ADVERTISEMENT

ಬದಲಾಗುವ ಜಗತ್ತು ಮತ್ತು ಹೊಸತು!

ವಸುಧೇಂದ್ರ, ಬೆಂಗಳೂರು
Published 27 ಜೂನ್ 2015, 19:30 IST
Last Updated 27 ಜೂನ್ 2015, 19:30 IST

ಹೊಸಪೇಟೆಯಲ್ಲಿರುವ ನನ್ನ ಅಕ್ಕನ ಮನೆಯ ಓಣಿಯ ತುದಿಯಲ್ಲಿ ಒಂದು ಜ್ಯೋತಿಷ್ಯಾಲಯವಿದೆ. “ಚೌಡೇಶ್ವರಿ ಜ್ಯೋತಿಷ್ಯಾಲಯ” ಎಂದು ಅದಕ್ಕೆ ಹೆಸರು. “ಪ್ರೇಮ ವೈಫಲ್ಯ, ಮದುವೆ ವಿಳಂಬ, ಸಂತಾನ ಸಮಸ್ಯೆ, ದಾಂಪತ್ಯ ಕಲಹ, ನಿರುದ್ಯೋಗ ಸಮಸ್ಯೆ, ವಿದೇಶ ಪ್ರಯಾಣದ ವಿಘ್ನ, ವ್ಯಾಪಾರದ ಲಾಭ-ನಷ್ಟ ಮುಂತಾದ ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ನೀಡಲಾಗುತ್ತದೆ. ಕೇವಲ ಹದಿನೈದು ದಿನಗಳಲ್ಲಿ ಕಾರ್ಯ ನೆರವೇರುತ್ತದೆ” ಎಂಬ ಆತನ ಬೋರ್ಡನ್ನು ಪ್ರತಿ ಬಾರಿಯೂ ಓದುತ್ತಿದ್ದೆ. ಹಲವು ಕತೆಗಳಿಗೆ ಬೇಕಾದ ಬಹುತೇಕ ವಸ್ತುಗಳನ್ನು ಈತ ತನ್ನ ಬೋರ್ಡಿನಲ್ಲಿ ಬರೆದು ಬಿಟ್ಟಿದ್ದಾನೆ ಎಂದು ಅನ್ನಿಸುತ್ತಿತ್ತು. ಆದರೆ ಆತನ ಬಳಿ ಅಷ್ಟೊಂದು ಗಿರಾಕಿಗಳೇನೂ ನನಗೆ ಕಂಡು ಬರುತ್ತಿರಲಿಲ್ಲ.

ಆದರೆ ಮೊನ್ನೆ ಅಕ್ಕನ ಮಗಳ ಮದುವೆಗೆಂದು ಊರಿಗೆ ಹೋದಾಗ ಆತನ ಅಂಗಡಿಯ ಮುಂದೆ ಬಿಎಂಡಬ್ಲೂ ಹಾಗೂ ಆಡಿ ಕಾರುಗಳು ನಿಂತಿರುವುದನ್ನು ಗಮನಿಸಿದೆ. ಬೆಳಿಗ್ಗೆಯಿಂದ ಆ ಕಡೆಗೆ ಇಣುಕಿ ಹಾಕಿದ್ದರಿಂದ, ಸಾಕಷ್ಟು ಜನರು ಆ ಜ್ಯೋತಿಷ್ಯಾಲಯದೊಳಕ್ಕೆ ಹೋಗಿ ಬಂದು ಮಾಡುವುದು ಕಂಡು ಬಂತು. ಒಮ್ಮಿಂದೊಮ್ಮೆಲೆ ಇಂತಹ ಬದಲಾವಣೆ ಹೇಗೆ ಸಾಧ್ಯವಾಯ್ತು ಎಂದು ಅಚ್ಚರಿಪಟ್ಟೆ.

ಆತನ ಅಂಗಡಿಯ ಮುಂದಿನ ಬೋರ್ಡಿನಲ್ಲಿ ಏನೋ ಬದಲಾವಣೆಯಾಗಿರುವುದು ಕಂಡು ಬಂತು. ಸೂಕ್ಷ್ಮವಾಗಿ ಗಮನಿಸಿದಾಗ, ಈ ಮುಂಚೆ ಇದ್ದ ಬದುಕಿನ ಹಲವಾರು ಸಮಸ್ಯೆಗಳ ಪಟ್ಟಿಯ ಜೊತೆಯಲ್ಲಿ ಆತ ಹೊಸದಾಗಿ “ಮೈನಿಂಗ್ ಸಮಸ್ಯೆಗೆ ಖಚಿತ ಪರಿಹಾರವಿದೆ” ಎಂದು ಸೇರಿಸಿದ್ದ. ಇಡೀ ಜಿಲ್ಲೆಗೆ ಜಿಲ್ಲಿಯೇ ಮೈನಿಂಗ್ ವಹಿವಾಟಿನಿಂದ ಕೈಸುಟ್ಟುಕೊಂಡು ಒದ್ದಾಡುತ್ತಿರುವಾಗ, ಜನರನ್ನು ಸೆಳೆಯಲು ಇದಕ್ಕಿಂತಲೂ ಮಹತ್ವದ ಸಂಗತಿ ಯಾವುದಿದೆ?

ADVERTISEMENT

ಸರ್ಕಾರದ ಮುಂದಿನ ಹೆಜ್ಜೆಗಳೇನೋ, ಅದಿರನ್ನು ಆಮದು ಮಾಡಿಕೊಳ್ಳುವ ದೇಶಗಳ ನಡೆಯೇನೋ ಎಂಬ ವಿವರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಗ್ರಾಹಕ ಮತ್ತು ಲಕ್ಷಣಕಾರರಿಬ್ಬರೂ “ಮೈನಿಂಗ್ ಸಮಸ್ಯೆಗೆ ಖಚಿತ ಪರಿಹಾರ”ವನ್ನು ಹುಡುಕುವುದು ನಿಜಕ್ಕೂ ನನಗೆ ಪವಾಡಮಯವಾಗಿ ಕಾಣಿಸಿತು.

