ADVERTISEMENT

ಫಿಲ್ಮ್‌ಸಿಟಿಯಲ್ಲಿ ‘ಸಾಹಸ್‌’ ಮೋಡಿ

ರಮೇಶ ಕೆ
Published 20 ಸೆಪ್ಟೆಂಬರ್ 2014, 19:30 IST
Last Updated 20 ಸೆಪ್ಟೆಂಬರ್ 2014, 19:30 IST

ಸೂರ್ಯನ ಸುಡುಬಿಸಿಲು ಭೂಮಿಯನ್ನು ಕಾದ ಹೆಂಚನ್ನಾಗಿಸಿತ್ತು. ಇಂಥ ಬಿಸಿಲಿನಲ್ಲೂ ಹೆಲ್ಮೆಟ್‌ ಧರಿಸಿ, ದೇಹಕ್ಕೆ ಬಲವಾದ ರಕ್ಷಣಾ ಕವಚ, ಮಂಡಿಗಳಿಗೆ ಕ್ಯಾಪ್‌ ಹಾಕಿಕೊಂಡು ‘ಆಲ್‌ ಟೆರೈನ್‌ ವೆಹಿಕಲ್‌’ (ಎಟಿವಿ) ಓಡಿಸಲು ಪ್ರವಾಸಿಗರು ಸಜ್ಜಾಗುತ್ತಿದ್ದರು. ಒಂದೂವರೆ ಕಿ.ಮೀ  ಕಚ್ಚಾ ರಸ್ತೆಯದು. ಕಲ್ಲು, ಮಣ್ಣು, ಉಬ್ಬುತಗ್ಗು, ಕಡಿದಾದ ತಿರುವುಗಳನ್ನು ಒಳಗೊಂಡ ರಸ್ತೆ ಅವರಿಗೆ ಸವಾಲಾಗಿತ್ತು.  ತರಬೇತಿ ಪಡೆದ ಚಾಲಕನ ವಾಹನದ ಹಿಂದೆ ಪ್ರವಾಸಿಗರ ವಾಹನ.

ಕಚ್ಚಾ ರಸ್ತೆಯಲ್ಲಿ ಸಾಗುತ್ತಿದ್ದ ‘ಎಟಿವಿ’ಯು ಅವರಿಗೆ ಭಯದ ಜೊತೆಗೆ ರೋಮಾಂಚನ ಉಂಟುಮಾಡುತ್ತಿತ್ತು. ಭಾರೀ ಸದ್ದು ಮಾಡುತ್ತಾ ಸಾಗಿದ ವಾಹನವು ಸೇತುವೆ, ಹಂಪ್‌, ತಗ್ಗುದಿಣ್ಣೆಗಳನ್ನು ಲೆಕ್ಕಿಸದೇ ಪೂರ್ತಿ ಗುರಿಯನ್ನು ತಲುಪುವಷ್ಟರಲ್ಲಿ ವಿಶಿಷ್ಟ ಅನುಭವ ಕಟ್ಟಿಕೊಡುತ್ತದೆ. ‘ಎಟಿವಿ’ ರೈಡ್‌ ಮುಗಿಯುತ್ತಿದ್ದಂತೆ ಮತ್ತೊಂದು ಸಾಹಸ ಕ್ರೀಡೆಗೆ ಆ ತಂಡ ಸಜ್ಜಾಯಿತು. ಅದು ‘ನೆಟ್‌ ಕೋರ್ಸ್‌’. ನೆಲದಿಂದ 40 ಅಡಿ ಎತ್ತರದ ಬಲೆಯ ಮೇಲೆ ಅನೇಕ ಕಷ್ಟದ  ಆಟಗಳಿರುವ ಸ್ಪರ್ಧೆಯದು.

ಮಕ್ಕಳಿಗೆ 20 ಅಡಿ ಎತ್ತರ, ದೊಡ್ಡವರಿಗೆ 40 ಅಡಿ ಎತ್ತರದ ಮೇಲ್ಛಾವಣಿ. ಆಟವಾಡುವಾಗ ಆಯತಪ್ಪಿ ಬಿದ್ದರೂ ಬಲೆಯೊಳಗೆ ಬೀಳುತ್ತಾರೆ. ಆಟದ ಮೊದಲ ಸವಾಲು ಸ್ಪೈಡರ್‌ವೆಬ್‌ ದಾಟುವುದು. ಜೇಡರ ಬಲೆಯನ್ನು ಹೋಲುವ ಬಲೆಯನ್ನು ಹಿಡಿದು ನಲ್ವತ್ತು ಅಡಿ ಎತ್ತರದ ಛಾವಣಿಯನ್ನು ಹತ್ತಬೇಕು. ಅಲ್ಲಿಂದ ಹಗ್ಗದ ಮಧ್ಯೆ ಮಧ್ಯೆ ಕಟ್ಟಿದ್ದ ವೃತ್ತಾಕಾರದ ಹಲಗೆಯ ಮೇಲೆ ಒಂದೊಂದೇ ಕಾಲನ್ನಿಟ್ಟು ಮುಂದಿನ ಗುರಿಯತ್ತ ಸಾಗಬೇಕು. ಮೈಬೆವರಿನೊಂದಿಗೆ ಹೃದಯದ ಬಡಿತವೂ ಜೋರಾಗುವ ಸ್ಪರ್ಧೆಯದು.

