
ಕಂಡರೆ ನೆಲದಲಿ ಕೋಳಿಯ ಬೆರಳು, ಸರ್‍ರನೆ ಬೀಸುತ ಕೊಕ್ಕೆಯ ಸರಳು
ಬೇಟೆಗೆ ಹಾರಿದ್ದು ಯಾರಣ್ಣಾ... ಗುದ್ದಲಿ ಚೊಂಚಿನ ಹದ್ದಣ್ಣ!

ಕಾಮನಬಿಲ್ಲಿಗೆ ಕೈಯನು ಚಾಚಿ, ಸಿಕ್ಕಿದ ರಂಗನು ಮೈಯಿಗೆ ರಾಚಿ
ಬಣ್ಣದ ಕಣ್ಣಲಿ ಲೋಕವ ದಾಚಿ, ನಲಿಯಲು ನಿಂತರೆ ನೆಲವೆ ನಾಚಿ
ಥಕ ಥಕ ಕುಣಿದಿದ್ದು ಯಾರಣ್ಣಾ... ಗರಿ ಗರಿ ನವಿಲ ಮರಿಯಣ್ಣ!

ಅನಾದಿ ಕಾಲದ ಅಂಚೆಯ ಪೇದೆ, ಆಗಸದಲಿ ನೀ ನಿಲ್ಲದೆ ಹೋದೆ
ಅಂಗಳದಲಿ ನೀ ಮಗುವೊಂದಾದೆ, ತಿಂಗಳ ಬೆಳಕೆ ತಿಳಿಯದ ಗಾದೆ
ಫಳ ಫಳ ಹೊಳೆದಿದ್ದು ಯಾರಣ್ಣಾ... ಪಾರಿವಾಳದ ಬಳಗಣ್ಣ!

ಮರದಂಚಲ್ಲಿ ಬಲೆಯನು ಬೀಸಿ, ಮಲಗಿದ್ದೆಲ್ಲವ ಪಂಚರ ಸೋಸಿ
ಕಾಡಿನ ಕೊರಳಿಗೆ ಕಬ್ಬಿಣ ಕಾಸಿ, ಕಂಡಿದ್ದೆಲ್ಲವ ಕೈಯಲಿ ಮೂಸಿ
ಉದ್ಯಾನ ಮಾಡಿದ್ದು ಯಾರಣ್ಣಾ... ಊರು ಸೇರಿದ ಮಂಗಣ್ಣ!

*


–ರಮೇಶ ಅರೋಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.