ತನ್ನ ಪಾಡಿಗೆ ತಾನು ಚಲಿಸುತ್ತಿರುವ ಸಮಾಜದಲ್ಲಿ ಹೀಗೆ ಸೂಕ್ಷ್ಮವಾಗಿ ಉಂಟಾಗುವ ಚಿಕ್ಕಪುಟ್ಟ ಬದಲಾವಣೆಗಳು ನನಗೆ ಬಹಳ ವಿಶೇಷವೆನ್ನಿಸುತ್ತವೆ ಮತ್ತು ನನ್ನನ್ನು ತುಂಬಾ ಕಾಡುತ್ತವೆ. ದೊಡ್ಡ ದೊಡ್ಡ ಬದಲಾವಣೆಗಳು ಹೇಗೂ ಮಾಧ್ಯಮಗಳಲ್ಲಿ ದಿನನಿತ್ಯ ಚರ್ಚೆಗೊಳಗಾಗುತ್ತಲೇ ಇರುತ್ತವೆ. ಬೇಡವೆಂದರೂ ಕಣ್ಣಿನ ಮೇಲೆ ಮತ್ತು ಕಿವಿಯ ಮೇಲೆ ಅಪ್ಪಳಿಸುತ್ತಲೇ ಇರುತ್ತವೆ. ಆದರೆ ಗಮನಕ್ಕೆ ಬರದೇ ಹೋಗಿ ಬಿಡಬಹುದಾದ ಪುಟ್ಟ ಪುಟ್ಟ ಹೊಸತನಗಳೇ ನನಗೆ ಯಾವತ್ತೂ ಮುದ ನೀಡುತ್ತವೆ.

ಬದಲಾವಣೆಯೆನ್ನುವುದು ಜಗದ ನಿಯಮವೆನ್ನುವದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಆದರೆ ಈ ಬದಲಾವಣೆಗಳ ಜಗತ್ತು ಬಹುದೊಡ್ಡದಾಗಿದ್ದು, ನಮ್ಮ ಗಮನಕ್ಕೆ ದಕ್ಕುವುದು ಒಂದು ಹಿಡಿಯಷ್ಟು ಮಾತ್ರವಾಗಿರುತ್ತದೆ. ಅಂತಹ ಬದಲಾವಣೆಗಳು ನಮ್ಮ ಬದುಕಿನ ಮೌಲ್ಯಗಳಿಗೆ ಹೊಂದಾಣಿಕೆಯಾಗುತ್ತದೋ ಬಿಡುತ್ತದೋ ಬೇರೆಯ ಸಂಗತಿ.

ಆದರೆ ಯಾರಿಗೋ ಅದು ಅಗತ್ಯವಾದಾಗಲೇ ಬದಲಾವಣೆಯೊಂದು ಉದ್ಭವಿಸುತ್ತದೆ. ಇಂತಹ ಬದಲಾವಣೆಯ ಹೊಸಬೀಜವನ್ನು ಬಿತ್ತುವವರು ಬೆರಳೆಣಿಕೆಯ ಜನರಾಗಿರುತ್ತಾರೆ. ಆದರೆ ಯಶಸ್ವಿಯಾದ ಬದಲಾವಣೆಯನ್ನು ಅನುಕರಣೆ ಮಾಡುವ ಸಾವಿರಾರು ಮಂದಿ ಹುಟ್ಟಿಕೊಂಡಿರುತ್ತಾರೆ. ಈ ಜಂಜಾಟದಲ್ಲಿ ಮೂಲ ಅನ್ವೇಷಕರು ಯಾರೆಂಬ ಸಂಗತಿಯೇ ತುಂಬಾ ಸಲ ನಿಗೂಢವಾಗಿ ಉಳಿದು ಬಿಡುತ್ತದೆ.

ಮತ್ತೆ ಮದುವೆಯ ಮನೆಗೆ ವಾಪಾಸು ಬರೋಣ. ಹೊಸಪೇಟೆಯ ಮನೆಯಲ್ಲಿ ನಾನೊಬ್ಬನೇ ಉಳಿದುಕೊಂಡು, ಬಂಧು-ಬಳಗದವರೆಲ್ಲರೂ ಕಲ್ಯಾಣ ಮಂಟಪಕ್ಕೆ ಹೊರಟು ಹೋದರು. ನೆಮ್ಮದಿಯಿಂದ ಸ್ನಾನ ಮಾಡಿ ಸ್ಕೂಟರಿನಲ್ಲಿ ಬರುವದಾಗಿ ಹೇಳಿ ಅವರನ್ನೆಲ್ಲಾ ಕಳುಹಿಸಿಬಿಟ್ಟೆ.

ಆದರೆ ಮನೆಯಲ್ಲಿ ಒಂದು ವಿಚಿತ್ರ ಸಮಸ್ಯೆ ತಲೆದೋರಿತು. ವಾಷ್‌ ಬೇಸಿನ್ ಮೇಲಕ್ಕೆ ಮೊಳೆ ಹೊಡೆದು ತೂಗು ಹಾಕಿದ್ದ ಕನ್ನಡಿಯನ್ನು ಬೀಗರ ಬಿಡದಿಯಲ್ಲಿಡಲು ತೆಗೆದುಕೊಂಡು ಹೋಗಿ ಬಿಟ್ಟಿದ್ದರು. ನನಗೆ ಕ್ಷೌರ ಮಾಡಿಕೊಳ್ಳುವುದು ಹೇಗೆಂಬುದು ತಿಳಿಯದಾಯ್ತು. ಮತ್ತೊಂದು ಕನ್ನಡಿಯಿದ್ದಿದ್ದು ಮಲಗುವ ಕೋಣೆಯಲ್ಲಿ ಮಾತ್ರ; ಅಲ್ಲಿ ಬೆಳಕೂ ಸರಿಯಾಗಿ ಬೀಳುತ್ತಿರಲಿಲ್ಲ. ದೊಡ್ಡ ಬೀರುವಿನ ಎಡಬಾಗಿಲಿಗೆ ಒಂದು ನಿಲುವುಗನ್ನಡಿಯನ್ನು ಲಗತ್ತಿಸಿದ್ದರು. ಅದನ್ನು ಕಳಚಿ ಹೊರಗೆ ಒಯ್ಯುವಂತೆಯೂ ಇರಲಿಲ್ಲ.