ಬಲೆಯ ಛಾವಣಿ ಮೇಲೆ ವಿವಿಧ ಸ್ಪರ್ಧೆಗಳು.  ಸಾಲಾಗಿ ಕಟ್ಟಿದ್ದ ಬಿದಿರಿನ ಬೊಂಬುಗಳನ್ನು ಹಿಡಿದು ಮತ್ತೊಂದು ಮೂಲೆ ಸೇರುವ ಸ್ಪರ್ಧೆ. ಅದಾದ ನಂತರ ಸ್ಕೇಟ್ ಬ್ರಿಜ್‌ ಹಾಗೂ ನಾಲ್ಕು ಇಂಚಿನ ಪಟ್ಟಿಯ ಮೇಲೆ ನಡೆಯುವುದು. ಕೊನೆಯ ಸ್ಪರ್ಧೆ ಜಾರುಬಂಡಿ. ಅದರಲ್ಲಿ ಮಕ್ಕಳಂತೆ ಖುಷಿಯಾಗಿ ಜಾರಬಹುದು.  ಹೈದರಾಬಾದ್‌ ಹೊರ ವಲಯದಲ್ಲಿರುವ  ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಆರಂಭವಾಗುತ್ತಿರುವ ‘ಸಾಹಸ್‌’ ಅಡ್ವೆಂಚರ್‌ ಲ್ಯಾಂಡ್‌ನಲ್ಲಿ ಇಂಥ ಹಲವಾರು ಸಾಹಸ ಕ್ರೀಡೆಗಳನ್ನು ಆಡುವ ಅವಕಾಶ ಜನರಿಗೆ ಸಿಗಲಿದೆ.

ಸಾಹಸ ಪ್ರಿಯರಿಗಾಗಿ ಎಟಿವಿ ರೈಡ್‌, ಸೈಕ್ಲಿಂಗ್‌, ಮೌಂಟೇನ್‌ ಟೆರೈನ್‌ ಬೈಕ್‌ ರೈಡಿಂಗ್‌ (ಎಂಟಿಬಿ), ಹೈ ರೋಪ್‌ ಕೋರ್ಸ್‌, 45 ಅಡಿ ಎತ್ತರಕ್ಕೆ ನೆಗೆಸುವ ಭಂಗಿ ಜಿಗಿತ (ಭಂಗಿ ಅಜೆಕ್ಷನ್‌), ಪೇಯಿಂಟ್‌ ಬಾಲ್‌ ಗನ್‌, ಶೂಟಿಂಗ್‌, ಬಿಲ್ಲುಗಾರಿಕೆ  ಹಾಗೂ 45 ಅಡಿ ಎತ್ತರದಲ್ಲಿ ಕಟ್ಟಿದ  120 ಮೀಟರ್‌ ಉದ್ದದ ಝಿಪ್ ಲೇನ್‌– ಹೀಗೆ 15ಕ್ಕೂ ಹೆಚ್ಚಿನ ಸಾಹಸ ಕ್ರೀಡೆಗಳನ್ನು ಆಡುವ ಅವಕಾಶ ಇಲ್ಲಿದೆ. ಜೊತೆಗೆ ಹ್ಯೂಮನ್‌ ಫೂಸ್‌ ಬಾಲ್‌, ಮೆಲ್ಟ್‌ ಡೌನ್‌, ಟೆಲಿ ಬಾಕ್ಸಿಂಗ್‌, ಬಾಡಿ ಸೋರ್ಬಿಂಗ್‌ನಂಥ ವಿನೋದದ ಆಟಗಳಿವೆ.

26 ಎಕರೆಯ ‘ಸಾಹಸ್‌’
ಮಕ್ಕಳು ಹಾಗೂ ವಯಸ್ಕರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿರುವ ಈ ‘ಸಾಹಸ್‌’ ಕ್ರೀಡೋಪಕರಣಗಳನ್ನು ಫ್ರಾನ್ಸ್ ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾಗಿದೆ. 26 ಎಕರೆ ವಿಸ್ತೀರ್ಣದಲ್ಲಿ ಈ ತಾಣವಿದೆ. ದೇಶದಲ್ಲೇ ಅತ್ಯಂತ ಉದ್ದದ ಜಾರ್ಬ್‌ ಫ್ಲಾಟ್‌ಫಾರ್ಮ್‌ (220 ಮೀಟರ್‌) ಇಲ್ಲಿನ ವಿಶೇಷಗಳಲ್ಲಿ ಒಂದು.

