ADVERTISEMENT

ಬೆಟ್ಟಸಾಲು, ಝರಿ ಹಿಮದ ಸಿರಿ...

ಚಿತ್ರಪಟ

ಸುಭಾಷ್ ಚಂದ್ರ ಎನ್‌.ಎಸ್‌.
Published 28 ಫೆಬ್ರುವರಿ 2015, 19:30 IST
Last Updated 28 ಫೆಬ್ರುವರಿ 2015, 19:30 IST

ಲಡಾಖ್‌ ಪ್ರದೇಶವನ್ನು ಏನೆಂದು ಬಣ್ಣಿಸುವುದು? ಜಮ್ಮು ಮತ್ತು ಕಾಶ್ಮೀರದ ಈ ಪ್ರದೇಶವನ್ನು ಬಣ್ಣಿಸಲು ‘ಚಂದ್ರ ಮುರಿದು ಬಿದ್ದ ತಾಣ’ ಎನ್ನುವ ವಿಶೇಷಣ ಬಳಸಲಾಗುತ್ತದೆ. ವರ್ಷದ ಬಹುತೇಕ ಅವಧಿಯಲ್ಲಿ ಹಿಮದ ಚಾದರದಲ್ಲಿ ಮೈ ಹುದುಗಿಸಿಕೊಂಡ ಪರ್ವತಗಳನ್ನು ನೋಡಿದಾಗ ಈ ವಿಶೇಷಣದ ಸೊಗಸು ಅರ್ಥವಾಗುತ್ತದೆ. ಆದರೆ, ಈ ಚೆಲುವಿನ ರಮ್ಯ ಮುಖದ ಜೊತೆಗೇ ಲಡಾಖ್‌ನ ರುದ್ರ ರಮಣೀಯ ದೃಶ್ಯಗಳನ್ನೂ ನೆನಪಿಸಿಕೊಳ್ಳಬೇಕು.

ಸಮುದ್ರ ಮಟ್ಟಕ್ಕಿಂತಲೂ ಸುಮಾರು 3000 ಮೀಟರ್‌ ಎತ್ತರದಲ್ಲಿರುವ ಪ್ರಸ್ಥಭೂಮಿ ಇದು. ಸುಮಾರು 45 ದಶಲಕ್ಷ ವರ್ಷಗಳ ಅವಧಿಯಲ್ಲಿ ರೂಪುಗೊಂಡಿರುವ ಇಲ್ಲಿನ ಪರ್ವತಗಳು ಬೆರಗು ಹುಟ್ಟಿಸಿದರೆ, ಪಾತಾಳದ ಕಿಂಡಿಗಳಂತೆ ಕಾಣಿಸುವ ಕಲ್ಲು ಕೊರಕಲುಗಳು ಭಯ ಹುಟ್ಟಿಸುವಂತಿವೆ.

ಇಂಡಸ್‌ ಹಾಗೂ ಝಂಸ್ಕಾರ್‌ ಲಡಾಖ್‌ ಪ್ರಾಂತ್ಯದ ಪ್ರಮುಖ ನದಿಗಳು. ಚಳಿಗಾಲದಲ್ಲಿ ಪರ್ವತಗಳ ಮೇಲೆ ಬೀಳುವ ಹಿಮವೇ ಈ ಪ್ರದೇಶದ ನೀರಿನ ಸೆಲೆ. ಬೇಸಿಗೆ ಕಾಲ ಕಡಿಮೆ ಅವಧಿಯದ್ದಾದರೆ, ಚಳಿಗಾಲ ಎಂದೂ ಮುಗಿಯುವುದಿಲ್ಲ ಅನಿಸುವಷ್ಟು ದೀರ್ಘವಾಗಿರುತ್ತದೆ. ಚಳಿಯಲ್ಲಿ ನದಿಗಳು ಹೆಪ್ಪುಗಟ್ಟಿ ಲಡಾಖ್ ಪರಿಸರದಲ್ಲಿ ಅಡಿಗಡಿಗೆ ದೃಶ್ಯಕಾವ್ಯಗಳು ಎದುರಾಗುತ್ತವೆ. ಒಂದು ತುದಿಯಿಂದ ಇನ್ನೊಂದು ತುದಿಗೆ ನದಿಯ ಮೇಲೆಯೇ ನಡೆಯುವುದು ಒಂದು ವಿಶಿಷ್ಟ ಅನುಭವ.

ಗಡಿಪ್ರದೇಶವಾದ ಇಲ್ಲಿನ ಜನರು ಮದ್ದುಗುಂಡುಗಳ ಆತಂಕದ ಜೊತೆಗೆ ಪ್ರಕೃತಿಯ ಜೊತೆಗೂ ಹೋರಾಡುತ್ತಲೇ ಬದುಕು ನಡೆಸಬೇಕು. ಅಪಾರ ಸಾಹಸಿಗಳೂ ಕಷ್ಟ ಸಹಿಷ್ಣುಗಳೂ ಆದ ಇಲ್ಲಿನ ಜನರ ಜೀವನಪ್ರೇಮ ಅಪೂರ್ವವಾದುದು. ಅತಿಥಿ ಸತ್ಕಾರದಲ್ಲೂ ಅವರದು ವಿಶಾಲ ಮನಸು.

ಅಪರೂಪದ ಜೀವ ವೈವಿಧ್ಯಗಳ ನೆಲೆಯಾಗಿಯೂ ಲಡಾಖ್‌ ಗಮನ ಸೆಳೆಯುತ್ತದೆ. ಹಿಮಚಿರತೆ, ನೀಲಿ ಕುರಿಗಳು, ಟಿಬೆಟನ್‌ ಕತ್ತೆಗಳು ಮತ್ತು ತೋಳಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ ಚಿತ್ರಪಟದಲ್ಲಿ ಕಾಣುತ್ತಿರುವುದು ಕಳೆದ ಜನವರಿ ತಿಂಗಳ ಚಳಿ ದಿನಗಳಲ್ಲಿ ಮೈಮುರಿಯುವಂತೆ ಕಾಣಿಸುತ್ತಿರುವ ಲಡಾಖ್‌ನ ಪರಿಸರ. ಲಡಾಖ್ ಕಣಿವೆಯ ನೋಟ ಬದುಕಿನ ಬಗ್ಗೆ ಪ್ರೀತಿಯನ್ನೂ ವಿನಮ್ರತೆಯನ್ನೂ ಹುಟ್ಟಿಸುವಂತಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.