ಚೊಂಬಿನಲ್ಲಿ ನೀರು ಒಯ್ದು ಅಲ್ಲಿಟ್ಟುಕೊಂಡು ಕ್ಷೌರ ಮಾಡಿಕೊಳ್ಳುವುದು ನನಗೆ ಒಗ್ಗದ ಸಂಗತಿ. ಒಮ್ಮೆ ಕೂದಲು ಕತ್ತರಿಸಿದ ರೇಜರ್ ಮೇಲೆ ಯಥೇಚ್ಚವಾಗಿ ರಭಸದಿಂದ ನೀರು ಸುರಿದರೆ ಮಾತ್ರ ನನಗೆ ಅದನ್ನು ಮತ್ತೊಮ್ಮೆ ಕೆನ್ನೆಯ ಮೇಲೆ ಅಡ್ಡಾಡಿಸಲು ಮನಸ್ಸಾಗುತ್ತಿತ್ತು. ಬೇರೆ ದಾರಿ ಕಾಣದೆ, ಮಲಗುವ ಕೋಣೆ ಮತ್ತು ಹಿತ್ತಲಿನ ವಾಷ್ ಬೇಸನ್ನಿನ ನಡುವೆ ಹತ್ತಾರು ಬಾರಿ ಓಡಾಡಿ ಕ್ಷೌರ ಮುಗಿಸಿಕೊಂಡೆ.

ಸ್ನಾನ ಮಾಡಿ ಇನ್ನೇನು ಹೊರಡಬೇಕು ಎನ್ನುವ ಹೊತ್ತಿಗೆ ಇನ್ನೊಬ್ಬ ಅಕ್ಕನ ಮಗ ಊರಿಂದ ಬಂದ. ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ. “ಸ್ವಲ್ಪ ನನಗಾಗಿ ಕಾಯ್ತೀಯ ಮಾಮ? ಕ್ಷೌರ ಮಾಡಿಕೊಂಡು, ಸ್ನಾನ ಮುಗಿಸಿ ಬಂದು ಬಿಡ್ತೀನಿ’ ಎಂದು ಬೇಡಿಕೊಂಡ. ಅವನೂ ನನ್ನಂತೆಯೇ ಮಲಗುವ ಕೋಣೆ ಮತ್ತು ವಾಷ್ ಬೇಸಿನ್ ನಡುವೆ ಶಂಟಿಂಗ್ ಮಾಡುತ್ತಾ ಕ್ಷೌರ ಮಾಡಿಕೊಳ್ಳುವದನ್ನು ನೋಡುವ ಖುಷಿಯಲ್ಲಿ ಒಪ್ಪಿಕೊಂಡೆ.

ಆದರೆ ಅಂತಹದ್ದೇನೂ ಆಗಲಿಲ್ಲ. ಕ್ಷೌರದ ಕನ್ನಡಿಯಿಲ್ಲವೆನ್ನುವುದನ್ನು ಗಮನಿಸಿದ್ದೇ ತನ್ನ ಜೀನ್ಸ್ ಪ್ಯಾಂಟಿನಿಂದ ಮೊಬೈಲ್ ಫೋನ್ ತೆಗೆದುಕೊಂಡ. ಫ್ರಂಟ್ ಕ್ಯಾಮೆರಾ ಚಾಲೂ ಮಾಡಿದ್ದೇ ಶಿಳ್ಳೆ ಹೊಡೆಯುತ್ತಾ ಕ್ಷೌರ ಶುರು ಮಾಡಿದ. ಅರ್ಧ ಕ್ಷೌರ ಮಾಡಿಕೊಳ್ಳುವ ಹೊತ್ತಿನಲ್ಲಿ ಒಂದು ಸೆಲ್ಫಿ ಕ್ಲಿಕ್ಕಿಸಿ, ಅದನ್ನು “ಹೊಸಪೇಟೆಯಲ್ಲೊಂದು ಕ್ಷೌರ” ಎಂದು ಫೇಸ್ ಬುಕ್ಕಿಗೆ ಪೋಸ್ಟ್ ಮಾಡಿದ. ಸ್ನಾನ ಮುಗಿಸುವದರಲ್ಲಿ ನೂರಾನಾಲ್ಕು ಲೈಕುಗಳು ಅದಕ್ಕೆ ಬಂದಿದ್ದವು.

ಅವನಷ್ಟೇ ಆಧುನಿಕವಾದ ಮೊಬೈಲು ನನ್ನ ಪ್ಯಾಂಟಿನ ಜೇಬಿನಲ್ಲಿ ಸದ್ದಿಲ್ಲದೆ ತೂಕಡಿಸುತ್ತಿತ್ತು. “ಯಾರು ಹೇಳಿ ಕೊಟ್ರೋ ನಿಂಗೆ ಹೀಗೆ ಮೊಬೈಲ್ ಬಳಸಿ ಕ್ಷೌರ ಮಾಡಿಕೊಳ್ಳೋದು?” ಅಂತ ಕೇಳಿದೆ. “ನಮ್ಮ ರೂಮಿನಲ್ಲಿ ಆರು ಜನ ಹುಡುಗರು ಇದ್ದೀವಿ ಮಾಮ. ಇರೋದು ಒಂದೇ ಕನ್ನಡಿ. ಯಾವಾಗ್ಲೂ ಅದಕ್ಕೆ ಜಗಳ ಆಗ್ತಿತ್ತು. ಕೊನೆಗೆ ಇದೇ ಸರಿ ಅನ್ನಿಸ್ತು” ಎಂದು ವಿವರಣೆ ಕೊಟ್ಟ.

