ADVERTISEMENT

ಪುಸ್ತಕ ಪ್ರೀತಿ ಹೀಗೇನಾ?

ಮುಕ್ತ ಛಂದ

ಪ.ರಾಮಕೃಷ್ಣ
Published 13 ಸೆಪ್ಟೆಂಬರ್ 2014, 19:30 IST
Last Updated 13 ಸೆಪ್ಟೆಂಬರ್ 2014, 19:30 IST
ಪುಸ್ತಕ ಪ್ರೀತಿ ಹೀಗೇನಾ?
ಪುಸ್ತಕ ಪ್ರೀತಿ ಹೀಗೇನಾ?   

ರದ್ದಿ ಅಂಗಡಿಗೆ ಒಮ್ಮೆ ಹೋದಾಗ ರಾಸಿಯಲ್ಲಿ ಬಿದ್ದಿದ್ದ ನಾನೇ ಬರೆದ ಒಂದು ಪುಸ್ತಕ ಕಾಣಿಸಿತು. ಎತ್ತಿಕೊಂಡು ನೋಡಿದೆ. ಪರಿಚಿತರೊಬ್ಬರಿಗೆ ಸ್ವಹಸ್ತಾಕ್ಷರದಲ್ಲಿ ‘ನೆನಪಿನ ಕಾಣಿಕೆ’ ಎಂದು ಬರೆದು ನಾನೇ ಕೊಟ್ಟಿದ್ದ ಪುಸ್ತಕ, ಐವತ್ತು ಪೈಸೆಗಿಂತಲೂ ಕಡಿಮೆ ಬೆಲೆಗೆ ತೂಕವಾಗಿ ಅಲ್ಲಿಗೆ ಸೇರಿತ್ತು.

ಉಚಿತವಾಗಿ ಕೊಟ್ಟ ಪುಸ್ತಕ ಅವರಿಗೆ ಬೇಡವೆನಿಸಿದಾಗ ಹೀಗೊಂದು ವಿಲೆವಾರಿ ಅವರು ಮಾಡಿರಬಹುದು. ಆಗ ನೆನಪಾದವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಧರ್ಮದರ್ಶಿ ಹರಿಕೃಷ್ಣ ಪುನರೂರು. ಅವರಿಗೊಮ್ಮೆ ಹೀಗೆ ಉಚಿತವಾಗಿ ಪುಸ್ತಕಗಳನ್ನು ಕೊಟ್ಟಾಗ ಬೇಡವೆಂದರೂ ಕೇಳದೆ ಅದರ ಬೆಲೆಯನ್ನು ನನ್ನ ಕಿಸೆಗೆ ತುರುಕಿಸಿ, ‘ನೀವು ಪುಸ್ತಕ ಪ್ರಕಾಶಕರನ್ನು ಕೊಲ್ಲಬೇಡಿ. ಉಚಿತವಾಗಿ ಪುಸ್ತಕಗಳನ್ನು ಯಾರಿಗೂ ಯಾವತ್ತಿಗೂ ಕೊಡಬೇಡಿ’ ಎಂದು ಗಂಭೀರವಾಗಿ ಹೇಳಿದ್ದರು.

ಪುಸ್ತಕ ಪ್ರಕಟವಾದಾಗ ಪ್ರಕಾಶಕರು ಉಚಿತ ಪ್ರತಿ ಅಂತ ಹಿಂದೆ ಕೊಡುತ್ತಿದ್ದ ಇಪ್ಪತ್ತೈದು ಪ್ರತಿಗಳು ಈಗ ಹತ್ತಕ್ಕೆ ಇಳಿದಿದ್ದರೂ ಪರಿಚಿತರಿಗೆ ಪುಸ್ತಕವನ್ನು ಉಚಿತವಾಗಿ ಕೊಡುವ ಅಥವಾ ಅಂಚೆಯಲ್ಲಿ ಕಳುಹಿಸುವ ಅಭ್ಯಾಸವನ್ನು ಮುಂದುವರೆಸಿದ್ದ ನಾನು ಈಗ ಅದನ್ನು ಪೂರ್ಣವಾಗಿ ಬಿಟ್ಟಿದ್ದೇನೆ. ಬಹುತೇಕ ಸಂದರ್ಭಗಳಲ್ಲಿ ನಾವು ಕೊಡುವ ಪುಸ್ತಕ ಅವರಿಗೆ ಇಷ್ಟವಾಗುತ್ತದೋ ಅವರಿಗೆ ಓದುವ ಪರಿಪಾಠವಿದೆಯೋ ಯೋಚಿಸುವುದಿಲ್ಲ.

