ADVERTISEMENT

ಬೋಧಿವೃಕ್ಷ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 19:30 IST
Last Updated 15 ಜುಲೈ 2017, 19:30 IST
ಚಿತ್ರ: ಶಶಿಕಿರಣ ದೇಸಾಯಿ
ಚಿತ್ರ: ಶಶಿಕಿರಣ ದೇಸಾಯಿ   

–ಡಾ.ಪದ್ಮಿನಿ ನಾಗರಾಜು

ಶಾಕ್ಯ ವಂಶದ ಕುಡಿ
ಶುದ್ಧೋದನನ ಕನಸು
ತನ್ನದೆಲ್ಲವ ಬಿಟ್ಟು
ನನ್ನ ಬಳಿ ಬರುವೆನೆಂದಾಗ
ನಾನು ಹುಟ್ಟಿದ್ದಕ್ಕೂ ಬೇರೂ ಬಿಟ್ಟಿದ್ದಕ್ಕೂ
ಅರಳಿ ಮರವಾಗಿದ್ದಕ್ಕೂ
ಸಾರ್ಥಕವೆಂದುಕೊಂಡೆ

ಲುಂಬಿನಿಯ ಕಂದ ಸಿದ್ಧಾರ್ಥ
ಜಗದ ಜಂಜಡ ತೊರೆದು
ಸಂಸಾರದ ಬೇಡಿ ಕಿತ್ತೊಗೆದು
ಕ್ಷತ್ರಿಯತೆಯಿಂದ ಸನ್ಯಾಸಕ್ಕೆ
ಹೊರಳುವುದು ಸಾಮಾನ್ಯವೇ

ADVERTISEMENT

ಮಾಯವತಿಯ ಮಡಿಲ ಮಗು
ಯಶೋಧರೆಯ ಮನದನ್ನ
ರಾಹುಲನ ಪಿತ ಸಂಕೋಲೆಗಳ
ಬಿಡಿಸಿಕೊಳ್ಳುವುದೇನು ಸುಲಭವೇ

ಸಿದ್ಧಾರ್ಥ ಎಲ್ಲವ ಗೆದ್ದ
ದಾರಿಯಲ್ಲಿ ಕಂಡ ಸತ್ಯವ
ಅರಸಿ ನಡುರಾತ್ರಿ ನಡೆದ
ಕಾಡಿದ ಪ್ರಶ್ನೆಗಳಿಗೆಲ್ಲಾ
ಉತ್ತರದ ಹುಡುಕಾಟ

ನನ್ನ ಬಳಿ ಬಂದಾಗ
ಅವನಲ್ಲಿ ಅದೆಷ್ಟು ಚಿಂತೆ
ಲೋಕದ ದುಃಖ ದುಗುಡವ
ಪರಿಹರಿಪ ತವಕದ ಚಡಪಡಿಕೆ

ನನ್ನ ವಿಶಾಲ ವಿಸ್ತಾರ ಬೇರುಗಳ
ಮೇಲೆ ಕುಳಿತು ಧ್ಯಾನಸ್ಥನಾದ
ಶಬ್ದಗಳೆಲ್ಲ ಕರಗಿ ನಿಶಬ್ದವಾದವು
ಮಾತು ಮೌನವಾದವು
ತನ್ನ ಅರಿವು ಜಗದಗಲ ಮುಗಿಲಗಲವಾದಾಗ
ಬುದ್ಧ ಎದ್ದ

ಬುದ್ಧ ಬಯಲಲ್ಲಿ ಹಿಮಾಲಯದಲ್ಲಿ
ಬೇರೆಲ್ಲೋ ತನ್ನ ತಾ ಕಾಣಬಹುದಿತ್ತು
ನನ್ನ ಬಳಿ ಬರುವ ಕೃಪೆ ತೋರಿದ್ದು
ಬೇರು ನೆರಳು ಆಶ್ರಯದ ಅಗ್ಗಳಿಕೆ
ಜಗಕೆ ಅರುಹಲೆಂದೇ?

ಮಾಯವತಿ ಸಾಗುವಾನಿ ಮರದ
ನೆಳಲಲ್ಲಿ ಹೆತ್ತ ಮಗುವನ್ನು
ಬೋಧಿವೃಕ್ಷ ದೇವನಾಗಿಸಿದ
ಮರದ ಮಹತ್ತಿನ ಕತೆ
ಇಂದಿನ ಮರಭಕ್ಷಕರಿಗೆ
ಪಾಠವಾಗಬೇಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.