ಅಲ್ಲಿಗೂ ನನಗೆ ಸಮಾಧಾನವಿಲ್ಲ. “ಯಾರು ಅದನ್ನು ಮೊದಲಿಗೆ ಕಂಡು ಹಿಡಿದಿದ್ದು?” ಎಂದು ಕೇಳಿಯೇ ಬಿಟ್ಟೆ. ಅವನಿಗೆ ನನ್ನ ಒದ್ದಾಟ ಅರ್ಥವಾಯ್ತು. “ನಾನು ಅಂತ ಹೇಳಿದ್ರೆ ನಿಂಗೆ ಅಸೂಯೆ ಆಗುತ್ತಾ?” ಎಂದು ಕೇಳಿ ನಕ್ಕ. “ನಂಗ್ಯಾಕೋ ಅಸೂಯೆ...” ಎಂದು ಹುಸಿಕೋಪದಿಂದ ಗದರಿಸಿದೆ.

ಜನೋಪಯೋಗಿಯಾಗುವ ಬದಲಾವಣೆಯೊಂದು ಬಹು ದೊಡ್ಡದಾಗಿಯೇನೂ ಇರಬೇಕಾಗಿಲ್ಲ. ಅಥವಾ ದುಬಾರಿಯೂ ಆಗಿರಬೇಕಿಲ್ಲ. ಸರಿಯಾದ ಸಮಸ್ಯೆಯೇನೆಂದು ಸಮಾಧಾನದಿಂದ ಕೇಳಿಸಿಕೊಂಡು, ಸೃಜನಾತ್ಮಕವಾಗಿ ಆಲೋಚಿಸುವ ಮನಸ್ಸಿದ್ದರೆ ಸಾಕು, ಬೆರಗಾಗುವಂತಹ ಬದಲಾವಣೆಯೊಂದು ಮೂಡಿಬಿಡುತ್ತದೆ.

ದೊಡ್ಡ ತಲೆನೋವಾಗಿ ಸಂಭವಿಸುವ ಸಂಗತಿಯೊಂದು, ಸುಲಭವಾಗಿ ಪರಿಹಾರವಾಗುವ ಪವಾಡವನ್ನು ನೋಡುವುದೇ ಒಂದು ಸಂಭ್ರಮದ ಸಂಗತಿಯಾಗಿರುತ್ತದೆ. ಎಷ್ಟೋ ಬಾರಿ ನಮ್ಮ ಅರಿವಿಗೆ ಬರದಂತೆಯೇ ಸಮಸ್ಯೆಯೊಂದು ಹಿನ್ನೆಲೆಯಲ್ಲಿ ಪರಿಹಾರವಾಗುವ ಪರಿಯೂ ವಿಶೇಷವಾಗಿರುತ್ತದೆ. ನಾನು ಕೆಲಸ ಮಾಡುತ್ತಿದ್ದ ಕಂಪೆನಿಯೊಂದರಲ್ಲಿ ನಡೆದ ಅಂತಹ ವಿಶೇಷ ಘಟನೆಯನ್ನು ಉಲ್ಲೇಖಿಸಲು ನನಗೆ ಉತ್ಸಾಹ ಮೂಡುತ್ತಿದೆ.

ನಾನು ಕೆಲಸ ಮಾಡುತ್ತಿದ್ದುದು ಚಿಕ್ಕ ಕಂಪೆನಿಯಾಗಿತ್ತು. ಸುಮಾರು ಇನ್ನೂರು ಜನ ಕೆಲಸ ಮಾಡುವ ಒಂದು ಬಹುರಾಷ್ಟ್ರೀಯ ಕಂಪೆನಿ ಅದಾಗಿತ್ತು. ವ್ಯಾಪಾರ ಜೋರಾಗಿಯೇ ಇದ್ದ ಕಾರಣ ಹಲವಾರು ಹೊಸಬರನ್ನು ಸೇರಿಸಿಕೊಂಡು ಬೆಳೆಯುವ ಅವಕಾಶ ನಮಗಿತ್ತು. ಆದರೆ ಹೊಸದಾಗಿ ಸೇರುವ ಎಂಜಿನಿಯರ್‌ಗಳನ್ನು ಆಕರ್ಷಿಸುವಷ್ಟು ನಮ್ಮ ಕಂಪೆನಿ ಹೆಸರುವಾಸಿಯಾಗಿರಲಿಲ್ಲ.

ಸಂದರ್ಶನಕ್ಕೆ ಬಂದ ಅಭ್ಯರ್ಥಿಯನ್ನು “ನಮ್ಮ ಕಂಪೆನಿಯ ಹೆಸರನ್ನು ಈ ಹಿಂದೆ ಕೇಳಿದ್ದಿರಾ?” ಎಂದು ಪ್ರಶ್ನಿಸಿದರೆ, ಅವರು ಸಂಕೋಚದಿಂದ ಇಲ್ಲವೆಂದು ಹೇಳುತ್ತಿದ್ದುದು ನಮಗೆ ಬಹು ಮುಜುಗರದ ಸಂಗತಿಯಾಗಿರುತ್ತಿತ್ತು. ನಮ್ಮಲ್ಲಿ ಯೋಗ್ಯರಾದವರನ್ನು ಸೇರಿಸಿಕೊಳ್ಳಲು ಕೇವಲ ದೊಡ್ಡ ಸಂಬಳವೊಂದನ್ನು ತೋರಿಸಿದರಷ್ಟೇ ಸಾಕಾಗುತ್ತಿರಲಿಲ್ಲ.

ನಮ್ಮ ಬಗ್ಗೆ ನಾವೇ ಆಕರ್ಷಕವಾಗಿ ಹೇಳಿಕೊಳ್ಳಬೇಕಾಗುತ್ತಿತ್ತು. ಈ ಮುಜುಗರವನ್ನು ತಪ್ಪಿಸಿಕೊಳ್ಳಲು, ಸಾಫ್ಟ್‌ವೇರ್ ಜಗತ್ತಿನಲ್ಲಿ ನಮ್ಮ ಕಂಪನಿಯ ಹೆಸರು ಸ್ವಲ್ಪಾದರೂ ಗೊತ್ತಿರುವಂತೆ ಮಾಡುವುದು ಹೇಗೆಂದು ನಾವು ಮ್ಯಾನೇಜ್‌ಮೆಂಟ್ ಮೀಟಿಂಗ್‌ನಲ್ಲಿ ಹಲವಾರು ಬಾರಿ ಚರ್ಚಿಸುತ್ತಿದ್ದೆವು.

