ADVERTISEMENT

ಪರಿಮಳವಾದವಳ ಹಾಡು

ಸ.ರಘುನಾಥ
Published 25 ಮಾರ್ಚ್ 2017, 19:30 IST
Last Updated 25 ಮಾರ್ಚ್ 2017, 19:30 IST
ಡಾ. ಸಿ. ರವೀಂದ್ರನಾಥ್
ಡಾ. ಸಿ. ರವೀಂದ್ರನಾಥ್   

ಮೇಳದಯ್ಯ ನಿನ್ನ ದುಡಿಯ ಕೊಂಚ ನಿಲ್ಲಿಸೋ
ಒಲೆಯ ಮೇಲೆ ಕುದಿಯೊ ಎಸರು ನಾನು ಆದೆನೋ

ಕಣ್ಣಿನಲ್ಲಿ ಚುಕ್ಕಿ ಕಿತ್ತು ಮಾಲೆ ಕಟ್ಟಿದೆ
ಬಾಡದಂತೆ ಚಂದ್ರಕಾಂತಿ ಬಟ್ಟೆ ಹೊದೆಸಿದೆ
ಗುಡಿಸಲಲ್ಲಿ ಹಣತೆ ಮುಡಿಸಿ ಬೆಳಕನಿರಿಸಿದೆ
ಘಲುಗುಡುವ ಕಾಲಗೆಜ್ಜೆ ದಾರಂದಕೆ ಸಿಗಿಸಿದೆ

ದುಡಿಯ ಬಡಿದು ಜೀವ ಬರಿಸು ಕೀಲುಕುದುರೆಗೆ
ಅಯ್ಯಾ, ಹಗ್ಗ ಹರಿದ ಗೂಳಿಯಂತೆ ಹೋದವನಾ
ಹೊತ್ತು ತಂದು ಬಾಗಿಲಲ್ಲಿ ಕುದುರೆ ಕೆನೆಯಲಿ
ಅದರ ಉಲಿಗೆ ಗೆಜ್ಜೆ ಜಾರಿ ಒಳಗೆ ಕರೆಯಲಿ

ADVERTISEMENT

ಮೇಳದಯ್ಯ ಬಡಿಯೊ ಆಗ ಜೋರು ಮದ್ದಳೆ
ನಾದ ಅವನ ನರನರಕೆ ಇಳಿದು ಆಸೆ ಕೆಣಕಲಿ
ಅಮಲು ಏರಿ ಕುಣಿದ ಮೈಯಿ ದಣಿದು ಹೋಗಲಿ
ಹರಿದ ಬೆವರ ಹೊಳೆಯಲಿ ಮದನ ಜಳಕವಾಡಲಿ

ದುಡಿಯ ದುಡಿಸಿದವಗೆ ಏನು ಕೊಡುವೆ ಎಂದೆಯೇನೊ
ತಂದೆ ನಿನ್ನ ಕರುಣೆಯಿಂದ ಚಂದ್ರೋದಯ ಭಾಗ್ಯವರಳಿ
ಪರಿಮಳವಾದ ಬಡವಿ ನಿನ್ನ ಮೊಗವ ನೋಡಿ
ನಗುವ ಕೂಸ ಹಡೆದು ಅದರ ನಗೆಯ ಕುಡಿಸುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.