ADVERTISEMENT

ಬೊಗಸೆ

​ಪ್ರಜಾವಾಣಿ ವಾರ್ತೆ
Published 20 ಮೇ 2017, 19:30 IST
Last Updated 20 ಮೇ 2017, 19:30 IST
ಬೊಗಸೆ
ಬೊಗಸೆ   
ಚೀಮನಹಳ್ಳಿ ರಮೇಶಬಾಬು 
 
ಬೊಗಸೆಯೊಡ್ಡಿದ್ದೇನೆ ನಾನು
ಜಗದ ಮುಂದೆ
 
ಬೊಗಸೆಯೆಂಬುದು ಅರಳುತ್ತಿರುವ ಮೊಗ್ಗು
ಬೆರಳ ದಳ ದಳ ಬಿರಿದು
ಗಾಳಿಯಲ್ಲಿ ನಿಂತ ನವಿರು ಹೂವು
 
ಹೂವ ಬೊಗಸೆ ಎಲೆಯ ಬೊಗಸೆ ಭೂತಾಯ ಬೊಗಸೆ
ಆಗಸವೂ ಬೊಗಸೆಯೊಡ್ಡಿದೆ ಭೂಮಿ ಮುಂದೆ
 
ನನ್ನ ಬೊಗಸೆಯ ಕಂಡು ನಕ್ಕರು ಕೆಲವು ಮಂದಿ
ಹುಚ್ಚನೆಂದರು ಹಲವು ಮಂದಿ
ಭಿಕ್ಷಾಟನೆಯೆಂದು ಹರುಕು ಮುರುಕು ನೋಟು
ತಂಗಳ ಕೂಳು ಸುರಿದರೊಂದಿಷ್ಟು ಮಂದಿ
 
ಹಲವರ ಕಣ್ಣಿಗದು ಎಣ್ಣೆ ತೀರಿದ ಹಣತೆ
ಎಣ್ಣೆ ಸುರಿದು ಬೆರಳ ಬತ್ತಿಗೆ ಕಡ್ಡಿ ಗೀರಿದರು
ಹಣತೆ ಬೆಳಗಲೆಂದು
 
ಮತ್ಯಾರೋ ಸುಡುವ ಬೆಂಕಿಯೆಂದು ಕೂಗಿ
ನೀರ ಕೊಡ ಸುರಿದರು
ಬೊಗಸೆ ಎಲ್ಲವನ್ನು ತುಂಬಿಕೊಂಡು
ಮತ್ತೆ ಖಾಲಿಯಾದಂತೆ ಕಾಣುತ್ತದೆ
ಕೊಡುತ್ತೇನೆ ಪಡೆದುಕೊಳ್ಳುತ್ತೇನೆ
ನಿತ್ಯ ಹರಿವು ನಿತ್ಯ ಖಾಲಿ
 
ಬೊಗಸೆಯೊಡ್ಡುತ್ತೇನೆ
ಅದರ ತುಂಬಾ ನಕ್ಷತ್ರಗಳ ನಗು ಚಂದ್ರನ ಬೆಳದಿಂಗಳು
ಆಗಸಕ್ಕೆ ಋಣಿಯಾಗಿ ನೆಲದ ಮೇಲೆ ಚೆಲ್ಲುತ್ತೇನೆ
ನೆಲದ ಮಕ್ಕಳ ಬೊಗಸೆಯಲ್ಲಿ ಅವು ಹೂವಾಗುತ್ತವೆ
 
ಬೊಗಸೆಯೊಡ್ಡುತ್ತೇನೆ
ಅದು ಮಳೆ ಹನಿಗಳಿಗೆ ಕುಡಿಕೆಯಾಗುತ್ತದೆ
ಮೋಡಗಳ ಋಣಕ್ಕೆ ಮರುಳಾಗಿ ನೆಲಕ್ಕೆ ಚೆಲ್ಲುತ್ತೇನೆ
ಅಲ್ಲಿ ನೀರಡಿಕೆಯ ಅನಂತ ಬಾಯಿಗಳು ಬೊಗಸೆಯಾಗಿವೆ
ನನ್ನಂತೆ... ನನ್ನದೇ ನೆರಳಂತೆ
 
ಜೀವದ ಬೊಗಸೆ ಜೀವಕ್ಕೆ ಮಾತ್ರ ಕಂಡೀತು
ಅಪಮಾನವಲ್ಲವದು 
ಪ್ರೀತಿಯ ಹಿಡಿದ ಗರ್ಭ!
 
ಬೊಗಸೆಯೊಡ್ಡಿದ್ದೇನೆ ನಾನು ಜಗದ ಮುಂದೆ... ಬೆತ್ತಲಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.