ವೃತ್ತ ಪತ್ರಿಕೆಗಳಲ್ಲಿ ಮೇಲಿಂದ ಮೇಲೆ ಜಾಹೀರಾತುಗಳನ್ನು ಕೊಡಬೇಕು, ಯಾವುದಾದರೂ ಭರ್ಜರಿ ಬಾಲಿವುಡ್ ಸಿನಿಮಾವೊಂದನ್ನು ನಾವು ನಿರ್ಮಿಸಬೇಕು, ಜನರೆಲ್ಲಾ ಭಾಗವಹಿಸುವಂತಹ ಆಟೋಟದ ಸ್ಪರ್ಧೆಯನ್ನು ನಾವು ಪ್ರತಿವರ್ಷ ನಡೆಸಬೇಕು – ಇತ್ಯಾದಿ ಸಲಹೆಗಳನ್ನು ಎಲ್ಲರೂ ಕೊಡುತ್ತಿದ್ದೆವು. ಆದರೆ ಅವೆಲ್ಲವೂ ಬಹು ದುಬಾರಿಯ ಸಂಗತಿಗಳಾಗಿದ್ದವು. ಪುಟ್ಟದಾದ ನಮ್ಮ ಕಂಪೆನಿಗೆ ಅದನ್ನು ನಿರ್ವಹಿಸುವುದು ಕಷ್ಟವಾಗುತ್ತಿತ್ತು.

ಆದರೆ ಇದೇ ಹೊತ್ತಿನಲ್ಲಿ ಸಮನಾಂತರವಾಗಿ ಬೇರೆಯದೇ ಒಂದು ಬದಲಾವಣೆ ಕಂಪೆನಿಯಲ್ಲಿ ನಡೆಯಿತು. ದಿನದಿಂದ ದಿನಕ್ಕೆ ಬೆಂಗಳೂರಿನ ಟ್ರಾಫಿಕ್ ಹೆಚ್ಚಾಗತೊಡಗಿತ್ತು. ಅಲ್ಲಿಯವರೆಗೆ ತಮ್ಮದೇ ವಾಹನದಲ್ಲಿ ಬರುತ್ತಿದ್ದ ಎಲ್ಲರೂ ಈಗ ಗೋಳಾಡತೊಡಗಿದರು. ಬೈಕಿನಲ್ಲಿ ಬರುತ್ತಿದ್ದ ಯುವಕರಿಗೆ ಬೆನ್ನುನೋವು ಶುರುವಾಯ್ತು. ಎಲ್ಲಾ ಕೆಲಸಗಾರರು ಸಾರಿಗೆ ವ್ಯವಸ್ಥೆಗಾಗಿ ಒತ್ತಾಯ ಹೇರತೊಡಗಿದರು.

ದೊಡ್ಡ ದೊಡ್ಡ ಕಂಪೆನಿಗಳನ್ನು ಹೊರತು ಪಡಿಸಿದರೆ, ಚಿಕ್ಕ-ಪುಟ್ಟ ಕಂಪನಿಗಳು ಆಗ ಸಾರಿಗೆ ವ್ಯವಸ್ಥೆಯನ್ನು ಕೊಡುತ್ತಿರಲಿಲ್ಲ. ಆದರೆ ಕೆಲಸಗಾರರನ್ನು ಕಂಪೆನಿಯಲ್ಲಿ ಉಳಿಸಿಕೊಳ್ಳಲು ಈ ಕೋರಿಕೆಗೆ ಒಪ್ಪಿಕೊಳ್ಳದೆ ನಮಗೆ ಬೇರೆ ದಾರಿಯೇ ಇರಲಿಲ್ಲ. ಕಂಪೆನಿಯ ಮೇಲೆ ಒಂದಿಷ್ಟು ಹೊರೆಯಾದರೂ ಚಿಂತೆಯಿಲ್ಲವೆಂದು ನಿರ್ಧರಿಸಿ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಟ್ಟೆವು. ನಮ್ಮ ಕಂಪೆನಿಯ ಹೆಸರನ್ನು ಢಾಳಾಗಿ ಹೊತ್ತ ಬಸ್ಸುಗಳು ಬೆಂಗಳೂರಿನ ಗಲ್ಲಿಗಲ್ಲಿಗಳನ್ನು ಸುತ್ತಾಡತೊಡಗಿದವು.

ಕೇವಲ ಮೂರೇ ತಿಂಗಳಿನಲ್ಲಿ ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳು “ನಿಮ್ಮ ಕಂಪೆನಿ ಬಸ್ಸು ನಮ್ಮ ಮನೆ ಮುಂದೇ ಹೋಗುತ್ತೆ. ದಿನಾ ನೋಡ್ತಾ ಇರ್ತೀನಿ. ಅದಕ್ಕೆ ಆಸಕ್ತಿ ವಹಿಸಿ ನನ್ನ ಬಯೋಡೇಟಾ ಕಳುಹಿಸಿಕೊಟ್ಟೆ” ಅಂತ ಹೇಳತೊಡಗಿದರು. ಬಸ್ಸಿನ ದೆಸೆಯಿಂದಾಗಿ ನಮ್ಮ ಕಂಪೆನಿಯ ವಿವರಗಳನ್ನು ಇಂಟರ್‌ನೆಟ್‌ನಲ್ಲಿ ಅವರಾಗಲೇ ನೋಡಿರುತ್ತಿದ್ದರು.