ಸುರಕ್ಷತೆಗೆ ಮೊದಲ ಆದ್ಯತೆ
ಸಾಹಸ ಕ್ರೀಡೆಗಳನ್ನು ಆಡುವಾಗ ಕೆಲವು ವೇಳೆ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳು ಮತ್ತು ವಯಸ್ಕರಿಗಾಗಿ ಪ್ರತ್ಯೇಕ ಎಟಿವಿ ಟ್ರ್ಯಾಕ್‌ಗಳಿವೆ. ಕೆಲವು ಸಾಹಸ ಕ್ರೀಡೆಗಳಿಗೆ ಹೆಲ್ಮೆಟ್, ಗ್ಲೌಸ್‌, ಎದೆಕವಚ ಮೊದಲಾದ ಸುರಕ್ಷಾ ಪರಿಕರಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. 20ಕ್ಕೂ ಹೆಚ್ಚು ನುರಿತ ತರಬೇತಿದಾರರು ನೆರವು ನೀಡಲಿದ್ದಾರೆ. ಫಿಲ್ಮ್‌ಸಿಟಿಗೆ ಬರುವ ಪ್ರವಾಸಿಗರಿಗೆ ಸಾಹಸ ಕ್ರೀಡೆಗಳನ್ನು ಪರಿಚಯಿಸುವ  ಉದ್ದೇಶದಿಂದ ರಾಮೋಜಿ ರಾವ್‌ ಅವರು ಈ ‘ಸಾಹಸ್‌’ ತಾಣವನ್ನು ಪರಿಚಯಿಸುತ್ತಿದ್ದಾರೆ.

ದಸರಾ ನಂತರ ಆರಂಭ
ಸದ್ಯ ಫಿಲ್ಮ್‌ ಸಿಟಿಯ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗಷ್ಟೇ ಈ ಸಾಹಸದ ಆಟಗಳನ್ನು ಆಡಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕರಿಗೆ ದಸರಾ ಹಬ್ಬದ ನಂತರ  ಈ ತಾಣ ತೆರೆದುಕೊಳ್ಳಲಿದೆ. ಒಂದೊಂದು ಆಟಕ್ಕೂ ಪ್ರತ್ಯೇಕ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಪ್ರತ್ಯೇಕ ಆಟಗಳಿಗೆ ₨150ರಿಂದ ₨250ರವರೆಗೆ ಟಿಕೆಟ್‌ ದರವಿದೆ. ಪ್ಯಾಕೇಜ್‌ ವ್ಯವಸ್ಥೆಯೂ ಇದೆ.

ಹೈದರಾಬಾದ್‌ ನಗರದಿಂದ ರಾಮೋಜಿ ಫಿಲ್ಮ್‌ ಸಿಟಿ 35 ಕಿ.ಮೀ ದೂರದಲ್ಲಿದೆ. ನಗರದಿಂದ ಫಿಲ್ಮ್‌ ಸಿಟಿಗೆ ಹೋಗಲು ಬಸ್‌ಗಳ ಸೌಲಭ್ಯವಿದೆ. ಪ್ರವಾಸಿಗರು ಉಳಿದುಕೊಳ್ಳಲು ಹೈದರಾಬಾದ್ ಹಾಗೂ ಫಿಲ್ಮ್‌ಸಿಟಿಯಲ್ಲಿಯೇ ಹೋಟೆಲ್‌ಗಳ ವ್ಯವಸ್ಥೆ ಇದೆ. ಪ್ರತಿದಿನ 7–8 ಸಾವಿರ ಪ್ರವಾಸಿಗರು ಫಿಲ್ಮ್‌ಸಿಟಿಗೆ ಭೇಟಿ ನೀಡುತ್ತಾರೆ. ಫಿಲ್ಮ್‌ಸಿಟಿ ಪ್ರವೇಶ ಶುಲ್ಕ ₨800. ಮಕ್ಕಳಿಗೆ ₨700.
ಸಮಯ: ಬೆಳಿಗ್ಗೆ 9ರಿಂದ ಸಂಜೆ 5.30.

(‘ರಾಮೋಜಿ ಫಿಲ್ಮ್‌ ಸಿಟಿ’ ಆಹ್ವಾನದ ಮೇರೆಗೆ ಲೇಖಕರು ‘ಸಾಹಸ್‌’ಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.