ನಮ್ಮ ಕಣ್ಮುಂದೆಯೇ ಅವರು ಆ ಪುಸ್ತಕವನ್ನು ದಿನದರ್ಶಿಕೆಯ ಹಾಗೆ ಸುರುಳಿ ಸುತ್ತಿ ತಮಗದೊಂದು ಅನಗತ್ಯದ ವಸ್ತುವೆಂದು ಪರೋಕ್ಷವಾಗಿ ಸಾರಿಬಿಡುತ್ತಾರೆ. ಅಂಚೆಯಲ್ಲಿ ಕಳುಹಿಸಿದ ಪ್ರತಿ ತಲುಪಿದೆಯೆಂದು ಕನಿಷ್ಠ ಒಂದು ಸಾಲು ಬರೆಯದವರೂ ಇದ್ದಾರೆ.
ಇನ್ನು ಪುಸ್ತಕವನ್ನು ಮಾರುವುದೆಂದರೆ ಅದು ಕೊಳ್ಳುವವನಿಗಿಂತ ಮಾರುವವನಿಗೇ ಯಾತನಾಮಯವೆಂದು ಗೊತ್ತಿದ್ದೇ ನಾನು ಆ ಕೆಲಸಕ್ಕೆ ಹೋಗುವುದಿಲ್ಲ.

ನನಗೆ ಬೇರೆಡೆಯಿಂದ ಬಂದ ಪುಸ್ತಕಗಳು ಹಾಗೂ ನನ್ನ ಕೃತಿಗಳನ್ನು ಒಟ್ಟು ಮಾಡಿ ಸರ್ಕಾರಿ ಶಾಲೆಗಳ ವಾಚನಾಲಯಗಳಿಗೆ ಕೊಟ್ಟುಬಿಡುತ್ತೇನಲ್ಲದೆ ‘ಪ್ರೀತಿಯ ಕಾಣಿಕೆ’ ಕೊಡಲು ಹೋಗುವುದಿಲ್ಲ. ಕೆಲವು ಶಾಲೆಗಳಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಮಾಡಿ ಬಹುಮಾನವೆಂದು ಒಂದು ಪುಸ್ತಕ ಕೊಡುವುದು ‘ಓದುವ ಸಂಸ್ಕೃತಿಗೆ ತಮ್ಮ ಕೊಡುಗೆ’ ಎಂದು ಬೀಗುವ ಶಿಕ್ಷಕರಿದ್ದಾರೆ. ಈ ಪುಸ್ತಕಗಳನ್ನು ಹಣ ಕೊಟ್ಟು ತರುವುದಿಲ್ಲ.

ಯಾರದೋ ಮನೆಯಲ್ಲಿ ದೂಳು ತಿನ್ನುತ್ತಿದ್ದ ಪುಸ್ತಕಗಳನ್ನು ಉಚಿತವಾಗಿ ಅವರು ಕೊಟ್ಟಿರುತ್ತಾರೆ. ಪುಟ್ಟ ಮಗುವಿಗೆ ಯಾರೋ ಅರ್ಥಶಾಸ್ತ್ರಜ್ಞರು ಬರೆದ ಕಬ್ಬಿಣದ ಕಡಲೆಯಂಥ ಪುಸ್ತಕವೊಂದು ಬಹುಮಾನವಾಗಿ ಸಿಕ್ಕಿದರೆ ಆ ಮಗು ಬಹುಮಾನಕ್ಕಾಗಿ ಖಂಡಿತ ಸಂಭ್ರಮಿಸಲಿಕ್ಕಿಲ್ಲ. ಹೀಗಾಗಿ ನಾವು ಕೊಡುವ ಪುಸ್ತಕ ಸ್ವೀಕರಿಸುವವರಿಗೆ ಇಷ್ಟವಾಗುತ್ತದೆಂಬ ಧೈರ್ಯವಿದ್ದರೆ ಮಾತ್ರ ಕೊಡುವುದು ಉತ್ತಮ. ಅದಲ್ಲವಾದರೆ ಇಂಥ ಕೊಡುಗೆಗಳಿಂದ ಯಾವುದೇ ಪುರುಷಾರ್ಥವೂ ಸಿಗದೆ ಬೂದಿಯ ಮೇಲೆ ಪನ್ನೀರು ಹೊಯ್ದ ಹಾಗಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.