ಅಭ್ಯರ್ಥಿಗಳ ಮಾತಂತಿರಲಿ, ನಾವೇ ಯಾವುದಾದರೂ ಮದುವೆಯ ಮನೆಗೆ ಹೋದಾಗ ಹಿರಿಯರ ಮುಂದೆ ನಮ್ಮ ಕಂಪೆನಿಯ ಹೆಸರು ಹೇಳಿದರೆ ಸಾಕು “ಓಹ್, ಗೊತ್ತು ಬಿಡಪ್ಪಾ. ದೊಡ್ಡ ಕಂಪೆನಿ ಇರಬೇಕು. ಬಸ್ಸು ನೋಡ್ತಾನೇ ಇರ್ತೀನಿ” ಎಂದು ಹೇಳಿ ನಮ್ಮನ್ನು ಅಚ್ಚರಿಗೊಳಿಸತೊಡಗಿದರು. ಈ ಬದಲಾವಣೆ ಮ್ಯಾನೇಜ್‌ಮೆಂಟಿನಲ್ಲಿದ್ದ ನಮಗೆಲ್ಲರಿಗೂ ಅನಿರೀಕ್ಷಿತವಾಗಿತ್ತು.

ಸಾರಿಗೆ ವ್ಯವಸ್ಥೆ ಮಾಡಿಕೊಡುವಾಗ ಯಾರೊಬ್ಬರೂ ಈ ವಿಚಾರವಾಗಿ ಯೋಚಿಸಿಯೇ ಇರಲಿಲ್ಲ. “ಈ ಸುಡುಗಾಡು ಟ್ರಾಫಿಕ್ನಿಂದ ಒಂಚೂರು ಉಪಯೋಗ ಅಂತ ಆಗಿರೋದು ಅಂದ್ರೆ ಇದೊಂದೇ ಇರಬೇಕು ನೋಡ್ರಿ” ಎಂದು ನನ್ನ ಬಾಸು ಹೇಳಿದಾಗ ನಮಗೆಲ್ಲಾ ನಗು ಬಂದಿತ್ತು. ರೂಢಿಯ ಚಕ್ರಕ್ಕೆ ಬಿದ್ದವರು ಅದರಿಂದ ದೂರ ಸರಿಯುವುದನ್ನು ಬಹುತೇಕ ಇಷ್ಟ ಪಡುವದಿಲ್ಲ. ರೂಢಿಯೆನ್ನುವುದು ಮನುಷ್ಯನಿಗೆ ಸುರಕ್ಷತಾ ಭಾವನನ್ನು ನೀಡುತ್ತಲಿರುತ್ತದೆ.

ಆದರೆ ಸದ್ಯದ ರೂಢಿಯನ್ನು ಒಡೆದು ಮತ್ತೊಂದನ್ನು ಕಟ್ಟಿಕೊಳ್ಳಲು ಜಗತ್ತು ಒತ್ತಾಯಿಸುತ್ತಲೇ ಇರುತ್ತದೆ. ಅದು ಎಷ್ಟೇ ಹೆದರಿಕೆಯ ಸಂಗತಿಯಾದರೂ, ಹೊಸತನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ. ಸೂಕ್ಷ್ಮವಾದ ಮನುಷ್ಯ ಅದನ್ನು ಬಹು ಬೇಗ ಅರ್ಥಮಾಡಿಕೊಂಡು, ಹೊಸತಕ್ಕೆ ಒಗ್ಗಿಕೊಂಡು ಸುರಕ್ಷಿತನಾಗಿ ಬಿಡುತ್ತಾನೆ. ಆದರೆ ಹಲವರಿಗೆ ಅದು ಅಷ್ಟೊಂದು ಸುಲಭವಾಗಿ ದಕ್ಕುವದಿಲ್ಲ; ತಡ ಮಾಡಿಕೊಂಡು ಒದ್ದಾಡುತ್ತಾರೆ.

ಕಂಪ್ಯೂಟರ್ ಯಂತ್ರ ರಭಸವಾಗಿ ಜನಜೀವನದಲ್ಲಿ ಪ್ರವೇಶ ಮಾಡುವಾಗಲೂ ಹಳೆಯ ಟೈಪ್‌ರೈಟರ್ ಟ್ರೇನಿಂಗ್ ಸೆಂಟರ್ ಇಟ್ಟುಕೊಂಡು ಮಾಸಿ ಹೋದವರನ್ನು ನಾವು ಅಸಹಾಯಕತೆಯಿಂದ ನೋಡುತ್ತಲೇ ಬಂದಿದ್ದೇವೆ. ಕೆಲವೊಮ್ಮೆ ಇಂತಹ ಬದಲಾವಣೆಗಳನ್ನು ಗಮನಿಸುವುದು ತಡ ಮಾಡಿದರೆ, ಅಪಾಯವನ್ನು ಎದುರಿಸುವ ಸಾಧ್ಯತೆಯೂ ಇರುತ್ತದೆ.

ಶುಭ್ರತೋ ಬ್ಯಾನರ್ಜಿ ಎನ್ನುವ ಹುಡುಗ ನನ್ನ ಟೀಮಿನಲ್ಲಿಯೇ ಪಳಗಿದ ಹುಡುಗನಾಗಿದ್ದ. ಬಂಗಾಳಿಯ ಈ ಹುಡುಗ ಬಹು ಜಾಣನಾಗಿದ್ದ ಮತ್ತು ಅತ್ಯಂತ ಬೇಗ ನನ್ನ ಖಾಸಾ ಶಿಷ್ಯನಾಗಿ ಹೋದ. ಯಾವುದೇ ಜವಾಬ್ದಾರಿಯನ್ನು ವಹಿಸಿ ಕೊಟ್ಟರೂ, ನಾನು ಮತ್ತೊಮ್ಮೆ ಅದರ ಬಗ್ಗೆ ಕೇಳುವ ಅವಶ್ಯಕತೆಯೇ ಇಲ್ಲದಂತೆ ಅದನ್ನು ಸಮರ್ಪಕವಾಗಿ ಪೂರ್ಣಗೊಳಿಸುತ್ತಿದ್ದ. ಅವನ ಕೆಲಸಕ್ಕೆ ಮೆಚ್ಚಿ ಮೇಲಿಂದ ಮೇಲೆ ಅವನಿಗೆ ಬಡ್ತಿಯನ್ನೂ ಮತ್ತು ಹೆಚ್ಚಿನ ಜವಾಬ್ದಾರಿಗಳನ್ನೂ ಕೊಡುತ್ತಲೇ ಹೋದೆ.

ಅವನ ಮದುವೆ, ಮಕ್ಕಳ ನಾಮಕರಣಗಳಿಗೂ ನಾನು ಹೋಗಿ ಆಶೀರ್ವದಿಸಿ ಬಂದಿದ್ದೆ. ಸುಮಾರು ಹತ್ತು ವರ್ಷಗಳ ಕಾಲ ಇವನು ನನ್ನ ಜೊತೆಯಲ್ಲಿಯೇ ಕೆಲಸ ಮಾಡಿದ. ಆದರೆ ಎಂಟನೆಯ ವರ್ಷದಲ್ಲಿ ಕೆಲವು ಕಾಲ ಮಾತ್ರ ಅವನು ನುಂಗಲಾರದಂತಹ ಬಿಸಿತುಪ್ಪವಾಗಿ ಬದಲಾವಣೆಗೊಂಡ. ಯಾವ ಕೆಲಸವನ್ನೂ ಅವನು ಸರಿಯಾಗಿ ನಿರ್ವಹಿಸಲಾರದ ಪರಿಸ್ಥಿತಿಗೆ ಇಳಿದ. ಮೀಟಿಂಗಿಗೆ ಕರೆದರೂ ವಿನಾ ಕಾರಣ ಎಲ್ಲರ ಮೇಲೆ ರೇಗಿ ಮಧ್ಯದಲ್ಲಿಯೇ ಎದ್ದುಹೋಗುತ್ತಿದ್ದ.

ಯಾವುದೇ ಕೆಲಸದ ವಿಳಂಬದ ಬಗ್ಗೆ ವಿವರಣೆ ಕೇಳಿದರೂ ಸಮಂಜಸ ಉತ್ತರ ಕೊಡುತ್ತಿರಲಿಲ್ಲ. ಸಿಟ್ಟಿನ ಭರದಲ್ಲಿ ನನಗೂ ಮರ್ಯಾದೆಯನ್ನು ಕೊಡುವುದನ್ನು ನಿಲ್ಲಿಸಿ ದರ್ಪದ ಮಾತನ್ನು ಆಡಲಾರಂಭಿಸಿದ. ಕಂಪೆನಿಯವರೆಲ್ಲರೂ ತಪ್ಪನ್ನು ನನ್ನ ತಲೆಯ ಮೇಲೆಯೇ ಹೊರಿಸಲಾರಂಭಿಸಿದರು. ವಿಪರೀತ ಮೆಚ್ಚುಗೆಯನ್ನು ನಾನು ವ್ಯಕ್ತಪಡಿಸಿ ಬಡ್ತಿಗಳನ್ನು ಕೊಟ್ಟಿದ್ದೇ ಅವನ ಕಣ್ಣು ನೆತ್ತಿಗೇರಲು ಕಾರಣವೆಂದು ನನ್ನನ್ನು ನೇರವಾಗಿಯೇ ದೂಷಿಸಲಾರಂಭಿಸಿದರು. ಅದರಿಂದಾಗಿ ನನಗೂ ಒಳಗೊಳಗೆ ತಪ್ಪಿನ ಭಾವ ಬರಲಾರಂಭಿಸಿತು.

ಅವನ ಸ್ವಭಾವವನ್ನು ಬದಲಾಯಿಸಲು ನಾನು ಹಲವಾರು ಪ್ರಯತ್ನಗಳನ್ನು ಮಾಡಿದೆ. ರೂಮಿಗೆ ಕರೆಸಿ ಬುದ್ಧಿಮಾತನ್ನು ಹೇಳಿದೆ, ಅವನ ವೃತ್ತಿಯ ಆರಂಭದ ಸುವರ್ಣ ದಿನಗಳ ನೆನಪನ್ನು ಮಾಡಿಕೊಟ್ಟೆ, ಒಂದೆರಡು ಪರ್ಸನಾಲಿಟಿ ಡೆವಲಪ್‌ಮೆಂಟ್ ತರಬೇತಿಗೆ ಕಳುಹಿಸಿಕೊಟ್ಟೆ, ದೀರ್ಘ ರಜೆಯನ್ನು ಕೊಟ್ಟು ದೂರದ ಊರುಗಳಿಗೆ ಹೋಗಿ ಬರಲು ಕಳುಹಿಸಿಕೊಟ್ಟೆ.

ಇಂತಹ ಪ್ರಯತ್ನಗಳಿಂದ ಒಂದೆರಡು ದಿನ ಬದಲಾದಂತೆ ಕಂಡರೂ, ಮತ್ತೆ ಸಹಿಸಲಸಾಧ್ಯವಾದ ರೇಗಾಟಗಳನ್ನು ಮಾಡುತ್ತ ನನ್ನ ಕಣ್ಣ ಮುಂದೆ ನಿಲ್ಲುತ್ತಿದ್ದ. ಕೊನೆಗೆ ನನ್ನ ಸೋಲನ್ನು ಒಪ್ಪಿಕೊಂಡು ಮ್ಯಾನೇಜ್ಮೆಂಟ್‌ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಹೇಳಿದೆ. ಬೇರೆ ದಾರಿಯೇ ಇಲ್ಲದಂತೆ ಅವನನ್ನು ಕಿತ್ತು ಒಗೆಯಲು ಅಪ್ಪಣೆ ಕೊಟ್ಟರು.

ನಾವೇ ಬೆಳೆಸಿದ ಗಿಡವನ್ನು ನಾವೇ ಕಡಿಯುವುದು ಹೇಗೆ? ನನಗೆ ವಿಚಿತ್ರ ಸಂಕಟವಾಗಿತ್ತು. ಅವನಿಗೆ ಪಿಂಕ್ ಸ್ಲಿಪ್ ಕೊಡಲು ಕರೆಸಿದಾಗ ಯಾಕೋ ಅಚಾನಕ್ಕಾಗಿ ನನಗೆ ಮತ್ತೊಂದು ಆಲೋಚನೆ ಬಂತು. “ಶುಭ್ರತೋ, ದಯವಿಟ್ಟು ನಾಳೆ ನಿನ್ನ ಮೆಡಿಕಲ್ ಚೆಕ್ ಅಪ್ ಮಾಡಿಸಿಕೊಂಡು ಬರ್ತೀಯಾ? ಪ್ಲೀಜ್... ನಾಳೆ ಬೇಕಾದ್ರೆ ರಜೆ ತೊಗೋ...” ಎಂದು ಹೇಳಿ ಕಳುಹಿಸಿದೆ. ಪಿಂಕ್ ಸ್ಲಿಪ್ ಕೊಡುವುದನ್ನು ಒಂದು ವಾರಕ್ಕೆ ಮುಂದೂಡಿದೆ.

ಮರುದಿನ ಸಂಜೆಯ ವೇಳೆಗೆ ಆಫೀಸಿಗೆ ಬಂದ ಶುಭ್ರತೋ, ಮೆಡಿಕಲ್ ವರದಿಯನ್ನು ಟೇಬಲ್ ಮೇಲಿಟ್ಟು ಸುಮ್ಮನೆ ಕೈಕಟ್ಟಿಕೊಂಡು ನಿಂತ. ಮುಖ ಸಣ್ಣದಾಗಿತ್ತು. ನಾನು ವರದಿಯನ್ನು ಓದಿಕೊಂಡೆ. ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಅಪಾಯದ ಮಟ್ಟದಲ್ಲಿರುವ ವರದಿ ಅದರಲ್ಲಿತ್ತು! ವಯಸ್ಸಿನ್ನೂ ಮೂವತ್ತೆರಡು. ತನ್ನ ದೇಹದಲ್ಲಿ ನಡೆದ ಬದಲಾವಣೆ ಅವನ ಗಮನಕ್ಕೆ ಬಂದಿರಲೇ ಇಲ್ಲ.

ಆಫೀಸಿನ ಕೆಲಸ, ಬಡ್ತಿಗಳ ರೂಢಿಯಲ್ಲಿ ಬಿದ್ದವನು ಅದರ ಹೊರನಿಂತು ತನ್ನನ್ನು ತಾನು ನೋಡಿಕೊಳ್ಳುವುದನ್ನೇ ಮರೆತಿದ್ದ. ಈಗ ಧುತ್ತನೆ ಅಪಾಯವೊಂದು ಕಣ್ಣೆದುರು ಪ್ರತ್ಯಕ್ಷವಾದಾಗ ಭಯ, ಸಂಕಟದಿಂದ ಕಣ್ಣೀರು ಹಾಕುತ್ತಾ ನನ್ನ ಮುಂದೆ ನಿಂತಿದ್ದ. ಅವನಿಗೆ ಧೈರ್ಯವನ್ನು ಹೇಳಿ, ವೈದ್ಯರು ಹೇಳಿದ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆಯನ್ನು ಕೊಟ್ಟೆ.

ಸರಿಯಾದ ಮಾತ್ರೆ, ವ್ಯಾಯಾಮ ಮತ್ತು ಪಥ್ಯದಿಂದಾಗಿ, ಒಂದೆರಡು ವಾರದಲ್ಲಿಯೇ ಅವನ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬಂತು. ಶುಭ್ರತೋ ಮೊದಲಿನಂತಾದ. ಅವನಿಗೆ ತನ್ನ ಅತಿರೇಕದ ವರ್ತನೆಗಳೆಲ್ಲವೂ ಈಗ ಕ್ಷುಲ್ಲಕವಾಗಿ ಕಾಣಿಸಲಾರಂಭಿಸಿತು. ಅದಕ್ಕಾಗಿ ಪರಿತಪಿಸಿದ. ಯಾವತ್ತಿನಂತೆ ಕೆಲಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡ.

ಒಂದು ತಿಂಗಳ ನಂತರ ನನ್ನ ಕ್ಯಾಬಿನ್‌ಗೆ ಬಂದವನು, ಹನಿಗಣ್ಣಿನಲ್ಲಿ ಕೃತಜ್ಞತೆಯನ್ನು ಅರ್ಪಿಸಿ, “ನಿಮಗೆ ಹೇಗೆ ಅಂತಹ ಆಲೋಚನೆ ಬಂತು?” ಎಂದು ಕೇಳಿದ. ಅವನ ಪ್ರಶ್ನೆಗೆ ನಕ್ಕ ನಾನು, “ಒಂದು ಕಾಲದಲ್ಲಿ ನಮ್ಮಮ್ಮ ಕೂಡಾ ನಿನ್ನ ಹಾಗೆ ನಮ್ಮೆಲ್ಲರ ಮೇಲೆ ರೇಗಾಡೋದಕ್ಕೆ ಶುರು ಮಾಡಿದ್ಲು. ಯಾವತ್ತೂ ಪ್ರೀತಿಯನ್ನು ಹಿಡಿಹಿಡಿಯಾಗಿ ಕೊಡುವ ಆಕೆ ಮನೆಯ ಶಾಂತಿಗೇ ಭಂಗ ಬರುವಂತೆ ಕೂಗಾಡಲು ಶುರುವಿಟ್ಟಾಗ ನಾವೆಲ್ಲಾ ಮಕ್ಕಳು ಕಂಗಾಲಾಗಿದ್ದೆವು. ಅಪ್ಪ ಮಾತ್ರ ಸೂಕ್ಷ್ಮವನ್ನರಿತು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ” ಎಂದು ಹೇಳಿದೆ. ನಮ್ಮ ವೈಯಕ್ತಿಕ ಬದಲಾವಣೆಗಳನ್ನು ನಾವಾಗಿಯೇ ಅರ್ಥ ಮಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿ ನನಗೆ ಕಾಣುತ್ತದೆ. ಒಮ್ಮೆ ಬದಲಾವಣೆ ಏನೆಂದು ತಿಳಿದರೆ, ಪರಿಹಾರ ಹುಡುಕುವುದು ಅಷ್ಟೇನೂ ಕಷ್ಟವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.